ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ರಾಷ್ಟ್ರಪತಿ ಆಯ್ಕೆ: ದೂರದೃಷ್ಟಿಯ ನಿಲುವಿರಲಿ

ಅಕ್ಷರ ಗಾತ್ರ

ಭಾರತದ ರಾಷ್ಟ್ರಪತಿ ಅವರನ್ನು ಪ್ರಥಮ ಪ್ರಜೆ ಎನ್ನುವುದುಂಟು. ಆದರೆ ಅವರ ಆಯ್ಕೆಯಲ್ಲಿ ಸಾಮಾನ್ಯ ಪ್ರಜೆಯ ನೇರ ಪಾತ್ರ ಇಲ್ಲ. ಈಗ ಆ ಸ್ಥಾನದಲ್ಲಿ ಇರುವವರನ್ನು ನೋಡಿದರೆ ನೆನಪಾಗುವವರು ಫಕ್ರುದ್ದೀನ್ ಅಲಿ ಅಹಮದ್. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದ, ಅಸ್ಸಾಂನ ಅಡ್ವೊಕೇಟ್ ಜನರಲ್ ಕೂಡ ಆಗಿದ್ದ ಅವರು ತುರ್ತು ಪರಿಸ್ಥಿತಿ ಘೋಷಣೆಗೆ ಸುಲಭವಾಗಿ ಸಹಿ ಹಾಕಿದ್ದರಿಂದ ಕುಪ್ರಸಿದ್ಧರಾದರು. ತುರ್ಕ್‌ಮನ್ ಗೇಟ್ ಹಿಂಸಾಚಾರದಿಂದ ವಿಚಲಿತರಾದರೂ ಅಸಹಾಯಕರಾದರು. ಈಗಿನ ರಾಷ್ಟ್ರಪತಿ ಅವರ ಅರ್ಹತಾ ಹಿನ್ನೆಲೆ ಫಕ್ರುದ್ದೀನರಷ್ಟು ಇರಲಿಲ್ಲ. ಹೆಸರು ಸೂಚಿತವಾದಾಗ ‘ಯಾರಪ್ಪ ಇವರು?’ ಎಂದು ಜನ ಅನ್ವೇಷಿಸಬೇಕಾಯಿತು. ಇಲ್ಲಿಯವರೆಗೆ ಕೇಂದ್ರ ಸಂಪುಟದ ಯಾವುದೇ ತೀರ್ಮಾನವನ್ನು ಇವರು ಮರುಪರಿಶೀಲಿಸಲು ಹೇಳಿದ ಪ್ರಸಂಗ ಇಲ್ಲ. ಸಿಎಎ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯಂತಹವು ಅತಿ ಶೀಘ್ರದಲ್ಲಿ ಸ್ವೀಕೃತಿ ಪಡೆದವು. ಉತ್ತರದಾಯಿತ್ವ ಎಂಬುದು ಇದ್ದರೆ ಜನರಿಗೆ ತಮ್ಮ ಸಾಧನೆಗಳ ಬಗೆಗೆ ಈಗಲಾದರೂ ತಿಳಿಸಬಹುದಲ್ಲ?

ಆಳುವ ಹಾಗೂ ಪ್ರತಿಪಕ್ಷಗಳವರು ಅಭ್ಯರ್ಥಿ ಆಯ್ಕೆ ಬಗೆಗಿನ ಕಸರತ್ತು ಆರಂಭಿಸಿದ್ದಾರೆ. ವಿ.ವಿ.ಗಿರಿ, ವೆಂಕಟರಾಮನ್, ಪ್ರಣವ್‌ ಮುಖರ್ಜಿ ಅಂತಹವರು ಇದ್ದಂತಹ ಈ ಸಾಂವಿಧಾನಿಕ ಪದವಿಗೆ ಯಾರೋ ಒಬ್ಬರನ್ನು ಜಾತಿ, ಅನುಕೂಲಕರ ಸ್ವಭಾವದವರು ಇತ್ಯಾದಿ ಪರಿಗಣನೆಗಳಿಂದ ಸೂಚಿಸಿದರೆ ದೇಶದ ಹಿತ ಕಾಯ್ದಂತೆ ಆಗುವುದಿಲ್ಲ. ‘ಪ್ರಧಾನ ಸೇವಕ’ರ ಕಚೇರಿ ಅತ್ಯಂತ ಬಲಿಷ್ಠವಾಗಿರುವ ದಿನಗಳು ಮುಂದುವರಿಯಲಿವೆ. ಸರ್ಕಾರದ ಕ್ರಮಗಳ ಬಗೆಗೆ ನಿಯೋಗದಲ್ಲಿ ಹೋಗಿ ಮನವಿಪತ್ರ ಸಲ್ಲಿಸಿದರೆ ಪರಿಶೀಲಿಸುವ ಸೌಜನ್ಯವನ್ನಾದರೂ ತೋರಬಲ್ಲ ವ್ಯಕ್ತಿ ಆ ಹುದ್ದೆಯಲ್ಲಿ ಇರಬೇಕಾಗುತ್ತದೆ. ಸರ್ವಾನುಮತದ ಅಭ್ಯರ್ಥಿ ಕೂಡ ತಪ್ಪು ನಿರ್ಧಾರ ಕೈಗೊಂಡ ನಿದರ್ಶನವೂ ಇದೆ. ಒಟ್ಟಿನಲ್ಲಿ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ದೂರದೃಷ್ಟಿಯ ನಿಲುವು ತಾಳುವುದು ಅತ್ಯಗತ್ಯ.

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT