ತಮಿಳುನಾಡಿನ ಡೇರಿಯೊಂದು ಪೂರೈಸಿರುವ ಶಂಕಿತ ಕಲಬೆರಕೆ ತುಪ್ಪವನ್ನು ಲಾಡುಗಳ ತಯಾರಿಕೆಗೆ ಬಳಸಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸರ್ಕಾರಕ್ಕೆ ನೀಡಿದ ವರದಿಯಲ್ಲಿ ತಿಳಿಸಿದೆ. ಹಾಗಾದರೆ ದೇವಾಲಯದ ಶುದ್ಧೀಕರಣ ಕಾರ್ಯದ ಅಗತ್ಯ ಬರುವುದಿಲ್ಲ. ಆಡಳಿತದ ಚುಕ್ಕಾಣಿ ಹಿಡಿದಿರುವವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾದ ಅತ್ಯಂತ ಘೋರ ಘಟನೆಗಳು ಪ್ರತಿನಿತ್ಯ ನಡೆಯುತ್ತಿರುವಾಗ, ಅವೆಲ್ಲವನ್ನೂ ಪರಿಹರಿಸಬೇಕಾದ ಸ್ಥಾನದಲ್ಲಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಪ್ರಾಯಶ್ಚಿತ್ತ ದೀಕ್ಷೆ ಪ್ರಾರಂಭಿಸಿರುವುದು ಸಹ ಅನಗತ್ಯವೇ ಆಗುತ್ತದೆ.
ಈ ಕಲಬೆರಕೆ ಪ್ರಹಸನದ ಪ್ರಕರಣಗಳು ನಡೆದ ರೀತಿ ಹೀಗಿದೆ; ಟಿಟಿಡಿಯಿಂದ ಶಂಕಿತ ತುಪ್ಪದ ಮಾದರಿಗಳನ್ನು ಜುಲೈನಲ್ಲಿ ಗುಜರಾತ್‌ನ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ಅಂಗಸಂಸ್ಥೆಯಾದ ಜಾನುವಾರು ಮತ್ತು ಆಹಾರ ವಿಶ್ಲೇಷಣೆ ಹಾಗೂ ಕಲಿಕಾ ಕೇಂದ್ರಕ್ಕೆ ಕಳಿಸಲಾಯಿತು. ತುಪ್ಪದ ಮಾದರಿಯು ಸೋಯಾ, ಆಲಿವ್, ಸೂರ್ಯಕಾಂತಿ, ಹತ್ತಿ ಬೀಜ, ತಾಳೆ ಎಣ್ಣೆ, ಮೀನಿನ ಎಣ್ಣೆ, ದನ ಅಥವಾ ಹಂದಿ ಮಾಂಸದ ಕೊಬ್ಬಿನಂತಹ ಯಾವುದೋ ಅಂಶದಿಂದ ಕಲಬೆರಕೆ ಆಗಿದೆ ಎಂದು ಈ ಕೇಂದ್ರವು ವರದಿ ನೀಡಿತು. ಈ ವಿಷಯವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎರಡು ತಿಂಗಳಷ್ಟು ತಡವಾಗಿ ಬಹಿರಂಗಪಡಿಸಿದರು. ಆಹಾರ ಕಲಬೆರಕೆ ಬಗ್ಗೆ ಅಂತಿಮ ವರದಿ ನೀಡಬೇಕಾದ ಗಾಜಿಯಾಬಾದ್‌ನ ರಾಷ್ಟ್ರೀಯ ಆಹಾರ ಪ್ರಯೋಗಾಲಯಕ್ಕೆ ಈ ಮಾದರಿಗಳನ್ನು ಕಳಿಸಿ ಫಲಿತಾಂಶವನ್ನು ಇನ್ನೂ ಪಡೆದಿಲ್ಲ.
ಈ ವಿಷಯದಲ್ಲಿ ಗುಣಮಟ್ಟ ಕಾಪಾಡುವಲ್ಲಿ ಟಿಟಿಡಿ ವೈಫಲ್ಯ ನಿಚ್ಚಳವಾಗಿದೆ. ಇದರಿಂದ ಖಂಡಿತವಾಗಲೂ ಭಕ್ತರ ನಂಬಿಕೆಗೆ ಧಕ್ಕೆಯಾಗಿದೆ. ಆದರೂ ಒಂದು ಸಮಾಧಾನಕರ ಸಂಗತಿ ಎಂದರೆ, ಈ ಎಲ್ಲ ಬೆಳವಣಿಗೆಗಳಿಂದ ನಮ್ಮ ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ನ ವಿಶ್ವಾಸಾರ್ಹತೆ ಬಗ್ಗೆ ಇಡೀ ದೇಶ ಮೆಚ್ಚುಗೆಯಿಂದ ಮಾತನಾಡುವಂತೆ ಆಗಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಅಬ್ಬರ, ರಾಜಕೀಯ ಕೆಸರೆರಚಾಟದ ನಡುವೆಯೂ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ ಹಾಗೂ ಲಾಡುಗಳ ಮಾರಾಟದಲ್ಲಿ ಕುಂಠಿತವಾಗಿಲ್ಲ. ಆದ್ದರಿಂದ ತಿರುಪತಿ ಲಾಡುಗಳಿಗೆ ಬಳಸುವ ತುಪ್ಪದ ಕಲಬೆರಕೆ ಪ್ರಕರಣವನ್ನು ಗುಣಮಟ್ಟ ಕಾಯ್ದುಕೊಳ್ಳುವಲ್ಲಿನ ವ್ಯೆಫಲ್ಯ ಎಂಬ ಕೋನದಲ್ಲಿ ತನಿಖೆ ಮಾಡಿ, ತಪ್ಪಿತಸ್ಥರಿಗೆ ಬೇಗ ಶಿಕ್ಷೆ ಆಗಿ ಈ ವಿಷಯ ಅಂತ್ಯವಾಗಲಿ.
–ಟಿ.ಜಯರಾಂ, ಕೋಲಾರ
‘ತಿರುಪತಿ ಲಡ್ಡು ಮತ್ತು ನಮ್ಮ ಜಡ್ಡು’ ಲೇಖನದ (ಪ್ರ.ವಾ., ಸೆ. 24) ಮೂಲಕ ರಘುನಾಥ ಚ.ಹ. ಅವರು ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚಿದ್ದಾರೆ. ಕಾರ್ಲ್‌ಮಾರ್ಕ್ಸ್ ಬಹಳ ಹಿಂದೆ ರಿಲಿಜನ್ ಜನರ ಅಫೀಮು ಎಂದಿದ್ದ. ನಮ್ಮಲ್ಲೀಗ ಧರ್ಮನಿರಪೇಕ್ಷ ರಾಜಕಾರಣದ ಬದಲು ಹಿಂದುತ್ವ ರಾಜಕಾರಣ ಮುನ್ನೆಲೆಗೆ ಬಂದು, ವ್ಯಕ್ತಿ ಮತ್ತು ದೇವರ ನಡುವೆ ಖಾಸಗಿಯಾಗಿ ಇರಬೇಕಾಗಿದ್ದ ಧಾರ್ಮಿಕತೆಯು ಸಾರ್ವಜನಿಕ ಹಿಂಸೆಯ ಮೂಲಾಯುಧವಾಗಿ ಬಳಕೆಗೆ ಬಂದಿದೆ. ಅದರ ವ್ಯಾಪಾರಿ ಮುಖವನ್ನೂ ಆ ಮೂಲಕ ಪ್ರಜಾಪ್ರಭುತ್ವದ ಸೌಧದಲ್ಲಿ ಆಗುತ್ತಿರುವ ಬಿರುಕಿನ ಕಾರಣಗಳನ್ನೂ ಲೇಖನ ವಿಶ್ಲೇಷಿಸಿದೆ.
ನಾವೀಗ ಸತ್ಯೋತ್ತರ ಕಾಲದಲ್ಲಿದ್ದೇವೆ. ಇದು ಜನ ತಮಗೆ ಬೇಕಾದ್ದನ್ನು ಸತ್ಯವೆಂದು ನಂಬುವ ಕಾಲ. ವಿಘಟನೆ ಎಷ್ಟಾಗಿದೆ ಎಂದರೆ, ಧರ್ಮದ ಮೂಲ ಕಲ್ಪನೆಗೂ ನಮ್ಮ ಧಾರ್ಮಿಕ ನಂಬುಗೆಗೂ ಸಂಬಂಧ ಇದೆಯೆಂಬ ನೆನಪೂ ಇಲ್ಲದಂತಾಗಿದೆ. ರಾಜಕೀಯ ಮತ್ತು ಧಾರ್ಮಿಕತೆಯು ಪ್ರಜಾಪ್ರಭುತ್ವದಲ್ಲಿ ಪ್ರತ್ಯೇಕವಾಗಿ ಇರಬೇಕೆಂಬ ಮೂಲ ವಿಚಾರವೇ ಮರೆತುಹೋಗಿದೆ. ರಾಜಕಾರಣಿಗಳು ನಿರಂತರ
ವಾಗಿ ಸುಳ್ಳು ಹೇಳುವುದು, ಸತ್ಯವನ್ನು ತಿರುಚುವುದು ನಮಗೆ ತಪ್ಪು ಎಂದು ಅನಿಸದಿರುವಾಗ, ರಾಜಕಾರಣಿಗಳು ಹಾಕುವ ಭಾವನಾತ್ಮಕ ಗಾಳಕ್ಕೆ ಪ್ರಜೆಗಳು ಸಿಕ್ಕಿಬೀಳುವ ಮೀನುಗಳಾಗುತ್ತಾರೆ. ಪ್ರಾಮಾಣಿಕರಾಗಿದ್ದರೆ ಜನರ ಭಾವನೆಗಳನ್ನು ಕೆದಕದೆ ಪ್ರಾಮಾಣಿಕವಾಗಿ ವಿಚಾರಣೆ ಮಾಡಬೇಕಿತ್ತು. ತುಪ್ಪದ ಗುಣಮಟ್ಟ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬೇಕಾಗಿತ್ತು. ಬದಲಾಗಿ, ಲಡ್ಡುಗಳ ತುಂಬಾ ರಾಜಕಾರಣದ ವಾಸನೆ ಹೊಡೆಯುತ್ತಿದೆ. ನಮ್ಮ ನ್ಯಾಯಾಲಯಗಳಲ್ಲಿ ತಿರುಪತಿ ತಿಮ್ಮಪ್ಪ ದೇವರು ಅವನ ಹೆಸರು ಹಾಳು ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾರ. ಹಾಗಾಗಿ, ಮಾಸ್ತಿಯವರ ಕತೆಯ ಜೋಗ್ಯೋರ ಅಂಜಪ್ಪ ಹೇಳುವ ಹಾಗೆ, ಗುಡ್ಡದ ಮೇಲಿರುವ ದೇವರು ಅವನ ನ್ಯಾಯಾಲಯದಲ್ಲಿ ಇವರ ವಿಚಾರಣೆ ಮಾಡಬೇಕಷ್ಟೆ. ಆದರೆ ಪ್ರಜಾಪ್ರಭುತ್ವದಲ್ಲಿ ಜನರ ನ್ಯಾಯಾಲಯ ಮನಸ್ಸು ಮಾಡಿದರೆ ಈ ರಾಜಕಾರಣಿಗಳ ಉದ್ರೇಕಿಸುವ ಮಾತು, ವಿಚಾರಗಳಿಗೆ ಕಡಿವಾಣ ಹಾಕಬಹುದು.
–ಎಸ್.ಆರ್.ವಿಜಯಶಂಕರ, ಬೆಂಗಳೂರು
ಪೋಕ್ಸೊ ಕಾಯ್ದೆಗೆ ಬಲ ತುಂಬಿರುವ ಸುಪ್ರೀಂ ಕೋರ್ಟ್ ತೀರ್ಪು ಅತ್ಯಂತ ಮಹತ್ವದ್ದು. ಮಕ್ಕಳ ಲೈಂಗಿಕ ದುರುಪಯೋಗವು ಆ ನಂತರದ ಅವರ ಜೀವನದಲ್ಲಿ ಮಾನಸಿಕ ಕ್ಷೋಭೆಗೆ ಕಾರಣವಾಗಬಹುದು. ಖಿನ್ನತೆ, ಆತಂಕ, ನಿದ್ರಾಭಂಗದಂತಹ ಆಘಾತಕಾರಿ ನಡವಳಿಕೆಗಳು ಬೇರೂರಬಹುದು. ಮಗು ತನ್ನ ಶಾಲೆ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ಹಿಂದೆ ಸರಿಯಬಹುದು. ಪ್ರಾಣಿಗಳ ಮೇಲಿನ ಕ್ರೌರ್ಯ ಸೇರಿದಂತೆ ವಿವಿಧ ಕಲಿಕೆ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಪ್ರದರ್ಶಿಸಬಹುದು. ಅಲ್ಲದೆ ಲೈಂಗಿಕವಾಗಿ ಹರಡುವ ಸೋಂಕುಗಳಿಗೆ ಮಕ್ಕಳು ತುತ್ತಾಗಬಹುದು ಅಥವಾ ಸೋಂಕಿನ ಸಾಧ್ಯತೆ ಹೆಚ್ಚಾಗಬಹುದು. ಹೀಗಾಗಿ, ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ದುರುಳರಿಗೆ ಕಾನೂನಿನ ಅಡಿ ತಕ್ಕ ಶಿಕ್ಷೆ ವಿಧಿಸಲೇಬೇಕಿದೆ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಮೊನ್ನೆ, ಧನಂಜಯನೊಂದಿಗೆ
ಕಾದಾಡಿದ್ದ ಕಂಜನ್
ಅರಮನೆಯ ಖಾಸಗಿ ದರ್ಬಾರ್‌ಗೆ
‘ಪಟ್ಟದ’ ಆನೆಯಾಗಿ
ಆಯ್ಕೆಯಾದನಂತೆ!
ಕಳೆದ ಬಾರಿ ಆ ಪಟ್ಟ
ಧನಂಜಯನದಾಗಿತ್ತಂತೆ!
ಅಂತೂ ದಸರಾ ಆನೆಗಳ
‘ಆ’ ಕಾದಾಟದ ಗುಟ್ಟು
ಈಗ ಅರ್ಥವಾಗಿರಬೇಕಲ್ಲ?!
–ಮ.ಗು.ಬಸವಣ್ಣ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.