ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಗುರುವಾರ , ಮಾರ್ಚ್ 16, 2023

Last Updated 15 ಮಾರ್ಚ್ 2023, 21:33 IST
ಅಕ್ಷರ ಗಾತ್ರ

ಮತದ ಹಕ್ಕು ಮಾರಿಕೊಂಡರೆ...
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದಾಗ ಬಡವರಿಗಾಗಿ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾದರು. ಆಗ ರಾಜಕೀಯ ಮುತ್ಸದ್ದಿ ಎಸ್.ನಿಜಲಿಂಗಪ್ಪನವರು ವಿರೋಧ ವ್ಯಕ್ತಪಡಿಸಿ, ಮೈಗಳ್ಳತನಕ್ಕೆ ಅವಕಾಶ ಕೊಡುವ ಯೋಜನೆಗಳಿಗಿಂತ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡುವಂತೆ ತಿಳಿಹೇಳಿದರು. ಇದು ಸಮಂಜಸವಾದ ಸಲಹೆಯಲ್ಲವೇ?

ವೋಟಿನ ಬೇಟೆಗಾಗಿ ಅದೆಷ್ಟು ಭರವಸೆಗಳು, ಮೈಗಳ್ಳತನಕ್ಕೆ ಹಾಸಿಗೆ ಹಾಸಿದಂತೆ ಅವನ್ನು ವೈಭವೀಕರಿಸುವ ವಿಧಾನ ನಾಚಿಕೆಗೇಡಿನದು. ಬಣ್ಣದ ಮಾತುಗಳನ್ನಾಡಿ, ಅವರವರ ಬಲಹೀನತೆಗೆ ತಕ್ಕಂತೆ ಮದ್ಯ, ಸೀರೆ, ಹಣ, ಉಡುಗೊರೆಗಳನ್ನು ಹಂಚುವ ಮೂಲಕ ಆರಿಸಿಬರುವ ನಮ್ಮ ಜನಪ್ರತಿನಿಧಿಗಳು ಆ ಬಳಿಕ ಐದು ವರ್ಷಗಳ ಕಾಲ ವೈಭವೋಪೇತ ಜೀವನ ನಡೆಸುತ್ತಾರೆ. ಇವತ್ತು ಲಾಭದಾಯಕ ಉದ್ಯಮ ಎಂದರೆ ರಾಜಕೀಯ. ‘ನಿಮ್ಮೂರ ಎಂಎಲ್‍ಎ ನೋಡಿ, ಹೇಗಿದ್ದ ಹೇಗಾದ ಗೊತ್ತಾ?’ ಎನ್ನುವಂತಾಗಿದೆ ಇಂದಿನ ಪರಿಸ್ಥಿತಿ. ನಮ್ಮ ಬಡ ಬೋರೇಗೌಡನಿಗೆ ಸ್ವಾತಂತ್ರ್ಯದ ಫಲ ಸಿಗಲಿಲ್ಲ. ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಇದೆ. ಮತ ಹಕ್ಕು ಮಾರಿಕೊಂಡರೆ ಭವಿಷ್ಯ ಸರ್ವನಾಶ ಎಂಬುದನ್ನು ಮತದಾರ ಈಗಲಾದರೂ ಅರಿಯಬೇಕು.
-ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ

ಇದು ಮೊಬೈಲ್‌ ಫೋನ್‌ ಯುಗ!
ಆಜಾನ್‌ ಕೂಗುವುದನ್ನು ಸಾದಿಕ್‌ ಉಲ್ಲಾ ಎಂ.ಎ. ಅವರು ಸಮರ್ಥಿಸಿಕೊಂಡಿರುವುದು (ವಾ.ವಾ., ಮಾರ್ಚ್‌ 15) ಸರಿಯಲ್ಲ. ನಲವತ್ತು– ಐವತ್ತು ವರ್ಷಗಳ ಹಿಂದೆ ಬಹುಪಾಲು ಮನೆಗಳು ಅಲಾರಂ ಹೊಂದಿರಲಿಲ್ಲ. ಆ ಕಾಲಘಟ್ಟಕ್ಕೆ ಆಜಾನ್ ಕೂಗುವುದು ಸರಿಯಾಗಿತ್ತು. ಆದರೆ, ಈಗ ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತೆ, ಎಲ್ಲರ ಮನೆಯಲ್ಲೂ ಕನಿಷ್ಠ ಎರಡಾದರೂ ಮೊಬೈಲ್‌ ಫೋನ್‌ಗಳು ಇವೆ. ಅದರಲ್ಲೇ ಯಾವ ಯಾವುದಕ್ಕೋ ಅಲಾರಂ ಇಟ್ಟುಕೊಳ್ಳುತ್ತಾರೆ, ಇನ್ನು ನಿಜವಾದ ಭಕ್ತನಾದಲ್ಲಿ ಪ್ರಾರ್ಥನೆಗೂ ತಪ್ಪದೇ ಇಟ್ಟುಕೊಳ್ಳಬಹುದು.

ಹೀಗಾಗಿ ಆಗಿನಂತೆ ಈಗಲೂ ಆಜಾನ್ ಕೂಗೇ ಅವರನ್ನು ಎಚ್ಚರಿಸಬೇಕು ಎನ್ನುವುದು ಸಮಂಜಸವಲ್ಲ. ಅದರಿಂದ ಹಸುಳೆಗಳಿಗೆ, ವಿದ್ಯಾರ್ಥಿಗಳಿಗೆ, ನಿದ್ರೆಯಿಲ್ಲದೆ ಬಳಲುವ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತದೆ. ಇದನ್ನು ಗಮನಿಸಿ, ಸ್ಥಳೀಯ ಮುಖಂಡರು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.
-ವಿ.ವಿಜಯೇಂದ್ರ ರಾವ್, ಬೆಂಗಳೂರು

ಹಸಿರು ಹೊಂಡ: ಇಂಗಲಿ ಜಲದಾಹ
ಜಲಸುರಕ್ಷೆಯ ಸವಾಲು ಎದುರಾಗಿರುವ ಬಗ್ಗೆ ಡಾ. ಕೇಶವ ಎಚ್. ಕೊರ್ಸೆ ಕಳವಳ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮಾರ್ಚ್‌ 15). ಇದಕ್ಕೆ ಸೂಕ್ತ ಪರಿಹಾರ ‘ಹಸಿರು ಹೊಂಡ’. ಕರ್ನಾಟಕದಲ್ಲಿ ‘ಕೃಷಿ ಹೊಂಡ’ ಚಿರಪರಿಚಿತ. ಇಲ್ಲಿ ಹೊಂಡ ಅಗೆದು ನೀರನ್ನು ಶೇಖರಣೆ ಮಾಡುತ್ತಾರೆ. ಹಾಗೆಯೇ ‘ಹಸಿರು ಹೊಂಡ’ವೆಂದರೆ, ಸರಿಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಆರು ಅಡಿ ಆಳದ ಗುಂಡಿ ತೋಡಿ, ಗುಂಟೆಗೆ ಒಂದು ಮರ ಬೆಳೆಸುವುದು. ಪ್ರತಿವರ್ಷ ಮಳೆಗಾಲದಲ್ಲಿ ಈ ಗುಂಡಿಯಲ್ಲಿ ನೀರು ನಿಲ್ಲುತ್ತದೆ. ಈ ನೀರು ಹೊರ ಹೋಗುವುದಿಲ್ಲ. ಅಲ್ಲೇ ಇದ್ದು ಭೂಮಿಯಲ್ಲಿ ಇಂಗುತ್ತದೆ. ಅದರ ಜೊತೆಗೆ 60 ಬೃಹತ್ ಮರಗಳು ಬೆಳೆಯುತ್ತವೆ. ಪ್ರತಿವರ್ಷ ನಾವು ಈ ಹೊಂಡಕ್ಕೆ ಸುಗಮವಾಗಿ ನೀರು ಹರಿಯುವಂತೆ ನೋಡಿಕೊಂಡರೆ ಸಾಕು. ನಿರಂತರವಾಗಿ ‘ಜಲ’ ಭೂಮಿಯನ್ನು ಸೇರುತ್ತದೆ. ಹಾಗೆಯೇ 60 ಮರಗಳು ನಮಗೆ ತಂಪಾದ ಗಾಳಿ ನೀಡುತ್ತವೆ. ಪ್ರಾಣಿ ಪಕ್ಷಿಗಳಿಗೆ ಆಸರೆಯಾಗುತ್ತವೆ. ಊರಿನ ಜಾನುವಾರುಗಳಿಗೆ ಕೂಡ ನೀರು ಮತ್ತು ಹುಲ್ಲು ದೊರೆಯುತ್ತದೆ.

ಪ್ರತೀ ಹಳ್ಳಿಯಲ್ಲಿ ಒಂದೂವರೆ ಎಕರೆ ಸರ್ಕಾರಿ ಜಮೀನು ದೊರೆಯುವುದು ಕಷ್ಟವೇನಲ್ಲ. ಹಸಿರು ಹೊಂಡ ನಿರ್ಮಾಣಕ್ಕೆ ಸರ್ಕಾರದ ಈಗಿನ ಯೋಜನೆಗಳಲ್ಲೇ ಹೇರಳವಾಗಿ ಹಣ ದೊರೆಯುತ್ತದೆ. ಹೊಸದಾಗಿ ಹಣ ಹೂಡಬೇಕಿಲ್ಲ. ಬರೀ ಒಂದೆರಡು ವರ್ಷ ಕಷ್ಟಪಟ್ಟರೆ ಸಾಕು, ಜನರಿಗೆ ನಿರಂತರ ಉಪಯೋಗ ದೊರೆಯುತ್ತದೆ.
-ಪಿ.ಎನ್.ಎಂ. ಗುಪ್ತ, ಬೆಂಗಳೂರು

ಕಲಿಕೆಗೆ ಹಿತಕರ ವಾತಾವರಣ ಬೇಕು
ಶಿಕ್ಷಕರು ಯಾವ ಬಗೆಯ ಉಡುಪು ಧರಿಸಬೇಕು ಎಂಬುದನ್ನು ಆರತಿ ಪಟ್ರಮೆ ಅವರು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ (ಸಂಗತ, ಮಾರ್ಚ್ 15). ಬಹಳಷ್ಟು ಶಿಕ್ಷಕರು ಜೀನ್ಸ್ ಪ್ಯಾಂಟ್‌ ತೊಟ್ಟು, ಗಡ್ಡ ಬಿಟ್ಟುಕೊಂಡು, ಹೊಸ ಹೊಸ ವಸ್ತ್ರವಿನ್ಯಾಸದೊಂದಿಗೆ ಶಾಲಾ-ಕಾಲೇಜುಗಳಿಗೆ ಬರುವುದನ್ನು ಕಾಣುತ್ತೇವೆ. ಶಿಕ್ಷಕ ವೃತ್ತಿಯ ಘನತೆ ಅರಿತು ಉಡುಪು ಧರಿಸುವುದು ಲೇಸು. ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆಗೆ ಹಿತಕರವಾದ ವಾತಾವರಣ ಇರುವುದು ಮುಖ್ಯ.
-ಲಕ್ಷ್ಮಣ ಬಿ., ಹರದನಹಳ್ಳಿ, ಹಾಸನ

‘ನಿಜವಾದ ಸಂಶೋಧಕ’ರಿಗೆ ಸಿಗಲಿ ಆದ್ಯತೆ
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್‌.ಡಿ ಕಡ್ಡಾಯವಲ್ಲ ಎಂದು ಯುಜಿಸಿ ಮುಖ್ಯಸ್ಥ ಎಂ. ಜಗದೀಶ್ ಕುಮಾರ್ ಹೇಳಿದ್ದಾರೆ. ಅಂತೂ ಪಿಎಚ್‌.ಡಿ ಪದವಿಗೂ ಪಾಠ ಮಾಡುವುದಕ್ಕೂ ಸಂಬಂಧವಿಲ್ಲ ಎಂಬ ವಿಚಾರ ಈಗಲಾದರೂ ಹೊಳೆದಿರುವುದಕ್ಕೆ ಯುಜಿಸಿ ಮುಖ್ಯಸ್ಥರಿಗೆ ಅಭಿನಂದನೆ ಸಲ್ಲಿಸಬೇಕು! ಆದರೆ ಕಾಲ ಮೀರಿದೆ. ದೇಶದಾದ್ಯಂತ ಸಾವಿರಾರು ಯೋಗ್ಯ ಅಭ್ಯರ್ಥಿಗಳು ಹಿಂದಿನ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಎನ್ಇಟಿ ಪಾಸು ಮಾಡಿಕೊಂಡು ಪಿ.ಎಚ್‌ಡಿ ಪಡೆದವರೊಂದಿಗೆ ಸ್ಪರ್ಧಿಸಲಾಗದೆ ನಿರುದ್ಯೋಗಿಗಳಾಗಿದ್ದಾರೆ ಇಲ್ಲವೇ ಸಿಕ್ಕ ಸಿಕ್ಕ ಕೆಲಸ ಮಾಡಿಕೊಂಡು ಜೀವನ ತಳ್ಳುತ್ತಿದ್ದಾರೆ!

ಕೆಟ್ಟಮೇಲೆ ಬುದ್ಧಿ ಬಂತು, ಅಟ್ಟಮೇಲೆ ಒಲೆ ಉರಿಯಿತು ಎಂಬಂತೆ, ಯುಜಿಸಿಗೆ ಈಗಲಾದರೂ ಇದರ ಅರಿವಾಗಿದೆ. ಇನ್ನು ಮುಂದಾದರೂ ಪಿಎಚ್‌.ಡಿ ಪದವಿಗಳು ‘ಸಂತೆಯಲ್ಲಿ ಕಡ್ಲೆಪುರಿ’ಯಂತೆ ಮಾರಾಟವಾಗುವುದು ನಿಂತು ‘ನಿಜವಾದ ಸಂಶೋಧಕರು’ ಪಿಎಚ್‌.ಡಿ ಪದವಿಯನ್ನು ಪಡೆಯುವಂತೆ ಆಗಲಿ.
-ರಾಜಶೇಖರ ಮೂರ್ತಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT