ಶುಕ್ರವಾರ, ಅಕ್ಟೋಬರ್ 18, 2019
20 °C

ಪರಿಶಿಷ್ಟರ ಹಕ್ಕುಗಳಿಗೆ ಸುಪ್ರೀಂ ಕೋರ್ಟ್‌ ಮರುಜೀವ

Published:
Updated:

ತನ್ನ ತೀರ್ಪೊಂದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಿ ತಾನು ನೀಡಿದ್ದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ವಾಪಸ್ ಪಡೆದಿರುವುದು (ಪ್ರ.ವಾ., ಅ.2) ಸ್ವಾಗತಾರ್ಹ. ನ್ಯಾಯಾಲಯವೇ ಅಭಿಪ್ರಾಯಪಟ್ಟಿರುವಂತೆ, ಸಮಾನತೆಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಹೋರಾಟ ಇನ್ನೂ ಮುಗಿದಿಲ್ಲ. ಅಷ್ಟೇ ಅಲ್ಲದೆ, ಅಸ್ಪೃಶ್ಯತೆ, ಶೋಷಣೆ ಮತ್ತು ಸಾಮಾಜಿಕ ಬಹಿಷ್ಕಾರ ಈಗಲೂ ಇವೆ. ಪರಿಶಿಷ್ಟ ಜಾತಿಗೆ ಸೇರಿದ ನಮ್ಮ ರಾಜ್ಯದ ಸಂಸದರೊಬ್ಬರ ವಿರುದ್ಧ ಇತ್ತೀಚೆಗಷ್ಟೇ ಅಸ್ಪೃಶ್ಯತಾ ಆಚರಣೆ ನಡೆದಿದೆ. ಅವರಿಗೆ ಗ್ರಾಮವೊಂದಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಹಾಗೆಯೇ ದೂರದ ಮಧ್ಯಪ್ರದೇಶದಲ್ಲಿ ಬಯಲುಶೌಚ ಮಾಡಿದರೆಂಬ ಕಾರಣಕ್ಕೆ ಮಕ್ಕಳಿಬ್ಬರನ್ನು ಹತ್ಯೆ ಮಾಡಲಾಗಿದೆ. ಇನ್ನು ಕೇರಳದಲ್ಲಿ ದಲಿತ ಸಮುದಾಯದ ಶಾಸಕಿಯೊಬ್ಬರು ಧರಣಿ ನಡೆಸಿದ ಸ್ಥಳವನ್ನು ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಸಗಣಿ ಮಿಶ್ರಿತ ನೀರಿನಿಂದ ‘ಶುದ್ಧೀಕರಿಸಿ’ ಅಸ್ಪೃಶ್ಯತಾ ಆಚರಣೆಯ ತಮ್ಮ ಅಂತರಂಗದ ಗುಣವನ್ನು ಹೊರಹಾಕಿದ್ದಾರೆ. ದಲಿತ ಜನಪ್ರತಿನಿಧಿಗಳ ಕತೆಯೇ ಹೀಗಾದರೆ ಇನ್ನು ಸಾಮಾನ್ಯ ಪರಿಶಿಷ್ಟರ ಸ್ಥಿತಿ ಹೇಗಿರಬೇಡ?

ಅಸ್ಪೃಶ್ಯತಾ ಆಚರಣೆಯನ್ನು ಪರಿಶಿಷ್ಟರು ನಿತ್ಯ ನಿರಂತರ ನೋವಿನಂತೆ ಅನುಭವಿಸುತ್ತಿದ್ದಾರೆ. ಭಯಕ್ಕೋ ಮಾನಕ್ಕೋ ಹೆದರಿ ದೂರು ನೀಡದೇ ಇರುವವರೇ ಹೆಚ್ಚು. ಇಂತಹ ಭಯಭೀತ ವಾತಾವರಣದಲ್ಲಿ ಕಾನೂನನ್ನು ದುರ್ಬಲಗೊಳಿಸಿದರೆ ಪರಿಶಿಷ್ಟರು ನ್ಯಾಯಕ್ಕಾಗಿ ಮೊರೆ ಇಡುವುದಾದರೂ ಎಲ್ಲಿ? ಈ ನಿಟ್ಟಿನಲ್ಲಿ 2018ರ ಮಾರ್ಚ್ 20ರಂದು ತಾನು ನೀಡಿದ್ದ ಇಂತಹ ನಿರ್ದೇಶನವನ್ನು ಕೋರ್ಟ್ ವಾಪಸ್ ಪಡೆದಿರುವುದು ಪರಿಶಿಷ್ಟರ ಹಕ್ಕುಗಳ ಪರ ದನಿಗೆ ಅಕ್ಷರಶಃ ಜೀವ ತುಂಬಿದೆ.

-ರಘೋತ್ತಮ ಹೊ.ಬ., ಮೈಸೂರು

Post Comments (+)