ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮಠಗಳ ಹೆಚ್ಚಳ: ತರ್ಕಹೀನ ವಾದ

ಅಕ್ಷರ ಗಾತ್ರ

‘ಸ್ವಾಮೀಜಿಗಳು ಹೆಚ್ಚಾದಂತೆ ಸಂಸ್ಕಾರ ಹೆಚ್ಚಾಗುತ್ತ ಹೋಗುತ್ತದೆ’ ಎನ್ನುವ ವಚನಾನಂದ ಸ್ವಾಮೀಜಿ ಅವರ ಮಾತಿನಲ್ಲಿ ಹುರುಳಿಲ್ಲ ಎನಿಸುತ್ತದೆ. ಏಕೆಂದರೆ ಈಗಿರುವ ಸಾವಿರಾರು ಮಠಾಧೀಶರು ಇಲ್ಲಿಯತನಕ ಏನು ಮಾಡಿದರು, ಮಾಡುತ್ತಿದ್ದಾರೆ? ದೇಶದಲ್ಲಿ ಪಂಚಮಸಾಲಿ ಸಮುದಾಯದ ಒಂದೂವರೆ ಕೋಟಿ ಜನರಿದ್ದಾರೆಂದೂ ಅದಕ್ಕಾಗಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪಂಚಮಸಾಲಿ ಮಠಗಳಿರಬೇಕೆಂಬ ಅವರ ವಾದವೇ ತರ್ಕಹೀನ. ಏಕೆಂದರೆ ಉಳಿದ ಲಿಂಗಾಯತ ಮಠಗಳ ಕೆಲಸ ಏನು? ಉಳಿದ ಲಿಂಗಾಯತ ಉಪಜಾತಿಗಳಿಗೆ ಯಾರು ದಿಕ್ಕು?

ಉದಾಹರಣೆಗೆ, ಯಾವುದೇ ಮಠ, ಪೀಠಗಳನ್ನು ಹೊಂದಿರದ ಬಣಜಿಗ ಲಿಂಗಾಯತರು ಎಲ್ಲಿಗೆ ಹೋಗಬೇಕು? ನಾವು ಕಾಣುತ್ತಿರುವಂತೆ ಬಣಜಿಗರು, ಪಂಚಮಸಾಲಿಗಳು ಕೊಡು ಕೊಳ್ಳುವಿಕೆಯ ಮೂಲಕ ಹಾಲು ಜೇನಿನಂತೆ ಬೆರೆತುಹೋಗುತ್ತಿದ್ದು, ಈ ಸ್ವಾಗತಾರ್ಹ ಬೆಳವಣಿಗೆಗೆ ಯಾವ ಮಠಾಧೀಶರೂ ಕಾರಣರಲ್ಲ. ತಂದೆ ಬಣಜಿಗ, ತಾಯಿ ಪಂಚಮಸಾಲಿ ಆಗಿರುವವರ ಮಕ್ಕಳು ಯಾವ ಪೀಠ ಸೇರಬೇಕು ಎಂಬುದಕ್ಕೆ ನಮಗೆ ಸ್ವಾಮೀಜಿಯಿಂದ ಸ್ಪಷ್ಟನೆ ಬೇಕಾಗಿದೆ!

ಇಷ್ಟಕ್ಕೂ ಸ್ವಾರ್ಥ, ದ್ವೇಷಕ್ಕೆ ಕಾರಣವಾಗುವ ಉಪಜಾತಿ ಬೇಲಿ ಮಠಗಳ ಅವಶ್ಯಕತೆ ಸಮಾಜಕ್ಕೆ ಇಲ್ಲ. ಸಂಕುಚಿತ ಮನೋಭಾವ ಬೆಳೆಸುವುದೇ ಸಂಸ್ಕಾರವೇ? ‘900 ವರ್ಷಗಳಿಂದ ಇರುವ ಮಠಗಳೇ ಇನ್ನೂ ಜನರನ್ನು ಪೂರ್ತಿಯಾಗಿ ತಲುಪಲು ಆಗಿಲ್ಲ. ಇನ್ನು ನಾವು 15-20 ವರ್ಷಗಳಿಂದ ಈಚೆಗೆ ಆರಂಭಗೊಂಡಿರುವ ಮಠಗಳು ತಲುಪಿದ್ದೇವೆ ಎನ್ನಲು ಸಾಧ್ಯವೇ’ ಎಂದು ಕೇಳುವ ಮೂಲಕ ಬಸವಾದಿ ಶರಣರ ಕಾರ್ಯವನ್ನು ಸ್ವಾಮೀಜಿ ಅಣಕಿಸಿದ್ದಾರೆ. ಉಳಿದ ಮಠಾಧೀಶರನ್ನು ಅವಮಾನಿಸುವ ಮಾತಿದು. ಅಲ್ಲದೆ ಅವರೇ ಉದಾಹರಿಸಿದ ಸಿದ್ಧೇಶ್ವರ ಶ್ರೀಗಳು, ಚಿತ್ರದುರ್ಗದ ಜಯದೇವ ಜಗದ್ಗುರುಗಳು, ಸುತ್ತೂರು ಶಿವರಾತ್ರೀಶ್ವರರು ಯಾವುದಾದರೂ ಉಪಜಾತಿಗೆ ಸೀಮಿತರಾಗಿದ್ದಾರೆಯೇ? ‘ಹಾರುವರಾದಿಯಾಗಿ ಅಂತ್ಯಜರೆಲ್ಲ ಒಂದೇ’ ಎಂದು ಅಂತರ್ಜಾತಿ ವಿವಾಹ ಮಾಡಿಸಿದ ಬಸವಣ್ಣನವರ ಆದರ್ಶವನ್ನು ಮೊದಲು ಸ್ವಾಮೀಜಿ ಪಾಲಿಸಬೇಕಾಗಿದೆ. ನಮ್ಮ ಜಾತಿಯವರೇ ಮುಖ್ಯಮಂತ್ರಿಯಾಗಲಿ, ಮಂತ್ರಿಯಾಗಲಿ ಎಂದು ಫರ್ಮಾನು ಹೊರಡಿಸುವುದು ಸ್ವಾರ್ಥದ ಪರಮಾವಧಿಯಲ್ಲವೇ? ಅವರನ್ನೂ ಒಳಗೊಂಡಂತೆ ಎಲ್ಲ ಮಠಾಧೀಶರೂ ಬಸವಣ್ಣನವರ ಕನಸಾದ ಜಾತಿ ವಿನಾಶಕ್ಕೆ ಕೈ ಹಾಕಿ ಅಸ್ಪೃಶ್ಯತೆಯನ್ನು ತೊಲಗಿಸಿ, ಸಮಸಮಾಜದ ನಿರ್ಮಾಣಕ್ಕೆ ಕಾರಣರಾಗಲಿ. ಇದಕ್ಕಾಗಿ ‘ಪಾದಯಾತ್ರೆ’ ಮಾಡಲಿ ಎನ್ನುವುದು ನನ್ನಂಥ ‘ಲಿಂಗಾಯತ’ನ ಅಭಿಪ್ರಾಯ.

-ಶಿವಕುಮಾರ ಬಂಡೋಳಿ,ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT