ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಆದ್ಯತೆ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ... ಈ  ಮೂವರೂ ರಾಜಕೀಯದಲ್ಲಿ ಹಿರಿಯರು. ಇವರೆಲ್ಲರೂ ಜನಸಾಮಾನ್ಯನಿಂದ ದೂರವಾಗಿ ಬಹಳ ವರ್ಷಗಳೇ ಕಳೆದಿವೆ. ರಾಜ್ಯದ ರೈತರ ಸಮಸ್ಯೆ ಬೇರೆಯೇ ಇದೆ. ಇವರು ನೀಡಿರುವ ಸಾಲ ಮನ್ನಾ, ನೀರಾವರಿ ಯೋಜನೆ ಮತ್ತು ಆರೋಗ್ಯ ಯೋಜನೆಯ ಭರವಸೆಗಳು ಕೇವಲ ತಾತ್ಕಾಲಿಕ ಆದ್ಯತೆಗಳಷ್ಟೆ.

ಕೃಷಿ ಕ್ಷೇತ್ರಕ್ಕೆ ಸುಸ್ಥಿರ ಯೋಜನೆಗಳು ಇಲ್ಲಿಲ್ಲ. ಈ ಕ್ಷೇತ್ರದಲ್ಲಿ ಸಂಪೂರ್ಣ ಬದಲಾವಣೆ ತರುವ ಅವಶ್ಯಕತೆ ಇದೆ. ಇದರ ಬಗ್ಗೆ ನಾಯಕರಲ್ಲಿ ದೂರದೃಷ್ಟಿ ಇಲ್ಲದೇ ಇರುವುದು ಅವರ ಮಾತಿನಲ್ಲಿ ಗೋಚರಿಸುತ್ತದೆ.

– ಅಣೇಕಟ್ಟೆ ವಿಶ್ವನಾಥ್, ತುಮಕೂರು

ಕಲ್ಯಾಣ ರಾಜ್ಯ ಬೇಕು

ರಾಜ್ಯದ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಅನಿಸಿಕೆ ಪಡೆಯುವ ಮೂಲಕ ಜನತಂತ್ರ ಹಬ್ಬಕ್ಕೆ ಮುನ್ನುಡಿ ಇಡಲಾಗಿದೆ. ಮೂವರು ಕೂಡ ಜನ ಕಲ್ಯಾಣಕ್ಕಾಗಿ ತಮ್ಮ ಕನಸಿನ ಯೋಜನೆ‌ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಲ್ಯಾಣ ರಾಜ್ಯದ ಕಲ್ಪನೆ ಮತ್ತು ಕನಸು, 12ನೇ ಶತಮಾನದ ಬಸವಾದಿ ಶರಣರ ಆಶಯವಾಗಿದೆ. ಅಲ್ಲಿ ಯಾವ ವಿಷಯಗಳ ಕುರಿತು ಚರ್ಚಿಸಿಲ್ಲ ಹೇಳಿ? ಆ ಮಾರ್ಗದ ಬಗ್ಗೆ ಪಕ್ಷಗಳು ಯೋಚನೆ ಮಾಡುವುದರ ಜೊತೆಗೆ ಗಾಂಧೀಜಿಯವರ ಸರ್ವೋದಯದ ಪಥವನ್ನು ಅನುಸರಿಸಿದರೆ ಒಳ್ಳೆಯದು.

– ಎಂ.ಜೆ. ರುದ್ರಮೂರ್ತಿ, ಚಿತ್ರದುರ್ಗ

ನಾಟಕಕ್ಕೆ ತಾಲೀಮು

‘ಪ್ರಜಾ ಮತ’ದ ಫೆ. 11ರ ವಿಶ್ಲೇಷಣೆ ಮುಂಬೈ ಕರ್ನಾಟಕ ಭಾಗಕ್ಕೆ ಮೀಸಲಾಗಿದೆ. 50 ಕ್ಷೇತ್ರಗಳನ್ನೊಳಗೊಂಡ ಆರು ಜಿಲ್ಲೆಗಳ ‘ಜಾತಿ, ಹಣ, ಜಮೀನ್ದಾರಿಕೆ, ಉದ್ಯಮ, ಶಿಕ್ಷಣ ಸಂಸ್ಥೆಗಳು, ವ್ಯಕ್ತಿ ಪ್ರತಿಷ್ಠೆ ಎಲ್ಲವನ್ನೂ ಹಾಸುಹೊಕ್ಕಾಗಿಸಿಕೊಂಡಿರುವ ಸದ್ಯದ ರಾಜಕಾರಣ’ವು ಪ್ರಜಾತಂತ್ರ ವೇಷ ತೊಟ್ಟು ಜನತೆಯ ಮುಂದೆ ಮತ್ತೆ ತನ್ನ ನಾಟಕಾಭಿನಯಕ್ಕೆ ತಾಲೀಮು ಪ್ರಾರಂಭಿಸಿದೆ.

ಎಲ್ಲಾ ಪಕ್ಷಗಳ ನಾಟಕಗಳ ಹೂರಣವೂ ಒಂದೇ, ಅರ್ಥಾತ್, ‘ಜಾತಿ, ಹಣ...‘. ಜನ ಈ ಬಾರಿ ಇಂಥ ಹಳೆಯ ಹೂರಣದ ಸವಿಗೇ ವಾಲುತ್ತಾರೋ, ಬೇರೆ ಇನ್ಯಾವುದಾದರೂ ಹೊಸ ರುಚಿ, ಕೆಲವಾದರೂ ಹೊಸ ಪಾತ್ರಧಾರಿಗಳಿಗೆ ಅವಕಾಶವಿದೆಯೋ ಅಥವಾ ಜನ ಅದೇ ಹಳೆ ಮುಖಗಳ ಅದೇ ಪಾತ್ರಾಭಿನಯನವನ್ನು ಮತ್ತೆ ವೀಕ್ಷಿಸುವ ದುರ್ದೈವಿಗಳೋ ನೋಡಬೇಕು.

–ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT