ಪ್ರವೇಶ ಪರೀಕ್ಷೆ: ಗೊಂದಲ ನಿವಾರಿಸಿ
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಒಂದೇ ಬಾರಿ ಪರೀಕ್ಷೆಗಳು ನಡೆಯುವಂತೆ ಆಗಬೇಕು. ಯಾಕೆಂದರೆ, ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಆದರೆ ಇಲ್ಲಿಯೇ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಬೇಕೆಂಬ ಕನಸು ಹೊತ್ತ ಇತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಆರನೇ ಸೆಮಿಸ್ಟರ್‌ನ ಪದವಿ ಪರೀಕ್ಷೆ ಇನ್ನೂ ಮುಗಿದಿಲ್ಲ. ಆದರೂ ಅವರು ಮೈಸೂರು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಅದೇ ದಿನ ಆರನೇ ಸೆಮಿಸ್ಟರ್‌ನ ಪದವಿ ಪರೀಕ್ಷೆ ಕೂಡ ಇರುವುದು ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ. ಇಂತಹ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ವಿಶ್ವವಿದ್ಯಾಲಯಗಳು ಪರೀಕ್ಷೆಗಳ ದಿನಾಂಕ ನಿಗದಿ ಕುರಿತು ಮರುಪರಿಶೀಲಿಸುವುದು ಒಳ್ಳೆಯದು.
– ನಿಂಗಪ್ಪ ಮೂಲಿಮನಿ, ಲಿಂಗಸುಗೂರು
ಈ ರಾಜಕಾರಣಿಯ ಆಸ್ತಿ ಇಳಿಕೆಯಾಗಿತ್ತು!
ರಾಜಕಾರಣಿಗಳ ಭ್ರಷ್ಟಾಚಾರದ ವಿಷಯ ವ್ಯಾಪಕವಾಗಿ ಚರ್ಚೆಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ, ದೇವರಾಜ ಅರಸು ಅವರ ಮಾದರಿ ಕಾರ್ಯಗಳು ನೆನಪಾಗುತ್ತವೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ 28 ಎಕರೆ ಭೂಮಿ ಹೊಂದಿದ್ದರು. ಅಧಿಕಾರದಿಂದ ಕೆಳಗಿಳಿದಾಗ ಅವರ ಆಸ್ತಿಯಲ್ಲಿ 4 ಎಕರೆ ಭೂಮಿ ಕಡಿಮೆಯಾಗಿತ್ತು!
ಹುಣಸೂರು ತಾಲ್ಲೂಕಿನ ತಮ್ಮ ಕಲ್ಲಹಳ್ಳಿ ಗ್ರಾಮದಲ್ಲಿ ಅರಸು ಹೊಂದಿದ್ದ ಭೂಮಿಯನ್ನು ಪರಿಶಿಷ್ಟ ಜಾತಿಗೆ ಸೇರಿದ ಚೆಲುವಯ್ಯ ಎಂಬ ರೈತ ಸಾಗುವಳಿ ಮಾಡುತ್ತಿದ್ದರು. ಅರಸು ಕ್ರಾಂತಿಕಾರಕ ಭೂ ಸುಧಾರಣೆ ಕಾನೂನು ಜಾರಿಗೆ ತಂದಾಗ ಖುದ್ದಾಗಿ ಈ ಕಾನೂನು ಅನುಷ್ಠಾನಕ್ಕೆ ಮುಂದಾದರು. ತಾಲ್ಲೂಕು ಭೂ ನ್ಯಾಯ ಮಂಡಳಿಯ ಸದಸ್ಯರನ್ನು ಕರೆದು, ಚೆಲುವಯ್ಯನಿಂದ ಅರ್ಜಿ ಪಡೆಯಲು ಸೂಚಿಸಿದರು. ಆತ ಅರ್ಜಿ ಕೊಡಲು ಹಿಂದೇಟು ಹಾಕಿದರು. ಆಗ ಅರಸು ಆತನ ಭುಜ ತಟ್ಟಿ ‘ಕೊಡಯ್ಯ’ ಎಂದಾಗ ಅವರು ಅರ್ಜಿ ಸಲ್ಲಿಸಿದರು. ಅರಸು ಸಂತೋಷದಿಂದ 4 ಎಕರೆ ಭೂಮಿಯನ್ನು ಬಿಟ್ಟುಕೊಟ್ಟರು. ಅರಸು ಅವರಿಗೂ ಆತ್ಮೀಯರಾಗಿದ್ದ ಶ್ರೀಮಂತ ಉದ್ಯಮಿಯೊಬ್ಬರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಬೇಕೆಂದು ಕೆಲವು ಶಾಸಕರು ಒತ್ತಾಯಪಡಿಸುತ್ತಿದ್ದರು. ‘ಉದ್ಯಮಿಗಳನ್ನು ಶಾಸಕರನ್ನಾಗಿ ಮಾಡಿದರೆ ಸದನದಲ್ಲಿ ಖರೀದಿಗೆ ನಿಲ್ಲುತ್ತಾರೆ’ ಎಂದು ನಿರಾಕರಿಸಿದ್ದರು. ಹೀಗೆ ಅರಸು ಅವರ ರಾಜಕೀಯ ಒಳನೋಟಗಳು ಬಹಳ ಸ್ಪಷ್ಟವಾಗಿದ್ದವು.
– ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ಗೌರವವಿರದ ವ್ಯಕ್ತಿಯ ಬಗ್ಗೆ ಬರೆಯಲು ಸಾಧ್ಯವೇ?
‘ನನಗೆ ಗಾಂಧಿಯ ಬಗ್ಗೆ ಲವಲೇಶವೂ ಗೌರವವಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪುಸ್ತಕದ ಮೂಲಕ ತಿಳಿಸಲಾಗುವುದು’ ಎಂಬ ಲೇಖಕ ಜಿ.ಬಿ.ಹರೀಶ್ ಅವರ ಮಾತುಗಳು ವಿರೋಧಾಭಾಸಕರವಾಗಿವೆ. ಈ ದೇಶದ ಪ್ರಜೆಗಳಿಗೆ ಯಾವುದೇ ವ್ಯಕ್ತಿಯನ್ನು ಗೌರವಿಸುವ ಅಥವಾ ಗೌರವಿಸದಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ಒಬ್ಬ ವ್ಯಕ್ತಿಯ ಮೇಲೆ ಗೌರವವಿರದಿದ್ದ ಮೇಲೆ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಮನುಷ್ಯರ ಸಾಮಾನ್ಯ ಸ್ವಭಾವವಾಗಿದೆ. ಆದರೆ ಆ ವ್ಯಕ್ತಿಯ ಮೇಲೆ ಪುಸ್ತಕ ಬರೆಯುತ್ತೇನೆ ಎಂದರೆ ಅವರ ಮೇಲೆ ಗೌರವವಿದೆ ಎಂದಾಗುತ್ತದೆ. ಕಾರ್ಲ್‌ಮಾರ್ಕ್ಸ್ ಸತ್ತಾಗ ಆತನ ಸ್ನೇಹಿತ ಫ್ರೆಡರಿಕ್ ಏಂಗೆಲ್ಸ್ ಹೇಳಿದ ಮಾತುಗಳು ಇಲ್ಲಿ ನೆನಪಾಗುತ್ತವೆ: ‘ನೀವು ಆತನನ್ನು ಒಪ್ಪಬಹುದು ಇಲ್ಲವೇ ವಿರೋಧಿಸಬಹುದು. ಆದರೆ ನಿರ್ಲಕ್ಷಿಸಲಂತೂ ಸಾಧ್ಯವೇ ಇಲ್ಲ’. ಈ ಮಾತು ಮಹಾತ್ಮ ಗಾಂಧಿಗೂ ಅನ್ವಯಿಸುತ್ತದೆ. ಪ್ರಾಯಶಃ ಇದೇ ಕಾರಣಕ್ಕೆ ಹರೀಶ್ ಅವರಿಗೆ ಗಾಂಧೀಜಿಯ ಮೇಲೆ ಪುಸ್ತಕ ಬರೆಯುವ ಮನಸ್ಸಾಗಿರಬೇಕು.
ಗಾಂಧೀಜಿ ರಾಜಕೀಯವನ್ನು ತಮ್ಮ ಪಾಲಿನ ಧರ್ಮವೆಂದು ಭಾವಿಸಿದ್ದರು. ‘ರಾಜಕಾರಣವೆಂಬುದು ತಾತ್ಕಾಲಿಕ ಧರ್ಮ ಮತ್ತು ಧರ್ಮವೆಂಬುದು ಶಾಶ್ವತ ರಾಜಕಾರಣ’ ಎಂಬ ಲೋಹಿಯಾರ ಜನಪ್ರಿಯ ಹೇಳಿಕೆಗೆ ಪ್ರೇರಣೆ ಆಗಿದ್ದರು. ಆದರೆ ಅವರು ಒಬ್ಬ ನುರಿತ ರಾಜಕಾರಣಿ ಆಗಿರಲಿಲ್ಲ, ಕೊನೆಗೂ ಆಗಲೇ ಇಲ್ಲ. ರಾಜಕೀಯವಾಗಿ ಹಲವು ತಪ್ಪು ಲೆಕ್ಕಾಚಾರಗಳನ್ನು ಹಾಕಿದರು. ಅದನ್ನು ಲೋಹಿಯಾ ತಮ್ಮ ‘ಗಿಲ್ಟಿ ಮೆನ್ ಆಫ್ ಇಂಡಿಯಾಸ್ ಪಾರ್ಟಿಷನ್’ ಕೃತಿಯಲ್ಲಿ ಸವಿವರವಾಗಿ ಚರ್ಚಿಸಿದ್ದಾರೆ. ಗಾಂಧೀಜಿಯ ಲೋಪದೋಷಗಳ ಅರಿವಿದ್ದೂ ಲೋಹಿಯಾ ಅವರಿಗೆ ಗಾಂಧಿಯ ಮೇಲೆ ಅಪಾರವಾದ ಗೌರವವಿತ್ತು. ಆದ್ದರಿಂದಲೇ ಅವರಿಗೆ ಗಾಂಧೀಜಿ ವಿಚಾರಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಲು ಸಾಧ್ಯವಾಯಿತು. ಒಬ್ಬ ನಿಜವಾದ ಸಾಹಿತಿಗೆ ಗೌರವವಿರದ ವ್ಯಕ್ತಿಯ ಕುರಿತು ಒಂದಕ್ಷರವನ್ನೂ ಬರೆಯಲು ಸಾಧ್ಯವಾಗುವುದಿಲ್ಲ.
– ಟಿ.ಎನ್.ವಾಸುದೇವಮೂರ್ತಿ, ಬಿ.ಜಿ.ನಗರ, ಬೆಳ್ಳೂರು
ಕೀಳುಮಟ್ಟದ ಭಾಷೆ, ನಾಚಿಕೆಗೇಡಿನ ಹೇಳಿಕೆ
ಮುಡಾ ನಿವೇಶನ ಹಂಚಿಕೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ಸಂಬಂಧ ಕಾಂಗ್ರೆಸ್ ಪಕ್ಷ ಬೀದಿಗೆ ಇಳಿದು ಹೋರಾಟ ನಡೆಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಆದರೆ ಕೆಲ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಬಗ್ಗೆ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ಟೀಕಿಸುತ್ತಿರುವುದು ಸರಿಯಲ್ಲ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ‘ರಾಜ್ಯಪಾಲರನ್ನು ರಾಷ್ಟ್ರಪತಿಯವರು ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ, ಬಾಂಗ್ಲಾ ದೇಶದ ಪ್ರಧಾನಿ ರಾತ್ರೋರಾತ್ರಿ ಓಡಿಹೋದಂತಹ ಪರಿಸ್ಥಿತಿ ರಾಜ್ಯಪಾಲರಿಗೂ ಬರುತ್ತದೆ’ ಎಂದಿರುವುದು ಅತ್ಯಂತ ಬೇಜವಾಬ್ದಾರಿಯ ಹೇಳಿಕೆ. ಜನಪ್ರತಿನಿಧಿಯೊಬ್ಬರು ಇಂತಹ ಹೇಳಿಕೆ ನೀಡುವುದು ನಾಚಿಕೆಗೇಡಿನ ವಿಚಾರ.
– ಲಕ್ಷ್ಮೀಕಾಂತ್ ಕೊಟ್ಟಾರ ಚೌಕಿ, ಮಂಗಳೂರು
ದುರಂತದ ಚಿತೆಯಲ್ಲಿ ಅನ್ನ ಬೇಯಿಸುವವರು!
ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಸರ್ಕಾರ ವಿತರಿಸಿರುವ ಪರಿಹಾರದ ಮೊತ್ತದಲ್ಲಿ ಅಲ್ಲಿನ ಬ್ಯಾಂಕುಗಳು ಸಾಲದ ಬಾಕಿ ಕಡಿತ ಮಾಡಿರುವುದು, ಈ ಬ್ಯಾಂಕುಗಳಲ್ಲಿ ಇರುವವರಿಗೆ ನಿಜಕ್ಕೂ ಮಾನವೀಯತೆ ಇದೆಯೇ ಎಂಬ ಪ್ರಶ್ನೆ ಮೂಡಿಸುತ್ತದೆ. ಎಷ್ಟೋ ಮಕ್ಕಳು ಅನಾಥರಾಗಿದ್ದುದು, ಇಡೀ ಕುಟುಂಬ ಕಣ್ಮರೆಯಾಗಿ, ಅಳಿದುಳಿದ ಕೆಲವರು ತಮ್ಮ ನೆಚ್ಚಿನವರಿಗಾಗಿ ಹುಡುಕಾಡುತ್ತಿದ್ದುದು ಮಾಧ್ಯಮಗಳಲ್ಲಿ ಅನಾವರಣಗೊಂಡಿತ್ತು. ಆ ದೃಶ್ಯಗಳು ಈಗಲೂ ಮನಸ್ಸನ್ನು ಕಾಡುತ್ತವೆ. ಹೀಗಿರುವಾಗ, ಬ್ಯಾಂಕುಗಳ ಈ ಕ್ರಮ ದುರಂತದ ಚಿತೆಯ ಬೆಂಕಿಯಲ್ಲಿ ಅನ್ನ ಬೇಯಿಸಿಕೊಳ್ಳುವ ನಡೆ ಎಂದೇ ಹೇಳಬೇಕಾಗುತ್ತದೆ.
– ಶಾಂತಕುಮಾರ್, ಸರ್ಜಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.