ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾರ್ಥಿಗಳಿಗಿದು ‘ಕಸ್ತೂರಿ ನಿವಾಸ’

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

‘ಕಸ್ತೂರಿ ನಿವಾಸ’, ‘ಸಾಕ್ಷಾತ್ಕಾರ’, ‘ಹೊಸಬೆಳಕು’, ’ಗಂಧದ ಗುಡಿ‘ ಈ ಹೆಸರುಗಳನ್ನು ಕೇಳುತ್ತಿದ್ದಂತೆಯೇ ಅವು ವರನಟ ಡಾ.ರಾಜ್‌ಕುಮಾರ್‌ ಅವರು ನಟಿಸಿರುವ ಸಿನಿಮಾಗಳು ಎಂದು ಥಟ್ಟನೆ ನೆನಪಾಗುತ್ತವೆ. ಈ ಸಿನಿಮಾಗಳು ಹೇಗೆ ಹಲವರ ಬದುಕಿನಲ್ಲಿ ಬದಲಾವಣೆ, ಏಳಿಗೆಗೆಗಳಿಗೆ ಕಾರಣವಾಗಿವೆಯೋ, ಅದೇ ರೀತಿ ಅವು ಇಂದಿಗೂ ಹಲವರ ಜೀವನಕ್ಕೆ ಹೊಸ ದಿಕ್ಕು ತೋರಿಸುತ್ತಿವೆ. ಭವಿಷ್ಯವನ್ನು ಉಜ್ವಲವಾಗಿಸುತ್ತಿವೆ.

ಈ ಹೆಸರುಗಳಲ್ಲಿರುವ ಕೊಠಡಿಗಳು ಹಲವಾರು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಜ್ಞಾನಾರ್ಜನೆಯ ತರಗತಿ ಕೇಂದ್ರಗಳಾಗಿವೆ. ಇಲ್ಲಿ ನಿತ್ಯ ಪಾಠ, ಪ್ರವಚನ, ಉಪನ್ಯಾಸ, ಅಧ್ಯಯನ, ಅಧ್ಯಾಪನಗಳು ನಡೆಯುತ್ತಿವೆ. ನೂರಾರು ಪರೀಕ್ಷಾರ್ಥಿಗಳು ಇಲ್ಲಿ ಓದಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಹೊಸ ಬೆಳಕಿನ ಸಾಕ್ಷಾತ್ಕಾರದ ತರಬೇತಿಯನ್ನು ‘ಕಸ್ತೂರಿ ನಿವಾಸ’ದಲ್ಲಿ ಪಡೆದ ಕೆಲ ಆಕಾಂಕ್ಷಿಗಳು, ‘ಗಂಧದ ಗುಡಿ’ಯ ಪ್ರಖ್ಯಾತಿಯನ್ನು ನಾಡಿನೆಲ್ಲೆಡೆ ಪಸರಿಸುವ ಕಾರ್ಯದಲ್ಲೂ ಮಗ್ನರಾಗಿದ್ದಾರೆ.

ಹೌದು, ಇದೆಲ್ಲ ಆಗುತ್ತಿರುವುದು ಚಂದ್ರಾ ಲೇಔಟ್‌ನಲ್ಲಿರುವ ವರನಟ ‘ಡಾ. ರಾಜ್‌ಕುಮಾರ್‌ ಸಿವಿಲ್‌ ಸರ್ವಿಸ್‌ ಅಕಾಡೆಮಿ’ಯಲ್ಲಿ. 2017ರ ಮಾರ್ಚ್‌ನಲ್ಲಿ ಅಸ್ತಿತ್ವಕ್ಕೆ ಬಂದ ಈ ಅಕಾಡೆಮಿ ತನ್ನ ನಾಲ್ಕು ತರಗತಿ ಕೊಠಡಿಗಳಿಗೆ ರಾಜ್‌ ನಟಿಸಿರುವ ಸಿನಿಮಾ ಹೆಸರುಗಳನ್ನೇ ನಾಮಕರಣ ಮಾಡಿ ‘ಹೊಸಬೆಳಕು’ ಮೂಡಿಸುತ್ತಿದೆ.

ವಿಜಯನಗರ, ಚಂದ್ರಾ ಲೇಔಟ್‌ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಿವೆ. ವರ್ಷದ ಹಿಂದಷ್ಟೇ ಕಾರ್ಯಾರಂಭ ಮಾಡಿರುವ ಡಾ.ರಾಜ್‌ಕುಮಾರ್‌ ಸಿವಿಲ್‌ ಸರ್ವಿಸ್‌ ಅಕಾಡೆಮಿಯು ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಕರ್ನಾಟಕ ನಾಗರಿಕ ಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳ ಸ್ಪರ್ಧಾಕಾಂಕ್ಷಿಗಳನ್ನು ಸೆಳೆಯುತ್ತಿದೆ.

ಯುಪಿಎಸ್‌ಸಿ 2017ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾದವರ ಪೈಕಿ 16 ಅಭ್ಯರ್ಥಿಗಳು ರಾಜ್‌ ಅಕಾಡೆಮಿಯಲ್ಲಿ ತರಬೇತಿ ಪಡೆದವರು ಎಂಬುದು ವಿಶೇಷ. ಅಕಾಡೆಮಿ ಆರಂಭ ವಾದ ವರ್ಷದಲ್ಲಿಯೇ ಈ ಸಾಧನೆ ಮಾಡಿರುವುದರಿಂದ ರಾಜ್ಯದ ಸ್ಪರ್ಧಾಕಾಂಕ್ಷಿಗಳನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯುವಂತೆ ಮಾಡಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳು, ಸುಸಜ್ಜಿತ ಅಧ್ಯಯನ ಕೇಂದ್ರ ಮತ್ತು ಗ್ರಂಥಾಲಯವನ್ನು ಇದು ಒಳಗೊಂಡಿದೆ.


ವಿದ್ಯಾರ್ಥಿ ವೇತನದೊಂದಿಗೆ ಕಲಿಕೆ: ಬಡತನವು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಡಾ.ರಾಜ್‌ ಅಕಾಡೆಮಿಯು ವಿವಿಧ ರೀತಿಯ ವಿದ್ಯಾರ್ಥಿ ವೇತನವನ್ನು ಸ್ಪರ್ಧಾಕಾಂಕ್ಷಿಗಳಿಗೆ ಒದಗಿಸಿ ತರಬೇತಿ ನೀಡುತ್ತಿದೆ. ಕಡು ಬಡತನದಲ್ಲಿರುವ ಅಭ್ಯರ್ಥಿಗಳಿಗೆ ತರಬೇತಿಗೆ ತಗಲುವ ಪೂರ್ಣ ವೆಚ್ಚವನ್ನೂ ವಿದ್ಯಾರ್ಥಿ ವೇತನದ ಮೂಲಕವೇ ಭರಿಸುತ್ತಿದೆ. ಕೆಲವರಿಗೆ ತರಬೇತಿ ಖರ್ಚಿನ ಶೇ 75ರಷ್ಟು ಹಾಗೂ ಶೇ 50ರಷ್ಟು ಮೊತ್ತದ ವಿದ್ಯಾರ್ಥಿ ವೇತನವನ್ನೂ ಒದಗಿಸುತ್ತಿದ್ದು, ಉಳಿದ ಮೊತ್ತವನ್ನು ಆ ಅಭ್ಯರ್ಥಿಗಳು ಭರಿಸಬೇಕಾಗುತ್ತದೆ.

‘2017ನೇ ಸಾಲಿನಲ್ಲಿ ರಾಜ್ಯದಾದ್ಯಂತ 45 ಸ್ಪರ್ಧಾಕಾಂಕ್ಷಿಗಳಿಗೆ ‘ಶೂನ್ಯ ಶುಲ್ಕ’ ಯೋಜನೆಯಡಿ ತರಬೇತಿ ನೀಡಿದ್ದೇವೆ. ಅಂದರೆ ಅವರ ತರಬೇತಿಯ ವೆಚ್ಚವನ್ನು ಪೂರ್ಣವಾಗಿ ಅಕಾಡೆಮಿಯ ವಿದ್ಯಾರ್ಥಿವೇತನ ಭರಿಸಿದೆ. 2018ನೇ ಸಾಲಿಗೆ 60 ಅಭ್ಯರ್ಥಿಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿದ್ದೇವೆ’ ಎಂದು ಅಕಾಡೆಮಿಯ ಶೈಕ್ಷಣಿಕ ಮುಖ್ಯಸ್ಥ ಪ್ರಶಾಂತ್‌ ಶ್ರೀನಿವಾಸ್‌ ಮಾಹಿತಿ ನೀಡಿದರು.

'ವಿದ್ಯಾರ್ಥಿ ವೇತನಕ್ಕಾಗಿ ರಾಜ್ಯದ ವಿವಿಧೆಡೆ ಪರೀಕ್ಷೆ ನಡೆಸುತ್ತೇವೆ. ಆರ್ಥಿಕ ಬಡತನಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ’ ಎಂದು ಅವರು ವಿವರಿಸಿದರು.

‘ಅಕಾಡೆಮಿಯು ಯುಪಿಎಸ್‌ಸಿ, ಕೆಪಿಎಸ್‌ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಿಗೆ ಮಾತ್ರ ತರಬೇತಿ ನೀಡುತ್ತದೆ. ಹಾಗಾಗಿ ಈ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಭ್ಯರ್ಥಿಗಳು ಮಾತ್ರ ತರಬೇತಿಗೆ ಬರುತ್ತಾರೆ. ಎಫ್‌ಡಿಎ, ಎಸ್‌ಡಿಎ, ಶಿಕ್ಷಕರ ನೇಮಕಾತಿ, ಪೊಲೀಸ್‌ ನೇಮಕಾತಿ, ಬ್ಯಾಂಕಿಂಗ್‌ ಮತ್ತಿತರ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡುವುದಿಲ್ಲ. ಆದರೆ ಕೆಎಎಸ್‌ ತರಬೇತಿ ಪಡೆಯುವವರು ಸಹಜವಾಗಿಯೇ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದಂತಾಗುತ್ತದೆ’ ಎಂದು ಅವರು ತಿಳಿಸಿದರು.

ಉಭಯ ಭಾಷೆಗಳಲ್ಲಿ ತರಬೇತಿ: ‘ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ತರಗತಿಗಳು ನಡೆಯುತ್ತವೆ. ಯುಪಿಎಸ್‌ಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವವರಿಗೆ ವಿಶೇಷ ತರಬೇತಿಯನ್ನೂ ನೀಡುತ್ತೇವೆ. ವಿವಿಧ ವಿಷಯಗಳ ಬೋಧನೆಗೆ ರಾಜ್ಯದ ನುರಿತ ಸಂಪನ್ಮೂಲ ವ್ಯಕ್ತಿಗಳ ಜತೆಗೆ ತಮಿಳುನಾಡು, ಹೈದರಾಬಾದ್‌, ದೆಹಲಿಯಿಂದಲೂ ವಿಷಯ ತಜ್ಞರನ್ನು ಕರೆಸಿ ಪಾಠ ಪ್ರವಚನ ನಡೆಸುತ್ತಿದ್ದೇವೆ. ಅಲ್ಲದೆ ರಾಜ್ಯದ ಹಿರಿಯ, ಕಿರಿಯ ಐಎಎಸ್‌, ಐಪಿಎಸ್‌ ಅಧಿಕಾರಿಗಳು, ನಿವೃತ್ತ ಐಎಎಸ್‌, ಐಪಿಎಸ್‌ ಅಧಿಕಾರಿಗಳಿಂದಲೂ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಾ ಗೋಷ್ಠಿ, ಸಂವಾದ, ಉಪನ್ಯಾಸಗಳನ್ನು ಏರ್ಪಡಿಸುತ್ತೇವೆ’ ಎನ್ನುತ್ತಾರೆ ಅವರು.

ಸಂದರ್ಶನಕ್ಕೂ ತಯಾರಿ: ‘ಮುಖ್ಯ ಪರೀಕ್ಷೆ ತೇರ್ಗಡೆ ನಂತರ ಸಂದರ್ಶನಕ್ಕೆ ಆಯ್ಕೆಯಾಗುವವರಿಗೆ ತರಬೇತಿ ನಿಡಲಾಗುತ್ತಿದೆ. ಯುಪಿಎಸ್‌ಸಿ ನಡೆಸುವ ಸಂದರ್ಶನದ ಮಾದರಿಯಲ್ಲಿಯೇ ಅಣಕು ಸಂದರ್ಶನಗಳನ್ನು ನಡೆಸುತ್ತೇವೆ. ಅದನ್ನು ವಿಡಿಯೊ ಚಿತ್ರೀಕರಿಸಿ ಅಭ್ಯರ್ಥಿಗಳ ಲೋಪದೋಷಗಳನ್ನು ತಿಳಿಸಿ ಸರಿಪಡಿಸಿಕೊಳ್ಳಲು ಸೂಚಿಸುತ್ತೇವೆ. 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ನಮ್ಮ ಸಂಸ್ಥೆಯ 16 ಅಭ್ಯರ್ಥಿಗಳು ಸಂದರ್ಶನದ ತರಬೇತಿ ಪಡೆದಿದ್ದರು’ ಎಂದು ಅವರು ಮಾಹಿತಿ ನೀಡಿದರು.

ಅಂಧರಿಗೂ ತರಬೇತಿ: ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸು ಹೊಂದಿರುವ ಇಬ್ಬರು ಅಭ್ಯರ್ಥಿಗಳು ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಪಾಠ ಪ್ರವಚನಗಳನ್ನು ಆಡಿಯೊ ರೆಕಾರ್ಡಿಂಗ್‌ ಮಾಡಿಕೊಳ್ಳುವ ಅವರು ನಂತರ ಉಪನ್ಯಾಸಗಳನ್ನು ಕೇಳಿ ಪುನರ್‌ಮನನ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅವರು.

ಇಂದಿರಾ ಕ್ಯಾಂಟೀನ್‌ ಊಟ: ಡಾ.ರಾಜ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಹಲವರು ಆರ್ಥಿಕವಾಗಿ ಬಡವರು. ಅವರು ಊಟ, ತಿಂಡಿಗೆ ಚಂದ್ರಾ ಲೇಔಟ್‌ನಲ್ಲಿರವು ಇಂದಿರಾ ಕ್ಯಾಂಟೀನ್‌ ಅನ್ನೇ ಅವಲಂಬಿಸಿದ್ದಾರೆ. ಕಡಿಮೆ ಬೆಲೆಗೆ ಊಟ, ತಿಂಡಿ ಅಲ್ಲಿ ಸಿಗುತ್ತಿರುವುದು ಸ್ಪರ್ಧಾಕಾಂಕ್ಷಿಗಳಿಗೆ ನೆರವಾಗಿದೆ.

ಅಕಾಡೆಮಿ ಕನಸು ಚಿಗುರೊಡೆದಿದ್ದು ಹೀಗೆ
ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ಗುರು ಅವರಿಗೆ ಈ ಅಕಾಡೆಮಿ ಸ್ಥಾಪಿಸುವ ಕನಸು ಚಿಗುರೊಡೆದದ್ದು ದೆಹಲಿಯಲ್ಲಿ. ಅಲ್ಲಿ 2016ರ ಡಿಸೆಂಬರ್‌ನಲ್ಲಿ ನಡೆದ ರಾಜ್‌ಕುಮಾರ್‌ ಸೌಹಾರ್ದ ಪ್ರಶಸ್ತಿ ಪುರಸ್ಕಾರ ಸಮಾರಂಭದ ಸಂದರ್ಭದಲ್ಲಿ.

ಯುಪಿಎಸ್‌ಸಿ ಪರೀಕ್ಷೆಗಳ ಸಿದ್ಧತೆಗೆ ತರಬೇತಿ ಪಡೆಯಲು ರಾಜ್ಯದ ಸಹಸ್ರಾರು ಅಭ್ಯರ್ಥಿಗಳು ದೆಹಲಿಗೆ ಬರುತ್ತಾರೆ. ಲಕ್ಷಾಂತರ ರೂಪಾಯಿ ವೆಚ್ಚ ದೂಗಿಸಲು ಅವರಿಗೆ ಕಷ್ಟವಾಗುತ್ತಿದೆ. ಅಂಥಹವರಿಗೆ ಬೆಂಗಳೂರಿನಲ್ಲಿಯೇ ಉತ್ತಮ ತರಬೇತಿ ದೊರೆಯುವ ವ್ಯವಸ್ಥೆ ಆಗಬೇಕು ಎಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಕರ್ನಾಟಕದ ಹಿರಿಯ ಅಧಿಕಾರಿ ಶ್ರೀನಿವಾಸ್‌ ಅವರು ರಾಜ್‌ ಕುಟುಂಬವನ್ನು ಕೋರಿದಾಗ, ಅಕಾಡೆಮಿ ರಚನೆಯ ಯೋಜನೆ ಚಿಗುರೊಡೆಯಿತು.

ಬಳಿಕ ದೆಹಲಿಯಲ್ಲಿಯೇ ಕೆಲ ಆಪ್ತರೊಂದಿಗೆ ಸಭೆ ನಡೆಸಿದ ಗುರು ರಾಘವೇಂದ್ರ ರಾಜ್‌ಕುಮಾರ್‌ ಅವರು ಅಕಾಡೆಮಿ ಸ್ಥಾಪನೆಗೆ ರೂಪರೇಷೆ ಸಿದ್ಧಪಡಿಸಿದರು. ಅದು 2017ರ ಮಾರ್ಚ್‌ 5ರಂದು ಕಾರ್ಯಾರಂಭ ಮಾಡಿತು ಎಂದು ಪ್ರಶಾಂತ್‌ ಮತ್ತು ಗಿರೀಶ್‌ ಮಾಹಿತಿ ನೀಡಿದರು.
ಅಕಾಡೆಮಿಯ ಸಂಪರ್ಕ ಸಂಖ್ಯೆ: 9535207949/ 9108448444

*
ಕಳೆದ ವರ್ಷ 100, ಈ ವರ್ಷ 100 ಅಭ್ಯರ್ಥಿಗಳು ಸ್ಕಾಲರ್‌ಶಿಪ್‌ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ದೆಹಲಿಯಲ್ಲಿ ದೊರೆಯುವ ಕೋಚಿಂಗ್‌ ಗುಣಮಟ್ಟವನ್ನೇ ಇಲ್ಲೂ ಕಾಯ್ದುಕೊಂಡು ಸಾಗುತ್ತೇವೆ. ಉತ್ತರ ಕರ್ನಾಟಕದ ಆಕಾಂಕ್ಷಿಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಹಾಗಾಗಿ ಅಕಾಡೆಮಿ ವತಿಯಿಂದ ಧಾರವಾಡದಲ್ಲೂ ಕೇಂದ್ರ ಆರಂಭಿಸುವ ಯೋಜನೆಯೂ ಇದೆ.
– ಗುರು ರಾಘವೇಂದ್ರ ರಾಜ್‌ಕುಮಾರ್‌, ಸಹ ಸಂಸ್ಥಾಪಕ, ಡಾ.ರಾಜ್‌ಕುಮಾರ್‌ ಸಿವಿಲ್‌ ಸರ್ವಿಸ್‌ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT