ಸೋಮವಾರ, ಆಗಸ್ಟ್ 26, 2019
27 °C

ಆಟೊಮೊಬೈಲ್‌ ಸಂಕಷ್ಟ ಆ ಕ್ಷೇತ್ರಕ್ಕಷ್ಟೇ ಅಲ್ಲ

Published:
Updated:

ದೇಶದಲ್ಲಿ ವಾಹನ ಮಾರಾಟ ಪ್ರಮಾಣದಲ್ಲಿ ಇಳಿಮುಖವಾಗಿರುವುದು (ಪ್ರ.ವಾ., ಆ. 14) ಆತಂಕಕಾರಿ ಬೆಳವಣಿಗೆ. ಆಟೊಮೊಬೈಲ್ ಕ್ಷೇತ್ರದ ಸಂಕಟವು ಆ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ. ವಾಹನ ಮಾರಾಟದಿಂದ ಹಿಡಿದು ಅದು ಗುಜರಿಗೆ ಸೇರುವ ತನಕ ಹಲವು ಸಣ್ಣ ಕೈಗಾರಿಕೆಗಳ ಕೊಡುಗೆ ಇದೆ. ವಾಹನದ ಬಿಡಿಭಾಗಗಳು, ಸರ್ವಿಸ್, ವಾಟರ್‌ವಾಶ್ ಕೇಂದ್ರಗಳು, ಇನ್ಶೂರೆನ್ಸ್ ಕಂಪನಿಗಳು, ಟೈರ್ ಕಂಪನಿಗಳು, ಸೆಕೆಂಡ್ ಹ್ಯಾಂಡ್ ವಾಹನಗಳ ಬಿಸಿನೆಸ್‌, ಕಡೆಗೆ ರಸ್ತೆಬದಿಯಲ್ಲಿ ಪಂಕ್ಚರ್‌ ಹಾಕುವವನವರೆಗೆ ಇದು ತನ್ನ ಪ್ರಭಾವ ಬೀರಲಿದೆ. ಈ ಎಲ್ಲ ಸಣ್ಣ-ಮಧ್ಯಮ ಕೈಗಾರಿಕೆಗಳ ನಷ್ಟದ ಅಂದಾಜು ಮತ್ತು ಇವು ಒಡ್ಡುವ ನಿರುದ್ಯೋಗ ಸಮಸ್ಯೆಗಳನ್ನು ನಿರ್ಲಕ್ಷಿಸುವಂತಿಲ್ಲ.

ಕೇಂದ್ರದ ಜಿಎಸ್‌ಟಿ , ಸುಪ್ರೀಂ ಕೋರ್ಟ್ ನಿರ್ಣಯದ ಅನ್ವಯ ಹೊಸ ಕಾರುಗಳಿಗೆ ಮೂರು ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಮಾಡಿಸುವ ನಿಯಮ, ರಸ್ತೆ ತೆರಿಗೆಯನ್ನು ರಾಜ್ಯ ಸರ್ಕಾರಗಳು ಹೆಚ್ಚಿಸಿರುವುದು, ಹೊಸ ಸುರಕ್ಷಾ ನಿಯಮಗಳು, ಮುಂದಿನ ವರ್ಷದಿಂದ ಜಾರಿಗೆ ಬರಲಿರುವ ಬಿಎಸ್‌6 ನಿಯಮ... ಹೀಗೆ ಒಂದಾದ ಮೇಲೊಂದರಂತೆ ಜಾರಿಗೆ ಬಂದಿರುವ ಕ್ರಮಗಳು ಆಟೊಮೊಬೈಲ್ ಕ್ಷೇತ್ರವನ್ನು ಹಿಂಡುತ್ತಿವೆ. ಗಮನಿಸಬೇಕಾದ ಅಂಶವೆಂದರೆ, ಈ ಎಲ್ಲಾ ನಿಯಮಗಳು ಒಂದೇ ವರ್ಷದಲ್ಲಿ ಜಾರಿಯಾಗಿದ್ದು, ಕ್ಷೇತ್ರವನ್ನು ಸ್ಥಿರವಾಗಿಸಲು ಅವಕಾಶವನ್ನೇ ಕೊಡುತ್ತಿಲ್ಲ. ಜಿಡಿಪಿಗೆ ಶೇ 11.5ರಷ್ಟು ಕೊಡುಗೆ ನೀಡುವ ಆಟೊಮೊಬೈಲ್‌ ಕ್ಷೇತ್ರವನ್ನು ಕಡೆಗಣಿಸದೆ, ಅದರ ಪುನರುಜ್ಜೀವನಕ್ಕೆ ಪೂರಕವಾದ ನೀತಿಗಳನ್ನು ತುರ್ತಾಗಿ ಜಾರಿಗೊಳಿಸಬೇಕಿದೆ.

 ಪ್ರೀತಮ್ ಪಾಯ್ಸ್, ಬೆಂಗಳೂರು

Post Comments (+)