ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಆಡುಭಾಷೆಯಲ್ಲಿ ಶುದ್ಧತೆ ಎಂಬುದುಂಟೇ?

Last Updated 13 ಡಿಸೆಂಬರ್ 2021, 18:56 IST
ಅಕ್ಷರ ಗಾತ್ರ

ಭಾಷೆ ಎಂಬುದೊಂದು ಆಯುಧವಿದ್ದಂತೆ. ಅದು ಕಾಯಲೂ ಬಲ್ಲದು, ಕೊಲ್ಲಲೂ ಬಲ್ಲದು. ಒಂದು ಸಮೂಹದ ಸೊಲ್ಲಡಗಿಸಿದರೆ ಆ ಸಮೂಹವೇ ಅವಸಾನವಾದಂತೆ. ಒಟ್ಟಾರೆ ನಾವು ಹೇಳಬೇಕಾದ್ದು ನಮ್ಮೆದುರಿನ ವ್ಯಕ್ತಿಗೆ ಸಂವಹನಗೊಂಡರೆ ಸಾಕು. ಅಲ್ಲಿಗೆ ಆ ಭಾಷೆಯ ಕೆಲಸ ಮುಗಿಯಿತು. ಲಾಕ್ಷಣಿಕರು ಅದಕ್ಕೆ ಕಟ್ಟು–ಕಟ್ಟಲೆ ಹಾಕ ಹೋದರೆ ಜೀವಂತ ಭಾಷೆ ಬಗ್ಗುವುದಿಲ್ಲ. ಪಾಣಿನಿಯ ಲಕ್ಷಣಸೂತ್ರಗಳಿಂದ ಸಂಸ್ಕೃತ ಭಾಷೆಯು ಆಡುಮಾತಿನಿಂದ ದೂರವಾಯಿತು.ಹಾಗೆಯೇ ಕನ್ನಡ ನುಡಿಯ ಉಚ್ಚಾರಣೆಗೂ ಲಕ್ಷಣಸೂತ್ರಗಳನ್ನು ಬಿಗಿದರೆ ಅದು ಬಗ್ಗುವುದಿಲ್ಲ. ಯಾವುದೇ ಭಾಷೆಯು ಅದನ್ನಾಡುವವರ ಸ್ವತ್ತು. ಉದಾಹರಣೆಗೆ ಕಲಿತ ಮೇಲೆ ಕನ್ನಡವಿರಲೀ, ಇಂಗ್ಲಿಷ್– ಹಿಂದಿ ಇರಲೀ ಬೇರಾವುದೇ ಭಾಷೆಯಾಗಿರಲಿ ಅದು ಆಡುವವರ ಕಾಮಧೇನು.

ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು, ಬೆಂಗಳೂರು ನಗರ ಕನ್ನಡಿಗರ ಉಚ್ಚಾರಣೆ ಸರಿಯಿಲ್ಲವೆಂದು ‘ಅ’ ಕಾರ ಮತ್ತು ‘ಹ’ ಕಾರ ದೋಷವನ್ನು ಹಿಡಿವ ಮಡಿವಂತಿಕೆಯನ್ನು ಮೆರೆಯುತ್ತಿದ್ದಾರೆ. ಕನ್ನಡ ಭಾಷೆಗೆ ತನ್ನದೇ ಆದ ಜಾನಪದ ಸೊಗಡಿದೆ. ಇಂಥ ಜನಪದರ ಆಡುಭಾಷೆಯಲ್ಲಿ ‘ಅ’ ಕಾರ ಮತ್ತು ‘ಹ’ ಕಾರ ದೋಷವನ್ನು ಹುಡುಕುವುದು ಭಾಷಾ ಶುದ್ಧಿಯ ವ್ಯಸನ. ದೇವನೂರ ಮಹಾದೇವ ಅವರು ನಂಜನಗೂಡು ಉಪಭಾಷೆಯಲ್ಲಿ ಬರೆದ ‘ಕುಸುಮಬಾಲೆ’ಯ ಸೊಗಡನ್ನು ಇಂಥ ಮಡಿವಂತರು ಅರಿಯಬಲ್ಲರೇ?
ಪ್ರೊ. ಶಿವರಾಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT