ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 29 ಆಗಸ್ಟ್ 2024, 23:30 IST
Last Updated 29 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ನ್ಯಾಯಮಂಡಳಿ ಪುನರ್‌ರಚನೆಯಾಗಲಿ

ಗೇಣಿ ಜಮೀನಿನ ವ್ಯಾಜ್ಯ ನಿರ್ವಹಣೆಗೆ ಇರುವ ಭೂ ಸುಧಾರಣಾ ನ್ಯಾಯಮಂಡಳಿಯು ವಿಧಾನಸಭಾ ಚುನಾವಣೆಯ ಸಮಯದಲ್ಲಿ ವಿಸರ್ಜನೆಯಾಗಿದ್ದು, ಇನ್ನೂ ಪುನರ್‌ರಚನೆ ಆಗಿಲ್ಲ. ಒಂದು ವರ್ಷದಿಂದ ಸಾವಿರಾರು ರೈತರ ಕಡತಗಳು ಬಾಕಿ ಉಳಿದಿವೆ. ತಾಲ್ಲೂಕು ಕಚೇರಿಗೆ ನಿತ್ಯ ಅವರು ಅಲೆದಾಡಬೇಕಾಗಿದೆ. ತಮ್ಮ ಜಮೀನಿನ ಕಾಗದಪತ್ರಗಳನ್ನು ತಮ್ಮ ಜೀವಮಾನದಲ್ಲಿ ಸರಿಪಡಿಸಿಕೊಳ್ಳಲು ಆಗುತ್ತದೆಯೇ ಎಂಬ ಅನುಮಾನ ಅವರನ್ನು ಕಾಡತೊಡಗಿದೆ. ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಮೇಲಾಟಗಳನ್ನು ಬಿಟ್ಟು ಜನರ ಅಗತ್ಯಗಳ ಕಡೆ ಗಮನ ಹರಿಸಬೇಕು.

-ಗೌತಮ್ ಟಿ., ತೀರ್ಥಹಳ್ಳಿ

ಚಾಲನಾ ಪರವಾನಗಿ: ಕಟ್ಟುನಿಟ್ಟಾಗಲಿ ಪರೀಕ್ಷೆ

‘ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ವಾರ್ಷಿಕ ಒಂದೂವರೆ ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿರುವುದನ್ನು ಓದಿ (ಪ್ರ.ವಾ., ಆ. 29) ಬೇಸರವಾಯಿತು. ಪ್ರತಿವರ್ಷ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸು
ತ್ತಿದ್ದರೂ ಎಷ್ಟೋ ವಾಹನ ಸವಾರರು ದಂಡ ತಪ್ಪಿಸಲು ಮಾತ್ರ ಸಂಚಾರ ನಿಯಮಗಳನ್ನು ಪಾಲನೆ ಮಾಡುತ್ತಿರುತ್ತಾರೆ.ಸಂಚಾರ ಪೊಲೀಸರು ಇಲ್ಲದ ಕಡೆ ಅಥವಾ ಸಿ.ಸಿ. ಟಿ.ವಿ. ಕ್ಯಾಮೆರಾ ಕಣ್ಗಾವಲು ಇಲ್ಲದ ಕಡೆ ಸಂಚಾರ ನಿಯಮಗಳ ಉಲ್ಲಂಘನೆ ಎಗ್ಗಿಲ್ಲದಂತೆ ನಡೆಯುತ್ತದೆ. ಈ ಬಗೆಯ ಉಲ್ಲಂಘನೆಗಳು ಅಪಘಾತಗಳಿಗೆ ದಾರಿ ಮಾಡುತ್ತವೆ. ವಾಹನ ಚಾಲನಾ ಪರವಾನಗಿ ನೀಡುವಾಗ ನಡೆಸುವ ಪರೀಕ್ಷಾರ್ಥ ಚಾಲನೆಯಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕು. ಸಂಚಾರ ನಿಯಮಗಳ ಸೂಕ್ತ ಅರಿವೇ ಇಲ್ಲದವರು ವಾಹನ ಚಲಾಯಿಸಿ ಅನ್ಯರ ಸಾವಿಗೆ ಕಾರಣವಾಗುವುದನ್ನು
ತಪ್ಪಿಸಬೇಕು. 

- ಈರಣ್ಣ ಎನ್‌.ವಿ., ಶಿರಾ

ಜಾನಪದ ಅಧ್ಯಯನ ವಿಭಾಗ: ಇಂಥ ಸ್ಥಿತಿಯೇಕೆ?

ಕರ್ನಾಟಕದ ನೆಲ, ಜಲ, ನಾಡು– ನುಡಿ ಹಾಗೂ ಸಂಸ್ಕೃತಿಯ ಅನನ್ಯತೆಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಸ್ಥಾಪಿತವಾದ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇಂದು ಅನಾಥವಾಗಿ ಬಿಕೋ ಎನ್ನುತ್ತಿದೆ. 

ಒಬ್ಬರು ಪ್ರಾಧ್ಯಾಪಕರನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಾಧ್ಯಾಪಕರು ನಿವೃತ್ತರಾಗಿದ್ದಾರೆ. ಹಾಲಿ ಸೇವೆ
ಸಲ್ಲಿಸುತ್ತಿದ್ದ ಪ್ರಾಧ್ಯಾಪಕರನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ಸರ್ಕಾರ ನೇಮಿಸಿದೆ. ಎರಡು ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರೇ ಇಲ್ಲ.‌

ಇಂಥ ಪರಿಸ್ಥಿತಿಯಲ್ಲಿ ಜಾನಪದದಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಸಮಸ್ಯೆ ಎದುರಾಗಿದೆ. ಹಾಲಿ ಇರುವ ಏಕೈಕ ಪ್ರಾಧ್ಯಾಪಕರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಅತ್ಯಂತ ಅನಿವಾರ್ಯವಾದ ಕುಲಸಚಿವರೇ ಅಥವಾ ಅವರು ತಮ್ಮ ಮೂಲಸ್ಥಾನವಾದ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಏಕೈಕ ಪ್ರಾಧ್ಯಾಪಕರಾಗಿ ವಿಭಾಗವನ್ನು ಮುನ್ನಡೆಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರಬೇಕಾದದ್ದು ಸಮಯೋಚಿತವೇ? ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಲಿ.  

- ಬಸಪ್ಪ ಯ. ಬಂಗಾರಿ, ಬೆಂಗಳೂರು

ಅದೇ ಹೇಳಿಕೆ, ಅದೇ ಗಿಳಿಪಾಠ!

‘ಜಾರ್ಖಂಡ್‌ನ ಹಿತಾಸಕ್ತಿಗಾಗಿ ನಾನು ಬಿಜೆಪಿ ಸೇರುವ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಚಂಪೈ ಸೊರೇನ್ ಅವರು ಹೇಳಿರುವುದು (ಪ್ರ.ವಾ., ಆ. 29) ಬಹಳ ತಮಾಷೆಯಾಗಿದೆ. ಕರ್ನಾಟಕದಲ್ಲಿ 2008 ಮತ್ತು 2018ರ ಸುಮಾರಿನಲ್ಲಿ ಇಂತಹುದೇ ಹೇಳಿಕೆ ನೀಡಿ ಎರಡು ಬಾರಿ ಶಾಸನಸಭೆಗೆ ಆಯ್ಕೆಯಾಗಲು ನೆರವಾದ ಪಕ್ಷಕ್ಕೆ ಶಾಸಕರು ಸೋಡಾ ಚೀಟಿ ನೀಡಿದ ಪ್ರಸಂಗವನ್ನು ರಾಜ್ಯ ಹಾಗೂ ದೇಶದ ಜನ ಮರೆತಿರಲಾರರು. ಹಣ, ಅಧಿಕಾರಕ್ಕಾಗಿ ರಾಜ್ಯದ ಹಿತದೃಷ್ಟಿ, ಕ್ಷೇತ್ರದ ಅಭಿವೃದ್ಧಿ ಎಂದೆಲ್ಲಾ ಕತೆ ಕಟ್ಟಿದ ಅನೇಕ ರಾಜಕಾರಣಿಗಳು, ಶಾಸಕರು, ಸಂಸದರು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಅಂತಹವರು ಪ್ರತಿನಿಧಿಸಿದ ಕ್ಷೇತ್ರಗಳು ಇಂದಿಗೂ ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ– ಕಾಲೇಜು, ಆಸ್ಪತ್ರೆ ಸೇರಿದಂತೆ ಹಲವು ನಾಗರಿಕ ಸೌಲಭ್ಯಗಳಿಲ್ಲದೆ ಹಾಗೇ ಇವೆ. ಇವರು ಮಾತ್ರ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಮೂರು ತಲೆಮಾರಿಗೆ ಆಗುವಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ. ಈಗ ಚಂಪೈ ಸೊರೇನ್ ಆ ಯಾದಿಗೆ ಹೊಸ ಸೇರ್ಪಡೆಯಷ್ಟೇ.

ತತ್ವ, ಅಭಿವೃದ್ಧಿ, ದೇಶಾಭಿಮಾನ, ನಡವಳಿಕೆಗಳೆಲ್ಲಾ ಹಳೆ ಗಿಳಿಪಾಠಗಳೇ. ಜನಪ್ರತಿನಿಧಿಯೊಬ್ಬರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ಆರೋಪ ಇದೇ ಮೊದಲಲ್ಲ. ಇದು ಕೂಡ ಈ ದೇಶದಲ್ಲಿ ಬಹಳ ಹಳೆಯ ರಾಜಕೀಯ ಪ್ರಸಂಗ. ಚಂದ್ರಶೇಖರ್ ಪ್ರಧಾನಿ ಆಗಿದ್ದಾಗ, ಮಾಜಿ ಪ್ರಧಾನಿಯೊಬ್ಬರಿಂದ ಇದೇ ರೀತಿಯ ಆರೋಪ ಕೇಳಿಬಂದಿತ್ತು. ಆಗ ಚಂದ್ರಶೇಖರ್ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ ನೀಡಿದ ಬೆಂಬಲ ವಾಪಸ್ ಪಡೆದ ನಂತರ ರಾಜಕೀಯ ವಲಯದಲ್ಲಿ ಸಂಭವಿಸಿದ ರಾಜಕೀಯ ನಿರ್ವಾತ, ಆಘಾತಕಾರಿ ಬೆಳವಣಿಗೆಯನ್ನು ಜನ ಮರೆತಿರಲಾರರು. ಉನ್ನತ ಸ್ಥಾನದಲ್ಲಿದ್ದ ಜನಪ್ರತಿನಿಧಿಯೊಬ್ಬರು ಪಕ್ಷ ಬದಲಿಸುವ ವೇಳೆ ನೀಡುವ ಇಂತಹ ನುಡಿಮುತ್ತುಗಳನ್ನು ಜನ ಕೇಳುತ್ತಿರುವುದು ಇದು ಮೊದಲೇನಲ್ಲ. ಸೊರೇನ್ ಅವರ ಅನುಮಾನಾಸ್ಪದ ನಡವಳಿಕೆಯನ್ನು ಕಂಡು ಅವರದೇ ಪಕ್ಷದವರು ಅವರ ಚಲನವಲನಗಳ ಮೇಲೆ ನಿಗಾ ಇರಿಸಿರಬಹುದು. ಮಾಧ್ಯಮಗಳು ಇಂತಹವರಿಗೆ  ಪ್ರಚಾರ ನೀಡಬಾರದು.

-ಎಂ.ಜಿ.ರಂಗಸ್ವಾಮಿ, ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT