ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ- ಮೀಸಲಾತಿಯ ಪರಿಕಲ್ಪನೆ: ಚರ್ಚೆ ಅಗತ್ಯ

Last Updated 22 ಫೆಬ್ರುವರಿ 2021, 19:43 IST
ಅಕ್ಷರ ಗಾತ್ರ

‘ಮೀಸಲಾತಿಯ ಮೇಲಾಟದ ಅಪಾಯ’ ಎಂಬ ಲೇಖನದಲ್ಲಿ (ಪ್ರ.ವಾ., ಫೆ. 19) ನಾರಾಯಣ ಎ. ಅವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಶ್ರೀಗಳನ್ನು ಜಾತಿಶ್ರೀಗಳು ಎಂದು ಸಂಬೋಧಿಸಿರುವುದು ವಿಷಾದನೀಯ. ಈ ಶ್ರೀಗಳು ಕೂಡ ಭಾರತದ ಪ್ರಜೆಗಳಾಗಿ ತಮ್ಮ ಹಾಗೂ ತಮ್ಮ ಸಮುದಾಯದ ತೊಳಲಾಟವನ್ನು ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಹಕ್ಕನ್ನು ಹೊಂದಿರುತ್ತಾರೆ. ಅವರ ಮೀಸಲಾತಿಯ ಹೋರಾಟವನ್ನು ರಾಜಕೀಯಪ್ರೇರಿತ ಒಳಸಂಚು ಹಾಗೂ ಅವರ ಹೋರಾಟವೇ ಅತಾರ್ಕಿಕ ಎಂದು ಬಿಂಬಿಸುವುದು ಅಥವಾ ಊಹಿಸುವುದು ಸರಿಯಲ್ಲ.

ನ್ಯಾಯಾಂಗಕ್ಕೆ ಹೋದರೆ ನ್ಯಾಯ ಸಿಗುತ್ತದೆ ಎಂಬ ಖಾತರಿ ಇಲ್ಲ ಎನ್ನುವ ಸುಪ್ರೀಂ ಕೋರ್ಟಿನ ಒಬ್ಬ ನಿವೃತ್ತ ಮುಖ್ಯ ನ್ಯಾಯಮೂರ್ತಿಯವರ ಹೇಳಿಕೆಯನ್ನು ಮೀಸಲಾತಿಯೊಂದಿಗೆ ತಳುಕು ಹಾಕುವುದು ಅಸಂಬದ್ಧವಾಗು
ತ್ತದೆ. ಮೀಸಲಾತಿಯನ್ನು ಒಳಗೊಂಡಿರುವ ಶಾಸಕಾಂಗ ಹಾಗೂ ಕಾರ್ಯಾಂಗಗಳಲ್ಲಿಯೂ ನಾವು ಗುಣಮಟ್ಟ, ದಕ್ಷತೆ, ಕಾರ್ಯಕ್ಷಮತೆಗಳಲ್ಲಿ ಅನೇಕ ಲೋಪದೋಷಗಳನ್ನು ಕಾಣಬಹುದಾಗಿದೆ. ಮೀಸಲಾತಿ ಇಲ್ಲದೆಯೇ ಅರ್ಹತೆಯ ಆಧಾರದ ಮೇಲೆ ಭಾರತಮಾತೆಗಾಗಿ ನಿಸ್ವಾರ್ಥ, ದಕ್ಷ, ಕಾರ್ಯಕ್ಷಮತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಗೌರವಾನ್ವಿತ ಸೇನಾಪಡೆಗಳು ಹಾಗೂ ತಮ್ಮ ಸಾಧನೆಗಳ ಮೂಲಕ ಭಾರತದ ಪ್ರತಿಷ್ಠಿತ ಸಂಸ್ಥೆ ಇಸ್ರೊ, ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವುದಕ್ಕೆ ಮೇರು ನಿದರ್ಶನಗಳಾಗಿವೆ.

ಮೀಸಲಾತಿಗೆ ಅರ್ಹರಾಗಿದ್ದರೂ ಮೀಸಲಾತಿಯ ಲಾಭವನ್ನು ಪಡೆಯದೆ ಕೋಟ್ಯಂತರ ಜನ ಸಂಕಷ್ಟದಲ್ಲಿರುವುದು ಎಷ್ಟು ಸತ್ಯವೋ ಮೇಲ್ವರ್ಗದವರಲ್ಲಿಯೂ ಶೋಷಿತರಾಗಿ, ಆರ್ಥಿಕವಾಗಿ ಹಿಂದುಳಿದವರಾಗಿ, ದುರ್ಬಲ ಧ್ವನಿವಿಹೀನರಾಗಿ ಇರುವುದು ಅಷ್ಟೇ ಕಟು ಸತ್ಯವಾಗಿದೆ. ದಶಕಗಳಿಂದಲೂ ಪಾಲಿಸಿಕೊಂಡುಬಂದ, ಅವೈಜ್ಞಾನಿಕ ಮೀಸಲಾತಿ ನೀತಿಯನ್ನು ಒಮ್ಮೆ ಚರ್ಚೆಗೊಳಪಡಿಸಿ, ನಿಜವಾಗಿಯೂ ಶೋಷಿತರು, ಆರ್ಥಿಕವಾಗಿ ಹಿಂದುಳಿದವರು, ದುರ್ಬಲರನ್ನು ಗುರುತಿಸಿ ಅವರಿಗೆ ಮೀಸಲಾತಿ ದೊರಕಿಸಿಕೊಡುವಂತಹ ಕೆಲಸವನ್ನು ಮೀಸಲಾತಿಯ ಲಾಭವನ್ನು ಪಡೆಯುತ್ತಿರುವವರು ಹಾಗೂ ಮೀಸಲಾತಿಗಾಗಿ ಹೋರಾಡುತ್ತಿರುವವರು ಒಟ್ಟಾಗಿ ಮಾಡಬೇಕಾದುದು ಆದ್ಯ, ಜವಾಬ್ದಾರಿಯುತ ಕರ್ತವ್ಯವಾಗಿದೆ.

ಮಹೇಶ್ ಸಿ.ಎಚ್., ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT