ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮತ ಮಾರಾಟವೆಂಬ ಬೀಜ–ವೃಕ್ಷ ನ್ಯಾಯ!

ಅಕ್ಷರ ಗಾತ್ರ

ರೈತ ಸಂಜೀವಿನಿ: ತಾಲ್ಲೂಕಿಗೂ ವಿಸ್ತರಿಸಿ

ರಾಜ್ಯ ಸರ್ಕಾರವು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆಗೆ ಸಂಬಂಧಿಸಿದಂತೆ ರೈತ ಕ್ಷೇತ್ರ ಭೇಟಿಯ ಮೂಲಕ ಮಾಹಿತಿ, ತಿಳಿವಳಿಕೆ ನೀಡುವ ಸಲುವಾಗಿ ‘ರೈತ ಸಂಜೀವಿನಿ’ ಎಂಬ ಹೆಸರಿನಲ್ಲಿ 64 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ಆರಂಭಿಸಿರುವುದು ಅಭಿನಂದನೀಯ. ಇದರ ಉಪಯುಕ್ತತೆಯನ್ನು ಪರಿಶೀಲಿಸಿ, ಕಂಡುಬರುವ ನ್ಯೂನತೆಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಿ, ರಾಜ್ಯದ ಎಲ್ಲ ತಾಲ್ಲೂಕುಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು.

⇒ರಮೇಶ್, ಬೆಂಗಳೂರು

***

ಮತ ಮಾರಾಟವೆಂಬ ಬೀಜ–ವೃಕ್ಷ ನ್ಯಾಯ!

‘ಚುನಾವಣೆಗಳಲ್ಲಿ ಹಣ, ಮದ್ಯದಂತಹ ಆಮಿಷಗಳಿಗೆ ಮತ ಮಾರಿಕೊಳ್ಳುವುದಿಲ್ಲ ಎಂದು ಪ್ರತೀ ಪ್ರಜೆ ಅಭಿಯಾನ ಆರಂಭಿಸಿ, ಶ್ರೇಷ್ಠ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆ ರಕ್ಷಿಸಬೇಕು’ ಎಂದಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಾತು (ಪ್ರ.ವಾ., ಜ. 31) ಸರ್ವಸಮ್ಮತವಾದುದು ಎಂಬುದನ್ನು ಪ್ರಜೆಗಳು ಮತ್ತು ಎಲ್ಲ ರಾಜಕೀಯ ಪಕ್ಷಗಳೂ ಒಪ್ಪುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರಜೆಗಳು ಮತಗಳನ್ನು ಮಾರಬಾರದೆಂದು ಹೇಳಿದಂತೆಯೇ ಅಧ್ಯಕ್ಷರು ‘ಮತಗಳನ್ನು ಹಣ, ಮದ್ಯದಂತಹ ಆಮಿಷಗಳ ಮೂಲಕ ಕೊಳ್ಳುವುದಿಲ್ಲ’ ಎಂದು ಪ್ರತೀ ಅಭ್ಯರ್ಥಿ ಅಭಿಯಾನ ಆರಂಭಿಸಿ, ಶ್ರೇಷ್ಠ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆ ರಕ್ಷಿಸಬೇಕು ಎಂದು ಹೇಳಿದ್ದರೆ ಮಾತು ಪೂರ್ಣವೂ, ಅರ್ಥಪೂರ್ಣವೂ ಆಗುತ್ತಿತ್ತು. ಮತಗಳನ್ನು ಮಾರುವವರು ಇರುವುದರಿಂದ ಕೊಳ್ಳುವವರು ಇರುವರೋ ಅಥವಾ ಕೊಳ್ಳುವವರು ಇರುವುದರಿಂದ ಮಾರುವವರು ಇದ್ದಾರೆಯೋ ಎಂಬುದು ಬೀಜ–ವೃಕ್ಷ ನ್ಯಾಯದಂತೆ ಸಂಶೋಧನೆಗೆ ಒಳಪಡಿಸಬೇಕಾದ ಸಂಗತಿ.

⇒ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

***

ಉದ್ಯೋಗ ಅವಕಾಶ ಹೆಚ್ಚಿಸಲು ಗಮನ ಕೊಡಿ

ಪದವಿ ಮುಗಿಸಿದ ಲಕ್ಷಾಂತರ ಯುವಕ–ಯುವತಿಯರು ಇಂದು ನಿರುದ್ಯೋಗಿಗಳಾಗಿದ್ದಾರೆ. ಪ್ರಸ್ತುತ
ದಿನಮಾನಗಳಲ್ಲಿ ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮಗಳು ಯುವಜನರನ್ನು ಗೊಂದಲಕ್ಕೆ, ಮಾನಸಿಕ ಖಿನ್ನತೆಗೆ ದೂಡಿವೆ. ಹೀಗಾಗಿ ರಾಜ್ಯ ಸರ್ಕಾರ ಪ್ರಸ್ತುತ ಮಂಡಿಸಲಿರುವ ‘ಯುವ ಬಜೆಟ್‌’ನಲ್ಲಿ ಯುವ ಸಮೂಹಕ್ಕೆ ಹುರುಪು ತುಂಬುವ ರೀತಿಯ ಕಾರ್ಯಕ್ರಮಗಳನ್ನು ಘೋಷಿಸಬೇಕು. ಖಿನ್ನತೆಗೆ ಒಳಗಾದವರನ್ನು ಬಾಧೆ ಮುಕ್ತಗೊಳಿಸಲು ಆಪ್ತ ಸಮಾಲೋಚಕ ಶಿಬಿರಗಳನ್ನು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ತಿಂಗಳಿಗೊಮ್ಮೆ ಏರ್ಪಡಿಸಲು ಸಾಧ್ಯವಾಗುವಂತಹ ಕಾರ್ಯಕ್ರಮಗಳನ್ನು ಪ್ರಕಟಿಸಬೇಕು. ಜೊತೆಗೆ ಉದ್ಯೋಗ ಅವಕಾಶಗಳ ಸೃಷ್ಟಿ, ಪದವಿ ಮಟ್ಟದಲ್ಲಿ ಪಠ್ಯಕ್ರಮದ ಜೊತೆಗೆ ಕೌಶಲಾಧಾರಿತ ಶಿಕ್ಷಣಕ್ಕೆ ಇನ್ನಷ್ಟು ಒತ್ತು ನೀಡಬೇಕು. ವೃತ್ತಿ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಲು ಕ್ರಮ ಜರುಗಿಸಬೇಕು.

⇒ರಾಜ ಮುಗಲಳ್ಳಿ, ಉಜ್ಜಯಿನಿ

***

ಅವು ನಮ್ಮ ಬಸ್‌ಗಳು, ನೆನಪಿರಲಿ...

ಕೆಎಸ್ಆರ್‌ಟಿಸಿ ಬಸ್ಸುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಸ್ ಗ್ಲಾಸ್ ಮೇಲೆ ವಿವಿಧ ನಟರ ಹೆಸರು, ಸಂಘ ಸಂಸ್ಥೆಗಳ ಹೆಸರು, ಕೆಲವು ಪಾಂಪ್ಲೆಟ್, ರೇಡಿಯಂ ವರ್ಕ್, ದೇವರ ಹೆಸರುಗಳು ಕಂಡುಬರುತ್ತವೆ. ಬಸ್ಸುಗಳ ಮೇಲೆ ಇಷ್ಟು ಪ್ರೀತಿ ಹೊಂದಿರುವ ಜನರು, ಕಡಲೆಕಾಯಿ ತಿಂದು ಬಸ್ಸಲ್ಲೇ ಸಿಪ್ಪೆ ಚೆಲ್ಲುವುದು, ಖಾಲಿಯಾದ ಚಿಪ್ಸ್ ಪ್ಯಾಕೆಟ್‌ಗಳನ್ನು ಸೀಟಿನ ಮೂಲೆಯಲ್ಲಿ ತುರುಕುವುದು, ಕೈಕೊಳೆಯನ್ನು ಎದುರಿನ ಸೀಟಿಗೆ ಒರೆಸುವುದು, ಕಿಟಕಿಯಲ್ಲಿ ಮುಖ ಮುಂದೆ ಮಾಡಿ ಉಗಿಯುವುದನ್ನು ಯಾಕೆ ಮಾಡುತ್ತಾರೆ ಎನ್ನುವುದು ತಿಳಿಯುವುದಿಲ್ಲ. ಪ್ರೀತಿಯನ್ನು ಬಸ್‌ನ ಹೊರಗಷ್ಟೇ ತೋರಿಸಿದರೆ ಸಾಲದು, ಸ್ವಚ್ಛತೆಯಲ್ಲಿಯೂ ಇರಲಿ, ಅವು ನಮ್ಮ ಬಸ್‌ಗಳು. ನೆನಪಿರಲಿ.

⇒ಬಸನಗೌಡ ಪಾಟೀಲ, ಯರಗುಪ್ಪಿ

***

ಸಾಮಾಜಿಕ ಬದಲಾವಣೆಯ ಭರವಸೆಯ ನಡೆ

ತಮಿಳುನಾಡಿನ ತಂದರಂಪಟ್ಟು ತಾಲ್ಲೂಕಿನ ಗ್ರಾಮವೊಂದರ ಮುತ್ತು ಮಾರಿಯಮ್ಮನ್ ದೇವಸ್ಥಾನವನ್ನು
ಆ ಊರಿನ ದಲಿತರು ಪ್ರವೇಶಿಸಿರುವುದು ಅಸಮಾನತೆಯಿಂದ ಸಮಾನತೆಯೆಡೆಗಿನ ದಿಟ್ಟ ನಡೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಬದಲಾವಣೆಯ ಆಶಾವಾದದ ದ್ಯೋತಕವೂ ಹೌದು.

ಸಂವಿಧಾನದ ಅಡಿಯಲ್ಲಿ ಸರ್ವರೂ ಸಮಾನರು ಎಂಬುದನ್ನು ಪ್ರಬಲ ಜಾತಿಯ ವಿದ್ಯಾವಂತರಿಗೂ ಮನವರಿಕೆ ಮಾಡಿಕೊಡಬೇಕಾದ ಪರಿಸ್ಥಿತಿ ಇರುವುದು ವಿಷಾದನೀಯ. ಇದರಿಂದ ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮನ್ನು ಸಾಕ್ಷರ
ರನ್ನಾಗಿಸಿದೆಯೇ ವಿನಾ ಸುಶಿಕ್ಷಿತರನ್ನಾಗಿಸಿಲ್ಲ ಎಂಬುದು ಸಾಬೀತಾಗಿದೆ. ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಪ್ರಾಥಮಿಕ ಹಂತದಲ್ಲೇ ಪಠ್ಯಕ್ರಮವಾಗಿಸಿ ಸೂಕ್ತ ಮನವರಿಕೆ ಮಾಡಿಕೊಡುವ ಜರೂರು ಇಂದಿನದ್ದಾಗಿದೆ.

⇒ದಿನಮಣಿ ಬಿ.ಎಸ್., ಮೈಸೂರು

***

ನವ್ಯ ಶೈಲಿಯ ರಸಮೀಮಾಂಸೆ

ಅಗಲಿದ ಕವಿ ಕೆ.ವಿ.ತಿರುಮಲೇಶ್ ಅವರ ಕಾವ್ಯ ತುಂಬಾ ವಿಶಿಷ್ಟವಾದುದು. 1978ರ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಅವರ ‘ಕಾರಡ್ಕ’ ಎಂಬ ಕವನ ನನ್ನನ್ನು ಆರು ತಿಂಗಳ ಕಾಲ ಕಾಡಿದ್ದುಂಟು. ನವೋದಯ ಕಾವ್ಯದಲ್ಲಿದ್ದ ಪ್ರಕೃತಿ ಸೌಂದರ್ಯಾರಾಧನೆಯ ರಸಮೀಮಾಂಸೆ ನವ್ಯಕಾವ್ಯದಲ್ಲಿ ಇಲ್ಲ ಎಂಬ ಆರೋಪವನ್ನು ಈ ಕವನ ಸುಳ್ಳಾಗಿಸಿತ್ತು. ಅಪ್ಪಟ ನವ್ಯ ಶೈಲಿಯಲ್ಲಿ ತಿರುಮಲೇಶ್ ಅವರು ತಮ್ಮ ಹುಟ್ಟಿದ ಊರಾದ ಕಾರಡ್ಕದ ಪ್ರಕೃತಿ ಚಿತ್ರಣವನ್ನು ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದರು. ತಿರುಮಲೇಶ್‌ ಅವರ ಇನ್ನಿತರ ಕವನ ಸಂಕಲನಗಳು ಸಹ ತಮ್ಮ ವಿಶಿಷ್ಟ ಸಂವೇದನೆಯಿಂದಾಗಿ ಓದುಗರ ಗಮನ ಸೆಳೆಯುತ್ತವೆ. ಅಂಥ ಪ್ರತಿಭಾವಂತ ಕವಿಯನ್ನು ನಮ್ಮ ಸಾರಸ್ವತ ಲೋಕವು ಕಾವ್ಯ ಕರ್ಮಕ್ಕಾಗಿ ಹೆಚ್ಚಾಗಿ ಬಳಸಿಕೊಳ್ಳಲೇ ಇಲ್ಲ. ಇದೊಂದು ನಷ್ಟವೇ ಸರಿ.

⇒ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT