ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲಿಕ- ಶ್ಲಾಘನೀಯ

Last Updated 2 ಅಕ್ಟೋಬರ್ 2018, 16:31 IST
ಅಕ್ಷರ ಗಾತ್ರ

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ಯುವ ಪರೋಪಕಾರಿಗಳು ಮತ್ತು ಸ್ವಯಂ ಪ್ರೇರಿತರಾಗಿ ರಕ್ಷಣೆಗೆ ಧಾವಿಸುವ ಜೀವ ರಕ್ಷಕರಿಗೆ ಬರಬಹುದಾದ ಆತಂಕವನ್ನು ದೂರಮಾಡುವ ‘ಕರ್ನಾಟಕ ಜೀವ ರಕ್ಷಕ ಮತ್ತು ವೈದ್ಯಕೀಯ ವಿಧೇಯಕ– 2016’ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿರುವುದು ಸಮಾಧಾನ ತರುವ ಬೆಳವಣಿಗೆ.

ಇಂಥ ಕಾನೂನು ಜಾರಿ ಮಾಡಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ನಮ್ಮ ರಸ್ತೆಗಳಲ್ಲಿ ಪ್ರತಿನಿತ್ಯ ಎಂಬಂತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. 2016ರಲ್ಲಿ ದೇಶದಲ್ಲಿ ಸಂಭವಿಸಿದ 4.80 ಲಕ್ಷ ಅಪಘಾತಗಳಲ್ಲಿ 1.50 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್‌ ಠಾಣೆ– ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ ಎಂಬ ಭಯದಿಂದಲೇ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ದಾರಿಹೋಕರು ಗಾಯಗೊಂಡವರಿಗೆ ನೆರವಾಗಲು ಹಿಂಜರಿಯುತ್ತಾರೆ. ಅಪಘಾತ ಸಂಭವಿಸಿದ ಒಂದು ಗಂಟೆಯೊಳಗೆ ಚಿಕಿತ್ಸೆ ದೊರೆತರೆ ಅನೇಕ ಗಾಯಾಳುಗಳು ಬದುಕಿ ಉಳಿಯುವ ಸಾಧ್ಯತೆಗಳಿರುತ್ತವೆ. ಆದರೆ ಹೀಗೆ ಸಹಾಯಕ್ಕೆ ಮುಂದಾದವರೇ ಹಲವಾರು ಬಾರಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಹೊಸ ಕಾನೂನು ಜಾರಿಯಾಗಿದ್ದರಿಂದ, ಗಾಯಾಳುಗಳ ನೆರವಿಗೆ ಬರುವವರು ಇಂಥ ತೊಂದರೆಗೆ ಸಿಲುಕುವುದಿಲ್ಲ. ಒಂದು ವೇಳೆ ನ್ಯಾಯಾಲಯಕ್ಕೆ ಹಾಜರಾಗುವುದು ಅನಿವಾರ್ಯವೆಂದಾದರೆ ಅವರಿಗೆ ತಗಲುವ ಖರ್ಚನ್ನು ಸರ್ಕಾರವೇ ಭರಿಸಬೇಕಾಗುತ್ತದೆ. ಸಕಾಲಕ್ಕೆ ನೆರವಾದವರಿಗೆ ನಗದು ಪುರಸ್ಕಾರವೂ ದೊರೆಯಲಿದೆ. ಇದು ಒಳ್ಳೆಯ
ಬೆಳವಣಿಗೆ.

ಈ ಕಾನೂನಿನ ಮತ್ತೊಂದು ಗಮನಾರ್ಹ ಅಂಶವೆಂದರೆ ಗಾಯಾಳುವಿಗೆ ಯಾವ ಆಸ್ಪತ್ರೆಯೂ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂಬುದು.

‘ಪರೋಪಕಾರಿಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ’ ಎಂದು 2016ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಬಳಿಕ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದ್ದರೂ ಆ ಬಗ್ಗೆ ನಿರ್ದಿಷ್ಟ ಕಾನೂನು ರೂಪಿಸಲಿಲ್ಲ. ಈಗ ಸರ್ಕಾರ ಜಾರಿ ಮಾಡಿರುವ ಕಾನೂನು ಸಕಾಲಿಕ ಮತ್ತು ಶ್ಲಾಘನೀಯ. ಈ ಕಾನೂನು ಇತರ ರಾಜ್ಯಗಳಿಗೂ ಮಾದರಿಯಾಗಲಿ.

ಪಂಪಾಪತಿ ಹಿರೇಮಠ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT