ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮಿಗಳು ಕಠಿಣ ಪ್ರಶ್ನೆಗೆ ಹೆದರುವುದಿಲ್ಲ

Last Updated 27 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

‘ಎಸ್ಎಸ್ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ವಿಜ್ಞಾನದ ಪ್ರಶ್ನೆಪತ್ರಿಕೆ ಅತ್ಯಂತ ಕ್ಲಿಷ್ಟವಾಗಿತ್ತು. ಈ ರೀತಿಯ ಪ್ರಶ್ನೆಪತ್ರಿಕೆಗಳಿಗೆ ಹೆದರಿ, ಮಕ್ಕಳು ವಿಜ್ಞಾನದ ವಿಷಯವನ್ನು ತೊರೆದು ಬೇರೆ ವಿಭಾಗಕ್ಕೆ ಗುಳೆ ಹೋಗುತ್ತಾರೆ’ ಎಂದು ಎಚ್.ಎಸ್.ಟಿ.ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಫೆ. 26). ಇಂತಹ ಆತಂಕಕ್ಕೆ ಅರ್ಥವಿಲ್ಲ. ಏಕೆಂದರೆ, ಯಾವುದೇ ಪ್ರಶ್ನೆಯು ಕಷ್ಟ ಅಥವಾ ಸುಲಭ ಎನಿಸುವುದು ವಿದ್ಯಾರ್ಥಿಗಳ ಪರಿಶ್ರಮ, ವಿಷಯ ಅರ್ಥ ಮಾಡಿಕೊಂಡಿರುವ ರೀತಿ ಮತ್ತು ಶಿಕ್ಷಕರು ವಿಷಯ ಮನನ ಮಾಡಿಸಿರುವುದರ ಮೇಲೆ ಅವಲಂಬಿಸಿರುತ್ತದೆ.

ವಿದ್ಯಾರ್ಥಿಗಳು ಇಂದು ವಿಷಯವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವುದು ಕಷ್ಟ-ಸುಲಭದ ಮೇಲಲ್ಲ, ಆಸಕ್ತಿಯ ಕ್ಷೇತ್ರ ಎಂಬುದಕ್ಕೂ ಅಲ್ಲ. ಅವರು ಆಯ್ಕೆ ಮಾಡಿಕೊಳ್ಳುವ ವಿಭಾಗವು ಮುಂದಿನ ಉದ್ಯೋಗಕ್ಕೆ ದಾರಿಯಾಗುತ್ತದೆ ಎಂಬ ಕಾರಣಕ್ಕೆ ಮಾತ್ರ. ಕಷ್ಟ-ಸುಲಭದ ಆಧಾರದಲ್ಲಿ ಅಧ್ಯಯನದ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿದ್ದರೆ, ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ವಿಭಾಗಗಳ ಬದಲಿಗೆ ಕನ್ನಡವನ್ನೋ ಸಮಾಜ ವಿಜ್ಞಾನವನ್ನೋ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಆ ರೀತಿ ಆಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ, ವಾಣಿಜ್ಯ ವಿಭಾಗದಲ್ಲಿ ಸ್ವಲ್ಪವೂ ಆಸಕ್ತಿಯಿಲ್ಲದ ವಿದ್ಯಾರ್ಥಿಗಳು, ಕಲಾ ವಿಭಾಗ ಸುಲಭ ಎಂದು ತಿಳಿದಿದ್ದೂ, ಉದ್ಯೋಗ ಅವಕಾಶದ ಕಾರಣದಿಂದ ವಾಣಿಜ್ಯ ವಿಭಾಗಕ್ಕೆ ಸೇರುವುದನ್ನು ನೋಡಬಹುದು. ಪರೀಕ್ಷೆಗಳಿರುವುದೇ ಜರಡಿ ಹಿಡಿಯುವುದಕ್ಕೆ. ಗಟ್ಟಿಯಿಂದ ಟೊಳ್ಳನ್ನು ಬೇರ್ಪಡಿಸಬೇಕೆಂದರೆ, ಪರೀಕ್ಷೆಗಳಲ್ಲಿ ಕ್ಲಿಷ್ಟ ಪ್ರಶ್ನೆಗಳನ್ನೇ ಕೇಳಬೇಕು ಹಾಗೂ ಮೌಲ್ಯಮಾಪನವೂ ಬಿಗಿಯಾಗಿ ಇರಬೇಕು.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT