ಭಾನುವಾರ, ಏಪ್ರಿಲ್ 11, 2021
32 °C

ವಾಚಕರ ವಾಣಿ: ರೈತ ಚಳವಳಿ ಮತ್ತು ಬರಹಗಾರರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೈತ ಚಳವಳಿ ಬಗ್ಗೆ ಬರಹಗಾರರ ಮೌನವೇಕೆ?’ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ವ್ಯಗ್ರರಾಗಿ ಪ್ರಶ್ನಿಸಿದ್ದಾರೆ (ಪ್ರ.ವಾ., ಫೆ. 21). ಬರಹಗಾರರೆಲ್ಲರೂ ಅದನ್ನು ವಿರೋಧಿಸಲೇ ಬೇಕಾದದ್ದು ನೈತಿಕ ಕರ್ತವ್ಯವಾಗಿದ್ದು, ಏಕೆ ವಿರೋಧಿಸುತ್ತಿಲ್ಲವೆಂಬ ಧ್ವನಿ ಅವರ ಮಾತಿನಲ್ಲಿ ಅಡಗಿರುವಂತಿದೆ. ರೈತ ಚಳವಳಿ ಈಗ ಕೇವಲ ರೈತ ಚಳವಳಿಯಾಗಿ ಉಳಿಯದೆ ಅದನ್ನು ರಾಜಕೀಯಗೊಳಿಸಲಾಗಿದೆ ಎಂಬುದು ಸೂರ್ಯಸ್ಪಷ್ಟ. ಇನ್ನು ದೇಶದ ಬುದ್ಧಿಜೀವಿಗಳೆನಿಸಿಕೊಂಡ ಬರಹಗಾರರು ಕೂಡ ಕೇವಲ ಬರಹಗಾರರಾಗಿ ಉಳಿದಿಲ್ಲ. ಕಾಂಗ್ರೆಸ್ ಬರಹಗಾರರು, ಕಮ್ಯುನಿಸ್ಟ್ ಬರಹಗಾರರು, ಬಿಜೆಪಿ ಬರಹಗಾರರು ಮತ್ತು ಪಕ್ಷೇತರ ಬರಹಗಾರರು ಎಂದೆಲ್ಲ ವಿಭಕ್ತಗೊಂಡಿರುವುದು ಕೂಡ ಸುಳ್ಳೇನಲ್ಲ. ಕೆಲವರಂತೂ ಕೆಲವು ರಾಜಕೀಯ ಪಕ್ಷಗಳ ಸಕ್ರಿಯ ಸದಸ್ಯರಾಗಿ, ವಕ್ತಾರರಾಗಿ, ಚುನಾವಣಾ ಪ್ರಚಾರದಲ್ಲೂ ತೊಡಗಿಸಿಕೊಂಡಿರುವುದು ಮತ್ತು ಅಂಥವರು ಆ ಪಕ್ಷಗಳ ನಿಲುವುಗಳನ್ನು ಸಮರ್ಥಿಸುವುದು ತಮ್ಮ ನೈತಿಕ ಕರ್ತವ್ಯವೆಂದು ತಿಳಿದು ಅದರಂತೆ ನಡೆದುಕೊಳ್ಳುತ್ತಿರುವುದೂ ತಿಳಿದೇ ಇದೆ. ಹಾಗಿರುವಾಗ ಬರಹಗಾರರೆಲ್ಲರೂ ಯಾವುದೇ ವಿಷಯವನ್ನಾಗಲಿ ಏಕಕಂಠದಿಂದ ಸಮರ್ಥಿಸುತ್ತಾರೆಂದಾಗಲಿ ಅಥವಾ ಸಮರ್ಥಿಸಬೇಕೆಂದಾಗಲಿ, ವಿರೋಧಿಸುತ್ತಾ ರೆಂದಾಗಲಿ ಅಥವಾ ವಿರೋಧಿಸಬೇಕೆಂದಾಗಲಿ ಅದು ಹೇಗೆ ಬಿಳಿಮಲೆಯವರು ಆಶಿಸಿದ್ದಾರೋ ತಿಳಿಯದು.

ಯಾವುದನ್ನು ಇವರು ನವ ವಸಾಹತುಶಾಹಿ ಎಂದು ಹೇಳುತ್ತಾರೋ ಅದು ಈ ದೇಶಕ್ಕೆ ಕಾಲಿಟ್ಟು ಹಲವು ದಶಕಗಳೇ ಸಂದಿವೆ. ಅಂಥ ನವ ವಸಾಹತುಶಾಹಿಯನ್ನು ಅನುಮಾನದಿಂದ ನೋಡುತ್ತಿದ್ದ ರಾಜಕೀಯ ಮುಂದಾಳು ಗಳು, ಚಿಂತಕರು ಆನಂತರ ಅದರ ಸಮರ್ಥಕರಾಗಿ ಅದನ್ನು ತೆರೆದ ತೋಳುಗಳಿಂದ ಸ್ವಾಗತಿಸಿ ಅಪ್ಪಿಕೊಂಡದ್ದೂ ಈಗಾಗಲೇ ಇತಿಹಾಸ.

ಡಾ. ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.