ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಶ್ರಮಿಕರಿಗಾಗಿ ಹೃದಯ ಮಿಡಿಯುವುದೇ?

ಕಲಬುರಗಿ, ಯಾದಗಿರಿ, ರಾಯಚೂರಿನಂತಹ ಊರುಗಳಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರಿಗೆ ಗುಳೆ ಹೋಗುವ ಶ್ರಮಿಕ ವರ್ಗ, ರೈಲಿನಲ್ಲಿ ಸಾಮಾನ್ಯ ಬೋಗಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕಷ್ಟಪಡುವಂತೆ ಆಗಿದೆ. ಸ್ಥಳಾಭಾವದ ಕಾರಣದಿಂದ ವಿಧಿ ಇಲ್ಲದೆ, ದಂಡ ಕಟ್ಟಿದರೂ ಚಿಂತೆ ಇಲ್ಲ ಎಂದು ಕಾಯ್ದಿರಿಸಿದ ಬೋಗಿಯಲ್ಲಿ ನಿಂತುಕೊಂಡೇ ಅವರು ಬೆಂಗಳೂರು ತಲುಪುತ್ತಾರೆ. ಈ ಕುರಿತು ಬಹಳಷ್ಟು ಪತ್ರಿಕಾ ವರದಿಗಳು ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ಹರಿದಾಡಿವೆ. ಆದರೆ, ರೈಲ್ವೆ ಮಂಡಳಿ ಮಾತ್ರ ಗಾಢ ನಿದ್ರೆಯಲ್ಲಿ ಇರುವಂತಿದೆ.

ತಿಂಗಳಿಗಾಗುವಷ್ಟು ಜೋಳ, ಸಜ್ಜೆಯಂತಹ ಧಾನ್ಯಗಳೊಂದಿಗೆ ನಾಲ್ಕಾರು ಜನರ ಕುಟುಂಬ ರೈಲೇರುವುದು ಸಾಹಸವೇ ಸೈ. ಬರೀ ಸಾಮಾನ್ಯ ಬೋಗಿಗಳಿರುವ, ಹಗಲಿನಲ್ಲಿ ಕಲಬುರಗಿ- ಬೆಂಗಳೂರು ಹೀಗೆ ಎರಡೂ ನಿಲ್ದಾಣಗಳಿಂದ ಏಕಕಾಲಕ್ಕೆ ಫಾಸ್ಟ್ ಪ್ಯಾಸೆಂಜರ್ ರೈಲುಗಳ ಓಡಾಟ ಆರಂಭವಾದರೆ, ಬದುಕನ್ನು ಸವೆಸಲು ಬೆಂಗಳೂರಿಗೆ ನಿರಂತರವಾಗಿ ಓಡಾಡುವ ಇಂತಹ ನೂರಾರು ಶ್ರಮಿಕರಿಗೆ ಸಹಾಯವಾಗುತ್ತದೆ. ಅಧಿಕಾರದಲ್ಲಿರುವ ಜನಪ್ರತಿನಿಧಿಗಳ ಒಂದಷ್ಟು ಮಾನವೀಯ ಹೃದಯಗಳು‌ ಮಿಡಿದರೆ ಈ ರೈಲಿನ ಓಡಾಟ ಅಸಾಧ್ಯವೇನಲ್ಲ.

-ವೆಂಕಟೇಶ ಮುದಗಲ್, ಕಲಬುರಗಿ

***

ಉಳಿವಿಗಾಗಿ... ಅಸ್ತಿತ್ವದ ಉಳಿವಿಗಾಗಿ...

ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಚಿಂತನೆ ನಡೆದಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿನಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಿಸುವುದರೊಂದಿಗೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಧಿಕೃತವಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬರೀ 19 ಸ್ಥಾನಗಳನ್ನು ಪಡೆದ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದ್ದರೂ ಪಕ್ಷಕ್ಕೆ ಬಲ ತುಂಬಲು ನಾನಾ ರೀತಿಯ ಕಸರತ್ತುಗಳನ್ನು ನಡೆಸಲಾಗುತ್ತಿದೆ. ಜಾತ್ಯತೀತ ಜನತಾದಳದ ಇತಿಹಾಸ ಹಲವಾರು ಏಳುಬೀಳುಗಳಿಂದ ಕೂಡಿದೆ.

‌ದೇಶದ ಅನೇಕ ರಾಜಕೀಯ ಪಕ್ಷಗಳಿಗೆ ಅದರಲ್ಲೂ ವಿಶೇಷವಾಗಿ ಪ್ರಾದೇಶಿಕ ಪಕ್ಷಗಳಿಗೆ ಇಂದು ರಾಜಕೀಯ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಹೀಗಾಗಿ, ತತ್ವ, ಸಿದ್ಧಾಂತ ಮರೆಯಾಗುತ್ತಿವೆ. ಉಳಿವಿಗಾಗಿ ಏನು ಬೇಕಾದರೂ ಮಾಡುವ ಹಂತವನ್ನು ಪಕ್ಷಗಳು ತಲುಪಿವೆ. ಎಐಎಡಿಎಂಕೆ, ಡಿಎಂಕೆ, ಟಿಎಂಸಿಯಂತಹ ಪ್ರಬಲ ಪ್ರಾಂತೀಯ ಪಕ್ಷಗಳು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದರೆ, ಮತ್ತೆ ಕೆಲವು ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟ ಸೇರಿವೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಸಂಭವಿಸಬಹುದು. ಈ ದಿಸೆಯಲ್ಲಿ ಜೆಡಿಎಸ್ ನಡೆ ತಪ್ಪು ಎಂದು ಹೇಳಲಾಗದು. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ...’ ಅನ್ನುವ ಹಾಗೆ ಎಲ್ಲಾ ಪಕ್ಷಗಳು ಮಾಡುವುದು ತಮ್ಮ ಉಳಿವಿಗಾಗಿ ಎಂದು ಈಗ ಹೇಳಬೇಕಾಗಿದೆ.

-ಕೆ.ವಿ.ವಾಸು, ಮೈಸೂರು

***

ಖಾಸಗಿ ದರ್ಶನಕ್ಕೆ ತಕರಾರಿರದು

ಮಂತ್ರಕ್ಕೆ ಮಾವಿನಕಾಯಿ ಬೀಳುತ್ತದೆ ಎನ್ನುವುದು ಒಂದು ‘ನಂಬಿಕೆ’. ಆದರೆ, ಮರಕ್ಕೆ ಗುರಿಯಿಟ್ಟು ಕಲ್ಲು ಹೊಡೆದರೆ ಮಾತ್ರ ಮಾವಿನಕಾಯಿ ಕೆಳಗೆ ಬೀಳುತ್ತದೆ ಎಂದು ಅರಿವಾದ ನಂತರವೂ ಪ್ರತಿ ಬಾರಿ ಮಂತ್ರ ಹಾಕಿಯೇ ಕಲ್ಲು ಹೊಡೆಯಬೇಕು ಎನ್ನುವುದು ‘ಮೌಢ್ಯ’– ಇದು ವೈಚಾರಿಕ ಪ್ರಜ್ಞೆ ಇರುವವರ ಮನೋಭಾವ. ಇಂಥವರು ನಂಬಿಕೆಗಳ ವಿರೋಧಿಗಳಲ್ಲ. ಬದಲಾಗಿ, ನಂಬಿಕೆಯನ್ನು ಅಧ್ಯಯನಶೀಲ ಮನೋಭಾವದಿಂದ ಪ್ರಶ್ನಿಸಿ ವೈಜ್ಞಾನಿಕ ವಿವರಣೆಯನ್ನು ಸಿದ್ಧಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಎಸ್. ಸೂರ್ಯಪ್ರಕಾಶ ಪಂಡಿತ್ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಸೆ. 6) ‘ವಿಜ್ಞಾನಕ್ಕೆ ಗೊತ್ತಿಲ್ಲದ ಸಂಗತಿಗಳೇ ಸೃಷ್ಟಿಯಲ್ಲಿ ಇಲ್ಲ ಎಂದು ಭ್ರಮಿಸಿ ವಿಜ್ಞಾನಿಗಳ ಧಾರ್ಮಿಕ ವಿಶ್ವಾಸ, ಶ್ರದ್ಧೆಯನ್ನು ಮೌಢ್ಯ ಎಂದು ಟೀಕಿಸಲಾಗುತ್ತಿದೆ’ ಎಂದು ವಿಜ್ಞಾನಿಗಳ ತಿರುಪತಿ ದರ್ಶನವನ್ನು ವಿರೋಧಿಸಿದ್ದ ವೈಜ್ಞಾನಿಕ ಮನೋವೃತ್ತಿಯ ಪ್ರತಿಪಾದಕರನ್ನು ದೂರಿರುವುದು ಒಪ್ಪುವಂಥದ್ದಲ್ಲ.

ಇಸ್ರೊ ಅಧ್ಯಕ್ಷರು ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯ ಪ್ರತಿನಿಧಿಯಾಗಿ ಹೀಗೆ ಗುರುತಿಸಿಕೊಂಡ ಬಗ್ಗೆ ಮಾತ್ರ ಆಕ್ಷೇಪವಿತ್ತೇ ವಿನಾ ಅವರು ಖಾಸಗಿಯಾಗಿ ತಿರುಪತಿ ದರ್ಶನ ಮಾಡಿದ್ದರೆ ತಕರಾರು ಇರುತ್ತಿರಲಿಲ್ಲ, ಅಲ್ಲವೇ? ಮಿಗಿಲಾಗಿ, ವಿಜ್ಞಾನದ ವಿವರಣೆಗಳು ‘ಸ್ಥಿರವಲ್ಲ’. ಇಂದಿನ ಸತ್ಯ ನಾಳೆ ಬದಲಾಗಬಹುದು ಇಲ್ಲವೇ ಬದಲಾವಣೆಗೆ ಸದಾ ತೆರೆದುಕೊಂಡಿರುತ್ತದೆ. ಈ ದೃಷ್ಟಿಯಲ್ಲಿ ವಿಜ್ಞಾನವೂ ಸದಾ ‘ಕ್ರಿಯಾತ್ಮಕ’ವಾಗಿರುತ್ತದೆ ಹಾಗೂ ಇದರ ವಿವರಣೆಗಳು ಸಾರ್ವತ್ರಿಕ ಕೂಡ. ಈ ದೃಷ್ಟಿಯಲ್ಲಿ ವಿಜ್ಞಾನಕ್ಕೆ ಹೆಚ್ಚು ತಿಳಿದಿಲ್ಲ ಎಂಬ ‘ನಂಬಿಕೆ’ಯೇ ವಿಜ್ಞಾನವನ್ನು ಮತ್ತಷ್ಟು ಮಗದಷ್ಟು ಕ್ರಿಯಾತ್ಮಕವಾಗಿಸುತ್ತದೆ.

-ಡಾ. ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

***

ಆತ್ಮಹತ್ಯೆಯಿಂದ ಇನ್ನಷ್ಟು ಸಮಸ್ಯೆ ಸೃಷ್ಟಿ

‘ಭರವಸೆಯ ಬೆಳಕು ನೀಡೋಣ’ ಎಂಬ ಲೇಖನದಲ್ಲಿ ಡಾ. ಕೆ.ಆರ್.ಶ್ರೀಧರ್‌ ಅವರು ಪ್ರಸ್ತುತ ಸಮಾಜದಲ್ಲಿ ಆತ್ಮಹತ್ಯೆ ತಡೆಯ ಅಗತ್ಯವನ್ನು ಅಂಕಿ ಅಂಶ ಸಮೇತ ಸೊಗಸಾಗಿ ವಿಶ್ಲೇಷಣೆ ಮಾಡಿದ್ದಾರೆ (ಸಂಗತ, ಸೆ. 9). ಯುವಕರೇ ಹೆಚ್ಚಾಗಿ ಆತ್ಮಹತ್ಯೆಗೆ ಮುಂದಾಗುತ್ತಿರುವುದೇಕೆ ಎಂಬುದಕ್ಕೆ ಪೂರಕವಾದ ಕಾರಣಗಳನ್ನು ಸೋದಾಹರಣವಾಗಿ ವಿವೇಚಿಸಿದ್ದಾರೆ. ಒಮ್ಮೆ ಹೋದ ಜೀವ ಮರಳಿ ಬಾರದೆಂಬುದು ಗೊತ್ತಿದ್ದರೂ ವಿನಾಕಾರಣ ತಮ್ಮ ಅಮೂಲ್ಯ ಜೀವವನ್ನು ತಾವೇ ನಾಶ ಮಾಡಿಕೊಳ್ಳುವ ಕೃತ್ಯಕ್ಕೆ ಕೈ ಹಾಕುವ ಯುವಕರಿಗೆ ಹಿರಿಯರು ಕೊಡುವ ಉತ್ತಮವಾದ ಸಲಹೆಗಳಷ್ಟೇ ಈ ಪಿಡುಗನ್ನು ತಡೆಯಲು ಇರುವ ಪ್ರಬಲ ಮಾರ್ಗ.

ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಾಗದು ಎಂಬ ವಿಚಾರವನ್ನು ಆತ್ಮಹತ್ಯೆಗೆ ಮುಂದಾಗುವವರು ಮೊದಲು ತಿಳಿದುಕೊಳ್ಳಬೇಕು. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಆ ಕುಟುಂಬದಲ್ಲಿ ಹೆಚ್ಚೆಚ್ಚು ಸಮಸ್ಯೆಗಳನ್ನು ಸೃಷ್ಟಿಸಿ ಹೋಗುತ್ತಾನೆಯೇ ವಿನಾ ಮತ್ತಿನ್ನೇನೂ ಆಗುವುದಿಲ್ಲ. ಅತಿ ಹೆಚ್ಚು ಯುವಕರನ್ನು ಹೊಂದಿರುವ ಭಾರತದಲ್ಲಿ ಯುವಕರೇ ಅದೂ ಸುಶಿಕ್ಷಿತರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆ. ಇಂದು ಮಕ್ಕಳ ಮನಸ್ಸನ್ನು ಅರಿತುಕೊಂಡು ಪಾಲಕರು ಸೂಕ್ತ ಮಾರ್ಗದರ್ಶನ ನೀಡುವ, ಅರಿವು ಮೂಡಿಸುವ, ಆದರ್ಶಗಳನ್ನು ಕಲಿಸುವ ಅಗತ್ಯ ಇದೆ.

‘ಜೀವ ಅಮೂಲ್ಯ ಜೀವನವೂ ಮುಖ್ಯ’ ಎಂಬುದನ್ನು ಯುವಕರು ಅರಿತುಕೊಂಡು ನಡೆಯಬೇಕು. ಈಸಬೇಕು ಇದ್ದು ಜಯಿಸಬೇಕು ಎಂಬ ದಾಸರ ಕೀರ್ತನೆಯ ಮಹತ್ವವನ್ನು ಅರಿಯಬೇಕು.

-ಜಯವೀರ ಎ.ಕೆ., ಖೇಮಲಾಪುರ, ರಾಯಬಾಗ

***

ನಿನ್ನೆಯೇ ನೀಡಿದ್ದರೆ...

ಖಾಸಗಿ ಸಾರಿಗೆ ಮುಷ್ಕರ
ಅಂತ್ಯವಾಯಿತು ಅರ್ಧ ದಿನಕ್ಕೆ
ಬೇಕಿತ್ತೆ ಇಷ್ಟೊಂದು 
ಸಾರ್ವಜನಿಕ ಅಡಚಣೆ?
ಇಂದಿನ ಭರವಸೆ 
ನಿನ್ನೆಯೇ ನೀಡಿದ್ದರೆ 
ಮುಷ್ಕರ ತಡೆಯಬಹುದಿತ್ತೇನೊ
ಎಂಬುದೇ ಯೋಚನೆ!

-ಮಹಾಂತೇಶ ಮಾಗನೂರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT