ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಮಂಗನ ಕಾಯಿಲೆ ನಿಯಂತ್ರಣಕ್ಕೆ ಲಸಿಕೆಯೊಂದೇ ಈಗಿರುವ ದಾರಿ

Last Updated 27 ಮಾರ್ಚ್ 2022, 20:08 IST
ಅಕ್ಷರ ಗಾತ್ರ

ಬೇಸಿಗೆ ಬಂದೊಡನೆ ಮಲೆನಾಡು ಹಾಗೂ ಕರಾವಳಿ ಜನರನ್ನು ತೀವ್ರವಾಗಿ ಕಾಡುವ ಮಂಗನ ಕಾಯಿಲೆ ಸಮಸ್ಯೆ ಕುರಿತು ಸತೀಶ ಜಿ.ಕೆ. ತೀರ್ಥಹಳ್ಳಿ ಅವರ ಬರಹ (ಸಂಗತ, ಮಾರ್ಚ್‌ 25) ಸಕಾಲಿಕವಾದುದು.ಅವರು ಉಲ್ಲೇಖಿಸಿ ರುವಂತೆ, ಹೆಲಿಕಾಪ್ಟರ್ ಮೂಲಕ ಕ್ರಿಮಿನಾಶಕ ಸಿಂಪಡಿಸಿ ರೋಗವಾಹಕ ಉಣ್ಣೆಗಳನ್ನು ಕೊಲ್ಲಬಹುದೆಂಬ ಕೆಲವು ಸ್ಥಳೀಯರ ಸಲಹೆ ಖಂಡಿತಾ ಸಾಧುವಲ್ಲ. ಅದು ಇನ್ನೂ ಹೊಸ ಸಮಸ್ಯೆಗಳಿಗೆ ಕಾರಣವಾಗಬಹುದು. ಎಲ್ಲ ವೈರಸ್ ಕಾಯಿಲೆಗಳಿಗೆ ಹಾಕಿಸಿಕೊಳ್ಳುವಂತೆ, ರೋಗಬರದಂತೆ ಲಸಿಕೆ ಹಾಕಿಸಿಕೊಳ್ಳುವುದೊಂದೇ ಈಗಿರುವ ದಾರಿ. ಜೊತೆಗೆ, ಕಾಡಿಗೆ ತೆರಳುವಾಗ ಹಳ್ಳಿಗರು ಉಣ್ಣೆಹುಳು ನಿರೋಧಕ ತೈಲವನ್ನು ಲೇಪಿಸಿಕೊಳ್ಳಬೇಕು. ಈ ಕುರಿತು ಆರೋಗ್ಯ ಇಲಾಖೆಯು ನೀಡುತ್ತಿರುವ ಎಲ್ಲ ಸಲಹೆ ಹಾಗೂ ಸೌಲಭ್ಯಗಳನ್ನು ಹಳ್ಳಿಗರು ಸಂಪೂರ್ಣವಾಗಿ ಬಳಸಿಕೊಳ್ಳಬೇಕಿದೆ.

ಹಾಗಾದರೆ, ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಮುಂದೇನು ಮಾಡಬೇಕಿದೆ? ಈ ಕುರಿತಾಗಿ ಕೆಲವು ವರ್ಷಗಳಿಂದ ಅಧ್ಯಯನ ಕೈಗೊಂಡಿರುವ ನಮ್ಮ ಅನುಭವದಲ್ಲಿ ಹೇಳಬಹುದಾದರೆ, ಕನಿಷ್ಠ ಐದು ಆಯಾಮಗಳಲ್ಲಿ ಪ್ರಯತ್ನಿಸುವ ಅಗತ್ಯವಿದೆ. ಒಂದು, ಲಸಿಕೆಯ ಕ್ಷಮತೆ ಹೆಚ್ಚಿಸುವುದು. ಎರಡನೆಯದು, ರೋಗಪತ್ತೆ ಹಚ್ಚುವ ಪ್ರಯೋಗಾಲಯ ತಂತ್ರಗಳ ಕ್ಷಮತೆ ವರ್ಧಿಸುವುದು. ಮೂರು, ಮಂಗನ ಹೊರತಾಗಿಯೂ ಇರಬಹುದಾದ ಇತರ ವೈರಾಣು ಪೋಷಕ ಜೀವಿಗಳನ್ನು ಪತ್ತೆಹಚ್ಚುವುದು. ನಾಲ್ಕು, ಉಣ್ಣೆಯ ಹೊರತಾದ ರೋಗವಾಹಕ ಇರ ಬಹುದೇ ಎಂದು ಪರಿಶೀಲಿಸುವುದು. ಕೊನೆಯದಾಗಿ, ಇಲ್ಲಿನ ಮಣ್ಣು, ನೀರು, ಇತರ ಜೀವಿಗಳು, ಹವಾಮಾನ- ಇತ್ಯಾದಿಗಳೆಲ್ಲ ಸೇರಿದಂತೆ, ಒಟ್ಟೂ ಪರಿಸರವು ಈ ವೈರಸ್ಸನ್ನು ಪ್ರಭಾವಿಸುವ ರೀತಿಯನ್ನು ಅರಿಯುವುದು. ಅಳವಾದ, ಅಂತರ್‌ಶಿಸ್ತೀಯ ಹಾಗೂ ಕಾಲಬದ್ಧ ಸಂಶೋಧನೆ ಅಗತ್ಯವಿರುವ ಸಂಗತಿಯಿದು.

ಪಶ್ಚಿಮಘಟ್ಟದ ಮಳೆಕಾಡು ತೀವ್ರವಾಗಿ ನಾಶವಾಗಿದ್ದೇ, ಸೃಷ್ಟಿಯಲ್ಲಿ ಹುದುಗಿಕೊಂಡಿದ್ದ ಈ ವೈರಸ್ ಕ್ರಿಯಾಶೀಲ ವಾಗಲು ಕಾರಣವಾಯಿತು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಅಣೆಕಟ್ಟು, ಗಣಿಗಾರಿಕೆಯಂಥ ಮಿತಿಯಿರದ ಅಭಿವೃದ್ಧಿ ಯೋಜನೆಗಳು, ವಾಣಿಜ್ಯಕೃಷಿ ಹಾಗೂ ನೆಡುತೋಪು ವಿಸ್ತರಣೆ, ವ್ಯಾಪಕ ಅರಣ್ಯ ಅತಿಕ್ರಮಣ- ಇತ್ಯಾದಿ ಅನರ್ಥಗಳಿಗೆ ಹಳ್ಳಿಗಳ ಜನಜೀವನ ಬೆಲೆ ತೆರುತ್ತಿರುವುದಕ್ಕೆ ಜೀವಂತ ನಿದರ್ಶನವಿದು.

- ಡಾ.ಕೇಶವ ಎಚ್. ಕೊರ್ಸೆ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT