ಶುಕ್ರವಾರ, ಮೇ 27, 2022
22 °C

ವಿಮಾನದಲ್ಲಿ ಕನ್ನಡದ ಕಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜುಲೈ 13ರಂದು ಬೆಂಗಳೂರಿನಿಂದ ಲಂಡನ್ ನಗರಕ್ಕೆ ತೆರಳುವ ಬ್ರಿಟಿಷ್ ಏರ್‌ವೇಸ್‍ನ ವಿಮಾನದಲ್ಲಿ ಪ್ರಯಾಣ ಮಾಡಿದಾಗ ನನಗೆ ಆಶ್ಚರ್ಯವೊಂದು ಕಾದಿತ್ತು. ವಿಮಾನ ಬೆಂಗಳೂರಿನಿಂದ ನಿರ್ಗಮಿಸುವ ಮುನ್ನ ಪ್ರಯಾಣಿಕರಿಗೆ ಕನ್ನಡ ಭಾಷೆಯಲ್ಲಿ, ವಿಮಾನ ಸಿಬ್ಬಂದಿಯೊಬ್ಬರು ಸ್ವಾಗತ ಕೋರಿದಾಗ ಮನಸ್ಸಿಗೆ ಅತ್ಯಂತ ಮುದವೆನಿಸಿತು. ವಿಮಾನ ಲಂಡನ್ ನಗರದಲ್ಲಿ ಇಳಿದಾಗಲೂ ಕನ್ನಡದಲ್ಲಿಯೇ ವಿದಾಯ ಹೇಳಿದಾಗ ಮತ್ತಷ್ಟು ಖುಷಿ ಎನಿಸಿತು. ವಿಮಾನ ಪ್ರಯಾಣದ ಅವಧಿಯಲ್ಲಿಯೂ ಇಬ್ಬರು ಯುವಕರು ಕನ್ನಡ ಭಾಷೆಯಲ್ಲಿ ಮಾತನಾಡಿದವರೊಡನೆ, ಅತ್ಯಂತ ಗೌರವದಿಂದ ಕನ್ನಡದಲ್ಲಿಯೇ ಸ್ಪಂದಿಸಿ, ಅವರ ಬೇಕು- ಬೇಡಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಇದೇ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ನಾನು ಜುಲೈ 25ರಂದು ಲಂಡನ್‍ನಿಂದ ಬೆಂಗಳೂರಿಗೆ ಮರು ಪ್ರಯಾಣ ಮಾಡಿದಾಗಲೂ ಈ ಅನುಭವ ಮರುಕಳಿಸಿತು. ಅಂದು ವಿಮಾನ ಸಿಬ್ಬಂದಿ ತಂಡದಲ್ಲಿದ್ದ ಸುಷ್ಮಾ ಅವರು ಅಚ್ಚ ಕನ್ನಡದಲ್ಲಿ (ಒಂದೇ ಒಂದು ಇಂಗ್ಲಿಷ್ ಪದವನ್ನೂ ಬಳಸದೆ) ಸ್ವಾಗತ ಕೋರಿದ್ದು – ವಿದಾಯ ಹೇಳಿದ್ದು ನಿಜಕ್ಕೂ ಆಪ್ಯಾಯಮಾನವೆನಿಸಿತ್ತು. ಈ ಸಿಬ್ಬಂದಿ ವಿಮಾನದಲ್ಲಿ ಸೃಷ್ಟಿಸಿದ ಕನ್ನಡದ ಕಂಪು ನಿಜಕ್ಕೂ ಮೆಚ್ಚುವಂಥದ್ದು.

ಸುಮಾರು ಮೂವತ್ತು ವರ್ಷಗಳಿಂದ ನಾನು ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದೇನೆ. ಒಂದೇ ಒಂದು ಬಾರಿಯೂ ಕನ್ನಡದಲ್ಲಿ ಸ್ವಾಗತ ಕೋರಿದ್ದಾಗಲಿ, ವಿದಾಯ ಹೇಳಿದ್ದಾಗಲಿ ಕೇಳಿರಲಿಲ್ಲ. ವಿಮಾನಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರ ವ್ಯವಹಾರ ಭಾಷೆಗಳನ್ನಾಗಿ ಬಳಸುವುದು ತಿಳಿದ ವಿಷಯವೇ. ಕೆಲವೊಮ್ಮೆ ವಿಮಾನ ಹೊರಡುವ ಅಥವಾ ತಲುಪುವ ರಾಜ್ಯದ ಭಾಷೆಯ ಪರಿಚಯ ವಿಮಾನ ಸಿಬ್ಬಂದಿಗಿದೆ ಎಂದು ಪ್ರಕಟಿಸುತ್ತಾರೆ. ಆದರೆ ಬೆಂಗಳೂರಿನಿಂದ ನಿರ್ಗಮಿಸುವ ಅಥವಾ ಆಗಮಿಸುವ ಯಾವುದೇ ವಿಮಾನದಲ್ಲಿ ಸಿಬ್ಬಂದಿಗೆ ಕನ್ನಡ ಭಾಷೆಯ ಪರಿಚಯವಿದೆ ಎಂದು ಹೇಳಿರುವುದು ನನ್ನ ಗಮನಕ್ಕಂತೂ ಬಂದಿಲ್ಲ.

ಬ್ರಿಟಿಷ್ ಏರ್‌ವೇಸ್ ಸೇರಿದಂತೆ, ಅನೇಕ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪಯಣಿಸುವ ಅನೇಕ ಇತರ ದೇಶವಾಸಿಗಳು ಕನ್ನಡ ಮೂಲದವರಾಗಿದ್ದು, ಅವರೊಡನೆ ಬರುವ ಎರಡನೇ– ಮೂರನೇ ತಲೆಮಾರಿನವರೆಲ್ಲ ಮಾತನಾಡುವುದು ಹೆಚ್ಚು – ಕಡಿಮೆ ಇಂಗ್ಲಿಷ್ ಭಾಷೆಯಲ್ಲೇ. ಪ್ರಯಾಣ ಅವಧಿಯಲ್ಲಿ ಸ್ವಾಗತ – ವಿದಾಯ -ಸಂಭಾಷಣೆ ನಮ್ಮ ಭಾಷೆಯಲ್ಲಿ ನಡೆಯುವುದು ಕೇಳಿದಾಗ ಇಂಥವರಲ್ಲಿ ಕನ್ನಡಾಭಿಮಾನ ಪುಟಿದು ಬಿಡುತ್ತದೆಯೇ ಎಂಬ ಪ್ರಶ್ನೆ ಏಳಬಹುದು. ಆದರೆ ಅವಧಿಗಿಂತ ಅಭಿಮಾನ ಮುಖ್ಯ. ತನ್ನ ಕುಟುಂಬದ ಮೂಲ ನೆಲೆಯ ಭಾಷಾ ಜ್ಞಾನವೂ ಮುಖ್ಯ ಎನ್ನುವ ಭಾವನೆ, ವಿಶೇಷವಾಗಿ ಮಕ್ಕಳಲ್ಲಿ, ಯುವ ಜನರಲ್ಲಿ ಬರಬೇಕು. ಇಂಗ್ಲಿಷ್, ಹಿಂದಿ ಅಥವಾ ಮತ್ಯಾವುದೇ ಭಾಷೆಯನ್ನು ಅರಿಯದ, ಕನ್ನಡವನ್ನು ಮಾತ್ರ ಬಲ್ಲ ಅನೇಕ ಹಿರಿಯ ನಾಗರಿಕರೂ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರ ದೇಶಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಅವರು ಅನೇಕ ಸಂದರ್ಭಗಳಲ್ಲಿ ಅನುಭವಿಸುವ ಮುಜುಗರಗಳೂ ಕನ್ನಡದ ಬಳಕೆಯಿಂದ ಕಡಿಮೆಯಾಗುತ್ತವೆ.

ಬ್ರಿಟಿಷ್ ಏರ್‌ವೇಸ್‍ನ ‘ಭಾಷಾನೀತಿ’ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗುವಂಥದ್ದು. ಕನ್ನಡ ನಾಡಿಗೆ ಬರುವ ಮತ್ತು ಇಲ್ಲಿಂದ ಹೊರಡುವ ಎಲ್ಲ ದೇಶೀಯ – ಅಂತರರಾಷ್ಟ್ರೀಯ ವಿಮಾನಗಳಲ್ಲೂ ಇದೇ ನೀತಿ ಜಾರಿಗೆ ಬರಲೆಂದು ಆಶಿಸುತ್ತೇನೆ.

-ಆರ್. ಇಂದಿರಾ, ಮೈಸೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು