ಬುಧವಾರ, ಸೆಪ್ಟೆಂಬರ್ 18, 2019
28 °C

‘ಅರ್ಹ’ ಖಾತೆಗೆ ‘ಅನರ್ಹ’ರ ಹಟ

Published:
Updated:

ತಮ್ಮನ್ನು ಆರಿಸಿ ಕಳಿಸಿದ ಮತದಾರ ಪ್ರಭುವನ್ನು ಕಡೆಗಣಿಸಿ, ಆರಿಸಿಬಂದ ಪಕ್ಷಕ್ಕೆ ಮೋಸ ಮಾಡಿ, ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಂಡು, ಈಗ ಸರ್ಕಾರದಲ್ಲಿ ಭಾಗಿಯಾಗಲು ತಯಾರಾಗಿರುವ ನಮ್ಮ ರಾಜಕಾರಣಿಗಳು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಪ್ಪು ಅಧ್ಯಾಯವನ್ನು ಬರೆದಿದ್ದಾರೆ.

ತಮ್ಮನ್ನು ಆರಿಸಿ ಕಳುಹಿಸಿದ ಮತದಾರ ಪ್ರಭುಗಳ ಸೇವೆ ಮಾಡಲು ಮಂತ್ರಿಯಾಗಲೇಬೇಕೇ? ಮಂತ್ರಿಯಾಗದೆಯೂ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಪ್ರಭಾವಿ ಖಾತೆಯ ಸಚಿವರಾಗಿದ್ದೂ ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನೇ ಮಾಡದ ಎಷ್ಟೋ ರಾಜಕಾರಣಿಗಳನ್ನು ನಾಡು ಕಂಡಿದೆ.

ಪ್ರಮುಖ ಖಾತೆಗಾಗಿ ಪಟ್ಟುಹಿಡಿಯುವುದರ ಹಿಂದೆ, ಭ್ರಷ್ಟಾಚಾರದಲ್ಲಿ ತೊಡಗುವ ಉದ್ದೇಶವಿದೆಯೇ ಹೊರತು ಕ್ಷೇತ್ರದ ಅಭಿವೃದ್ಧಿಯಾಗಲೀ, ಮತದಾರ ಪ್ರಭುಗಳ ಕಲ್ಯಾಣವಾಗಲೀ ಅಲ್ಲ ಎಂಬುದು ಸ್ಪಷ್ಟ. ಅಧಿಕಾರಕ್ಕಾಗಿ ಮಾನ– ಮರ್ಯಾದೆಯನ್ನು ಗಾಳಿಗೆ ತೂರಿ, ಸಮಯಸಾಧಕ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಧಿಕ್ಕಾರವಿರಲಿ. ಇಂಥ ರಾಜಕಾರಣಿಗಳಿಗೆಲ್ಲ ಪಾಠ ಕಲಿಸುವ ಸಮಯ ಬಂದಿದೆ. ‘ನಿರಂತರ ಎಚ್ಚರವೇ ಪ್ರಜಾಪ್ರಭುತ್ವವನ್ನು ಜೀವಂತವಾಗಿ ಇಡುತ್ತದೆ’ ಎಂಬುದನ್ನು ಮತದಾರರು ಮರೆಯಬಾರದು. ಮತದಾರ ಎಚ್ಚೆತ್ತುಕೊಂಡರೆ ರಾಜಕಾರಣದಲ್ಲಿ ಆಮೂಲಾಗ್ರ ಬದಲಾವಣೆ ತರಬಹುದು.

-ಕೆ.ಬ.ಬಳ್ಳೂರ್, ಬೆಂಗಳೂರು

Post Comments (+)