ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸಾಹಿತ್ಯೇತರ ಚಟುವಟಿಕೆಗಳಿಗೇ ಆದ್ಯತೆ?

Last Updated 26 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಪರೀಕ್ಷೆ ಅವಧಿ ಪರಿಶೀಲಿಸಿ

ಶಿಕ್ಷಣ ಇಲಾಖೆಯು ಹತ್ತನೇ ತರಗತಿಯಂತೆ ಪಿಯುಸಿಯಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿ ಶೇಕಡಾವಾರು ಫಲಿತಾಂಶ ಹೆಚ್ಚಳವಾಗಲೆಂದು 20 ಅಂಕದ ಎಂಸಿಕ್ಯು ಮಾದರಿಯ ಪ್ರಶ್ನೆಗಳನ್ನು ಪ್ರಸ್ತುತ ವರ್ಷದಿಂದ ಅಳವಡಿಸಿದೆ. ಆದರೆ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳು 70 ಅಂಕಗಳಿಗೆ ಇರುತ್ತವೆ. 20 ಅಂಕಗಳಿಗೆ ಎಂಸಿಕ್ಯು ಇರುವುದರಿಂದ ಅದನ್ನು ಬರೆಯಲು 20ರಿಂದ 25 ನಿಮಿಷ ಸಾಕು, ಇನ್ನುಳಿದ 50 ಅಂಕಗಳಿಗೆ 2.30 ಗಂಟೆ ಹೆಚ್ಚು. ಹೀಗಾಗಿ, ಒಟ್ಟು ಈಗಿರುವ 3.15 ಗಂಟೆ ಅನಗತ್ಯ ಅನಿಸುತ್ತದೆ.

ಸಾಮಾನ್ಯ ಜ್ಞಾನದ ವಿದ್ಯಾರ್ಥಿಗಳು ಕೂಡ ಬೇಗನೆ ಮುಗಿಸಿ, ಕಾಲಹರಣ ಮಾಡುತ್ತಿರುತ್ತಾರೆ. 100 ಅಂಕದ ಪ್ರಶ್ನೆಪತ್ರಿಕೆಗಳಿಗೂ 3.15 ಗಂಟೆ, 70 ಅಂಕದ ಪ್ರಶ್ನೆಪತ್ರಿಕೆ ವಿಷಯಗಳಿಗೂ ಅಷ್ಟೇ ಸಮಯ. ಐಸಿಎಸ್‌ಇ ಸಿಲೆಬಸ್‌ನ ಪರೀಕ್ಷಾ ಅವಧಿಗಳನ್ನು ಒಮ್ಮೆ ಗಮನಿಸಿದರೆ, ಅವರು ಅಂಕಗಳ ಆಧಾರದ ಮೇಲೆ ಅವಧಿ ನಿಗದಿಪಡಿಸಿರುವುದು ತಿಳಿಯುತ್ತದೆ. ಶಿಕ್ಷಣ ಇಲಾಖೆ ಈ ಬಗ್ಗೆ ಪರಿಶೀಲಿಸಿ, ಮುಂದಿನ ಶೈಕ್ಷಣಿಕ ಪರೀಕ್ಷೆಗಳಲ್ಲಿ ಇಂತಹ ಬದಲಾವಣೆ ಮಾಡಬಹುದೇ ಎಂಬುದನ್ನು ಪರಿಶೀಲಿಸಬೇಕು.

ಮಂಜುನಾಥ್ ಜಿ., ಹಗರಿಬೊಮ್ಮನಹಳ್ಳಿ

***

ಮೊಬೈಲ್‌ ಪತ್ತೆ: ತಂತ್ರಜ್ಞಾನ ವಿಸ್ತರಣೆಯಾಗಲಿ

ಕಳೆದುಹೋದ ಮೊಬೈಲ್‌ಗಳು ಮರಳಿ ಸಿಕ್ಕಂಥ ಪ್ರಕರಣಗಳು ಈವರೆಗೆ ತುಂಬಾ ವಿರಳ. ಆದರೆ ಇತ್ತೀಚೆಗೆ ದೂರಸಂಪರ್ಕ ಇಲಾಖೆಯ ಸಿ.ಇ.ಐ.ಆರ್ ಪೋರ್ಟಲ್ ಮೂಲಕ ದಿನೇದಿನೇ ಮೊಬೈಲ್‌ಗಳು ಮರಳಿ ಸಿಗುತ್ತಿವೆ. ಅವನ್ನು ಮತ್ತೆ ಮಾಲೀಕರ ಕೈ ಸೇರಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಆದರೆ ಮೊಬೈಲ್ ಕಳೆದುಕೊಂಡ ಪ್ರಕರಣಗಳು ರಾಜ್ಯದ ಎಲ್ಲ ಠಾಣೆಗಳಲ್ಲಿ ಇದ್ದರೂ ರಾಜ್ಯದ ದಕ್ಷಿಣ ಭಾಗದಲ್ಲಿ, ಅಂದರೆ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆಯಂತಹ ಜಿಲ್ಲೆಗಳಲ್ಲಿ ಮಾತ್ರ ಹೆಚ್ಚಿನ ಮೊಬೈಲ್‌ಗಳನ್ನು ಹುಡುಕಿಕೊಡಲಾಗಿದೆ. ಉಳಿದ ಠಾಣೆಗಳಲ್ಲಿ ಬರೀ ಅರ್ಜಿ ತುಂಬಿಸಿಕೊಂಡು, ಸಿಕ್ಕ ಮೇಲೆ ತಿಳಿಸುತ್ತೇವೆ ಎಂದು ಹೇಳಿ ಕಳುಹಿಸಲಾಗುತ್ತಿದೆ. ಕೆಲವು ದಿನಗಳ ನಂತರ ಮತ್ತೆ ವಿಚಾರಿಸಿದರೂ ಅದೇ ರಾಗ.

ದಯವಿಟ್ಟು ಈಗಲಾದರೂ ಈ ಹೊಸ ತಂತ್ರಜ್ಞಾನವನ್ನು ಎಲ್ಲ ಠಾಣೆಗಳಲ್ಲೂ ಸರಿಯಾಗಿ ಬಳಸಿ, ಅದಕ್ಕೆಂದೇ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿದರೆ, ಮೊಬೈಲ್ ಕಳೆದುಕೊಂಡು ನಷ್ಟಕ್ಕೊಳಗಾದ ಜನರಿಗೆ ಸಹಾಯವಾಗುತ್ತದೆ. ಮೊಬೈಲ್‌ಗಳ ಕಳ್ಳತನವೂ ಕಡಿಮೆಯಾಗಿ ಪೊಲೀಸರ ಮೇಲಿನ ಜನರ ಭರವಸೆ ಹೆಚ್ಚುತ್ತದೆ.

ಪ್ರಶಾಂತ ಕೋಳಿ, ಧಾರವಾಡ

***

ಸಾಹಿತ್ಯೇತರ ಚಟುವಟಿಕೆಗಳಿಗೇ ಆದ್ಯತೆ?

ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ನುಡಿಮುತ್ತೊಂದೇ ಸಾಕಾಗುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ನಡೆಯನ್ನು ಅಳೆಯಲು. ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿಯವರು ಚುನಾವಣಾಪೂರ್ವ ಪ್ರತಿ
ಸ್ಪರ್ಧಿಗಳನ್ನು ಜರಿಯುತ್ತಾ, ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ಸಹಿಸಲಾಗದ ಒಂದು ಗುಂಪು, ತನ್ನ ಅಸ್ತಿತ್ವ
ಕ್ಕಾಗಿ ಪರಿಷತ್ತಿನ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ಆರೋಪಿಸುವ ಮೂಲಕ ಪ್ರಮುಖ ಸಾಹಿತಿಗಳ ಹೆಸರನ್ನೂ ಪ್ರಸ್ತಾಪಿಸಿದ್ದಾರೆ (ಪ್ರ.ವಾ., ಮಾರ್ಚ್ 24). ಹಾಲಿ ಅಧ್ಯಕ್ಷರು ಹಿಂದಿನ ಹದಿನಾರು ತಿಂಗಳುಗಳಲ್ಲಿ ಸಾಹಿತ್ಯ ಚಟುವಟಿಕೆ
ಗಳಿಗಿಂತ ಸಾಹಿತ್ಯೇತರ ಕಾರ್ಯ ಚಟುವಟಿಕೆಗಳಲ್ಲೇ ಹೆಚ್ಚು ನಿರತರಾಗಿದ್ದಾರೆ ಎಂದು ನೋವಿನಿಂದಲೇ ಹೇಳಬೇಕಾಗಿದೆ.

ಶ್ರೀ ಕೃಷ್ಣರಾಜ ಪರಿಷನ್ಮಂದಿರದ ಹೆಸರು ಬದಲಾವಣೆ ಹಾಗೂ ಬಡ ಸಾಹಿತಿಗಳಿಗೆ ವರದಾನವಾಗಿದ್ದ ಸಭಾ ಭವನದ ಬಾಡಿಗೆ ಹೆಚ್ಚಿಸಿದ್ದು, ಕುವೆಂಪು ಸಭಾಂಗಣವನ್ನು ಮುಚ್ಚಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ತೆಗೆಸಿದ್ದು, ಪಂಪ ಮಹಾಕವಿ ರಸ್ತೆಯ ಹೆಸರು ಬದಲಾಯಿಸಲು ಹೊರಟಿದ್ದು, ಸ್ವಾಗತ ಕಮಾನಿನ ಮೇಲಿದ್ದ ‘ಮನುಷ್ಯ ಜಾತಿ ತಾನೊಂದೆ ವಲಂ’ ನುಡಿಮುತ್ತನ್ನು ಅಳಿಸಿದ್ದು... ಹೀಗೆ ಹೇಳುತ್ತಾ ಹೋದರೆ ಹತ್ತು ಹಲವು ಉದಾಹರಣೆಗಳನ್ನು ನೀಡಬಹುದಾಗಿದೆ. ಜೊತೆಗೆ ಚುನಾಯಿತ ಪ್ರತಿನಿಧಿಗಳಿಗೆ ಸಭೆಯಲ್ಲಿ ಹೀಗೆಯೇ ಮಾತನಾಡಬೇಕು ಎಂಬ ತಾಕೀತು ಸೇರಿದಂತೆ, ಪರಿಷತ್ತಿನ ಕಚೇರಿ ಆವರಣದಲ್ಲಿರುವ ನಗರ ಜಿಲ್ಲಾ ಕಚೇರಿಯನ್ನು ಖಾಲಿ ಮಾಡಲು ನೋಟಿಸ್‌ ನೀಡಿರುವುದು, ಸದಸ್ಯತ್ವ ರದ್ದತಿ ಇವೆಲ್ಲವೂ ಯಾವ ರೀತಿಯ ಸಾಹಿತ್ಯ ಪರಿಚಾರಿಕೆಯಾಗುತ್ತವೆ? ಜೋಶಿಯವರು ಇನ್ನು ಮುಂದಾದರೂ ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ಕನ್ನಡಮ್ಮನ ಸೇವೆ ಮಾಡಲಿ ಎಂದು ಆಶಿಸೋಣ.

ಚಿ. ಉಮಾ ಶಂಕರ್ ಲಕ್ಷ್ಮೀಪುರ, ಬೆಂಗಳೂರು

***

ವೈವಾಹಿಕ ಮಾಹಿತಿ: ವೆಬ್‌ಸೈಟ್‌ ಪೂರಕ

ವಿವಾಹ ಮಾಹಿತಿಯುಳ್ಳ ಸಮಗ್ರ ಜಾಲತಾಣದ ಅಗತ್ಯ ಕುರಿತ ಮಲ್ಲಿಕಾರ್ಜುನ ಅವರ ಆಗ್ರಹ (ವಾ.ವಾ., ಮಾರ್ಚ್‌ 25) ಸೂಕ್ತವಾಗಿದೆ. ಇಂದು ಘಟಿಸುತ್ತಿರುವ ಹಲವಾರು ಅಪೂರ್ಣ ಮದುವೆಯ ಸಂಬಂಧಗಳಿಗೆ ಮಾಹಿತಿ ಕೊರತೆಯೇ ಕಾರಣ. ವಧುವರರ ಕುರಿತಾದ ಮಾಹಿತಿಯು ತಂದೆತಾಯಿಗೆ ಸಂತೃಪ್ತಿ ತರುವಂತೆ ಇರಬೇಕು. ಇಲ್ಲದಿದ್ದಲ್ಲಿ ಇಂದಿನ ದುಷ್ಪರಿಣಾಮಗಳು, ಅಸಹಜ ಹೊಂದಾಣಿಕೆ, ತನ್ಮೂಲಕ ಮಾನಸಿಕ ಅಶಾಂತಿ, ಹೊಸ ಸಂಬಂಧ ಎಬ್ಬಿಸುವ ಬಿರುಗಾಳಿ ಸಮಾಜದಲ್ಲಿ ಹೆಚ್ಚು ಹೆಚ್ಚು ಕಂಡುಬರುತ್ತವಲ್ಲದೆ, ಸುಂದರ ಸಂಸಾರಗಳು ವೃಥಾ ವೇದನೆಗೆ ಒಳಪಡುತ್ತವೆ. ಹಣದ ತೀವ್ರತೆ ಹೆಚ್ಚು ಪರಿಣಾಮ ಬೀರುತ್ತಿರುವ ಈ ಕಾಲಘಟ್ಟದಲ್ಲಿ, ಗುಣ ಗೌಣವಾಗಿ ತಲೆತಗ್ಗಿಸುವ ಪರಿಸ್ಥಿತಿಯೇ ಜಾಸ್ತಿ.

ಎಷ್ಟೋ ಮನೆಗಳಲ್ಲಿ ಹೊಸ ಸಂಬಂಧ ವೈರತ್ವದಷ್ಟೇ ಭೀಕರವೆನಿಸಿ, ಹಿಂಡಿ ಬಿಡುತ್ತದೆ. ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಹಣಕ್ಕಾಗಿ ಮನುಷ್ಯತ್ವ ತೊರೆಯುವ ಪ್ರಕ್ರಿಯೆ ವೈಯಕ್ತಿಕ ಬದುಕಿಗೆ ಮುಳುವಾಗುತ್ತದೆ. ಯುವಜನಾಂಗ ಇಂದು ಸ್ವನಿರ್ಧಾರದಲ್ಲಿ ಬಲಯುತವಾಗಿರುವುದು, ಸರಿಯಾದ ಆಯ್ಕೆಯನ್ನು ಎದುರು ನೋಡುವುದು ಆರೋಗ್ಯಕರ ಸಮಾಜದ ದ್ಯೋತಕ. ಅವರಿಗೆ ಹೆಚ್ಚಿನ ಆಯ್ಕೆಯನ್ನು ಕಲ್ಪಿಸಿಕೊಡುವುದು ಹಿರಿಯರ ಆದ್ಯ ಕರ್ತವ್ಯ.

ಮಾಲತಿ ಎ.ಬಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT