ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಭಿನ್ನ ಬಣ್ಣದ ಪಡಿತರ ಚೀಟಿ ವಿತರಣೆಯಾಗಲಿ

Published 20 ನವೆಂಬರ್ 2023, 0:09 IST
Last Updated 20 ನವೆಂಬರ್ 2023, 0:09 IST
ಅಕ್ಷರ ಗಾತ್ರ

ಭಿನ್ನ ಬಣ್ಣದ ಪಡಿತರ ಚೀಟಿ ವಿತರಣೆಯಾಗಲಿ

ಪ್ರಸ್ತುತ ಇರುವ ಪಡಿತರ ಚೀಟಿಗಳ ಸಂಖ್ಯೆಯನ್ನು ಹೆಚ್ಚಿಸುವಂತಿಲ್ಲ ಎಂಬ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆದೇಶ (ಪ್ರ.ವಾ., ನ. 17) ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದಷ್ಟೇ ಅಲ್ಲ ಜನರಿಗೂ ತೊಂದರೆ ಉಂಟುಮಾಡುತ್ತದೆ. ಏಕೆಂದರೆ, ಕೂಡುಕುಟುಂಬ ವಿಂಗಡಣೆಯಾಗಿರು
ವುದನ್ನು ಸಾಬೀತುಪಡಿಸಲು ಪಡಿತರ ಚೀಟಿಯೂ ಅವಶ್ಯಕ ದಾಖಲೆಯಾಗಿದೆ. ಅದೇ ಪತ್ರಿಕಾ ವರದಿಯಲ್ಲಿ
‘ಗೃಹಲಕ್ಷ್ಮಿಯಂತಹ ಸೌಲಭ್ಯಗಳ ಫಲಾನುಭವಿಗಳ ಆಯ್ಕೆಗೆ ಪಡಿತರ ಚೀಟಿಯನ್ನೂ ಆಧಾರವನ್ನಾಗಿಸುವುದರಿಂದ ಹೆಚ್ಚು ಪಡಿತರ ಚೀಟಿಗಳಿಂದ ಸರ್ಕಾರಕ್ಕೂ ಹೊರೆ ಬೀಳುತ್ತದೆ’ ಎಂದೂ ಹೇಳಲಾಗಿದೆ. ಇದು ಹೌದು ಕೂಡ.

ಈ ಸಮಸ್ಯೆ ಬಗೆಹರಿಸಲು, ಕೂಡುಕುಟುಂಬ ವಿಂಗಡಣೆಯ ದಾಖಲೆಗಾಗಿ ಪಡಿತರ ಚೀಟಿಗೆ ಅರ್ಜಿ ಹಾಕುವವರಿಗೆ ‘ಸರ್ಕಾರದ ಯಾವುದೇ ಆರ್ಥಿಕ ಸಬ್ಸಿಡಿಗೆ ಉಪಯೋಗಿಸುವುದಿಲ್ಲ’ ಎಂದು ಬರೆಸಿಕೊಂಡು ಬೇರೆಯೇ ಬಣ್ಣದ ಎಪಿಎಲ್ ಪಡಿತರ ಚೀಟಿಗಳನ್ನು ಕೊಡುವುದು ಸೂಕ್ತ ಎನಿಸುತ್ತದೆ. ಇದರಿಂದ ಸರ್ಕಾರಕ್ಕೂ ಯಾವುದೇ ಹೊರೆ ಬೀಳುವುದಿಲ್ಲ.

-ಸುಬ್ರಮಣ್ಯ ಮಾಚಿಕೊಪ್ಪ, ಕಲ್ಕೆರೆ, ಕೊಪ್ಪ

ಮುಜುಗರ ತರುವ ಹೇಳಿಕೆ

‘ಮುಸ್ಲಿಂ ಸಮುದಾಯದ ಸ್ಪೀಕರ್ ಎದುರು ಬಿಜೆಪಿಯ ದೊಡ್ಡ ದೊಡ್ಡ ನಾಯಕರು ನಮಸ್ಕರಿಸುವಂತೆ ಕಾಂಗ್ರೆಸ್ ಮಾಡಿದೆ’ ಎಂದು ಸಚಿವ ಜಮೀರ್ ಅಹಮದ್ ಖಾನ್  ನೀಡಿದ್ದಾರೆ ಎನ್ನಲಾದ ಹೇಳಿಕೆಯು ತುಂಬಾ ಅನಾಗರಿಕವಾದದ್ದು. ಒಂದು ರಾಜ್ಯದ ಸಚಿವರಾಗಿ ಇಂತಹ ಬಾಲಿಶವಾದ ಹೇಳಿಕೆ ನೀಡುವುದು ಅವರನ್ನು ಆಯ್ಕೆ ಮಾಡಿರುವ ಜನರಿಗೆ ಮಾಡಿದ ಅವಮಾನ. ಪದೇಪದೇ ಇಂತಹ ಹೇಳಿಕೆಗಳನ್ನು ನೀಡುವುದರ ಮೂಲಕ ಜಮೀರ್ ಅವರು ತಮ್ಮ ಘನತೆ, ಗೌರವಕ್ಕೆ ಕುಂದು ತಂದುಕೊಳ್ಳುತ್ತಿರುವುದರ ಜೊತೆಗೆ ಸರ್ಕಾರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಮುಜುಗರ ಉಂಟುಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಕಡಿವಾಣ ಹಾಕಬೇಕಾಗಿದೆ.

-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ಅಂದಿನ ಶಾಸಕ... ಇಂದಿನ ಶಾಸಕ...

ವೈ.ಕೆ.ರಾಮಯ್ಯ ಅವರು ಶಾಸಕರಾಗಿದ್ದಾಗ ನಾನು ಕುಣಿಗಲ್ ತಾಲ್ಲೂಕು ಕಚೇರಿಯಲ್ಲಿ ಆಹಾರ ಪರಿವೀಕ್ಷಕನಾಗಿದ್ದೆ (2003ರಿಂದ 2005). ಶಾಸಕರು ಆಗಾಗ ತಾಲ್ಲೂಕು ಕಚೇರಿಗೆ ಸದ್ದಿಲ್ಲದೇ ಬರುತ್ತಿದ್ದರು. ಜನಸಾಮಾನ್ಯರ ಜೊತೆಯಲ್ಲಿ ನಿಂತು, ‘ಯಾಕೆ ಬಂದಿದ್ದೀರಿ? ಏನು ಕೆಲಸ ಆಗಬೇಕು? ಯಾರ ಹತ್ತಿರ ನಿಮ್ಮ ಕೆಲಸ ಬಾಕಿ ಇದೆ?’ ಎಂದೆಲ್ಲ ಪ್ರಶ್ನೆಗಳನ್ನು ಕೇಳಿ, ತಾವೇ ವಿಷಯ ನಿರ್ವಾಹಕರ ಬಳಿಗೆ ಹೋಗಿ ವಿಚಾರಿಸುತ್ತಿದ್ದರು. ತಾಲ್ಲೂಕಿನ ನೌಕರ ಸಿಬ್ಬಂದಿಯಲ್ಲಿ ಶಾಸಕರು ಎಲ್ಲಿ ಯಾವಾಗ ಬರುತ್ತಾರೋ ಎಂಬ ಭಯ ಇರುತ್ತಿತ್ತು. ಯಾವ ಅರ್ಜಿಯೂ ಬಾಕಿ ಇರದಂತೆ ನಿಗಾ ವಹಿಸುತ್ತಿದ್ದರು. ತಿಂಗಳಿಗೊಮ್ಮೆ ಪ್ರಗತಿ ಸಭೆ ನಡೆಯುತ್ತಿತ್ತು. ತಾಲ್ಲೂಕಿನ ನೌಕರರೆಲ್ಲಾ ಒಂದೇ ಕಡೆ ಸೇರುತ್ತಿದ್ದರು. ‘ವ್ಯಾಧನೊಂದು ಮೊಲವ ತಂದಡೆ/ ಸಲುವ ಹಾಗಕ್ಕೆ ಬಿಲಿವರಯ್ಯಾ/ ನೆಲನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ’ ಎಂಬ ಬಸವಣ್ಣನವರ ವಚನವನ್ನು ಸಿಬ್ಬಂದಿಯ ಮುಂದೆ ಹೇಳುತ್ತಿದ್ದರು. ಸತ್ತ ಮೊಲಕ್ಕೆ ಇರುವ ಬೆಲೆಯು ದೊರೆಯ ಹೆಣಕ್ಕೂ ಇಲ್ಲ ಎಂಬುದನ್ನು ತಿಳಿಸಿ, ಅಧಿಕಾರ ಇದ್ದಾಗ ಅರ್ಜಿ ಹಿಡಿದು ಬರುವ ಜನರಿಗೆ ಕಾನೂನು ವ್ಯಾಪ್ತಿಯಲ್ಲಿ ಸಹಾಯ ಮಾಡಿ, ಆಗದಿದ್ದರೆ ಸ್ಪಷ್ಟವಾಗಿ ಹೇಳಿ ಕಳುಹಿಸಿ, ಜನರನ್ನು ಅಲೆಸಬೇಡಿ ಎಂದು ಎಚ್ಚರಿಸುತ್ತಿದ್ದರು. 

ಪ್ರಸ್ತುತ ತಾಲ್ಲೂಕು ಕಚೇರಿಗಳ ಒಳಗೆ, ಹೊರಗೆ ಸದಾ ಗಿಜಿಗುಡುವ ಜನರನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ. ಕಚೇರಿಗಳಲ್ಲಿ ಹಣ ಕೊಟ್ಟರೂ ಸಮಯ ಕೊಟ್ಟರೂ ಕೆಲಸ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೌಕರರ ಕಾರ್ಯಕ್ಷಮತೆ, ಮತದಾರರು ಆಯ್ಕೆ ಮಾಡಿಕೊಂಡಿರುವ ಶಾಸಕರ ಬದ್ಧತೆ ಹಾಗೂ ದಕ್ಷತೆ, ತಮ್ಮ ವ್ಯಾಪ್ತಿಯ ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಡದಿರುವ ಎಷ್ಟೋ ಶಾಸಕರ ಮನಃಸ್ಥಿತಿಯನ್ನು ಕಂಡು ವಿಷಾದವಾಗುತ್ತದೆ.

- ತಾ.ಸಿ.ತಿಮ್ಮಯ್ಯ, ಬೆಂಗಳೂರು

ಅಸಡ್ಡೆ ತೋರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಲಿ

ಬೆಂಗಳೂರಿನ ಫುಟ್‌ಪಾತೊಂದರಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ತಾಯಿ ಮತ್ತು ಮಗು ಮೃತಪಟ್ಟಿ ರುವುದು ದುರದೃಷ್ಟಕರ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ. ಹೋದ ವರ್ಷ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡು ತಂದೆ ಮತ್ತು ಮದುವೆ ನಿಶ್ಚಯವಾಗಿದ್ದ ಮಗಳು ಜೀವ ಕಳೆದುಕೊಂಡಿದ್ದರು. ಟ್ರಾನ್ಸ್‌ಫಾರ್ಮರ್‌ ಸುಸ್ಥಿತಿಯಲ್ಲಿ ಇರದಿದ್ದ ಬಗ್ಗೆ ಈ ಮೊದಲೇ ಸಾರ್ವಜನಿಕರು ಬೆಸ್ಕಾಂಗೆ ದೂರು ನೀಡಿದ್ದರು. ಇಂತಹ ಹಲವು ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ. ಇವುಗಳಲ್ಲಿ ಆಕಸ್ಮಿಕವಾಗಿ ನಡೆದುದಕ್ಕಿಂತ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷದಿಂದ ಆಗಿರುವುದೇ ಹೆಚ್ಚು. ಇಂತಹವರನ್ನು ಬರೀ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಪ್ರಯೋಜನವಾಗದು. ಉತ್ತಮ ಸಂಬಳ, ಸೌಲಭ್ಯ ಪಡೆದು ಕರ್ತವ್ಯದಲ್ಲಿ ಅಸಡ್ಡೆ ತೋರುವುದು ಅಕ್ಷಮ್ಯ. ಅಂತಹವರ ವಿರುದ್ಧ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಜೈಲು ಶಿಕ್ಷೆ ವಿಧಿಸಬೇಕು. ಇಂತಹ ಕ್ರಮಗಳನ್ನು ಕೈಗೊಂಡರೆ ಮಾತ್ರ ಬಡಪಾಯಿ ನಾಗರಿಕರು ಹೀಗೆ ಬಲಿಯಾಗುವುದು ತಪ್ಪೀತು.

-ಲಕ್ಷ್ಮಿಕಾಂತ್ ಕೊಟ್ಟಾರಚೌಕಿ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT