ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಶುರಾಮ ಪರ ಪೋಸ್ಟ್‌ ವೈರಲ್‌..!

ನೀಲಕಂಠ ಕಂದಗಲ್ ಫೇಸ್‌ಬುಕ್‌ ಖಾತೆಯಲ್ಲಿ ಮೆಚ್ಚುಗೆ
Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಬಂಧಿತನಾಗಿರುವ ಶ್ರೀರಾಮಸೇನೆಯ ಸಕ್ರಿಯ ಕಾರ್ಯಕರ್ತ ಪರಶುರಾಮ ವಾಘ್ಮೋರೆ ಪರ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್‌ ಮಾಡಲಾಗಿರುವ ಪೋಸ್ಟ್‌ವೊಂದು ವೈರಲ್‌ ಆಗಿದೆ.

ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ನೀಲಕಂಠ ಕಂದಗಲ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪರಶುರಾಮ ಪರ ಪೋಸ್ಟ್‌ವೊಂದನ್ನು ಅಪ್‌ಡೇಟ್‌ ಮಾಡಿದ್ದಾರೆ.

‘ಪರಶುರಾಮ ವಾಘ್ಮೋರೆ, ಧರ್ಮ ರಕ್ಷಕ ಎಂದು ಅವರ ಭಾವಚಿತ್ರದ ಪಕ್ಕ ಬರೆಯಲಾಗಿದ್ದು, ಫೋಟೋ ಮೇಲ್ಭಾಗದಲ್ಲಿ ಮಾತೃ ಭೂಮಿಯ ರಕ್ಷಣೆಗಾಗಿ ಮುಡುಪಾಗಿದೆ ನನ್ನ ಪ್ರಾಣ, ಕೆಳಭಾಗದಲ್ಲಿ ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ’ ಎಂಬ ಅಡಿ ಬರಹವಿದೆ.

ಕಂದಗಲ್‌ ಈ ಪೋಸ್ಟ್‌ ಅಪ್‌ಡೇಟ್‌ ಮಾಡಿದ ಕೆಲ ಗಂಟೆಗಳಲ್ಲೇ 240 ಮಂದಿ ಲೈಕ್‌ ಮಾಡಿದ್ದರೆ, 15 ಮಂದಿ ಕಾಮೆಂಟ್‌ ಮಾಡಿದ್ದು, 11 ಮಂದಿ ಹಂಚಿಕೊಂಡಿದ್ದಾರೆ.

‘ಬಹಳ ವರ್ಷಗಳಿಂದ ಪರಶುರಾಮನನ್ನು ನೋಡಿದ್ದೇನೆ. ಅವನೊಬ್ಬ ಅಪ್ಪಟ ಹಿಂದೂವಾದಿ. ಹಿಂದೂ ರಕ್ಷಕ ಶ್ರೀರಾಮ ಸೇನೆಗೂ ಪರಶುರಾಮನಿಗೂ ಸಂಬಂಧವಿಲ್ಲ. ಅಭಿಮಾನದಿಂದ ಮಾತ್ರ ಈ ಪೋಸ್ಟ್ ಅಪ್‌ಡೇಟ್‌ ಮಾಡಿರುವೆ’ ಎಂದು ಕಂದಗಲ್ಲ ಪ್ರತಿಕ್ರಿಯೆ ನೀಡಿದರು.

ಎಸ್‌ಐಟಿ ಬುಲಾವ್‌: ಪರಶುರಾಮ ತಂದೆ ಅಶೋಕ ವಾಘ್ಮೋರೆ ಅವರಿಗೆ ಬೆಂಗಳೂರಿನ ಕಚೇರಿಗೆ ಬರುವಂತೆ ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನು ಖಚಿತಪಡಿಸಿರುವ ಅವರು ಅಲ್ಲಿಗೆ ಹೋಗುವುದಾಗಿ ಹೇಳಿದ್ದಾರೆ. ‘ನನ್ನ ಮಗ ಯಾವುದೇ ತಪ್ಪು ಎಸಗಿಲ್ಲ. ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವೆ’ ಎಂದು ಅಶೋಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಶುರಾಮನ ತಾಯಿ ಜಾನಕಿಬಾಯಿ ಮತ್ತೆ ಅಸ್ವಸ್ಥರಾಗಿದ್ದಾರೆ. ಮನೆಯಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ.

ಅಗಸರ ಅಳಲು: ‘ವಿಚಾರಣೆಗಾಗಿ ಎಂದು ತಮ್ಮ ಮಗನನ್ನು ಎಸ್‌ಐಟಿ ಪೊಲೀಸರು ಕರೆದೊಯ್ದಿದ್ದಾರೆ. ಇದೂವರೆಗೆ ನ್ಯಾಯಾಲಯಕ್ಕೂ ಹಾಜರುಪಡಿಸಿಲ್ಲ. ಮನೆಗೂ ವಾಪಸ್‌ ಕಳುಹಿಸಿಲ್ಲ. ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ’ ಎಂದು ಸುನೀಲ ಅಗಸರ ತಂದೆ ಮಡಿವಾಳಪ್ಪ ಅಗಸರ ಅಳಲು ತೋಡಿಕೊಂಡರು.

‘ಸುನೀಲ, ಬಟ್ಟೆ ಇಸ್ತ್ರಿ ಮಾಡಿಕೊಂಡು ಕುಟುಂಬವನ್ನು ಪೋಷಿಸುತ್ತಿದ್ದ. ಇದೀಗ ಅವನಿಲ್ಲದಿರುವುದರಿಂದ ನಾವು ದಿನ ದೂಡುವುದೇ ದುಸ್ತರವಾಗಿದೆ’ ಎಂದು ತಾಯಿ ನಂದಾಬಾಯಿ ‘ಪ್ರಜಾವಾಣಿ’ ಬಳಿ ರೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT