ಸೋಮವಾರ, ನವೆಂಬರ್ 29, 2021
20 °C

ಕಳಚಿಹೋದ ಸಾಕ್ಷಿಪ್ರಜ್ಞೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಮರಣವೇ ಮಹಾನವಮಿ’ ಎಂದು ಸಾರಿದ ವಿಜಯದಶಮಿ ದಿನ ನಸುಕಿನಲ್ಲಿ, ನಮ್ಮ ನಡುವಿನ ಸಾಕ್ಷಿಪ್ರಜ್ಞೆ
ಪ್ರೊ. ಜಿ.ಕೆ.ಗೋವಿಂದ ರಾವ್ ದೇಹ ಬಿಟ್ಟಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರ
ಗಳಲ್ಲಿ ಕೆಲಸ ಮಾಡುವುದು ಗೋವಿಂದ ರಾವ್‌ ಸೇರಿದಂತೆ ಅನೇಕ ಮೇಷ್ಟ್ರುಗಳ ಜಾಯಮಾನ. ಇದು ಕನ್ನಡದ ಸಂದರ್ಭಕ್ಕೆ ತುಂಬಾ ಸಾಮಾನ್ಯ. ಲಂಕೇಶ್, ಅನಂತಮೂರ್ತಿ, ಪ್ರೊ. ಟಿ.ಎಸ್.ಲೋಹಿತಾಶ್ವ, ಶರತ್ ಲೋಹಿತಾಶ್ವ, ಅವಿನಾಶ್ ಹೀಗೆ ಸಾಲು ಸಾಲು ಉದಾಹರಣೆಗಳು ನಮ್ಮ ಎದುರಿಗಿವೆ.  

ತೊಂಬತ್ತರ ದಶಕದಲ್ಲಿ ಶೇಕ್ಸ್‌ಪಿಯರ್‌ ಕುರಿತು ಉಪನ್ಯಾಸ ನೀಡಲು ಗದುಗಿಗೆ ಜಿಕೆಜಿ ಬಂದಿದ್ದರು. ಆಗ ಅವರೊಂದಿಗೆ ನನಗಾದ ಪರಿಚಯ ಆತ್ಮೀಯತೆಗೆ ತಿರುಗಿ ನಾನವರ ಅಭಿಮಾನಿಯಾಗಿ ಹೋದೆ. ಅನೇಕ ಬೈಠಕ್ಕುಗಳ ಸಂದರ್ಭದಲ್ಲಿ ಅವರು ವಿವರಿಸುತ್ತಿದ್ದ ವೈಚಾರಿಕ ಮಾತುಗಳ ಆಳ ಅಪರೂಪ. ಶಿಸ್ತುಬದ್ಧ ಜೀವನಶೈಲಿ, ವೈಚಾರಿಕ ಪ್ರಖರತೆ, ತಾತ್ವಿಕ ಸಂವಾದ, ಸಾತ್ವಿಕ ಸಿಟ್ಟು ಮತ್ತು ಸ್ನೇಹಮಯ ವರ್ತನೆ ಅನುಕರಣೀಯ. 

ವೈಚಾರಿಕ ಭಿನ್ನಾಭಿಪ್ರಾಯ ಇರುವವರ ಜೊತೆ ತುಂಬಾ ಗಂಭೀರವಾದ ಅಂತರ ಕಾಪಾಡಿಕೊಳ್ಳುತ್ತಿದ್ದರು. ತಮ್ಮ ನಟನೆಯ ಸೆಲೆಬ್ರಿಟಿ ಸ್ಟೇಟಸ್ಸನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರಲಿಲ್ಲ. ಒಮ್ಮೆ ಚಾಮ್‌ಸ್ಕಿ ವಿಚಾರಗಳನ್ನು ಖಾಸಗಿ ಬೈಠಕ್ಕಿನಲ್ಲಿ ಅರ್ಥಪೂರ್ಣವಾಗಿ ಮಂಡಿಸಿದ್ದು ಈಗಲೂ ಹಸಿರಾಗಿ ಉಳಿದಿದೆ. ಕೆಲವರ ಹಿಡನ್ ಅಜೆಂಡಾಗಳ ಬಗ್ಗೆ ಸಂಸ್ಕೃತಿ ಚಿಂತಕರ ಚಾವಡಿಯಲ್ಲಿ ಆಕರ್ಷಕವಾಗಿ, ಮನ ಮುಟ್ಟುವಂತೆ ಚರ್ಚೆ ಮಾಡುತ್ತಿದ್ದರು. ಕೋಮುವಾದದ ಅಪಾಯಗಳನ್ನು ವಿವರಿಸುವಾಗ ಕೇಳುಗರ ಮೈ ಜುಂ ಎನ್ನುತ್ತಿತ್ತು. ನಂಬಿದ ಸಿದ್ಧಾಂತಗಳಿಗೆ ಅಪಚಾರವಾಗುವ ವಾತಾವರಣ ಕಂಡು ಬೇಸರಗೊಂಡಿದ್ದರೂ, ನಂಬಿದ ವಿಚಾರಗಳನ್ನು‌ ಪ್ರತಿಪಾದಿಸುತ್ತ, ಬೇಡವಾದದ್ದನ್ನು ತೀವ್ರವಾಗಿ ಖಂಡಿಸುತ್ತಲೇ ಕೊನೇ ದಿನಗಳನ್ನು ಕಳೆದರು. ವೈಚಾರಿಕ ಪರಂಪರೆಯ ಕೊಂಡಿಯೊಂದು ಕಳಚಿ ಶೂನ್ಯ ಭಾವ ಕಾಡುತ್ತಿದೆ.

- ಪ್ರೊ. ಸಿದ್ದು ಯಾಪಲಪರವಿ, ಕಾರಟಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು