ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಅಭ್ಯರ್ಥಿಗಳಿಗೆ ಪ್ಯಾನ್‌ ಸಂಖ್ಯೆ ಇಲ್ಲ!

2013ರ ಚುನಾವಣೆ; ಹನೂರು ಮುಂದೆ, ಗುಂಡ್ಲುಪೇಟೆ ಹಿಂದೆ
Last Updated 20 ಏಪ್ರಿಲ್ 2018, 5:41 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 51 ಮಂದಿ ಸ್ಪರ್ಧಿಸಿದ್ದರು. ಇವರ ಪೈಕಿ ಪ್ಯಾನ್ ಸಂಖ್ಯೆ ಹೊಂದಿದವರ ಸಂಖ್ಯೆ ಕೇವಲ 19!

ಹೌದು, ಶೇ 74ರಷ್ಟು ಅಭ್ಯರ್ಥಿಗಳು ಪ್ಯಾನ್‌ ಸಂಖ್ಯೆಯನ್ನು ತಮ್ಮ ನಾಮಪತ್ರದಲ್ಲಿ ನಮೂದಿಸಿರಲಿಲ್ಲ. ಪ್ಯಾನ್ ಸಂಖ್ಯೆ ಕಾಲಂನಲ್ಲಿ ಇಲ್ಲ ಎಂದೇ ಬರೆದಿದ್ದರು ಇಲ್ಲವೇ ಖಾಲಿ ಬಿಟ್ಟಿದ್ದರು.

ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದ ಚಾಮರಾಜ ನಗರ ಮತ್ತು ಕೊಳ್ಳೇಗಾಲದಲ್ಲಿ ಪ್ಯಾನ್‌ ಸಂಖ್ಯೆ ಹೊಂದಿದವರ ಸಂಖ್ಯೆ ಕಡಿಮೆ ಇದೆ. ಚಾಮರಾಜನಗರದ ವಿಧಾನಸಭಾ ಕ್ಷೇತ್ರದಲ್ಲಿ 14 ಮಂದಿ ಸ್ಪರ್ಧಿಸಿದ್ದರು. ಇವರ ಪೈಕಿ 6 ಮಂದಿ ಪ್ಯಾನ್ ಸಂಖ್ಯೆ ಹೊಂದಿದ್ದರೆ 14 ಮಂದಿ ಕಣದಲ್ಲಿದ್ದ ಕೊಳ್ಳೇಗಾಲದ ಕೇವಲ 3 ಮಂದಿಯಷ್ಟೇ ಪ್ಯಾನ್ ಸಂಖ್ಯೆ ಹೊಂದಿದ್ದರು.

ಆದರೆ, 13 ಮಂದಿ ಕಣದಲ್ಲಿದ್ದ ಹನೂರಿನಲ್ಲಿ 10 ಮಂದಿ ಪ್ಯಾನ್ ಸಂಖ್ಯೆ ಹೊಂದಿದ್ದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 10 ಮಂದಿಯೂ ಪ್ಯಾನ್ ಸಂಖ್ಯೆ ಹೊಂದಿರಲಿಲ್ಲ ಎಂಬುದು ಗಮನಾರ್ಹ.

ಆಯ್ಕೆಯಾದ ನಾಲ್ವರು ಶಾಸಕರಲ್ಲಿ ಒಬ್ಬರು ಪ್ಯಾನ್ ಸಂಖ್ಯೆಯನ್ನೇ ಹೊಂದಿರಲಿಲ್ಲ. ಚಾಮರಾಜನಗರದ ಸಿ.ಪುಟ್ಟರಂಗಶೆಟ್ಟಿ, ಹನೂರಿನ ನರೇಂದ್ರ ಹಾಗೂ ಕೊಳ್ಳೇಗಾಲದ ಎಸ್.ಜಯಣ್ಣ ಪ್ಯಾನ್ ಸಂಖ್ಯೆ ಹೊಂದಿದ್ದರೆ, ಗುಂಡ್ಲುಪೇಟೆಯಿಂದ ಆಯ್ಕೆಯಾಗಿದ್ದ  ಎಚ್.ಎಸ್.ಮಹದೇವಪ್ರಸಾದ್ ಪ್ಯಾನ್ ಸಂಖ್ಯೆ ನಮೂದಿಸಿರಲಿಲ್ಲ.

ಕ್ಷೇತ್ರಾವಾರು ವಿವರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿದ್ದ ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ, ಜೆಡಿಎಸ್‌ನ ಸಣ್ಣಮಾದಶೆಟ್ಟಿ, ಕೆಜೆಪಿಯಿಂದ ಸ್ಪರ್ಧಿಸಿದ್ದ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಸಿಪಿಐ (ಎಂಎಲ್‌)(ಎಲ್‌)ನಿಂದ ಸ್ಪರ್ಧಿಸಿದ್ದ ಡಾ.ಎಂ.ಸಿ.ರಾಜಣ್ಣ, ಕೆಎಂಪಿ (ಕೆ)ಯಿಂದ ಸ್ಪರ್ಧಿಸಿದ್ದ ಕೆ.ವೀರಭದ್ರಸ್ಪಾಮಿ, ಪಕ್ಷೇತರ ಅಭ್ಯರ್ಥಿಗಳಾದ ಕೆ.ಕರುಣಾಕರ, ಮಹಮ್ಮದ್ ಇನಾಯತ್ ಉಲ್ಲಾ ಹಾಗೂ ರಾಜು ಪ್ಯಾನ್ ಸಂಖ್ಯೆಯನ್ನು ನಮೂದಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಸೋಮನಾಯಕ, ಬಿಎಸ್‌ಪಿಯ ಆರ್‌.ಪಿ.ನಂಜುಂಡಸ್ವಾಮಿ, ಸಮಾಜವಾದಿ ಪಕ್ಷದ ಡಿ.ಎಸ್.ದೊರೆಸ್ವಾಮಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾದ ಪುಟ್ಟರಾಜು, ಮಹದೇವಸ್ವಾಮಿ ಪ್ಯಾನ್ ಸಂಖ್ಯೆ ನಮೂದಿಸಿರಲಿಲ್ಲ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಜಯಣ್ಣ, ಜೆಡಿಎಸ್‌ನ ಎನ್.ಚಾಮರಾಜು, ಜೆಡಿಯುನ ಎನ್.ನಂಜಯ್ಯ ಮಾತ್ರ ಪ್ಯಾನ್ ಸಂಖ್ಯೆ ಹೊಂದಿದ್ದರು. ಇನ್ನುಳಿದ ಅಭ್ಯರ್ಥಿಗಳಾದ ಬಿಜೆಪಿಯ ಜಿ.ಎನ್.ನಂಜುಂಡಸ್ವಾಮಿ, ಬಿಎಸ್‌ಪಿಯ ಎನ್.ಮಹೇಶ್, ಬಿಡಿಎಜೆಪಿಯ ಜಿ.ನಾಗರಾಜ್, ಕೆಜೆಪಿಯ ಎಸ್.ಬಾಲರಾಜ್, ಪಕ್ಷೇತರ ಅಭ್ಯರ್ಥಿಗಳಾದ ಎಲ್.ಚಂದ್ರಶೇಖರ್, ಪಿ.ಬಾಲರಾಜು ಹಾಗೂ ಸುರೇಶ್‌ ಕುಮಾರ್ ನಮೂದಿಸಿರಲಿಲ್ಲ.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಆರ್.ನರೇಂದ್ರ, ಜೆಡಿಎಸ್‌ನ ಪರಿಮಳಾ ನಾಗಪ್ಪ, ಬಿಎಸ್‌ಪಿಯ ಎಸ್.ಪುಟ್ಟರಾಜು, ಜೆಡಿಯುನ ಎಸ್.ಗಂಗಾಧರ, ಕೆಜೆಪಿಯ ಪೊನ್ನಾಚಿ ಮಹದೇವಸ್ವಾಮಿ, ಬಿಎಸ್‌ಆರ್‌ ಕಾಂಗ್ರೆಸ್‌ ಬೀರೇಶ್, ಎಐಎಡಿಎಂಕೆಯ ಎಂ.ರವಿ, ಪಕ್ಷೇತರ ಅಭ್ಯರ್ಥಿಗಳಾದ ಎಸ್.ದತ್ತೇಶ್‌ಕುಮಾರ್, ಕೆ.ನಾಗರಾಜು, ಆರ್.ಸಿದ್ದಪ್ಪ ಪ್ಯಾನ್ ಸಂಖ್ಯೆ ಹೊಂದಿದ್ದರು. ಉಳಿದ ಅಭ್ಯರ್ಥಿಗಳಾದ ಬಿಜೆಪಿಯ ಬಿ.ಕೆ.ಶಿವಕುಮಾರ್, ಪಕ್ಷೇತರ ಅಭ್ಯರ್ಥಿಗಳಾದ ಎಂ.ಪ್ರದೀಪಕುಮಾರ್ ಹಾಗೂ ಸಿ.ಎಂ.ಮಹದೇವಸ್ವಾಮಿ ಪ್ಯಾನ್ ಸಂಖ್ಯೆ ಹೊಂದಿರಲಿಲ್ಲ.

ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಎಚ್.ಜಿ. ಮಲ್ಲಿಕಾರ್ಜುನಸ್ವಾಮಿ, ಕಾಂಗ್ರೆಸ್‌ನ ಎಚ್.ಎಸ್‌.ಮಹದೇವ ಪ್ರಸಾದ್, ಬಿಎಸ್‌ಪಿಯ ನಾಗೇಂದ್ರ, ಜೆಡಿಎಸ್‌ನ ಬಿ.ಪಿ.ಮುದ್ದುಮಲ್ಲು, ಎಸ್‌ಜೆಪಿ(ಕೆ) ನ ಜಿ.ಎಂ.ಗಾಡ್ಕರ್, ಕೆಜೆಪಿಯ ಸಿ.ಎಸ್.ನಿರಂಜನಕುಮಾರ್, ಆರ್‌ಪಿಐ(ಎ)ನ ಪಿ.ಸಂಘಸೇನಾ, ಬಿಎಸ್‌ಆರ್‌ಸಿಆರ್‌ನ ಸುರೇಶ್‌, ಪಕ್ಷೇತರ ಸದಸ್ಯರಾದ ಮರಿದಾಸಯ್ಯ ಹಾಗೂ ಸುಭಾಷ್ ಪ್ಯಾನ್ ಸಂಖ್ಯೆ ಹೊಂದಿರಲಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT