ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮಂಗಳವಾರ, ಮಾರ್ಚ್ 14, 2023

Last Updated 13 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ಮೌಲ್ಯಾಂಕನ ಪರೀಕ್ಷೆ: ದ್ವಂದ್ವ ನೀತಿ ಸಲ್ಲ
ರಾಜ್ಯದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸದಂತೆ ಹೈಕೋರ್ಟ್ ಆದೇಶಿಸಿದ್ದರೂ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಶಿಕ್ಷಣ ಇಲಾಖೆ ಮುಂದಾಗಿರುವುದು ದುರ್ದೈವ. ಒಂದು ನೀತಿಯನ್ನು ಜಾರಿ ಮಾಡಬೇಕಾದರೆ ಒಂದು ವರ್ಷ ಅಥವಾ ಎರಡು ವರ್ಷಗಳ ಮುಂಚೆಯೇ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕಾಗುತ್ತದೆ. ಹಾಗೆ ಮಾಡದೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವಲ್ಲ.

ಕೆಲವು ಶಾಲೆಗಳು ಕೂಡ ಐಸಿಎಸ್‌ಇ, ಸಿಬಿಎಸ್‌ಇ ಪುಸ್ತಕಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳನ್ನು ಗೊಂದಲದಲ್ಲಿ ಇಡುವುದು ಸರಿಯಾದ ಕ್ರಮವಲ್ಲ. ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಐಸಿಎಸ್‌ಇ ಮತ್ತು ಸಿಬಿಎಸ್‌ಇ ಪಠ್ಯಕ್ರಮಗಳನ್ನು ಮಕ್ಕಳ ಮೇಲೆ ಹೇರುತ್ತಿರುವುದು ಕೂಡ ಶಾಲೆಗಳು ಮಾಡಿದ ತಪ್ಪು. ಸರ್ಕಾರ ತನ್ನ ಹಟಮಾರಿ ಧೋರಣೆಯನ್ನು ಬಿಟ್ಟು, ಈ ಶೈಕ್ಷಣಿಕ ವರ್ಷದಲ್ಲಿ ಮಾಮೂಲಿನಂತೆ ಪರೀಕ್ಷೆಗಳನ್ನು ನಡೆಸುವುದು ಸೂಕ್ತ.
–ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು

ಅರ್ಥವಾದೀತೇ ಮತದಾರರ ಧರ್ಮಸಂಕಟ?
‘ಸದ್ಯಕ್ಕೆ ನಮಗಿರುವ ದಾರಿ...’ ಎಂಬ ಪತ್ರವನ್ನು (ವಾ.ವಾ., ಮಾರ್ಚ್‌ 13) ಹುರುಕಡ್ಲಿ ಶಿವಕುಮಾರ ಅವರು ಹೀಗೆ ಮುಕ್ತಾಯ ಮಾಡಿದ್ದಾರೆ: ‘... ಮತ ಚಲಾಯಿಸುವಾಗ ಹಂಗಿಗೆ ಒಳಗಾಗದೆ ಹುಷಾರಾಗಿ ಯೋಚಿಸಿ, ಕೋಮುವಾದಿ ಅಲ್ಲದ, ಲಾಭಾಕಾಂಕ್ಷಿ ಅಲ್ಲದ, ಜನಪರ, ಜನಸ್ನೇಹಿಯಾದ ಅಭ್ಯರ್ಥಿಗೆ ಮತ ಹಾಕಿರಿ’. ಮತದಾರರಿಗೆ ಇರುವ ಕಷ್ಟವೇ ಇದು. ಜಾತಿ, ಮತ, ಪಂಥ, ಹಣಬಲ, ತೋಳ್ಬಲ, ಅಪರಾಧದ ಹಿನ್ನೆಲೆಗೆ ಪುರಸ್ಕಾರದಂತಹ ಗುಣಗಣಗಳೇ ರಾಜಕೀಯ ಪಕ್ಷಗಳಿಗೆ ‘ಗೆಲ್ಲುವ ಕುದುರೆ’ಯನ್ನು ಗುರುತಿಸಿ ಚುನಾವಣಾ ರಣರಂಗಕ್ಕೆ ಬಿಡಲು ಇರುವ ವಿಶಿಷ್ಟವಾದ ಮಾನದಂಡಗಳು. ವಾಸ್ತವ ಸ್ಥಿತಿ ಇದಿರುವಾಗ ಶಿವಕುಮಾರ ಅವರು ಸೂಚಿಸುವ ಗುಣಗಣಗಳ ಸಾಕಾರಮೂರ್ತಿಯಾದ ಅಭ್ಯರ್ಥಿಯನ್ನು ಮತದಾರ ಎಲ್ಲಿ ಹುಡುಕಬೇಕು?

ಹಾಗಾದರೆ ಇಂಥವರು ಇಲ್ಲವೇ ಇಲ್ಲ ಎಂದೇ? ಅಲ್ಲ, ಅಂಥವರು ಖಂಡಿತ ಇದ್ದಾರೆ. ಆದರೆ ಚುನಾವಣಾ ರಣರಂಗದಲ್ಲಿ ಸೆಣಸಲು ಬಿಡುವ ‘ವಿಜಯೀ ಹಯ’ಗಳ ಹೇಷಾರವದ ಎದುರು ಇಂಥವರು ನಗಣ್ಯರಾಗಿ ಇಡುಗಂಟನ್ನು ಕಳೆದುಕೊಳ್ಳುತ್ತಾರೆ. ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಸಭ್ಯರು ಸೆಣಸುವುದು ದುಸ್ಸಾಹಸವಾಗುತ್ತದೆ. ಈ ಮಾತು ಸಿನಿಕಲ್ ಎನಿಸೀತು. ಆದರೆ ಸತ್ಯ. ಒಟ್ಟಾರೆ ಮತದಾರರ ಧರ್ಮಸಂಕಟ ಯಾರಿಗೂ ಬೇಡ!
–ಸಾಮಗ ದತ್ತಾತ್ರಿ, ಬೆಂಗಳೂರು

ಕಾಲ್ಪನಿಕ ಪಾತ್ರಗಳ ಸುತ್ತ...
ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಪ್ರಧಾನಿಯವರ ರೋಡ್ ಷೋ ಮಾರ್ಗದಲ್ಲಿ, ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು, ಟಿಪ್ಪುವನ್ನು ಕೊಂದವರೆಂದೇ ಬಿಂಬಿಸಲಾಗಿರುವ ‘ಉರಿಗೌಡ ಮತ್ತು ನಂಜೇಗೌಡ’ ಅವರ ಮಹಾದ್ವಾರ ಅಳವಡಿಸಿದ್ದುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಹೀಗಾಗಿ ಜಿಲ್ಲಾಡಳಿತವು ರಾತ್ರೋರಾತ್ರಿ ಅದನ್ನು ತೆರವುಗೊಳಿಸಿ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರವನ್ನು ಅಳವಡಿಸಿದ್ದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 13).

ಇದರಿಂದ ಸ್ವಲ್ಪ ‘ಮತ ಲಾಭ’ ಬರಬಹುದೇನೊ ಎನ್ನುವ ದೂರಾಲೋಚನೆ ಇರಬಹುದು! ಅಲ್ಲಿಗೆ ಇಷ್ಟುದಿನ ಸಮರ್ಥಿಸಿಕೊಂಡು ಬಂದ ಉರಿಗೌಡ, ನಂಜೇಗೌಡರನ್ನು ಆಯೋಜಕರೇ ಅಪಮಾನಿಸಿದಂತೆ. ಬೇಕಾದಾಗ ಬೇಕಾದಂತೆ ವೈಭವೀಕರಿಸುವುದು, ಅಪಮಾನ ಮಾಡುವುದಲ್ಲದೆ ಇವು ಯಾವುದೇ ದಾಖಲೆ ಇಲ್ಲದ ಕಾಲ್ಪನಿಕ ಪಾತ್ರಗಳು ಎಂದು ಇವರೇ ಒಪ್ಪಿಕೊಂಡಂತಾಗಿದೆ!
–ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಉಚಿತ ಪ್ರಯಾಣ ಸೌಲಭ್ಯ ದಿವಾಳಿಗೆ ದಾರಿ
ಮಹಿಳಾ ದಿನಾಚರಣೆಯಂದು ಬಿಎಂಟಿಸಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದನ್ನು ಅರ್ಪಣಾ ಸ್ವರೂಪ್‌ ಅವರು ಸ್ವಾಗತಿಸಿದರೆ (ವಾ.ವಾ., ಮಾರ್ಚ್‌ 10), ‘ಪುರುಷರ ದಿನಾಚರಣೆ’ಯಂದು ಎಲ್ಲ ಪುರುಷರಿಗೆ ಈ ಸೌಲಭ್ಯವನ್ನು ಬಿಎಂಟಿಸಿ ಕಲ್ಪಿಸಬೇಕೆಂದೂ, ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಉಚಿತ ಪ್ರಯಾಣದ ಸೌಲಭ್ಯವಿರಲಿ ಎಂದೂ ಪತ್ತಂಗಿ ಎಸ್. ಮುರಳಿ ಅವರು ನಿಗಮವನ್ನು ಆಗ್ರಹಿಸಿದ್ದಾರೆ (ವಾ.ವಾ., ಮಾರ್ಚ್‌ 11).

ಬಿಎಂಟಿಸಿಯಲ್ಲಿ ಈಗಾಗಲೇ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಅಂಗವಿಕಲರು, ನಿಗಮದ ನೌಕರರು ಸೇರಿದಂತೆ ವಿವಿಧ ವರ್ಗಗಳಿಗೆ ಪ್ರಯಾಣದಲ್ಲಿ ಉಚಿತ ಮತ್ತು ರಿಯಾಯಿತಿ ಸೌಲಭ್ಯ ಜಾರಿಯಲ್ಲಿದೆ. ವಿವೇಚನಾರಹಿತವಾಗಿ ಮೇಲಿಂದ ಮೇಲೆ ಇಂತಹ ಸೌಲಭ್ಯವನ್ನು ಕಲ್ಪಿಸುತ್ತಾ ಹೋದರೆ, ಬಿಎಂಟಿಸಿ ದಿವಾಳಿಯಾಗುತ್ತದೆ. ಅದರಿಂದ, ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಮತ್ತು ದಿನದ ಕೂಳಿಗಾಗಿ ದುಡಿಯುವ ತಳಸಮುದಾಯದ ಮಹಿಳೆಯರನ್ನು ಹೊರತುಪಡಿಸಿ ಉಳಿದ ಯಾವುದೇ ವರ್ಗಕ್ಕೆ ಉಚಿತ ಪ್ರಯಾಣ ಅಥವಾ ರಿಯಾಯಿತಿ ದರದ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಬಾರದು. ಸರ್ವರಿಗೂ ನ್ಯಾಯಯುತವಾದ ದರದಲ್ಲಿ ಉತ್ತಮ ಸೇವೆಯನ್ನು ಒದಗಿಸಬೇಕೆಂದು ಸಾರಿಗೆ ನಿಗಮವನ್ನು ಆಗ್ರಹಿಸಬೇಕೇ ವಿನಾ ಉಚಿತ ಪ್ರಯಾಣವನ್ನಲ್ಲ. ಬಿಎಂಟಿಸಿ ಆರ್ಥಿಕವಾಗಿ ಸದೃಢವಾಗಿದ್ದರೆ ಮಾತ್ರ ಅದರಿಂದ ಉತ್ತಮ ಸೇವೆಯನ್ನು ನಿರೀಕ್ಷಿಸಬಹುದು.
ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಅಧ್ಯಯನ ಪ್ರವಾಸ: ಸೂಕ್ತ ಪುರಸ್ಕಾರ
ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ರಾಜ್ಯದ 300 ಪೌರಕಾರ್ಮಿಕರಿಗೆ ಈ ವರ್ಷ ವಿದೇಶಕ್ಕೆ ಅಧ್ಯಯನ ಪ್ರವಾಸದ ಯೋಗ ದೊರೆತಿರುವುದು ಸಂತಸದ ಸಂಗತಿ. ಒಬ್ಬರಿಗೆ ₹ 1.6 ಲಕ್ಷ ವೆಚ್ಚದಲ್ಲಿ! ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಕೂಡ ಎಂದು ಪುರಸ್ಕರಿಸಲ್ಪಡುವರೋ ಅಂದೇ ಈ ಪುಣ್ಯಭೂಮಿಯ ಮಣ್ಣು ಹೊನ್ನಾದಂತೆ.
ಮಾಲತಿ ಎ.ಬಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT