ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯ ತತ್ವ ಸಾರುವ ರಂಜಾನ್

ನಾಯಕನಹಟ್ಟಿ: ಈದ್ ಉಲ್- ಫಿತ್ರ್‌ ಅದ್ದೂರಿ ಆಚರಣೆಗೆ ಸಕಲ ಸಿದ್ಧತೆ
Last Updated 16 ಜೂನ್ 2018, 6:57 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಮನುಷ್ಯನಲ್ಲಿರುವ ದ್ವೇಷ, ಮದ-ಮತ್ಸರಗಳನ್ನು ತೊರೆದು, ಹಸಿವು ಬಡತನವನ್ನು ಅರಿತುಕೊಳ್ಳುವಂತೆ ಮಾಡಿ ಸಮಾನತೆಯ ತತ್ವವನ್ನು ಸಾರುವುದೇ ರಂಜಾನ್ ಹಬ್ಬದ ವಿಶೇಷ.

ಇಸ್ಲಾಂ ಕ್ಯಾಲೆಂಡರ್‌ನ ವರ್ಷದ 9ನೇ ತಿಂಗಳನ್ನು ಮುಸ್ಲಿಮರು ರಂಜಾನ್ ಮಾಸವೆಂದು ಆಚರಿಸುತ್ತಾರೆ. ಕಾರಣ ವರ್ಷದ ಎಲ್ಲ ದಿನಗಳಲ್ಲಿ ನಾವು ಮಾಡಿದ ಪಾಪ ಕರ್ಮಗಳ ಫಲವನ್ನು ಕಳೆದುಕೊಂಡು ಪವಿತ್ರವಾಗಲು ಇಂತಹ ಒಂದು ಅವಕಾಶವನ್ನು ದೇವರು ನೀಡಿದ್ದಾನೆ. ಹಾಗಾಗಿ ಒಂದು ತಿಂಗಳುಗಳ ಕಾಲ ನಿದ್ದೆ, ಹಸಿವು, ನೀರಡಿಕೆಯನ್ನು ಬಿಟ್ಟು ಉಪವಾಸ ವ್ರತವನ್ನು ಆಚರಿಸುವ ಮೂಲಕ ದೇವರ ಸ್ಮರಣೆ ಮಾಡಲಾಗುತ್ತದೆ.

‘ಈ ವ್ರತ ಆಚರಣೆಯಲ್ಲಿ ತೊಡಗಿರು ವಾಗ ಯಾರೊಬ್ಬರ ಮನಸ್ಸಿನಲ್ಲೂ ಕೆಟ್ಟ ಆಲೋಚನೆಗಳನ್ನು ಮಾಡುವುದಿಲ್ಲ. ಯಾವುದೇ ಪಾಪಕೃತ್ಯದಲ್ಲಿ ತೊಡಗು ವುದಿಲ್ಲ. ಪರಸ್ಪರ ಸಹಕಾರ, ತಾಳ್ಮೆ, ಶಿಸ್ತು, ಸಂಯಮ, ಸಮಯಪಾಲನೆ, ಸಹೋದರತ್ವಗಳನ್ನು ಮೈಗೂಡಿಕೊಂಡು ಬದುಕುತ್ತಾರೆ. ಇದನ್ನೇ ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿ ನಡೆಯಬೇಕು ಎಂಬುದನ್ನು ರಂಜಾನ್ ಹಬ್ಬವು ಪ್ರತಿಯೊಬ್ಬರಿಗೂ ಬೋಧಿಸುತ್ತದೆ’ ಎಂದು ಜಾಮಿಯಾ ಮಸೀದಿ ಅಧ್ಯಕ್ಷ ಸೈಯದ್‌ ಅನ್ವರ್ ಹೇಳುತ್ತಾರೆ.

ವಿಶಿಷ್ಟ ದಾನ ಪದ್ಧತಿಗಳು
ಮನುಷ್ಯನ ಬದುಕಿನಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಉಳ್ಳವರು ಇಲ್ಲದವರಿಗೆ ತಮ್ಮ ದುಡಿಮೆಯ, ಸಂಪತ್ತಿನ ಅಲ್ಪಭಾಗವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀಡುವ ಪದ್ಧತಿ ಇದೆ. ಅದರಂತೆ ಇಸ್ಲಾಂ ಧರ್ಮದಲ್ಲಿ ರಂಜಾನ್ ಮಾಸದಲ್ಲಿ ಜಕಾತ್ ಮತ್ತು ಫಿತರ್ ಎನ್ನುವ ಎರಡು ವಿಶಿಷ್ಟ ದಾನ ಪದ್ಧತಿಗಳಿವೆ. ಜಕಾತ್ ಎಂದರೆ ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿ ತಾನು ಗಳಿಸಿದ ಸಂಪತ್ತಿನಲ್ಲಿ ಶೇ 2.5ರಷ್ಟು ಹಣವನ್ನು ಮಸೀದಿಗೆ ಸಲ್ಲಿಸಬೇಕು. ಇದು ತೀರಾ ಕಡ್ಡಾಯವಲ್ಲದಿದ್ದರೂ ತಾನೇ ಸ್ವತಃ ಅರ್ಥಮಾಡಿಕೊಂಡು ಸಲ್ಲಿಸುತ್ತಾರೆ. ಈ ಹಣವನ್ನು ಸಮುದಾಯದ ಏಳ್ಗೆಗಾಗಿ ಹಾಗೂ ಸಮಾಜದ ಜನರ ಕಷ್ಟಗಳಿಗಾಗಿ ಬಳಸಲಾಗುತ್ತದೆ.

ಫಿತರ್ ಎಂದರೆ ಹಬ್ಬದ ಸಂದರ್ಭದಲ್ಲಿ ನಿರ್ಗತಿಕರು, ಬಡವರು, ಅಂಗವಿಕಲರಿಗೆ ಸಮುದಾಯದ ಪ್ರತಿಯೊಬ್ಬರೂ ಅವರವರ ಶಕ್ತ್ಯಾ ನುಸಾರ ದಾನ ನೀಡುವುದು. ಧರ್ಮ ಹಾಗೂ ಆಚರಣೆಯ ಮೂಲಕ ಜನರಲ್ಲಿ ಆರ್ಥಿಕ ಸಮಾನತೆಯನ್ನು ತರುವ ಪದ್ಧತಿಗಳಾಗಿವೆ. ‘ಈ ಎಲ್ಲಾ ದಾನ ಪದ್ಧತಿಗಳು ಮುಸ್ಲಿಂ ಸಮುದಾಯದಲ್ಲಿ ತುಂಬಾ ಅಚ್ಚುಕಟ್ಟಾಗಿ ಹಾಗೂ ಕ್ರಮಬದ್ಧವಾಗಿ ನಡೆದುಕೊಂಡು ಬರುತ್ತಿವೆ’ ಎಂದು ಹಿರಿಯ ಶಿಕ್ಷಕ ಜಾವೆದ್‌ಬಾಷಾ ಹೇಳಿದರು.

ಪಂಚತತ್ವಗಳ ಆಚರಣೆಯೇ ಇಸ್ಲಾಂ:
‘ಪ್ರತಿಯೊಬ್ಬ ಮುಸ್ಲಿಂ ತನ್ನ ಜೀವನದಲ್ಲಿ ಪಂಚತತ್ವಗಳ ಆಚರಣೆಯನ್ನು ಕೈಗೊಳ್ಳಬೇಕು. ಅವುಗಳೆಂದರೆ ನಮಾಜ್. ರೋಜಾ, ಜಕಾತ್, ಕಲ್ಮಾ, ಹಜ್.  ದಿನವೊಂದಕ್ಕೆ ಐದು ಬಾರಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ನಮಾಜ್. ರಂಜಾನ್ ಮಾಸದಲ್ಲಿ ಒಂದು ತಿಂಗಳ ಕಾಲ ಬೆಳಗಿನ ಜಾವದಿಂದ ಸಂಜೆಯವರೆಗೂ ಆಚರಿಸುವ ಉಪವಾಸ ವ್ರತವೇ ರೋಜಾ’ ಎಂದು ಮಸೀದಿಯ ಹಿರಿಯ ಗುರುಗಳಾದ ಮೌಲಾನಾ ಮಹಮ್ಮದ್ ಮುಫ್ತಿ ಸೋಹೈಬ್‌ಸಾಬ್ ಮಾಹಿತಿ ನೀಡಿದರು.

‘ಪ್ರತಿಯೊಬ್ಬ ಮುಸ್ಲಿಂ ತನ್ನ ಜೀವಿತದ ಅವಧಿಯಲ್ಲಿ ಸಂಪಾದನೆ ಮಾಡಿದ ಸಂಪತ್ತಿನಲ್ಲಿ ಇಂತಿಷ್ಟು ಭಾಗವನ್ನು ದಾನ ಮಾಡುವುದೇ ಜಕಾತ್. ಏಕದೇವೋಪಾಸನೆ ಅಂದರೆ ಒಂದೇ ದೇವರಲ್ಲಿ ನಂಬಿಕೆ ಇಟ್ಟುಕೊಳ್ಳುವುದನ್ನು ಕಲ್ಮಾ ಎಂತಲೂ,  ಪ್ರತಿಯೊಬ್ಬರೂ ಜೀವಿತದ ಅವಧಿಯಲ್ಲಿ ಒಮ್ಮೆ ಮೆಕ್ಕಾ ಮದೀನಾ ಯಾತ್ರೆಯನ್ನು ಕೈಗೊಳ್ಳುವುದನ್ನು ಹಜ್ ಎಂದೂ ಕರೆಯುತ್ತೇವೆ’ ಎಂದು ಹೇಳುತ್ತಾರೆ.

ಈ ಬಾರಿಯ ಈದ್ ಉಲ್-ಫಿತ್ರ್ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಹಿಂದಿನ ವರ್ಷದ ಎಲ್ಲಾ ಕಹಿ ಘಟನೆಗಳನ್ನು, ದ್ವೇಷಗಳನ್ನು ಮರೆತು ಒಂದಾಗಿ ಭವಿಷ್ಯದ ದಿನಗಳನ್ನು ಸ್ವಚ್ಛಂದವಾಗಿ ಕಳೆಯುವುದನ್ನೇ ಪಟ್ಟಣದ ಮುಸ್ಲಿಮರು ಎದುರು ನೋಡುತ್ತಿದ್ದಾರೆ.

–ವಿ.ಧನಂಜಯ ನಾಯಕನಹಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT