ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಲ್‌ಎಸ್‌ಐಯು ದೇಶಕ್ಕೆ ಮಾದರಿ

Last Updated 17 ಜೂನ್ 2018, 14:30 IST
ಅಕ್ಷರ ಗಾತ್ರ

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ಸಂಸ್ಥಾಪಕ ಸದಸ್ಯ, ಹಿರಿಯ ಪ್ರಾಧ್ಯಾಪಕ ಡಾ. ವಿಜಯ ಕುಮಾರ್‌ ಭೋಪಾಲ್‌ನ ನ್ಯಾಷನಲ್‌ ಲಾ ಇನ್ಸ್‌ಸ್ಟಿಟ್ಯೂಟ್‌ ಯುನಿವರ್ಸಿಟಿಯ (ಎನ್‌ಎಲ್‌ಐಯು) ಕುಲಪತಿಯಾಗಿ ಈಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.

ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ, ಎಂ.ಫಿಲ್‌, ಪಿಎಚ್‌.ಡಿ ಪದವಿ ಪಡೆದಿರುವ ಅವರು, ಎನ್‌ಎಲ್‌ಎಸ್‌ಐಯುನಲ್ಲಿ 2005ರಿಂದ 2008ರವರೆಗೆ ಕುಲಸಚಿವರಾಗಿ, 2010–2013ರವರೆಗೆ ತಮಿಳುನಾಡಿನ ಅಂಬೇಡ್ಕರ್‌ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಶೈಕ್ಷಣಿಕ ಸಮಿತಿ ಸದಸ್ಯರೂ ಆಗಿರುವ ಅವರು, ದೇಶದಾದ್ಯಂತ ಬಹುತೇಕ ರಾಜ್ಯಗಳ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕುರಿತು ತರಬೇತಿ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅವರು ಕಾನೂನು ಶಿಕ್ಷಣದಲ್ಲಿ ಆಗಬೇಕಿರುವ ಸುಧಾರಣೆಗಳು ಹಾಗೂ ನ್ಯಾಷನಲ್‌ ಲಾ ಯುನಿವರ್ಸಿಟಿಗಳಲ್ಲಿನ (ಎನ್‌ಎಲ್‌ಯು) ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ.

* ಕಾನೂನು ಶಿಕ್ಷಣದ ಗುಣಮಟ್ಟ ಹೇಗಿದೆ?
ನ್ಯಾಷನಲ್‌ ಲಾ ಸ್ಕೂಲ್‌ಗಳು ಮತ್ತು ಇತರ ಕಾನೂನು ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಒಂದಕ್ಕೊಂದು ಹೋಲಿಸಲಾಗದು. ದೇಶದಲ್ಲಿ ಒಟ್ಟು 25 ರಾಜ್ಯಗಳಲ್ಲಿ ನ್ಯಾಷನಲ್‌ ಲಾ ಯುನಿವರ್ಸಿಟಿಗಳಿವೆ (ಎನ್‌ಎಲ್‌ಯು). ಪುದುಚೇರಿಯಲ್ಲಿ ಮತ್ತೊಂದು ಹೊಸ ವಿವಿ ಸ್ಥಾಪಿಸುವ ಪ್ರಸ್ತಾವವೂ ಇದೆ. ಇವೆಲ್ಲವುಗಳಲ್ಲಿ ಬೆಂಗಳೂರಿನ ಎನ್‌ಎಲ್‌ಎಸ್‌ಐಯು ದೇಶಕ್ಕೇ ಮಾದರಿಯಾಗಿದೆ. ಇವುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ‘ಕ್ಲಾಟ್‌’ (ಸಿಎಲ್‌ಎಟಿ) ಪರೀಕ್ಷೆ ತೇರ್ಗಡೆಯಾಗಬೇಕು. ಪ್ರತಿ ವರ್ಷ ಅಂದಾಜು 60 ಸಾವಿರ ವಿದ್ಯಾರ್ಥಿಗಳು ‘ಕ್ಲಾಟ್‌’ (ಸಿಎಲ್‌ಟಿ) ಪರೀಕ್ಷೆ ಬರೆಯುತ್ತಿದ್ದಾರೆ. ಅವರಲ್ಲಿ 3 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ದೊರೆಯುತ್ತಿದೆ. ಉತ್ತಮ ಮೂಲಸೌಕರ್ಯ, ಮಾನವ ಸಂಪನ್ಮೂಲ ಮತ್ತು ಸ್ವಾಯತ್ತ ಸ್ಥಾನಮಾನ ಈ ಸಂಸ್ಥೆಗಳ ಗುಣಮಟ್ಟ ವೃದ್ಧಿಗೆ ಕಾರಣ.

ಉಳಿದಂತೆ ದೇಶದಲ್ಲಿ ಸುಮಾರು 1,600 ಕಾನೂನು ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಹಲವೆಡೆ ಮೂಲ ಸೌಕರ್ಯ, ಬೋಧಕರ ಕೊರತೆಯಿದೆ. ಬಹುತೇಕ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಬೋಧಕರ ನೇಮಕಾತಿಯೇ ಆಗಿಲ್ಲ. ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಒಂದೂವರೆ ವರ್ಷದಿಂದ ಕುಲಪತಿ ನೇಮಕವಾಗಿಲ್ಲ. ಸರ್ಕಾರವೇ ಇಷ್ಟು ಅಸಡ್ಡೆ ತೋರಿದರೆ ಹೇಗೆ?

* ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಏನು ಮಾಡಬೇಕು?
ರಾಷ್ಟ್ರೀಯ ಕಾನೂನು ಶಿಕ್ಷಣ ಕೌನ್ಸಿಲ್‌ ಸ್ಥಾಪನೆ ಆಗಬೇಕು. ಇದರ ವ್ಯಾಪ್ತಿಯಲ್ಲಿ ಎಲ್ಲ ಕಾನೂನು ಶಿಕ್ಷಣ ಸಂಸ್ಥೆಗಳೂ ಬರಬೇಕು. ಒಂದೇ ರೀತಿಯ ನಿಯಮ, ಪಠ್ಯಕ್ರಮ ಅನುಷ್ಠಾನಗೊಂಡರೆ ಸುಧಾರಣೆ ತರಬಹುದು. ಈ ನಿಟ್ಟಿನಲ್ಲಿ ವಿವಿಧ ಹಂತಗಳಲ್ಲಿ ಪ್ರಯತ್ನ ನಡೆಯುತ್ತಿವೆ.

ಸ್ಥಳೀಯ ಕಾನೂನು ಶಿಕ್ಷಣ ಸಂಸ್ಥೆಗಳ ಜತೆ ಎನ್‌ಎಲ್‌ಯುಗಳು ಯಾವ ರೀತಿಯ ಒಡನಾಟ ಹೊಂದಿವೆ?

ಎನ್‌ಎಲ್‌ಯುಗಳು ಸ್ಥಳೀಯ ಕಾನೂನು ಕಾಲೇಜುಗಳನ್ನು ದತ್ತು ತೆಗೆದುಕೊಳ್ಳಬಹುದು. ಈಗಾಗಲೇ ಬೆಂಗಳೂರಿನಲ್ಲಿರುವ  ಎನ್‌ಎಲ್‌ಯು ಕೆಎಲ್‌ಇ ಕಾನೂನು ಕಾಲೇಜನ್ನು ಮೂರು ವರ್ಷ ದತ್ತು ತೆಗೆದುಕೊಂಡಿತ್ತು. ಅಲ್ಲದೆ ನಮ್ಮಲ್ಲಿನ ಬೋಧಕರು ದೇಶದ ವಿವಿಧ ವಿಶ್ವವಿದ್ಯಾಲಯ, ಕಾನೂನು ಕಾಲೇಜುಗಳಲ್ಲಿ ಉಪನ್ಯಾಸ ನೀಡಲು ಸದಾ ಸಿದ್ಧರಿದ್ದಾರೆ. ಜತೆಗೆ ಪೂರ್ವಾನುಮತಿ ಪಡೆದ ಕಾನೂನು ಕಾಲೇಜುಗಳ 10 ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರು ಎನ್‌ಎಲ್‌ಯುಗಳಿಗೆ ಭೇಟಿ ನೀಡಿ, 15 ದಿನ ಇಲ್ಲಿನ ಪಾಠ ಪ್ರವಚನಗಳನ್ನು ಕೇಳಬಹುದು. ಅವರಿಗೆ ವಸತಿ, ಊಟದ ಸೌಕರ್ಯ ಇಲ್ಲೇ ಇರುತ್ತದೆ.

* ಎನ್‌ಎಲ್‌ಯುಗಳಲ್ಲಿ ಬರಲಿರುವ ಹೊಸ ಸುಧಾರಣೆ ಅಥವಾ ಯೋಜನೆಗಳ ಬಗ್ಗೆ ಹೇಳಿ?
ದೇಶದ ಯಾವುದೇ ಎನ್‌ಎಲ್‌ಯುನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ತಮ್ಮ 10 ಸೆಮಿಸ್ಟರ್‌ ಅವಧಿಯಲ್ಲಿ ಒಂದು ಸೆಮಿಸ್ಟರ್‌ ಅನ್ನು ತಮಗಿಷ್ಟವಾದ ಎನ್‌ಎಲ್‌ಯುನಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವ ಯೋಜನೆ ಸದ್ಯದಲ್ಲಿಯೇ ಜಾರಿಯಾಗಲಿದೆ.

ಡಿಜಿಟಲ್‌ ಇಂಡಿಯಾ ವೇದಿಕೆ ಬಳಸಿಕೊಂಡು ಪ್ರಾಯೋಗಿಕವಾಗಿ ‘ಇ–ಮೂಟ್‌ ಕೋರ್ಟ್‌’ (ಅಣಕು ಕೋರ್ಟ್‌) ಸ್ಪರ್ಧೆಯನ್ನು ಆರಂಭಿಸಲಿದ್ದೇವೆ. ಆರಂಭದಲ್ಲಿ ಬೆಂಗಳೂರು, ದೆಹಲಿ, ಭೂಪಾಲ್‌, ಕೋಲ್ಕತ್ತ, ಪಟಿಯಾಲ ಎನ್‌ಎಲ್‌ಯುಗಳು ಇದರಲ್ಲಿ ಭಾಗವಹಿಸಲಿವೆ. ನಂತರ ಇದರ ವ್ಯಾಪ್ತಿಗೆ 20 ವಿ.ವಿಗಳನ್ನು ತರುತ್ತೇವೆ. ಕ್ರಮೇಣ ಇದರ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲಿದೆ. ದೇಶದ ಹಲವು ಹೈಕೋರ್ಟ್‌ಗಳಲ್ಲಿ ‘ಇ–ಫೈಲಿಂಗ್‌’ ಆರಂಭವಾಗಿದ್ದು, ಆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಪ್ರಯತ್ನ ಕೈಗೊಂಡಿದ್ದೇವೆ.

* ನೀವು ಕುಲಪತಿಯಾಗಿರುವ ಭೋಪಾಲ್‌ ಎನ್‌ಎಲ್‌ಐಯುನಲ್ಲಿ ಯಾವ ಹೊಸ ಯೋಜನೆಗಳನ್ನು ತರಲಿದ್ದೀರಿ?
ತಿಂಗಳಲ್ಲಿ ಈ ಕುರಿತು ವೈಟ್‌ ಪೇಪರ್‌ ಸಿದ್ಧಪಡಿಸಲಿದ್ದೇನೆ. ಅಲ್ಲಿನ ವಿದ್ಯಾರ್ಥಿಗಳನ್ನು ಅಕಾಡೆಮಿಕ್‌ ಆಗಿ ಬಲಿಷ್ಟಗೊಳಿಸುವ ಮತ್ತು ಬೋಧಕರಿಗೆ ವಿ.ವಿ ಹೊರತುಪಡಿಸಿ ಹೊರಗಡೆಯೂ ಬೋಧನೆಗೆ ಅವಕಾಶ ಕಲ್ಪಿಸುವ ಯೋಜನೆಗಳಿವೆ. ಅದರ ಜತೆಗೆ ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಮಾದರಿಯಲ್ಲಿ ಭೋಪಾಲ್‌ ಎನ್‌ಎಲ್‌ಐಯು ಅಭಿವೃದ್ಧಿ ಪಡಿಸುವ ಯೋಜನೆಯಿದೆ. ಸೈಬರ್‌ ಕಾನೂನು ಕುರಿತು ಅತ್ಯಾಧುನಿಕ ಮತ್ತು ಸುಸಜ್ಜಿತ ಲ್ಯಾಬ್‌ ಸಿದ್ಧಪಡಿಸಲು ಚಿಂತಿಸಿದ್ದೇನೆ.

* ವಕೀಲ ವೃತ್ತಿ ತೆಗೆದುಕೊಳ್ಳುವವರಿಗೆ ಅಖಿಲ ಭಾರತ ಬಾರ್‌ ಕೌನ್ಸಿಲ್‌ ಪ್ರವೇಶ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವುದು ಸರಿಯಾ?
ಇದು ಸರಿಯಾದ ನಿರ್ಧಾರ. ವಕೀಲ ವೃತ್ತಿಯಲ್ಲಿ ವೃತ್ತಿಪರತೆ ತರಲು ಇದು ನೆರವಾಗುತ್ತದೆ. ಮಲೇಷ್ಯಾದಂತಹ ಪುಟ್ಟ ದೇಶದಲ್ಲಿಯೇ ಇಂಥ ವ್ಯವಸ್ಥೆ ಇದೆ. ಅಮೆರಿಕದಲ್ಲಿ ವಕೀಲ ವೃತ್ತಿಯಲ್ಲಿ ಇರುವವರು ಪ್ರತಿ ವರ್ಷ ಎರಡು ಪರೀಕ್ಷೆಗಳಲ್ಲಿ ಪಾಸಾಗಬೇಕು ಎಂಬ ನಿಯಮವಿದೆ. ಈ ಮೂಲಕ ಅವರು ಪ್ರಚಲಿತ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದೇ ರೀತಿ ಭಾರತದಲ್ಲೂ ಸುಧಾರಣೆಗಳು ಬರಬೇಕು.

* ವಿದೇಶಿ ವಕೀಲರು ಭಾರತದಲ್ಲಿ ವಕೀಲ ವೃತ್ತಿ ನಡೆಸುವ ವಿಚಾರಕ್ಕೆ ತಮ್ಮ ಅಭಿಪ್ರಾಯವೇನು?
ವಿದೇಶಿ ನಾಗರಿಕರಿಗೆ ಭಾರತದಲ್ಲಿ ವಕೀಲಿ ವೃತ್ತಿ ಕೈಗೊಳ್ಳಲು ಅವಕಾಶ ಇಲ್ಲ ಎಂದು ಈಗಾಗಲೇ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಬೇಕಾದರೆ ವಿದೇಶಿ ವಕೀಲರು ಭಾರತೀಯ ವಕೀಲರಿಗೆ ಸಲಹೆಗಳನ್ನು ನೀಡಬಹುದು ಎಂದು ಅದು ಹೇಳಿದೆ. ಆದರೆ ಭಾರತೀಯ ವಕೀಲರ ಪರಿಷತ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೆಲ ದೇಶಗಳು ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಭಾರತೀಯ ವಕೀಲರಿಗೆ ಅಲ್ಲಿನ ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಅವಕಾಶ ನೀಡಿವೆ. ಅಂತಹ ದೇಶಗಳ ವಕೀಲರಿಗೆ ಕೆಲ ವಿಷಯಗಳಿಗೆ ಅನ್ವಯವಾಗುವಂತೆ ಅವಕಾಶ ನೀಡಿದರೆ ತಪ್ಪಲ್ಲ ಎಂಬುದು ಕೌನ್ಸಿಲ್‌ನ ನಿಲುವು. ಇದು ಜಾರಿಯಾಗಬೇಕು ಎಂದರೆ ಅಡ್ವೊಕೇಟ್‌ ಕಾಯ್ದೆ ಬದಲಾಗಬೇಕು.

* ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ಸಂಬಂಧಿಸಿದಂತೆ ದೇಶದಾದ್ಯಂತ ವಿವಿಧ ಅಧಿಕಾರಿಗಳಿಗೆ ತರಬೇತಿ ನೀಡಿದ್ದೀರಿ. ಈ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಿದೆಯಾ?
ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ದುರ್ಬಳಕೆ ತಡೆಯಲೆಂದು ಬಂದ ಆರ್‌ಟಿಐ ಕಾಯ್ದೆಯ ದುರ್ಬಳಕೆ ಇಂದು ಹೆಚ್ಚಾಗುತ್ತಿದೆ. ಕೆಲವರು ಸ್ವಾರ್ಥಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಬೇಸರ ತರಿಸಿದೆ.

* ಸಾಮಾನ್ಯ ಜನರಲ್ಲಿ ಕಾನೂನು ಅರಿವು ಮೂಡಿಸಲು ಎನ್‌ಎಲ್‌ಯುಗಳು ಏನು ಮಾಡುತ್ತಿವೆ?
ಬೆಂಗಳೂರಿನ ಎನ್‌ಎಲ್‌ಐಯು ಕಾನೂನು ಸಾಕ್ಷರತಾ ಕಾರ್ಯ ನಡೆಸುತ್ತಿದೆ. ನಗರದ ಸೇಂಟ್‌ ಜೋಸೆಫ್‌ ಕಾಲೇಜಿನ ಪಿಯು ವಿದ್ಯಾರ್ಥಿಗಳಿಗೆ 60 ಗಂಟೆಗಳ ಕಾನೂನು ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಂಡಿದೆ. ವಾರಕ್ಕೊಂದು ದಿನದಂತೆ ಮೂರು ಗಂಟೆಗಳ ಕಾಲ ಇಲ್ಲಿ ತರಗತಿಗಳು ತೆಗೆದುಕೊಳ್ಳುತ್ತಿದ್ದೇವೆ. ಸಾಂವಿಧಾನಿಕ, ಕಾರ್ಮಿಕ, ಕೌಟುಂಬಿಕ, ಸಂಚಾರ ಕಾನೂನುಗಳು ಸೇರಿದಂತೆ 30 ಬಗೆಯ ಕಾನೂನುಗಳ ಅರಿವು ಮೂಡಿಸುತ್ತಿದ್ದೇವೆ. ಕೊನೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಎನ್‌ಎಲ್‌ಎಸ್‌ಐಯು ಭೇಟಿಗೆ ಅವಕಾಶ ನೀಡುತ್ತೇವೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವಿನ ಜತೆಗೆ ಅವರಿಗೆ ಕಾನೂನು ವ್ಯಾಸಂಗದ ಕುರಿತು ಪ್ರೋತ್ಸಾಹ ನೀಡುತ್ತಿದ್ದೇವೆ. ಈ ರೀತಿಯ ಚಟುವಟಿಕೆ ದೇಶದ ಎಲ್ಲ ಎನ್‌ಎಲ್‌ಯುಗಳು ಮತ್ತು 1600 ಕಾನೂನು ಶಿಕ್ಷಣ ಸಂಸ್ಥೆಗಳು ಮಾಡಿದರೆ ಜನರಲ್ಲಿ ಕಾನೂನು ಅರಿವು ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಬಾರ್‌ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾಪಿಸಿ, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT