ಎಲ್ಲರೂ ಸಮಾನರಲ್ಲ! ಸ್ವಾಮೀಜಿಗಳೂ...

ಚಿತ್ರದುರ್ಗದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವದಲ್ಲಿ ಸಣ್ಣ, ದೊಡ್ಡ ಜಾತಿಯ ಹಲವು ಮಠಾಧೀಶರು ಭಾಗವಹಿಸಿದ್ದು, ಅವರವರ ಅಂತಸ್ತಿಗೆ ತಕ್ಕಂತೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಛಲವಾದಿ ಪೀಠದ ಬಸವನಾಗೀದೇವ ಸ್ವಾಮೀಜಿ ಹಾಗೂ ಪ್ರಣವಕುಮಾರ ಸ್ವಾಮೀಜಿ– ತಮ್ಮನ್ನು ಮುಖ್ಯ ವೇದಿಕೆಗೆ ಹತ್ತಿಸದೆ ಅವಮಾನ ಮಾಡಲಾಯಿತೆಂದು ಅಸಮಾಧಾನ ತೋಡಿಕೊಂಡಿದ್ದಾರೆ. ಶ್ರೇಣೀಕೃತ ಜಾತಿವ್ಯವಸ್ಥೆಯ ಸಾವಿರಾರು ವರ್ಷಗಳ ಶಾಪ ಪರಿಹಾರವಾಗಿಲ್ಲ ಎನ್ನುವುದಕ್ಕೆ ಈ ಸ್ವಾಮೀಜಿಗಳು ರೂಪಕದಂತೆ ಕಾಣಿಸುತ್ತಾರೆ. ಮೊದಲನೆಯದಾಗಿ, ಸ್ವಾಮೀಜಿಗಳಿಗೆ ತಮ್ಮ ಚಿಂತಾಜನಕ ಅಂತಸ್ತಿನ ಅರಿವಿದ್ದಿದ್ದರೆ ಆ ಸ್ಥಳಕ್ಕೆ ಹೋಗುತ್ತಲೇ ಇರಲಿಲ್ಲ. ಆದರೆ, ಮಾಯಾಲೋಕದಂತಿರುವ ಅದ್ದೂರಿ ರಾಜಕಾರಣದ ಸೆಳೆತ ಸ್ವಾಮಿಗಳನ್ನೂ ಬಿಟ್ಟಿಲ್ಲ. ಭಾರತ ಒಕ್ಕೂಟದಲ್ಲಿ ಎಲ್ಲ ಜಾತಿಗಳವರೂ ಸಮಾನರು ಅನ್ನುವುದೇ ಬಹುದೊಡ್ಡ ವ್ಯಂಗ್ಯ. ಅಸಮಾನತೆ, ಜಾತಿ ತಾರತಮ್ಯ ಕಣ್ಣಿಗೆ ರಾಚುತ್ತಿರುವಾಗಲೇ ಜಾಣಕುರುಡರಂತೆ ವರ್ತಿಸುವ ಬಸವನಾಗೀದೇವರಂತಹ ಸ್ವಾಮೀಜಿಯವರು ಬಸವಣ್ಣ, ಆತ ಕಟ್ಟಿದ ಅಪೂರ್ವ ಚಳವಳಿ, ಅದರ ಗುರಿಯನ್ನು ಆಳವಾಗಿ ಅರಿಯಬೇಕಿದೆ.

⇒ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

ಸೂರ್ಯಕಾಂತಿಗೆ ಸುಸ್ಥಿರ ಬೆಂಬಲ ಬೇಕು

ಸರ್ಕಾರವು ಸೂರ್ಯಕಾಂತಿ ಬೀಜಕ್ಕೆ ಪ್ರತಿ ಕ್ವಿಂಟಲ್ಗೆ ₹7,721 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಖರೀದಿ ಕೇಂದ್ರ ತೆರೆಯುವುದರಿಂದಷ್ಟೇ ರೈತರ ಸಂಕಷ್ಟ ನೀಗದು. ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆಯು ₹4,500ರ ಆಸುಪಾಸಿನಲ್ಲಿದೆ. ಮುಕ್ತ ಮಾರುಕಟ್ಟೆ ಮತ್ತು ಬೆಂಬಲ ಬೆಲೆ ನಡುವಿನ ಈ ಭಾರೀ ವ್ಯತ್ಯಾಸವು ರೈತ
ರನ್ನು ಆರ್ಥಿಕವಾಗಿ ಹೈರಾಣಾಗಿಸಿದೆ. ಕೇವಲ ಹತ್ತು ಸಾವಿರ ಕ್ವಿಂಟಲ್ ಸಂಗ್ರಹದ ಗುರಿ ರಾಜ್ಯದ ಒಟ್ಟು ಇಳುವರಿಗೆ ಹೋಲಿಸಿದರೆ ಅತ್ಯಲ್ಪ. ಕನಿಷ್ಠ ಪಕ್ಷ ಇಳುವರಿಯ ಶೇ 50ರಷ್ಟನ್ನಾದರೂ ನೇರವಾಗಿ ಖರೀದಿಸಬೇಕು. ಕಾಲಮಿತಿಯಲ್ಲಿ ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

⇒ವಿಜಯಕುಮಾರ್ ಎಚ್.ಕೆ., ರಾಯಚೂರು

ಇತಿಹಾಸ ಸೃಷ್ಟಿಸಿದ ‘ದಳಪತಿ’ ವಿಜಯ್

ನಟ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಮುಖ್ಯಮಂತ್ರಿಯಾಗಿ ‘ದಳಪತಿ’ ಪದಗ್ರಹಣ ಮಾಡಿದ್ದಾರೆ. ಸುಮಾರು 60 ವರ್ಷಗಳಿಂದ ಅಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಇದ್ದ ಅಧಿಕಾರದ ಪೈಪೋಟಿಯನ್ನು ಮುರಿದು, ಯುವಪೀಳಿಗೆಯ ಹೊಸಶಕ್ತಿಯಾಗಿ ಅವರು ಅಧಿಕಾರಕ್ಕೆ ಬಂದಿದ್ದಾರೆ. 1967ರ ನಂತರ ಈ ಎರಡು ಪ್ರಮುಖ ದ್ರಾವಿಡ ಪಕ್ಷಗಳ ಹೊರತಾಗಿ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ವಿಜಯ್ ಆಗಿದ್ದಾರೆ. ಜೊತೆಗೆ ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲಿ 1952ರಿಂದ ಇದುವರೆಗೆ ಒಮ್ಮೆಯೂ ಅಧಿಕೃತವಾಗಿ ‘ಸಮ್ಮಿಶ್ರ ಸರ್ಕಾರ’ ಅಸ್ತಿತ್ವಕ್ಕೆ ಬಂದಿಲ್ಲ. ಈಗ ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಜೊತೆಗೆ ಸೇರಿ ಸರ್ಕಾರ ರಚಿಸಿರುವ ಅವರು ತಮಿಳುನಾಡಿನ ಮೊದಲ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿದ್ದಾರೆ. ಅವರ ಈ ಗೆಲುವು ದೇಶದ ಇತಿಹಾಸದ ಪುಟ ಸೇರಿದೆ.

⇒ಬಸವರಾಜ ನರಗಟ್ಟಿ, ಬೆಳಗಾವಿ

ವಾಲಿದ ತಕ್ಕಡಿ; ಹಕ್ಕು ವಂಚಿತ ಮತದಾರ

ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರ ಹೆಸರನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಪರಿಣಾಮ ಈಗ ಗೋಚರಿಸುತ್ತಿದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ಮತದಾನದ ಹಕ್ಕು ಪ್ರಜಾಪ್ರಭುತ್ವದ ತಳಹದಿ. ಅದು ನಾಗರಿಕರ ಹಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವದ ಜೀವಾಳ. ಚುನಾವಣೆಯ ಸಂದರ್ಭದಲ್ಲಿ ನಾಗರಿಕರನ್ನು ಮತಹಕ್ಕಿನಿಂದ ವಂಚಿಸಿದ ಬಳಿಕ, ‘ನಿಮ್ಮ ಹಕ್ಕನ್ನು ಶಾಶ್ವತವಾಗಿ ಕಸಿದುಕೊಂಡಿಲ್ಲ’ ಎಂಬ ತೀರ್ಪು
ಸಾರ್ವಜನಿಕರಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಬಹುದು.

‘ಮುಂದಿನ ಬಾರಿ ಮತ ಹಾಕಬಹುದು’ ಎಂಬ ಸಮರ್ಥನೆಯು ಈಗಾಗಲೇ ಹಕ್ಕು ಕಳೆದುಕೊಂಡ ಮತದಾರರ ನೋವನ್ನು ತಗ್ಗಿಸಲಾರದು. ಒಂದು ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಕಳೆದುಹೋದರೆ, ಮುಂದಿನ ಬಾರಿ ಅವಕಾಶ ಸಿಗುವವರೆಗೂ ಅದು ಹಕ್ಕಿನ ವಂಚನೆಯಾಗಿಯೇ ಉಳಿಯುತ್ತದೆ ಹಾಗೂ ಅದನ್ನು ಸರಿಪಡಿಸುವ ಅವಕಾಶ ಇಲ್ಲವಾಗುತ್ತದೆ. ನ್ಯಾಯಾಂಗ ಹಾಗೂ ಚುನಾವಣಾ ವ್ಯವಸ್ಥೆಯ ಮೇಲೆ ಜನರು ಇಟ್ಟಿರುವ ವಿಶ್ವಾಸವು ಉಳಿಯಬೇಕಾದರೆ, ಮತದಾರರ ಹಕ್ಕುಗಳನ್ನು ಅತ್ಯಂತ ಜಾಗರೂಕತೆಯಿಂದ ರಕ್ಷಿಸಬೇಕು. ಇಲ್ಲವಾದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ದುರ್ಬಲವಾಗುವ, ಸಂವಿಧಾನದ ಆಶಯಗಳು ಮೂಲೆಗುಂಪಾಗುವ ಅಪಾಯ ಇದೆ.

⇒ಎಂ.ಎಸ್. ಅಲ್ಲಮ ಪ್ರಭು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.