ಅಕಾಡೆಮಿ ಏಕೆ ಬೇಡ?

7

ಅಕಾಡೆಮಿ ಏಕೆ ಬೇಡ?

Published:
Updated:

ಬಯಲಾಟ ಮತ್ತು ಯಕ್ಷಗಾನಗಳಿಗೆ ಪ್ರತ್ಯೇಕ ಅಕಾಡೆಮಿಗಳಿರುವಾಗ, ಮೂಡಲಪಾಯಕ್ಕೆ ಅಕಾಡೆಮಿ ಯಾಕಿಲ್ಲ (ವಾ.ವಾ., ಆ. 13) ಎಂದು ಡಾ. ಚಂದ್ರು ಕಾಳೇನಹಳ್ಳಿ ಪ್ರಶ್ನಿಸಿದ್ದಾರೆ. ಅವರು ಪ್ರತಿಪಾದಿಸಿದ ರೀತಿಯಲ್ಲಿ ಈ ಪ್ರಶ್ನೆ ಸರಿ ಅನ್ನಿಸಬಹುದು. ಆದರೆ ಹೀಗೆ ಪ್ರತಿಯೊಂದು ಕಲೆಗೂ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುತ್ತಾ ಹೋಗುವುದರಿಂದ ಆಯಾ ಕಲೆಯ ಅಭಿವೃದ್ಧಿಗೆ ನಿಜಾರ್ಥದಲ್ಲಿ ಲಾಭವಾಗುತ್ತದೆಯೇ ಎಂದು ಯೋಚಿಸಬೇಕಾಗಿದೆ.

ಒಂದು ಕಲೆ ಎಷ್ಟು ಶ್ರೀಮಂತವಾಗಿದೆ, ರಾಜ್ಯದಲ್ಲಿ ಎಷ್ಟರಮಟ್ಟಿಗೆ ವ್ಯಾಪಿಸಿಕೊಂಡಿದೆ ಎಂಬ ಅಂಶಗಳ ಆಧಾರದಲ್ಲಿ ಅಕಾಡೆಮಿಗಳನ್ನು ಸ್ಥಾಪಿಸುವ ವ್ಯವಸ್ಥೆ ನಮ್ಮಲ್ಲಿ ಇದ್ದಂತೆ ಕಾಣಿಸುವುದಿಲ್ಲ. ಬದಲಿಗೆ, ಆ ಕಲೆಯನ್ನು ಪ್ರತಿನಿಧಿಸುವ ಜನಸಮುದಾಯ ಯಾವುದು, ಚುನಾವಣಾ ರಾಜಕಾರಣದ ಮೇಲೆ ಅದು ಬೀರುವ ಪ್ರಭಾವ ಎಷ್ಟರ ಮಟ್ಟಿನದ್ದು ಎಂಬುದು ಮುಖ್ಯವಾಗುತ್ತದೆ.

ಉತ್ತರ ಕರ್ನಾಟಕದ ಅರ್ಧ ಭಾಗದಲ್ಲಿ ವ್ಯಾಪಿಸಿಕೊಂಡಿರುವ ಬಯಲಾಟಕ್ಕೆ ಅಕಾಡೆಮಿ ಸ್ಥಾಪನೆಯಾಗುವುದಕ್ಕೂ ಮುನ್ನವೇ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದ ಯಕ್ಷಗಾನಕ್ಕೆ ಅಕಾಡೆಮಿ ಸ್ಥಾಪನೆಯಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು.

ಇದಕ್ಕೆ ಕಾರಣ ಏನಿರಬಹುದು? ಶಿವರಾಮ ಕಾರಂತರಂಥ ಮಹತ್ವದ ಲೇಖಕರು ಯಕ್ಷಗಾನದ ಬಗ್ಗೆ ಕೃತಿ ಬರೆದರು. ಆ ಕಲೆಯ ಅಭಿವೃದ್ಧಿಗೆ ಶ್ರಮಿಸಿದರು. ಇದರಿಂದಾಗಿ ಯಕ್ಷಗಾನವು ರಾಷ್ಟ್ರಮಟ್ಟದಲ್ಲಿ ಪರಿಚಯವಾಯಿತು. ಕರಾವಳಿ ಭಾಗದ ಜನರು ದೇಶದ ಎಲ್ಲ ಭಾಗಗಳಲ್ಲಿ ಮಾತ್ರವಲ್ಲ, ಹೊರದೇಶಗಳಲ್ಲೂ ಪ್ರಭಾವಿಗಳಾಗಿದ್ದಾರೆ. ಇದರಿಂದ ಯಕ್ಷಗಾನ ಕಲೆಯು ಗಡಿಗಳನ್ನು ದಾಟಿ ಬೆಳೆಯಿತು. ಈ ಎಲ್ಲ ವಿಚಾರಗಳೂ ಅಕಾಡೆಮಿ ರಚನೆಗೆ ಪೂರಕವಾದವು. ಬಯಲಾಟದ ವಿಷಯದಲ್ಲಿ ಇಂಥ ಕೆಲಸ ಆಗಲಿಲ್ಲ. ಯಕ್ಷಗಾನವು ಮಹತ್ವದ ಕಲೆಯಲ್ಲ ಎಂದು ನಾನು ವಾದಿಸುತ್ತಿಲ್ಲ. ಬದಲಾಗಿ ಒಂದು ಕಲೆ ಇನ್ನೊಂದು ಕಲೆಗಿಂತ ‘ದೊಡ್ಡದು’ ಅಥವಾ ‘ಮಹತ್ವದ್ದು’ ಎಂದು ಪರಿಗಣಿತವಾಗಲು ಕಾರಣವಾಗುವ ಅಂಶಗಳು ಯಾವುವು ಎಂದು ತಿಳಿಸುವುದು ನನ್ನ ಉದ್ದೇಶ.

ಕರ್ನಾಟಕದಲ್ಲಿ ಬಹಳಷ್ಟು ಪ್ರದರ್ಶನ ಕಲೆಗಳಿವೆ. ಅವೆಲ್ಲವಕ್ಕೂ ಪ್ರತ್ಯೇಕ ಅಕಾಡೆಮಿ ಸ್ಥಾಪಿಸುವುದು ಸಾಧ್ಯವಿಲ್ಲದ ಮತ್ತು ಸಾಧುವಲ್ಲದ ಸಂಗತಿ. ಹೀಗೆ ಮಾಡುತ್ತ ಹೋದರೆ ಮುಂದಿನ ದಿನಗಳಲ್ಲಿ ಪೂಜಾಕುಣಿತ, ಕಂಸಾಳೆ, ವೀರಗಾಸೆ, ಡೊಳ್ಳುಕುಣಿತ, ಅಂಟಿಗೆ ಪಂಟಿಗೆ... ಹೀಗೆ ಹತ್ತಾರು ಅಕಾಡೆಮಿಗಳನ್ನು ಸ್ಥಾಪಿಸಬೇಕಾದೀತು. 
ಇಂಥ ಪ್ರತಿ ಅಕಾಡೆಮಿಗೂ ಒಬ್ಬೊಬ್ಬ ಅಧ್ಯಕ್ಷ, ಆತನಿಗೊಂದು ಕಾರು, ಜೊತೆಗೆ ಏಳೆಂಟು ಜನ ಸದಸ್ಯರಿಗೆ ರಾಜಕೀಯ ಸ್ಥಾನಮಾನ... ಹೀಗೆ ಅನಗತ್ಯ ‘ಖರ್ಚು’ಗಳು ಹೆಚ್ಚಬಹುದೇ ವಿನಾ ಕಲೆಯ ಉದ್ಧಾರವಾಗುವುದಿಲ್ಲ. ಈ ಎಲ್ಲ ಕಲೆಗಳನ್ನೂ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ತಜ್ಞರ ನೆರವಿನ ಸಮಿತಿ ರಚಿಸಿಕೊಂಡು ನಿರ್ವಹಿಸಬಹುದು. ಕರ್ನಾಟಕದಲ್ಲಿರುವ ಎಲ್ಲ ಪ್ರದರ್ಶನ ಕಲೆಗಳನ್ನು ಒಳಗೊಳ್ಳುವಂತೆ ‘ಕರ್ನಾಟಕ ಪ್ರದರ್ಶನ ಕಲೆಗಳ ಅಕಾಡೆಮಿ’ ಎಂಬ ಒಂದೇ ಅಕಾಡೆಮಿಯನ್ನು ಸ್ಥಾಪಿಸಿ, ಅದಕ್ಕೆ ಸಮರ್ಥ ಕಲಾವಿದರೊಬ್ಬರನ್ನು ಅಧ್ಯಕ್ಷರನ್ನಾಗಿಸಿ, ರಾಜ್ಯದ ಬೇರೆ ಬೇರೆ ಕಲೆಗಳನ್ನು ಪ್ರತಿನಿಧಿಸುವವರನ್ನು ಸದಸ್ಯರನ್ನಾಗಿ ನೇಮಿಸಿದರೆ ನಿಜಾರ್ಥದಲ್ಲಿ ಈ ಕಲೆಗಳ ಅಭಿವೃದ್ಧಿಗೆ ಅಗತ್ಯ ಕೆಲಸಗಳನ್ನು ಮಾಡಬಹುದು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !