ಮಂಗಳವಾರ, ನವೆಂಬರ್ 19, 2019
22 °C

ಪ್ರತಿಮೆಯಿಂದ ಸಾಧಿಸಿದ್ದಾದರೂ ಏನು?

Published:
Updated:

ಒಬ್ಬ ರಾಜಕೀಯ ಧುರೀಣರು ಒಮ್ಮೆ, ‘ನಮ್ಮ ದೇಶದಲ್ಲಿರುವ ಸಾಕಷ್ಟು ಯೂನಿವರ್ಸಿಟಿಗಳು, ಆಸ್ಪತ್ರೆ, ಕಾಲೇಜುಗಳಿಂದ ಹಿಡಿದು ವಿಮಾನ ನಿಲ್ದಾಣದವರೆಗೂ ನೆಹರೂ ಮತ್ತು ಅವರ ಕುಟುಂಬದವರ ಹೆಸರುಗಳನ್ನು ಇಡಲಾಗಿದೆ. ಈ ದೇಶ ಏನು ಅವರ ಮನೆಯ ಆಸ್ತಿಯೇ’ ಎಂದು ಪ್ರಶ್ನಿಸಿ, ಯುವಪೀಳಿಗೆಯವರ ಕಣ್ಣು ತೆರೆಸಿದ್ದರು. ನಮಗೂ ಹೌದೆನ್ನಿಸಿತ್ತು. ಆದರೆ ಒಮ್ಮೆ ಬೆಂಗಳೂರಿನ ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ, ಅವುಗಳ ಹೆಸರುಗಳಿಗಿಂತ ಆಸ್ಪತ್ರೆಗಳ ಪ್ರಾಮುಖ್ಯ ಬಡವರಿಗೆ ಎಷ್ಟಿದೆ ಎಂಬುದು ತಿಳಿಯಿತು. ಪ್ರತಿದಿನ ಅಲ್ಲಿಗೆ ನೂರಾರು ಬಡ ರೋಗಿಗಳು ಭೇಟಿ ಕೊಡುತ್ತಾರೆ. ಕೆಲವೊಮ್ಮೆ ಹಾಸಿಗೆ ಸಿಗದೆ ಸಂಬಂಧಿಕರೊಂದಿಗೆ ರೋಗಿಗಳೂ ಈಗಲೂ ಆಚೆಯೇ ಮಲಗುತ್ತಿದ್ದಾರೆ. ಒಂದು ಹೊತ್ತಿನ ಊಟ ಮತ್ತು ತಿಂಡಿಗೂ ಹೆಚ್ಚು ಹಣ ಖರ್ಚು ಮಾಡಲಾಗದವರು, ಬಳಿಯೇ ಇರುವ ಇಂದಿರಾ ಕ್ಯಾಂಟೀನ್‍ನಲ್ಲಿ ತಿಂದು ನಿಟ್ಟುಸಿರು ಬಿಡುತ್ತಿದ್ದಾರೆ. ಗಾಂಧಿ ಕುಟುಂಬದವರ ಹೆಸರಿನಲ್ಲಿರುವ ಅದೆಷ್ಟೋ ಶಾಲೆ, ಕಾಲೇಜು, ಯೂನಿವರ್ಸಿಟಿಗಳಲ್ಲಿ ಪ್ರತಿವರ್ಷ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ ಕುಟುಂಬದವರ ಹೆಸರುಗಳಿಗೆ ಸಡ್ಡು ಹೊಡೆಯುವಂತೆ ಈಗ ಸರ್ದಾರ್‌ ಪಟೇಲರ ಪ್ರತಿಮೆಯನ್ನು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿದರು. ಅದರಿಂದ ಬಡಜನರಿಗೆ ಆರೋಗ್ಯವೂ ಇಲ್ಲ, ಶಿಕ್ಷಣವೂ ಇಲ್ಲ. ಅವರು ನಿಜವಾಗಿಯೂ ಜನಪರ ಕಾಳಜಿ ವಹಿಸಿ, ಪ್ರತಿಮೆಯ ಬದಲು ಅದೇ ಖರ್ಚಿನಲ್ಲಿ, ಪಟೇಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನೋ ಅಥವಾ ಪಟೇಲ್ ಯೂನಿವರ್ಸಿಟಿ ಯನ್ನೋ ನಿರ್ಮಿಸಿದ್ದರೆ ಇಂದು ಸಾವಿರಾರು ಬಡಜನರಿಗೆ ಆರೋಗ್ಯ ಸಿಗುತ್ತಿತ್ತು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರ ಹೊಮ್ಮುತ್ತಿದ್ದರು.

ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಬಾಯಲ್ಲಿ ಈಗ ವೀರ ಸಾವರ್ಕರ್, ದೀನ ದಯಾಳ್ ಉಪಾಧ್ಯಾಯ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ. ಒಂದು ವೇಳೆ ಇವರ ಹೆಸರುಗಳನ್ನು ಮುಂಚೂಣಿಗೆ ತರಬೇಕೆಂಬ ಯೋಜನೆ ಏನಾದರೂ ಸರ್ಕಾರಕ್ಕೆ ಇದ್ದರೆ, ದಯಮಾಡಿ ಪ್ರತಿಮೆಗಳನ್ನು ನಿರ್ಮಿಸದೆ, ತೀರಾ ಹಿಂದುಳಿದ ಯಾವುದಾದರೂ ರಾಜ್ಯದಲ್ಲಿ ಆಸ್ಪತ್ರೆಗಳನ್ನೋ, ಶಾಲಾ–ಕಾಲೇಜುಗಳನ್ನೋ ಕಟ್ಟಿಸಿ ಅಲ್ಲಿನ ಬಡ ಜನರಿಗೆ ದಾರಿದೀಪವಾಗಲಿ.

- ಗೋಪಾಲ ನಾಯ್ಕ, ಬೆಂಗಳೂರು

ಪ್ರತಿಕ್ರಿಯಿಸಿ (+)