ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮಾನವ ಸಂಪನ್ಮೂಲದ ಅಪವ್ಯಯ ಸಲ್ಲ

ಅಕ್ಷರ ಗಾತ್ರ

ಮಾನವ ಸಂಪನ್ಮೂಲದ ಅಪವ್ಯಯ ಸಲ್ಲ

ಭಾರತದ ಪೌರತ್ವವನ್ನು ತೊರೆಯುತ್ತಿರುವವರ ಸಂಖ್ಯೆಯಲ್ಲಿನ ಹೆಚ್ಚಳ ಆತಂಕಕಾರಿ ವಿಚಾರ. ಸರೋವರದಲ್ಲಿ ಒಂದು ಬೊಗಸೆ ನೀರು ಹೋದರೇನಂತೆ ಎಂಬ ಉದಾಸೀನ ತೋರಿದರೆ ಮುಂದೆ ಸರೋವರವೇ ಬರಿದಾಗಬಹುದು. ಭಾರತದ ಅತಿ ದೊಡ್ಡ ಶಕ್ತಿ ಮಾನವ ಸಂಪನ್ಮೂಲ. ಇಂತಹ ಶಕ್ತಿಯ ಅಪವ್ಯಯ ಸಲ್ಲದು.

ಪ್ರತಿಭಾವಂತರು ತಮ್ಮ ಪ್ರತಿಭೆಗೆ ತಕ್ಕ ಪ್ರತಿಫಲವನ್ನು ಬಯಸುವುದರಲ್ಲಿ ತಪ್ಪಿಲ್ಲ. ಆದರೆ ತಾಯ್ನಾಡನ್ನೇ ತೊರೆಯುವ ಅವರ ನಿರ್ಧಾರ ಸೂಕ್ತವಲ್ಲ. ಈ ಬಗ್ಗೆ ಸರ್ಕಾರ ಎಚ್ಚೆತ್ತು, ನಮ್ಮ ಯುವಪೀಳಿಗೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಪ್ರತಿಭಾ ಪಲಾಯನಕ್ಕೆ ಕಡಿವಾಣ ಹಾಕಬೇಕು.

ಜ್ಞಾನೇಶ್ ಜಿ., ಬೆಂಗಳೂರು

ಪಂದ್ಯಗಳಿಗೆ ಇರಲಿ ಭದ್ರತಾ ವ್ಯವಸ್ಥೆ

ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರು ಮತ್ತು ಪೂಂಜಾ ಅಭಿಮಾನಿಗಳ ನಡುವೆ ಗಲಾಟೆ ನಡೆದಿದ್ದು ದುರದೃಷ್ಟಕರ. ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಗ್ರಾಮದಲ್ಲಿ ಬಿಜೆಪಿಯ ಯುವ ಮುಖಂಡರೊಬ್ಬರು ಇತ್ತೀಚೆಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಉಂಟಾದ ಜಗಳ ಕೊಲೆಯಲ್ಲಿ ಪರ್ಯವಸಾನಗೊಂಡಿತ್ತು. ಹೀಗಿರುವಾಗ, ಇಂತಹ ಪಂದ್ಯಾವಳಿಗಳ ಸಂದರ್ಭದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏಕೆ ಮಾಡುವುದಿಲ್ಲ?

ಚುನಾವಣೆ ಹತ್ತಿರ ಬರುತ್ತಿರುವಂತೆ ಯುವಜನರಿಗಾಗಿ ಈ ರೀತಿಯ ಹಲವು ಪಂದ್ಯಗಳನ್ನು ಆಯೋಜಿಸುವುದು ಹೊಸದೇನಲ್ಲ. ಆದರೆ, ಇಂತಲ್ಲಿ ಬಿಗಿಯಾದ ಭದ್ರತಾ ವ್ಯವಸ್ಥೆ ಏರ್ಪಡಿಸುವ ಮೂಲಕ ಸಂಭವನೀಯ ಗಲಭೆಗಳಿಗೆ ಕಡಿವಾಣ ಹಾಕಬೇಕು.

ಪ್ರದೀಪ್ ಶಾಕ್ಯ, ಕೊಲ್ಪೆದಬೈಲ್

ಪರಿಸರ ಪೂರಕ ಯೋಜನೆ ಶ್ಲಾಘನೀಯ

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ, ದಿವಂಗತ ಉದ್ಯಮಿ ವಿ.ಜಿ.ಸಿದ್ದಾರ್ಥ ಅವರಿಗೆ ಸೇರಿದ 4,430 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಅರಣ್ಯ ಇಲಾಖೆ ಪ್ರಸ್ತಾವ ಸಿದ್ಧಪಡಿಸಿರುವುದು ಬಹಳ ಸಂತೋಷದ ಸುದ್ದಿ. ಜಮೀನಿನ ಮಾಲೀಕರು ಒಪ್ಪಿದರೆ ಇದು ಬಹಳ ಮಹತ್ವದ ಯೋಜನೆ. ಸುಮಾರು ನಾಲ್ಕೂವರೆ ಸಾವಿರ ಎಕರೆ ಪ್ರದೇಶದ ಕಾಡು ನಿರ್ಮಾಣವಾಗಲಿದೆ. ಇದನ್ನು ಪ್ರಾಣಿ ಪಕ್ಷಿಗಳ ಜೊತೆಗೆ ನೂರಾರು ಬಗೆಯ ವನ್ಯಜೀವಿಗಳಿಗೆ ಮುಕ್ತ ಪ್ರದೇಶವಾಗಿ ಉಳಿಸಿಕೊಳ್ಳಬೇಕು.

ಪರಿಸರವನ್ನು ನಾಶ ಮಾಡಿದ ಹತ್ತಾರು ಯೋಜನೆಗಳಿಗೆ ಪರಿಹಾರಾರ್ಥವಾಗಿ ರಾಜ್ಯ ಸರ್ಕಾರ ಸಂಗ್ರಹಿಸಿದ ಸಾವಿರಾರು ಕೋಟಿ ರೂಪಾಯಿ ಕೇಂದ್ರ ಸರ್ಕಾರದ ಖಜಾನೆಯಲ್ಲಿದೆ. ಕೇಂದ್ರದ ಮೇಲೆ ಒತ್ತಡ ತಂದು ಈ ಹಣವನ್ನು ಪರಿಸರಕ್ಕೆ ಪೂರಕವಾದ ಇಂತಹ ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಸಕಲೇಶಪುರ ತಾಲ್ಲೂಕಿನ ಬಿಸಿಲೆ ರಕ್ಷಿತ ಅರಣ್ಯ ಪ್ರದೇಶದ ವಿಸ್ತರಣೆಗೂ ಹೀಗೆಯೇ ಖಾಸಗಿ ಜಮೀನನ್ನು ಬಿಟ್ಟುಕೊಡಲು ರೈತರು ಒಪ್ಪಿರುವುದರಿಂದ ಅದನ್ನು ಕೂಡ ಸರ್ಕಾರ ಕೂಡಲೇ ವಶಕ್ಕೆ ಪಡೆಯಬೇಕು. ಹಣಕಾಸಿನ ಲೆಕ್ಕಾಚಾರಕ್ಕಿಂತ ಪರಿಸರದ ದೃಷ್ಟಿಯಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಒಳಿತು.

ಅತ್ತಿಹಳ್ಳಿ ದೇವರಾಜ್, ಹಾಸನ

ಶುದ್ಧ ನೀರು ‘ಶುದ್ಧ’ವಾಗಿರಲಿ

ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಯಲ್ಲಿ ನಡೆದಿರುವ ಅಕ್ರಮಗಳು ಒಂದೆಡೆಯಾದರೆ, ನೀರಿನ ಘಟಕಗಳೇ ಇಲ್ಲದಿರುವ ಪರಿಸ್ಥಿತಿ ಹಲವೆಡೆ ಇದೆ. ನೀರಿನ ಘಟಕಗಳ ಅಭಾವದಿಂದ ನಗರ ಪ್ರದೇಶಗಳೂ ಹೊರತಾಗಿಲ್ಲ. ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯಲ್ಲಿಯೂ ಈ ಸಮಸ್ಯೆ ಇದೆ. ಅಲ್ಲಿನ ಬಹುತೇಕ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ. ಹೆಚ್ಚಿನ ಜನರು ಕಾರ್ಪೊರೇಷನ್ ಪೂರೈಸುವ ಕ್ಲೋರಿನ್‌ಯುಕ್ತ ನೀರನ್ನೇ ಅವಲಂಬಿಸಿದ್ದಾರೆ.

ನೀರಿನ ಶುದ್ಧೀಕರಣ ಎಂದರೆ ಬರೀ ಕ್ಲೋರಿನ್‌ ಬಳಸಿ ಸೂಕ್ಷ್ಮಾಣುಜೀವಿಗಳಿಂದ ಮುಕ್ತ ಮಾಡುವುದಲ್ಲ. ಅದರ ಜೊತೆಗೆ ಲವಣಾಂಶಗಳ ಪ್ರಮಾಣವನ್ನು ಸಮತೋಲನ ಮಾಡುವುದಾಗಿದೆ. ವಿದ್ಯಾರ್ಥಿಗಳು ಮತ್ತು ಜನದಟ್ಟಣೆ ಇರುವ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವ ಪ್ರಯತ್ನವನ್ನು ಇಲ್ಲಿನ ಜನ ನಾಯಕರಾಗಲೀ ಅಧಿಕಾರಿಗಳಾಗಲೀ ಮಾಡಿಲ್ಲ.

ಸುನಿಲ್ ಟಿ.ಪಿ., ತಳಗವಾದಿ, ಮಳವಳ್ಳಿ

ಉಚಿತ ಬಸ್‌ಪಾಸ್: ಅರ್ಹರಿಗೆ ಸಿಗಲಿ

‘ಶಾಲಾ ವಿದ್ಯಾರ್ಥಿನಿಯರು, ದುಡಿಯುವ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಬಸ್‌ಪಾಸ್ ನೀಡುವುದು ಪಟ್ಟಣದವರಿಗೆ, ಅದರಲ್ಲೂ ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳಿಗೆ ಬಹಳ ಅಗತ್ಯವಾಗಿ ಬೇಕಾಗಿದ್ದ ಯೋಜನೆಯಾಗಿದೆ. ಈ ಘೋಷಣೆಯು ಚುನಾವಣಾ ಪ್ರಚಾರದ ಒಣ ಘೋಷಣೆಯಾಗಿ ಉಳಿಯದೆ,
ಕಾರ್ಯಗತವಾಗಬೇಕಿದೆ.

ಇದು ತಲುಪಬೇಕಾದ ಅರ್ಹ ಫಲಾನುಭವಿಗಳು: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು, ರೈತ ಮಹಿಳೆಯರು, ರೈತ ಕಾರ್ಮಿಕ ಮಹಿಳೆಯರು, ಸಿದ್ಧ ಉಡುಪು ತಯಾರಿಕಾ ಘಟಕಗಳಲ್ಲಿ ಕೆಲಸ ಮಾಡುವವರು, ಕಟ್ಟಡ ಮಹಿಳಾ ಕಾರ್ಮಿಕರು, ಸಫಾಯಿ ಕರ್ಮಚಾರಿಣಿಯರು, ಅಂಗಡಿ ಮುಂಗಟ್ಟುಗಳಲ್ಲಿ ದುಡಿಯುವವರು, ಕಸ-ಮುಸುರೆ ಕೆಲಸ ಮಾಡುವವರು, ಶಾಲೆ-ಕಾಲೇಜು, ಖಾಸಗಿ ಅಥವಾ ಸರ್ಕಾರಿ ಕಚೇರಿಗಳಲ್ಲಿ ನಾಲ್ಕನೇ ದರ್ಜೆ ನೌಕರರಾಗಿ ಕೆಲಸ ಮಾಡುತ್ತಿರುವವರು, ಅಂಗಡಿಗಳು, ಮಾಲ್‍ಗಳು, ಸರ್ಕಾರಿ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್‍ಹೋಂಗಳಲ್ಲಿ ಕೆಳಹಂತದ ಹುದ್ದೆಗಳಲ್ಲಿ ಕೆಲಸ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ, ವ್ಯವಹಾರ ಮಾಡುವವರು- ಹೀಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರುತಿಸಿ ಉಚಿತ ಬಸ್‌ಪಾಸ್ ಯೋಜನೆಯನ್ನು ಜಾರಿಗೆ ತರಬೇಕಿದೆ.'

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT