ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಕ್ಷರ ಜಾತ್ರೆ: ಎಲ್ಲರಿಗೂ ಸಲ್ಲುವಂತಿರಲಿ

ಅಕ್ಷರ ಗಾತ್ರ

ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳ ಆನ್‌ಲೈನ್ ನೋಂದಣಿಗೆ ನೀರಸ ಪ್ರತಿಕ್ರಿಯೆಯ ಸುದ್ದಿ (ಪ್ರ.ವಾ., ಡಿ. 21) ಓದಿ ಡಾ. ಎಸ್.ಎಲ್.ಭೈರಪ್ಪನವರು ಸಮ್ಮೇಳನದ ಅಧ್ಯಕ್ಷರಾಗಿದ್ದ, ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಾಯಿತು. ಆಗ ಡಾ. ಬಸವಾರಾಧ್ಯರು ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎಲ್ಲೇಗೌಡ ಬೆಸಗರಹಳ್ಳಿಯವರು ಅಧ್ಯಕ್ಷರಿದ್ದರು, ಕನಕಪುರ ತಾಲ್ಲೂಕು ಕಚೇರಿಯಲ್ಲಿ ಆಹಾರ ಪರಿವೀಕ್ಷಕನಾಗಿದ್ದ ನಾನು, ಗ್ರಾಮಾಂತರ ಜಿಲ್ಲೆಗೆ ಕಸಾಪ ಖಜಾಂಚಿ ಆಗಿದ್ದೆ. ಆಗ ಸಚಿವರಾಗಿದ್ದ ಪಿ.ಜಿ.ಆರ್.ಸಿಂಧ್ಯಾ ಅವರು ಸಮ್ಮೇಳನದ ಉಸ್ತುವಾರಿ ನೋಡುತ್ತಿದ್ದರು. ಮೂರು ದಿನಗಳ ಊಟ ವಸತಿಗಾಗಿ ಪ್ರತಿನಿಧಿ ಶುಲ್ಕ ₹ 100 ಪಡೆದು ರಸೀದಿ ನೀಡುವಂತೆ ಕೇಂದ್ರ ಸಾಹಿತ್ಯ ಪರಿಷತ್ತು ಸೂಚಿಸಿತ್ತು. ಈ ಸುದ್ದಿ ಉಸ್ತುವಾರಿ ಸಚಿವರಿಗೆ ತಿಳಿಯಿತು. ತಕ್ಷಣ ಅವರು ಸ್ವಾಗತ ಸಮಿತಿಯ ಸಭೆ ಕರೆದು ಪ್ರತಿನಿಧಿ ಶುಲ್ಕವನ್ನು ವಸೂಲು ಮಾಡದಂತೆ ತಿಳಿಸಿದರು. ಸಮ್ಮೇಳನಕ್ಕೆ ಬರುವ
ಪ್ರತಿನಿಧಿಗಳಿಗೆ ಉಚಿತ ಊಟ, ವಸತಿ ಘೋಷಣೆ ಮಾಡಿದರು. ಸರ್ಕಾರವೇ ಎಲ್ಲವನ್ನೂ ಭರಿಸಿತ್ತು.

‘ನ ಭೂತೋ ನ ಭವಿಷ್ಯತ್’ ಎನ್ನುವಂತೆ ಭರ್ಜರಿ ಊಟದ ವ್ಯವಸ್ಥೆ ಆಗಿತ್ತು. ಸ್ಥಳೀಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜನರು ಅಕ್ಷರ ಜಾತ್ರೆಗೆ ಮುಗಿಬಿದ್ದರು. ಸುತ್ತಮುತ್ತಲಿನ ಊರುಗಳ ಮಹಿಳೆಯರು, ಗಂಡಸರು ವಯಸ್ಸಿನ ಅಂತರ
ವಿಲ್ಲದಂತೆ ಬಂದು ಅಕ್ಷರ ಜಾತ್ರೆಯಲ್ಲಿ ಅಡ್ಡಾಡಿ ಊಟ ಮಾಡಿ ಹೋದರು. ಆನಂತರದಲ್ಲಿ ನಡೆದ ಬಹುತೇಕ ಸಮ್ಮೇಳನಗಳಲ್ಲಿ ರುಚಿ ರುಚಿಯಾದ ಊಟವನ್ನು ಉಚಿತವಾಗಿಯೇ ಬಡಿಸಲಾಗಿದೆ. ದೂರದಿಂದ ಬರುವ ಶಿಕ್ಷಕರು, ಸರ್ಕಾರಿ ನೌಕರ ಪ್ರತಿನಿಧಿಗಳಿಗೆ ಹಾಜರಾತಿ ಪತ್ರ ಪಡೆಯಲು ಅನುಕೂಲವಾಗುವಂತೆ ಆದಷ್ಟೂ ಕಡಿಮೆ ಪ್ರತಿನಿಧಿ ಶುಲ್ಕ ವಿಧಿಸಿದ್ದು ಇದೆ.

ಈಗಲೂ ಅಷ್ಟೇ, ಸಮ್ಮೇಳನಕ್ಕಾಗಿ ₹ 20 ಕೋಟಿ ಕೊಟ್ಟಿರುವ ಸರ್ಕಾರಕ್ಕೆ ಯಾವುದೂ ಭಾರವಾಗಿಲ್ಲ. ಸಮ್ಮೇಳನಕ್ಕೆ ಬರುವವರೆಲ್ಲಾ ಗೋಷ್ಠಿಗಳಲ್ಲಿ ಕೂಡಲು ಬರುವುದಿಲ್ಲ. ಪುಸ್ತಕ ಖರೀದಿಸಲು, ಊಟದ ವೈಶಿಷ್ಟ್ಯ ಸವಿಯಲು, ಮಾತು ಕೇಳಲು, ಕವಿಗಳು, ಸಾಹಿತಿಗಳನ್ನು ಮಾತನಾಡಿಸಲು, ಹೊಸತನಕ್ಕಾಗಿ ಅಡ್ಡಾಡಲು ಬರುವ, ಆನ್‌ಲೈನ್, ಆಫ್‌ಲೈನ್ ಪರಿಜ್ಞಾನವೇ ಇಲ್ಲದ ಸ್ಥಳೀಯ ಹಿರಿ ಕಿರಿಯರೂ ಇದ್ದಾರೆ. ಎಲ್ಲರಿಗೂ ಅನುಕೂಲ ಆಗುವಂತೆ ಪರಿಷತ್ತಿನ ಪದಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರೂ ಸೇರಿ ಸಮಾಲೋಚನೆ ನಡೆಸಿ ಉಚಿತ ಊಟ, ಕಡಿಮೆ ಶುಲ್ಕ, ಆನ್‌ಲೈನ್, ಆಫ್‌ಲೈನ್ ಜೊತೆಗೆ ರಸೀದಿ ಮೂಲಕವೂ ಪ್ರತಿನಿಧಿಗಳಾಗಲು ಅವಕಾಶ ಕೊಟ್ಟು ಸಮ್ಮೇಳನ ಯಶಸ್ವಿ ಆಗುವಂತೆ ಎಲ್ಲರೂ ಸಹಕರಿಸಲಿ.

ತಾ.ಸಿ.ತಿಮ್ಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT