ಗುಂಡು ಲೂಟಿ: ಗುಂಟೂರು ‘ಮಾದರಿ’?
‘ಗುಂಡು’ ಕಂಡು ಮುಗಿಬಿದ್ದ ಭೂಪರು!’ ಎಂಬ ಶೀರ್ಷಿಕೆಯ, ಸುಧಾಕರ್ ಉದುಮುಲ ಅವರ ಟ್ವೀಟ್ (ಪ್ರ.ವಾ., ಸೆ. 11) ಓದಿ ನಗಬೇಕೋ ಅಳಬೇಕೋ ತಿಳಿಯದಾಯಿತು. ಆಂಧ್ರಪ್ರದೇಶದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಮದ್ಯವನ್ನು ನಾಶಪಡಿಸಲು ಮುಂದಾದಾಗ, ಮದ್ಯಪ್ರಿಯರ ಗುಂಪು ಅಲ್ಲಿಗೆ ನುಗ್ಗಿ ಸಿಕ್ಕಷ್ಟನ್ನು ದೋಚಿಕೊಂಡು ಪರಾರಿಯಾಗಿದ್ದನ್ನು ಈ ಟ್ವೀಟ್ ವಿವರಿಸಿದೆ.
ಸರ್ಕಾರವೇ ಪೋಷಿಸಿ ಪಾಲಿಸಿಕೊಂಡು ಬಂದಿರುವ ಈ ‘ಗುಂಡು’ ಪದ್ಧತಿ ದೇಶದ ಬಹುತೇಕ ಮಂದಿಯಲ್ಲಿ ಜನಪ್ರಿಯ ಪಾನೀಯ. ಇದಕ್ಕೆ ಆಂಧ್ರಪ್ರದೇಶದ ಈ ಗುಂಟೂರು ಪ್ರಸಂಗವೇ ಸಾಕ್ಷಿ. ಗುಂಟೂರು ಜಿಲ್ಲೆ ಮೆಣಸಿನಕಾಯಿಗೆ ಪ್ರಸಿದ್ಧಿ. ‘ಗುಂಟೂರು ಮೆಣಸಿನಕಾಯಿ’ ಎಂದೇ ಪ್ರಸಿದ್ಧಿಯಾಗಿರುವ ಈ ಜಿಲ್ಲೆ ಇನ್ನು ಮುಂದೆ ‘ಗುಂಟೂರು ಟೈಪ್ ಗುಂಡು ಲೂಟಿ’ ಎಂದು ಪ್ರಸಿದ್ಧಿಯಾದರೆ ಆಶ್ಚರ್ಯವಿಲ್ಲ. ಆದರೆ ಈ ಲೂಟಿಯಲ್ಲಿ ಸರ್ಕಾರಿ ಅಧಿಕಾರಿಗಳ ಕೈವಾಡವೂ ಇರಬಹುದೇ?
–ರಮೇಶ್, ಬೆಂಗಳೂರು
***
ನಮ್ಮ ನಿರ್ಲಕ್ಷ್ಯದಿಂದ ಪ್ರಾಣಿಗಳಿಗೆ ಕಂಟಕ
ಮೂಕಪ್ರಾಣಿಗಳು ‘ಡಸ್ಟ್‌ಬಿನ್ ಸಿಂಡ್ರೋಮ್’ನಿಂದ ಸಾವಿಗೀಡಾಗುವುದಕ್ಕೆ ನಮ್ಮ ನಿರ್ಲಕ್ಷ್ಯ ಕಾರಣ. ಪ್ಲಾಸ್ಟಿಕ್‌ನಂತಹ ಅಪಾಯಕಾರಿ ತ್ಯಾಜ್ಯದ ಸೂಕ್ತ ವಿಲೇವಾರಿಗೆ ಪೌರಾಡಳಿತ ಅವಶ್ಯ ಕ್ರಮ ಕೈಗೊಳ್ಳಬೇಕು. ಈ ದಿಸೆಯಲ್ಲಿ ಜನರಲ್ಲಿ ಅರಿವು ಮೂಡಿಸಲು ಪ್ರಾಣಿಪ್ರಿಯರು ಮುಂದಾಗಬೇಕು.
–ಅನಿಲಕುಮಾರ ಮುಗಳಿ, ಧಾರವಾಡ
***
ಹೋಮ್‌ವರ್ಕ್ ಆಗಲಿ ಸ್ಮಾರ್ಟ್‌ವರ್ಕ್
‘ಹೋಮ್‌ವರ್ಕ್‌ಗೆ ಮೊಬೈಲ್ ನೆರವು ಪಡೆಯುವುದು ಸರಿಯಲ್ಲ, ಹಿಂದೆ ಮಕ್ಕಳು ಉತ್ತರಕ್ಕಾಗಿ ಪರಿಶ್ರಮ ವಹಿಸಿ ಕಷ್ಟಪಟ್ಟು ಎರಡೆರಡು ಬಾರಿ ಓದಿ ಉತ್ತರ ಬರೆಯುತ್ತಿದ್ದರು’ ಎಂದಿದ್ದಾರೆ ರಾಜು ಬಿ. ಲಕ್ಕಂಪುರ (ವಾ.ವಾ., ಸೆ. 11). ಈಗಿನ ಮಕ್ಕಳು ಹೋಮ್‌ವರ್ಕ್‌ನಲ್ಲಿ ಕೊಟ್ಟ ಪ್ರಶ್ನೆಗಳಿಗೆ ಯೂಟ್ಯೂಬ್‌ನಲ್ಲಿ ಉತ್ತರ ಹುಡುಕಿ ಬರೆಯುತ್ತಾರೆ. ಇದರಿಂದ ಸಮಯ ಉಳಿಯುತ್ತದೆ. ಅಲ್ಲದೆ, ಪೋಷಕರಿಗೆ ಬೇರೆ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಮಯ ಸಿಕ್ಕುತ್ತದೆ.
ಈಗ ಒಂದನೇ ತರಗತಿಯ ಮಕ್ಕಳಿಗೆ ಕೊಡುವ ಎಷ್ಟೋ ಪ್ರಶ್ನೆಗಳು ಹಿರಿಯರಿಗೇ ಉತ್ತರಿಸಲು ಕಷ್ಟವಾಗುವಂತೆ ಇರುತ್ತವೆ. ಈಗಿನ ಮಕ್ಕಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಹಿಂದೆ ಪ್ರಥಮ ಶ್ರೇಣಿಯಲ್ಲಿ ಪಾಸಾಗುವುದೇ ಹೆಚ್ಚು ಎಂಬಂತಿತ್ತು. ಆದರೆ ಈಗಿನ ವಿದ್ಯಾರ್ಥಿಗಳು ರ್‍ಯಾಂಕ್ ಪಡೆಯುವುದರಲ್ಲಿ ನಿಸ್ಸೀಮರು. ಹೀಗಾಗಿ, ನಾವು ಈಗಿನ ಯುಗವನ್ನು ಹಿಂದಿನ ಯುಗಕ್ಕೆ ಹೋಲಿಸುವುದು ಸಮಂಜಸವಾಗಲಾರದು.
–ಬಾಲಕೃಷ್ಣ ಎಂ.ಆರ್., ಬೆಂಗಳೂರು
***
ಸಾಮೂಹಿಕ ಕೊಲೆಯ ಸಂಚು
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಿಂದ ಹರಿಯಾಣದ ಭಿವನೀ ಜಿಲ್ಲೆಗೆ ಹೊರಟಿದ್ದ ಕಲಿಂದಿ ಎಕ್ಸ್‌ಪ್ರೆಸ್ ರೈಲು ಮಾರ್ಗದ ಹಳಿಯಲ್ಲಿ ಕಿಡಿಗೇಡಿಗಳು ಸಿಲಿಂಡರ್ ಇರಿಸಿದ್ದ ಸುದ್ದಿಯನ್ನು (ಪ್ರ.ವಾ., ಸೆ. 10) ಓದಿ ದಿಗ್ಭ್ರಮೆಯಾಯಿತು. ದೇಶದಲ್ಲಿ ಸಾಕ್ಷರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಸಮಾಜದಲ್ಲಿ ನಡೆಯುವ ಭಿನ್ನ ಅಪರಾಧ ಕೃತ್ಯಗಳನ್ನು ನೋಡಿದರೆ ಇದೊಂದು ವಿರೋಧಾಭಾಸ ಎನಿಸುತ್ತದೆ.
ಇಂತಹ ಹೀನ ಕೃತ್ಯಗಳ ಹಿಂದೆ ಹಿಂದೂ, ಮುಸ್ಲಿಂ, ಬೌದ್ಧ, ಕ್ರೈಸ್ತರಂತಹ ಯಾವುದೇ ಧರ್ಮದ ವ್ಯಕ್ತಿಗಳು ಇರಲಿ ಅವರನ್ನು ಮತ್ತು ಅವರಿಗೆ ಬೆಂಬಲ ನೀಡುವ ಸಂಘಟನೆಗಳನ್ನು ತೀವ್ರಗತಿಯಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಏಕೆಂದರೆ ಇದು ಸಾಮೂಹಿಕ ಕೊಲೆ ಮಾಡುವ ಸಂಚಾಗಿರುತ್ತದೆ. ಮುಂದೆ ಭಯೋತ್ಪಾದಕ ಕೃತ್ಯ ಕೈಗೊಳ್ಳುವ ಕಲ್ಪನೆಯನ್ನು ಸಹ ಮಾಡಿಕೊಳ್ಳದ ರೀತಿಯಲ್ಲಿ ಶಿಕ್ಷೆ ನೀಡಿದರೆ ಮಾತ್ರ ಇಂತಹ ದುಷ್ಕೃತ್ಯಗಳು ಕಡಿಮೆಯಾಗಲು ಸಾಧ್ಯ.
–ಸಂಜು, ಹೆಂದೊರೆ, ಶಿರಾ
***
ಸೈಬರ್ ಭದ್ರತೆ: ತಡವೇಕೆ?
ಇದು ಕೃತಕ ಬುದ್ಧಿಮತ್ತೆಯ (ಎ.ಐ) ಜಗತ್ತು. ಇಂದು ಪ್ರತಿ ಕ್ಷೇತ್ರದಲ್ಲೂ ಎ.ಐ. ಬಳಕೆ ಸರ್ವೇಸಾಮಾನ್ಯವಾಗಿದ್ದು, ಬಹಳಷ್ಟು ಜನ ಅದನ್ನು ಅವಲಂಬಿಸಿದ್ದಾರೆ. ಇದರ ನಡುವೆ ದೇಶದಲ್ಲಿ ಸೈಬರ್ ಅಪರಾಧಗಳು ಸಹ ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕಿಂತ ಮುಖ್ಯವಾಗಿ, ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಸೈಬರ್ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಬಹುತೇಕ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಇದು ಭಾರತದಂತಹ ಅಭಿವೃದ್ಧಿಶೀಲ ದೇಶದ ಆಂತರಿಕ ಭದ್ರತೆಗೂ ದೊಡ್ಡ ಸವಾಲಾಗಿದೆ. ಹೀಗಿರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಿನ ಐದು ವರ್ಷಗಳಲ್ಲಿ ಸೈಬರ್ ಭದ್ರತೆಗಾಗಿ ತರಬೇತಿ ಪಡೆದ ಐದು ಸಾವಿರ ಕಮಾಂಡೊ ಪಡೆಯನ್ನು ನಿಯೋಜಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹೇಳಿರುವುದು ನಾವೆಷ್ಟು ಹಿಂದುಳಿದಿದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ.
ಮುಂದಿನ ಐದು ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆಯೋ ಊಹಿಸಲು ಸಾಧ್ಯವಿಲ್ಲ. ಜೊತೆಗೆ ಅಲ್ಲಿಯತನಕ ಇನ್ನೆಷ್ಟು ಅಪರಾಧಗಳು ಹೆಚ್ಚಾಗುತ್ತವೆ ಎಂದು ಸಹ ಹೇಳಲಾಗದು. ಆದ್ದರಿಂದ ಸೈಬರ್ ಭದ್ರತೆಗಾಗಿ ಐದು ವರ್ಷಗಳ ಗುರಿ ಇರಿಸಿಕೊಳ್ಳದೆ ಈ ಸಂಬಂಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯ.
–ಸುರೇಂದ್ರ ಪೈ, ಭಟ್ಕಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.