ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ

ಅಂಬೇಡ್ಕರ್‌ ಜಯಂತಿ: ನಿವೃತ್ತ ಶಿಕ್ಷಕ ರಂಗಸ್ವಾಮಿ ಅಭಿಮತ
Last Updated 15 ಏಪ್ರಿಲ್ 2018, 6:48 IST
ಅಕ್ಷರ ಗಾತ್ರ

ಬೀರೂರು: ಜಗತ್ತಿನ ಅತಿಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದಲಿತರಿಗೆ ಮಾತ್ರ ಸೀಮಿತಗೊಳಿಸುವುದು ಅವರ ಸರ್ವರಿಗೂ ಸಮಬಾಳು ಚಿಂತನೆಗೆ ಮಾಡುವ ಅಪಮಾನ ಎಂದು ನಿವೃತ್ತ ಶಿಕ್ಷಕ ರಂಗಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಸರಸ್ವತೀಪುರಂ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನದ ಅಂಗವಾಗಿ ಆರಂಭಿಸಲಾದ ಅಂಬೇಡ್ಕರ್ ಯುವಕ ಸಂಘಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಮ್ಮ ಏಳಿಗೆಯ ನೇತಾರರು ನಾವೇ, ನಮ್ಮ ದಾಸ್ಯ ತೊಲಗಿಸಲು ನಾವೇ ಮುಂದಾಗಬೇಕು. ಬೇರೆಯವರ ಸಹಕಾರ ನಿರೀಕ್ಷಿಸುವುದು ದೌರ್ಬಲ್ಯ ಸಂಕೇತ. ಇದಕ್ಕಾಗಿ ಶಿಕ್ಷಣದ ಸಾರ್ವತ್ರೀಕರಣ ಪ್ರಮುಖ ಅಗತ್ಯ ಎಂದು ಪ್ರತಿಪಾದಿಸಿ, ಶೋಷಿತರನ್ನು ಶಿಕ್ಷಣದ ಮೂಲಕವೇ ಜಾಗೃತಗೊಳಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಆಶಯದೊಂದಿಗೆ ಬಾಳಿದ ಮಹಾನ್‍ ಚೇತನ ಡಾ.ಅಂಬೇಡ್ಕರ್' ಎಂದು ಬಣ್ಣಿಸಿದರು.
" ಡಾ. ಬಾಬಾ ಸಾಹೇಬರು ತಮ್ಮ ಚಿಂತನೆಗಳು ಮತ್ತು ವಿಶ್ವದ ಎಲ್ಲ ಸಂವಿಧಾನಗಳನ್ನು ಅಭ್ಯಸಿಸಿ ಅದರ ಆಧಾರದ ಮೇಲೆ ನಮ್ಮ ದೇಶಕ್ಕೆ ಲಿಖಿತ ಸಂವಿಧಾನ ರೂಪಿಸಿದ ಆಶಯಗಳು ಇಂದು ಹಲವು ಸಂದರ್ಭದಲ್ಲಿ ದುರ್ಬಲವಾಗುವ ಸ್ಥಿತಿ ಎದುರಾಗಿದೆ. ಜತೆಗೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಸಮೀಪಿಸುತ್ತಿದ್ದರೂ ದಲಿತರು, ದಮನಿತರು ಮೀಸಲಾತಿ ಆಧಾರದಲ್ಲಿ ಬದುಕು ಸಾಗಿಸುವಂತಾಗಿದೆಯೇ ಹೊರತು, ಅವರು ಸಮಾಜದ ಮುಖ್ಯವಾಹಿನಿಯ ಪ್ರಮುಖ ಭಾಗವಾಗಲು ಸಾಧ್ಯವಾಗದಿರುವುದು ದುರಂತವೇ ಸರಿ. ಎಂತಹ ಸಂದರ್ಭ ಬಂದರೂ ಅಂಬೇಡ್ಕರ್ ವಿಚಾರಧಾರೆಗಳು ಬತ್ತದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿ ಯುವಸಮೂಹದ ಮೇಲಿದೆ. ಅವರ ಆಶಯ ಈಡೇರಿಸುವಲ್ಲಿ ಸಮಾಜವೂ ಪ್ರಜ್ಞಾಪೂರ್ವಕ ಕಾಳಜಿ ತೋರಿಸಲಿದೆ ಎನ್ನುವ ಭರವಸೆಯೊಂದಿಗೆ ಮುನ್ನಡೆಯೋಣ' ಎಂದು ಹೇಳಿದರು.

ಅಂಬೇಡ್ಕರ್ ಯುವಕ ಸಂಘದ ಸದಸ್ಯ ಮನು ಮಾತನಾಡಿ, ಸರ್ಕಾರಿ ಹುದ್ದೆಗಳಲ್ಲಿ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ಇದ್ದರೆ ಮಾತ್ರ ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಸರ್ಕಾರಗಳು ಮೀಸಲಾತಿ, ಬಡ್ತಿ ವಿಷಯಗಳಲ್ಲಿ ದಲಿತ ವಿರೋಧಿ ನೀತಿ ಅನುಸರಿಸುವ ಮಾತುಗಳು ಕೇಳಿ ಬರುತ್ತಿವೆ. ಸಂವಿಧಾನ ನಮಗೆ ಕಲ್ಪಿಸಿರುವ ಹಕ್ಕುಗಳ ಮೂಲಕವಾದರೂ ನಮಗೆ ಸಮಾನತೆ ದೊರೆಯುವಂತಾದರೆ ಡಾ. ಅಂಬೇಡ್ಕರ್ ಅವರ ಹೋರಾಟಕ್ಕೆ, ಚಿಂತನೆಗಳಿಗೆ ಬೆಲೆ ಬರಲಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿಯೂ ಮೇಲು ಸ್ತರದಲ್ಲಿಯೇ ಇರುವ ಮುಂದುವರೆದ ವರ್ಗಗಳು ದಲಿತವಿರೋಧಿ, ದಮನ ನೀತಿ ಅನುಸರಿಸದಿರಲಿ, ಚುನಾವಣಾ ರಾಜಕೀಯಕ್ಕೆ ಮಾತ್ರ ದಲಿತ ವಿಷಯಗಳು ಬಳಕೆಯಾಗದಿರಲಿ ಎಂದು ಆಶಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಟಿ.ನಾಗಪ್ಪ ಡಾ. ಅಂಬೇಡ್ಕರ್ ಭಾವಚಿತ್ರ ಅನಾವರಣಗೊಳಿಸಿದರು, ನಿವೃತ್ತ ಸೈನಿಕ ದಕ್ಷಿಣಾಮೂರ್ತಿ, ಸರಸ್ವತೀಪುರಂ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಜಯಣ್ಣ ಮಾತನಾಡಿದರು.

ಡಾ.ಅಂಬೇಡ್ಕರ್ ಯುವ ಸಂಘದ ಗೌರವಾಧ್ಯಕ್ಷ ಮೋಹನ್, ಅಧ್ಯಕ್ಷ ಶಂಕರ್, ಮಂಜುನಾಥ್, ಮನೋಹರ್, ಮೂರ್ತಿ, ಸುನೀಲ್, ಪುಟ್ಟಸ್ವಾಮಿ, ಸುರೇಶ್, ಕುಮಾರಪ್ಪ, ಸಿದ್ದಪ್ಪ, ಬಸವರಾಜ್, ಶಿಕ್ಷಕ ಮೈಲಾರಪ್ಪ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT