ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರಾ’ಗೆ ಡರ್ಬಿ ಗೆಲುವಿನ ಸಿಂಚನ

ಬಿಟಿಸಿ ಆವರಣದಲ್ಲಿ ಕ್ಯಾಟಲಿಸ್ಟ್‌ ಪ್ರಾಪರ್ಟೀಸ್‌ ಬೆಂಗಳೂರು ಡರ್ಬಿ; ‘ಪ್ರಿವಲೆಂಟ್‌ ಫೋರ್ಸ್‌’ಗೆ ನಿರಾಸೆ
Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಲಿಮಿಟೆಡ್‌ ಆವರಣದಲ್ಲಿ ಭಾನುವಾರ ಸಂಜೆ ನಡೆದ ‘ಕ್ಯಾಟಲಿಸ್ಟ್‌ ಪ್ರಾಪರ್ಟೀಸ್‌ ಬೆಂಗಳೂರು ಡರ್ಬಿ’ ರೇಸ್‌ನ ಪ್ರಶಸ್ತಿ ‘ಕಾಂಗ್ರಾ’ ಪಾಲಾಗಿದೆ. ಸುಲೈಮಾನ್‌ ಅಟ್ಟೊಲಾಹಿ ತರಬೇತಿ ನೀಡಿದ ಈ ಕುದುರೆ ಬೆಂಗಳೂರು ಚಳಿಗಾಲದ ರೇಸ್‌ಗಳ ದಾಖಲೆ ಬಹುಮಾನ ಮೊತ್ತ ಗಳಿಸಿತು. ಪಟೇಲ್‌ ಟ್ರೆವರ್‌ ಅವರು ’ಕಾಂಗ್ರಾ’ ಸವಾರಿ ಮಾಡಿದ್ದರು.

ಪ್ರಿವಲೆಂಟ್‌ ಫೋರ್ಸ್‌ಗೆ ನಿರಾಸೆ
ಕಳೆದ ಭಾನುವಾರ ನಡೆದ ಮುಂಬೈ ಇಂಡಿಯನ್‌ ಡರ್ಬಿಯಲ್ಲಿ ಸೋತಿದ್ದ ‘ಪ್ರಿವಲೆಂಟ್‌ ಫೋರ್ಸ್‌’ ಒಂದು ವಾರದ ಅಂತರದಲ್ಲಿ ಸಾಮರ್ಥ್ಯ ವೃದ್ಧಿಸಿಕೊಂಡಿರಬಹುದು ಎಂಬ ನಿರೀಕ್ಷೆ ಇತ್ತು. ಹೀಗಾಗಿ ಬಿಟಿಸಿಯಲ್ಲಿ ಈ ಕುದುರೆ ಗೆಲ್ಲುವ ಫೇವರಿಟ್‌ ಎನಿಸಿತ್ತು. ಆದರೆ ಕೊನೆಯಲ್ಲಿ ಅದು ನಿರಾಸೆ ಕಂಡಿತು.

ಕಾಂಗ್ರಾಗೆ ಅದು ಶರಣಾಯಿತು. ಈ ಹಿಂದಿನ ಓಟದಲ್ಲಿ ‘ಬೆಂಗಳೂರು ಓಕ್ಸ್‌’ ಗೆದ್ದಿದ್ದ ಕಾಂಗ್ರಾ ಸ್ಥಿರ ಸಾಮರ್ಥ್ಯ ನೀಡಿ ಗಮನ ಸೆಳೆಯಿತು. 12 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ರೇಸ್‌ ಪ್ರಿಯರ ಪ್ರಶಂಸೆಗೆ ಈ ಕುದುರೆ ಪಾತ್ರವಾಯಿತು.

5 ಹೆಣ್ಣು ಮತ್ತು 10 ಗಂಡು ಕುದುರೆಗಳು ಕಣದಲ್ಲಿದ್ದ ಡರ್ಬಿಯ ಆರಂಭದಲ್ಲಿ ‘ಸೈಕಿಕ್‌ ವಾರಿಯರ್‌’ ಮುನ್ನಡೆ ಪಡೆಯಿತು. ‘ಕಾಂಗ್ರಾ’ದ ಟ್ರೆವರ್‌ ‍ಪಟೇಲ್‌ ಆರಂಭದಲ್ಲಿ ಆತುರ ಮಾಡಲಿಲ್ಲ.

ಎರಡನೇ ಸ್ಥಾನದಲ್ಲಿಯೇ ಕುದುರೆಯನ್ನು ಓಡಿಸಿದ ಅವರು 2400 ಮೀಟರ್ಸ್‌ ದೂರದ ಈ ಡರ್ಬಿ ಮುಕ್ತಾಯಕ್ಕೆ 800 ಮೀಟರ್ಸ್‌ ಇರುವಾಗ ವೇಗ ಹೆಚ್ಚಿಸಿಕೊಂಡರು. ನಾಲ್ಕು ವರ್ಷ ವಯಸ್ಸಿನ ವೆಸ್ಟ್ರನ್‌ ಅರಿಸ್ಟೊಕ್ರಾಟ್‌–ಗಾರ್ಜಿನ್‌ ಸಂತತಿಯ ಹೆಣ್ಣು ಕುದುರೆ ಕಾಂಗ್ರಾ ಕೊನೆಯ ವರೆಗೂ ಮುನ್ನಡೆ ಕಾಯ್ದುಕೊಳ್ಳುವಂತೆ ಟ್ರೆವರ್‌ ನೋಡಿಕೊಂಡರು.‌

ಕೊನೆಯ 200 ಮೀಟರ್‌ ಉಳಿದಿರುವಾಗಲೇ ಈ ಕುದುರೆ ಗೆಲುವನ್ನು ತನ್ನದಾಗಿಸಿಕೊಳ್ಳುವತ್ತ ದಾಪುಗಾಲು ಇರಿಸಿತು. ಅಂತಿಮ ಕ್ಷಣಗಳಲ್ಲಿ ‘ಸ್ಟಾರ್‌ ಕಾರ್ನೇಷನ್‌’ ದಿಢೀರ್‌ ಮುನ್ನುಗ್ಗಿ ಕಾಂಗ್ರಾಗೆ ಸ್ವಲ್ಪ ಆತಂಕ ಉಂಟುಮಾಡಿತು. ಈ ಹಂತದಲ್ಲಿ ಟ್ರೆವರ್‌ ಅವರು ಕಾಂಗ್ರಾಗೆ ಚುರುಕಿ ಮುಟ್ಟಿಸಿ ಗೆಲುವು ತಮ್ಮದಾಗಿಸಿಕೊಂಡರು.

ಅಂತಿಮ ಹಂತದಲ್ಲಿ ಉತ್ತಮವಾಗಿ ಓಡಿದ ಮಹಟೇಜಿ ಮೂರನೇ ಸ್ಥಾನ ಗಳಿಸಿತು. ಡಾ.ಲೋಗನ್‌ ನಾಲ್ಕನೇ ಸ್ಥಾನ ಪಡೆಯಿತು. ‘ಕಾಂಗ್ರಾ’ 2:32.12 ನಿಮಿಷ ತೆಗೆದುಕೊಂಡಿತು. ₹ 2 ಲಕ್ಷ ಮೌಲ್ಯದ ಮಿರುಗುವ ಟ್ರೋಫಿ ಮತ್ತು ₹ 95.33 ಲಕ್ಷ ಮೊತ್ತ ಈ ಕುದುರೆಯ ಮಾಲೀಕರಾದ ಮಾರ್ಥಾಂಡ್‌ ಸಿಂಗ್‌, ರೀನಾ ಮಹೀಂದ್ರ ಮತ್ತು ಪಿ.ಪ್ರಭಾಕರ್‌ ರೆಡ್ಡಿ ಅವರ ಪಾಲಾಯಿತು.

*


ಕ್ಯಾಟಲಿಸ್ಟ್‌ ಪ್ರಾಪರ್ಟೀಸ್‌ ಬೆಂಗಳೂರು ಡರ್ಬಿಯ ಸಂದರ್ಭದಲ್ಲಿ ಬಿಟಿಸಿಗೆ ಮೈಸೂರಿನ ರಾಜವಂಶಸ್ಥ ಯದುವೀರ ಒಡೆಯರ್ ಭೇಟಿ ನೀಡಿದರು. –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌

*


–ಕ್ಯಾಟಲಿಸ್ಟ್‌ ಪ್ರಾಪರ್ಟೀಸ್‌ ಬೆಂಗಳೂರು ಡರ್ಬಿ ವೀಕ್ಷಿಸಲು ಬಂದಿದ್ದ ರೇಸ್ ಪ್ರಿಯರು . –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT