ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಗಡುವು: ಸಕ್ಕರೆ ಜಪ್ತಿ ಮಾಡಿದ ಡಿ.ಸಿ

ಮಂಡ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಟ್ಟುನಿಟ್ಟಿನ ಕ್ರಮ, ಕಾರ್ಖಾನೆ ಮಾಲೀಕರ ವಿರುದ್ಧ ಚಾಟಿ
Last Updated 9 ಜೂನ್ 2018, 9:06 IST
ಅಕ್ಷರ ಗಾತ್ರ

ಮಂಡ್ಯ: ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಪಾವತಿ ಮಾಡಬೇಕಾಗಿದ್ದ ಬಾಕಿ ಹಣ ಪಾವತಿಗೆ ಜಿಲ್ಲಾಧಿಕಾರಿ ನೀಡಿದ್ದ ಗಡುವು ಮುಗಿದಿದೆ. ಆದೇಶ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ದಾಸ್ತಾನಾಗಿದ್ದ 1,049 ಕ್ವಿಂಟಲ್‌ ಸಕ್ಕರೆ ಜಪ್ತಿ ಮಾಡಿದ್ದಾರೆ.

ರೈತರು ಕಷ್ಟಪಟ್ಟು ಬೆಳೆದು, ಸಕ್ಕರೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಬಾಕಿ ಹಣವನ್ನು ಜೂನ್‌ 5ರೊಳಗೆ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಕಾರ್ಖಾನೆ ಮಾಲೀಕರಿಗೆ ಗಡುವು ನೀಡಿದ್ದರು. ಆದೇಶವನ್ನು ಸಹಜವಾಗಿ ಸ್ವೀಕರಿಸಿದ ಮಾಲೀಕರು ಹಣ ಪಾವತಿ ಮಾಡಲು ಮುಂದಾಗಲಿಲ್ಲ.

ಇದರಿಂದ ಕಾರ್ಯಾಚರಣೆಗಿಳಿದ ಜಿಲ್ಲಾಧಿಕಾರಿ ಸಕ್ಕರೆ ಕಾರ್ಖಾನೆಗಳಲ್ಲಿರುವ ಸಕ್ಕರೆ ದಾಸ್ತಾನು ಜಪ್ತಿ ಮಾಡಿದ್ದಾರೆ. ಡಿ.ಸಿ ಆದೇಶದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶಿವಣ್ಣ ಹಾಗೂ ಮದ್ದೂರು ತಹಶೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡ ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮೇಲೆ ದಾಳಿ ನಡೆಸಿ 1,049 ಕ್ವಿಂಟಲ್‌ ಸಕ್ಕರೆ ಜಪ್ತಿ ಮಾಡಿದೆ.

ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈತರಿಗೆ ಬಾಕಿ ಹಣ ಕೊಡಿಸಲು ಜಿಲ್ಲಾಧಿಕಾರಿಗಳು ಸಕ್ಕರೆ ಜಪ್ತಿಗೆ ಆದೇಶ ನೀಡಿರುವುದು ರೈತರ ಪಾಲಿನ ಆಶಾದಾಯಕ ಬೆಳವಣಿಗೆಯಾಗಿದೆ. ಕಳೆದ ವಾರ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಶೀಘ್ರ ಹಣ ಪಾವತಿಸುವಂತೆ ಸೂಚನೆ ನೀಡಿದ್ದರು. ಇಂತಹ ಹಲವು ಗಡುವು ಕಂಡಿದ್ದ ಮಾಲೀಕರು ಬಾಕಿ ಪಾವತಿಗೆ ಮೀನಮೇಷ ಎಣಿಸಿದ್ದರು. ಆದರೆ ಮಂಜುಶ್ರೀ ಅವರು ಸಕ್ಕರೆ ಜಪ್ತಿ ಮಾಡಿರುವುದು ಕಾರ್ಖಾನೆ ಮಾಲೀಕರಿಗೆ ನುಂಗಲಾಗದ ತುತ್ತಾಗಿದೆ.

ಚಾಂಷುಗರ್‌ ಕಾರ್ಖಾನೆ ಜಿಲ್ಲೆಯಲ್ಲಿ ಅತಿ ಹೆಚ್ಚು ₹ 16 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಜಿಲ್ಲಾಧಿಕಾರಿ ಮೊದಲ ಬಾರಿಗೆ ಚಾಂಷುಗರ್‌ ಕಾರ್ಖಾನೆಯ ಸಕ್ಕರೆಯನ್ನೇ ಜಪ್ತಿ ಮಾಡಿಸಿದ್ದಾರೆ. ಕೊಪ್ಪ ಸಕ್ಕರೆ ಕಾರ್ಖಾನೆ ₹ 5.18 ಕೋಟಿ, ಮೈಷುಗರ್‌ ಕಾರ್ಖಾನೆ ₹ 3.35 ಕೋಟಿ ಬಾಕಿ ಉಳಿಸಿಕೊಂಡಿದೆ.

‘ರೈತರ ಬಾಕಿ ಹಣ ಪಾವತಿ ಮಾಡುವಂತೆ ಜನವರಿಯಿಂದಲೂ ಹಲವು ಬಾರಿ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡಿದ್ದೆ. ಕಳೆದ ವಾರ ಅವರೊಂದಿಗೆ ಸಭೆ ನಡೆಸಿ ಜೂನ್‌ 5ರೊಳಗೆ ಹಣ ಪಾವತಿ ಮಾಡುವಂತೆ ಗಡುವು ನೀಡಿದ್ದೆ. ಆದರೆ ಅವರು ಹಣ ಪಾವತಿ ಮಾಡದ ಕಾರಣ ನಿಯಮದಂತೆ ಜಪ್ತಿ ಮಾಡಿಸಿದ್ದೇನೆ.

ಸಕ್ಕರೆ ಹರಾಜು ಮಾಡಿ ರೈತರ ಬಾಕಿ ವಿತರಣೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಜೂನ್‌ 30ರೊಳಗೆ ಸಂಪೂರ್ಣ ಬಾಕಿ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ. ನಿಗದಿತ ಅವಧಿಯೊಳಗೆ ಬಾಕಿ ನೀಡದಿದ್ದರೆ ಸಕ್ಕರೆ ಹರಾಜು ಹಾಕಲಾಗುವುದು’ ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲವು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಗಡುವು ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾರೂ ಸಕ್ಕರೆ ಜಪ್ತಿ ಮಾಡುವಂತಹ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಆದರೆ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಮೊದಲ ಬಾರಿಗೆ ಸಕ್ಕರೆ ಜಪ್ತಿ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ’ ಎಂದು ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ ಹೇಳಿದರು.

ಕಬ್ಬು ಅರೆಯಲು ಸೂಚನೆ: ಜಿಲ್ಲೆಯಲ್ಲಿ 5,500 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆ ಕಟಾವಿಗೆ ಬಂದಿದ್ದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಜೂನ್‌ 31ರೊಳಗೆ ಕಬ್ಬು ನುರಿಯಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಶೀಘ್ರ ನೀಡಬೇಕು. ಜೊತೆಗೆ ಕಾರ್ಖಾನೆಗಳಲ್ಲಿ ಈ ಕುರಿತು ಮಾಹಿತಿ ಫಲಕ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದ್ದಾರೆ.

ತುರ್ತು ಸಭೆ ಕರೆಯಲು ಒತ್ತಾಯ: ಮೈಷುಗರ್‌ ಖಾರ್ಕಾನೆಗೆ 2.80 ಲಕ್ಷ ಟನ್‌ ಕಬ್ಬು ಪೂರೈಸಲು ರೈತರು ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ ಮೊದಲ ವಾರದಲ್ಲೇ ಮೈಷುಗರ್‌ ಕಬ್ಬು ಅರೆಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ‘2.80 ಲಕ್ಷ ಟನ್‌ ಅಲ್ಲದೆ ಒಪ್ಪಿಗೆಯಾಗದ 2.70 ಲಕ್ಷ ಟನ್‌ ಕಬ್ಬು ಮೈಷುಗರ್‌ಗೆ ದೊರೆಯುತ್ತದೆ. ಕಾರ್ಖಾನೆಗೆ ಕಬ್ಬಿನ ಕೊರತೆ ಎದುರಾಗುವುದಿಲ್ಲ. ಸಿ.ಎಸ್‌.ಪುಟ್ಟರಾಜು ಅಥವಾ ಡಿ.ಸಿ.ತಮ್ಮಣ್ಣ ಯಾರೇ ಉಸ್ತುವಾರಿ ಸಚಿವರಾದರೂ ಶೀಘ್ರ ಕಾರ್ಖಾನೆ ಅಧಿಕಾರಿಗಳ ತುರ್ತು ಸಭೆ ಕರೆದು ಕಬ್ಬು ಅರೆಯಲು ಸೂಚನೆ ನೀಡಬೇಕು’ ಎಂದು ಶಂಭೂನಹಳ್ಳಿ ಕೃಷ್ಣ ಒತ್ತಾಯಿಸಿದರು.

₹ 55 ಎಫ್‌ಆರ್‌ಪಿ ಏರಿಕೆ

ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ನ್ಯಾಯಯುತ ದರ (ಎಫ್‌ಆರ್‌ಪಿ)ವನ್ನು ಕೇಂದ್ರ ಸರ್ಕಾರ ₹ 2605ಕ್ಕೆ ಹೆಚ್ಚಿಸಿದೆ. ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ನ್ಯಾಯಯುತ ದರ ಹೆಚ್ಚಳ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್‌ನಿಂದ ಆರಂಭವಾಗುವ ಈ ಸಕ್ಕರೆ ಹಂಗಾಮಿನಲ್ಲೇ ರೈತರಿಗೆ ಹೊಸ ದರ ನೀಡಬೇಕು ಎಂದು ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದೆ. ಈ ಮೊದಲು ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹ 2,550 ನ್ಯಾಯಯುತ ದರ ನಿಗದಿ ಮಾಡಿತ್ತು. ಈಗ ₹ 2,605ಕ್ಕೆ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT