ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಘಟನೆ, ವರದಿ ಎರಡೂ ದುರದೃಷ್ಟಕರ

ಅಕ್ಷರ ಗಾತ್ರ

ಕಾರಿನಲ್ಲಿ ಟೆಕಿ ಆತ್ಮಹತ್ಯೆ’ ಕುರಿತ ದುರದೃಷ್ಟಕರ ಸಂಗತಿಯನ್ನು ಎಲ್ಲ ಮಾಧ್ಯಮಗಳೂ ವಿವರವಾಗಿ
ನಿನ್ನೆ ಪ್ರಕಟಿಸಿವೆ. ಇಂಥ ವರದಿಗಳಿಂದ ಸಮಾಜಕ್ಕೆ ಯಾವ ಉತ್ತಮ ಪಾಠವೂ ಸಿಗುವುದಿಲ್ಲ. ಆತ್ಮಹತ್ಯೆಯ ಸುದ್ದಿಯನ್ನು ಹೇಗೆ ವರದಿ ಮಾಡಬಾರದು ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯುಮಾಧ್ಯಮದವರಿಗೆಂದೇ ವಿಶೇಷ ಮಾರ್ಗಸೂಚಿಯನ್ನು ಆಗಾಗ ಪ್ರಕಟಿಸುತ್ತಿರುತ್ತದೆ. ಅದರ ಪ್ರಕಾರ, ಒಬ್ಬ ವ್ಯಕ್ತಿ ಹೇಗೆ ಆತ್ಮಹತ್ಯೆ ಮಾಡಿಕೊಂಡ ಎಂಬುದನ್ನು ಪ್ರಕಟಿಸಬಾರದು. ಇಂಥ ವರದಿ ಪ್ರಕಟವಾದಾಗಲೆಲ್ಲ ಇದನ್ನೇ ಅನುಕರಿಸಿದ ಸರಣಿ ಆತ್ಮಹತ್ಯೆಗಳು ಅದೆಷ್ಟೊ ಬಾರಿ ಸಂಭವಿಸಿವೆ. ತಾತ್ಕಾಲಿಕ ಖಿನ್ನತೆಯಿಂದ ಬಳಲುವ
ವ್ಯಕ್ತಿಗಳು ತಮ್ಮ ಪ್ರಾಣತ್ಯಾಗಕ್ಕೆ ನೋವಿಲ್ಲದ, ಸುಲಭ ಉಪಾಯವನ್ನು ಹುಡುಕುತ್ತಿರುತ್ತಾರೆ.

ಅಂಥವರ ಕಣ್ಣಿಗೆ ಈ ಬಗೆಯ ವಿವರ ಮಾಹಿತಿ ಬೀಳಲೇಬಾರದು. ಯಾರನ್ನಾದರೂ ಮುಗಿಸಿಬಿಡಬೇಕೆಂಬ ಕುತ್ಸಿತ ಮನಃಸ್ಥಿತಿಇದ್ದವರೂ ಇಂಥ ವರದಿಯಿಂದ ಪ್ರೇರಣೆ ಪಡೆಯುವ ಸಂಭವ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ, ವ್ಯಕ್ತಿಯೊಬ್ಬ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದನ್ನೂ ವರದಿ ಮಾಡಬಾರದು. ಅಂಥದ್ದೇಸಮಸ್ಯೆ ಇದ್ದವರಿಗೆ ಇದು ಪ್ರೇರಣೆ ನೀಡುವಂತಾಗುತ್ತದೆ. ಮೇಲಾಗಿ, ಯಾವ ಆತ್ಮಹತ್ಯೆಗೂ ಒಂದೇ ನಿರ್ದಿಷ್ಟಕಾರಣ ಇರುವುದಿಲ್ಲ.

ಆತ್ಮಹತ್ಯೆ ಎಂಬುದು ಸಾರ್ವಜನಿಕ ಸ್ವಾಸ್ಥ್ಯದ ಗಂಭೀರ ಸಮಸ್ಯೆಯಾಗಿದ್ದು, ಇದರ ಸಂಖ್ಯೆಯನ್ನು ಕಡಿಮೆ ಮಾಡಲು ಮನೋವಿಜ್ಞಾನಿಗಳು ಮತ್ತು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಘಟನೆಗಳು ಏನೆಲ್ಲ ಪ್ರಯತ್ನಗಳನ್ನು ಕೈಗೊಳ್ಳುತ್ತಿವೆ. ಸರ್ಕಾರಗಳು ಸಹಾಯವಾಣಿಯನ್ನು ಸ್ಥಾಪಿಸಿವೆ. ಸುದ್ದಿಯಲ್ಲಿ ರೋಚಕತೆಯ ಬದಲು ಸಂಯಮವಿದ್ದರೆ ಆ ಎಲ್ಲ ಯತ್ನಗಳಿಗೆ ಮಾಧ್ಯಮವೂ ಕೈಜೋಡಿಸಿದಂತಾಗುತ್ತದೆ.

ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT