ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ಶಿಕ್ಷಣ ಶಿಕ್ಷಣವಲ್ಲ...

Last Updated 28 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಎಂಟನೇ ತರಗತಿ ಹುಡುಗನೊಬ್ಬ ಬರೆದ ಪ್ರೇಮಪತ್ರ ಶಿಕ್ಷಕರ ಕೈಗೆ ಸಿಕ್ಕಿ, ಅಪ್ಪ-ಅಮ್ಮನನ್ನು ಕರೆತರುವಂತೆ ಹೇಳಿದ್ದಕ್ಕೆ ಆತ ಹೆದರಿ ನೇಣು ಹಾಕಿಕೊಂಡದ್ದನ್ನು ಹೇಳುತ್ತಾ ಡಾ. ಕೆ.ಎಸ್.ಪವಿತ್ರ ಅವರು, ಹದಿಹರೆಯದ ಸಮಸ್ಯೆಗಳ ಬಗೆಗೆ ಆತ್ಮಾವಲೋಕನದ ತುರ್ತಿದೆ ಎಂದಿದ್ದಾರೆ (ಸಂಗತ, ಫೆ.20). ಸಂಕ್ಷಿಪ್ತವಾಗಿ ಹೇಳುವ ಭರದಲ್ಲೋ ಏನೋ ಮಕ್ಕಳ ಮನೋಧರ್ಮವನ್ನು ಅರಿಯುವ ಅನಿವಾರ್ಯವನ್ನು ಬಿಟ್ಟುಕೊಟ್ಟು ಬೇರೆಲ್ಲ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಹೆತ್ತವರ ಬರಹೇಳಿ ಶಿಕ್ಷಕರು ಕರ್ತವ್ಯ ಪಾಲಿಸಿದ್ದಾರೆ ಎಂದಿರುವುದು, ಅವರು ಶಿಕ್ಷಕರ ಪರ ವಹಿಸಿ ಮಾತನಾಡಿದಂತೆ ಕೇಳಿಸುತ್ತದೆ. ಮಕ್ಕಳನ್ನು ಅವರಷ್ಟಕ್ಕೆ ಬಿಡಲೇಬಾರದು ಎಂಬ ಧ್ವನಿಯೂ ಅವರ ಮಾತುಗಳಲ್ಲಿ ಅಡಗಿರುವಂತಿದೆ.

ಆ ಪುಟ್ಟಮನಸ್ಸಿನ ತಳಮಳಗಳನ್ನು ನಾವು ಕಲ್ಪಿಸಿಕೊಳ್ಳುವುದು ಒಳಿತು. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಶಾಲೆಯವರು ‘ಅಪ್ಪ ಅಮ್ಮನನ್ನು ಕರೆದು ತಾ’ಎಂದರೆ ಅವನು ಯಾವುದೋಘೋರ ಅಪರಾಧವನ್ನೇ ಮಾಡಿದ್ದಾನೆ ಎಂದರ್ಥ; ಯಾವ ಶಾಲೆಯ ಮಕ್ಕಳನ್ನು ಬೇಕಾದರೂ ಕೇಳಿ ನೋಡಿ. ಆ ಸಂದರ್ಭ ಹುಟ್ಟಿಸಿದ ತಲ್ಲಣಗಳನ್ನು ನಿಭಾಯಿಸುವಷ್ಟು ಆತ ಸಮರ್ಥನಾಗಿರಲಿಲ್ಲ. ಪಾಪಪ್ರಜ್ಞೆ ಬೆಳೆಸಿಕೊಂಡು, ಮುಂದೇನಾಗುವುದೋ ಎಂದು ಹೆದರಿ ಆತ ಸಾವಿನ ದಾರಿ ಹಿಡಿದಿದ್ದಾನೆ.

ಎಲ್ಲದಕ್ಕೂ ಸಾಮಾಜಿಕ ಮಾಧ್ಯಮಗಳನ್ನೇ ಕಾರಣವಾಗಿಸುವುದು ಹೊಸ ಕ್ಲೀಷೆಯಾಗಿಬಿಟ್ಟಿದೆ. ಹುಡುಗ-ಹುಡುಗಿ ಇರುವವರೆಗೆ ಪ್ರೇಮ ಇದ್ದೇ ಇರುತ್ತದೆ ಮತ್ತು ಇಂತಹ ಸಂಗತಿಗಳು ಹಿಂದೆಯೂ ಅದೆಷ್ಟು ನಡೆದಿಲ್ಲ! ಪ್ರೇಮ ಅಥವಾ ಕಾಮ ಬದುಕಿನ ಬಲುದೊಡ್ಡ ಶಕ್ತಿಗಳು. ಇವುಗಳ ಬಗೆಗೆ ಅಸ್ಪಷ್ಟ ಭಾವಗಳು ಮೂಡುವ ಪ್ರಾಯ ಆತನದು. ಎಲ್ಲವನ್ನೂ ಕುತೂಹಲದಿಂದ ಕಾಣುವ ಕಣ್ಣುಗಳಿಗೆ ಪ್ರೇಮವೂ ವಸ್ತುವಾದೀತು ಎಂಬುದರಲ್ಲಿ ವಿಶೇಷವೇನೂ ಇಲ್ಲ. ಇಲ್ಲಿಗೂ, ‘ಹದಿಹರೆಯದ ಪ್ರೇಮಪ್ರಕರಣ’ ಎಂದಿರುವುದಕ್ಕೂ ಸಂಬಂಧವೇ ಇಲ್ಲ. ಇನ್ನು, ಮಕ್ಕಳು ನಡೆದುದನ್ನೆಲ್ಲ ಹೇಳಿದರೆ ತಾಳ್ಮೆಯಿಂದ ಕೇಳಿಸಿಕೊಳ್ಳುವ ಶಿಕ್ಷಕರೂ ಇಲ್ಲ; ಹೆತ್ತವರಂತೂ ಅಪರೂಪದಲ್ಲಿ ಅಪರೂಪ. ಪ್ರತಿಯೊಬ್ಬನೂ ಕೇಳುವವನ ಮನಸ್ಥಿತಿಯನ್ನು ನೋಡಿಕೊಂಡೇ ಹೇಳಬೇಕೆನಿಸಿದ್ದನ್ನು ಮಾತ್ರವೇ ಹೇಳುತ್ತಾನೆ ಮತ್ತು ಪ್ರತಿಯೊಂದು ಮನಸ್ಸಿಗೂ ಅಡಗಿಸಿ ಇಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿದ್ದೇ ಇರುತ್ತವೆ ಎಂಬುದನ್ನು ನಾವು ಮರೆಯಬಾರದು.

ಶಾಲೆಯಲ್ಲಿ ಬದುಕಿನ ಪಾಠ ಕಲಿಯಬೇಕಾಗಿದ್ದವಿದ್ಯಾರ್ಥಿಯೊಬ್ಬ, ಕ್ಷುಲ್ಲಕ ಕಾರಣಕ್ಕಾಗಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂದರೆ, ನಮ್ಮ ಶಿಕ್ಷಣದಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು? ಅವಮಾನ, ಅವಹೇಳನಗಳನ್ನು ನಿಭಾಯಿಸುವಲ್ಲಿ ನಮ್ಮ ಮಕ್ಕಳು ಸೋಲುತ್ತಿದ್ದಾರೆ ಎಂಬುದು ಒಪ್ಪತಕ್ಕಂತ ಮಾತೇ. ಆದರೆ ಅವುಗಳನ್ನೆಲ್ಲ ನಾನು ಶಾಲೆಗಿಂತ ಹೆಚ್ಚಾಗಿ ಬೇರೆಲ್ಲೂ ಎದುರಿಸಿಲ್ಲ ಎಂದು ಹೇಳಲು ಬೇಸರವಾಗುತ್ತದೆ. ನಾನು ಶಾಲೆ ಮುಗಿಸಿ ಹತ್ತು ವರ್ಷಗಳಾದುವಷ್ಟೆ. ಭಾರತದಂತಹ ದೇಶದಲ್ಲಿ ಹತ್ತು ವರ್ಷದಲ್ಲಿ ಏನೇನೂ ಬದಲಾವಣೆಗಳಾಗುವುದಿಲ್ಲವಲ್ಲ! ‘ಇಂದಿನ ಶಿಕ್ಷಣ ಶಿಕ್ಷಣವಲ್ಲ-ಶಿಶು ಹತ್ಯೆ’ ಎಂದು ಶಿವರಾಮ ಕಾರಂತರು ಹೇಳಿದ್ದು ನಿನ್ನೆಯೋ ಮೊನ್ನೆಯೋ ಇರಬೇಕು ಎಂಬಂತೆ ನನಗೆ ಭಾಸವಾಗುತ್ತದೆ.

-ಶ್ರೀರಂಜನ್,ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT