ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಕಾರ್ಯಕ್ಷಮತೆಗೆ ಸಿಕ್ಕ ಬೆಂಬಲ

Last Updated 8 ಡಿಸೆಂಬರ್ 2022, 19:00 IST
ಅಕ್ಷರ ಗಾತ್ರ

ಕಾರ್ಯಕ್ಷಮತೆಗೆ ಸಿಕ್ಕ ಬೆಂಬಲ

ರಾಜಧಾನಿ ದೆಹಲಿಯು ದೇಶದ ಎಲ್ಲ ಭಾಗಗಳವರನ್ನೂ ಒಳಗೊಂಡಿರುವ ಕ್ಷೇತ್ರ. ಇಲ್ಲಿನ ಮಹಾನಗರಪಾಲಿಕೆಯಲ್ಲಿ 15 ವರ್ಷದಿಂದ ತಳವೂರಿದ್ದ ಬಿಜೆಪಿಯ ತೆಕ್ಕೆಯಿಂದ ಆಡಳಿತವನ್ನು ಆಮ್ ಆದ್ಮಿ ಪಕ್ಷ ಈಗ ಪಡೆದುಕೊಂಡಿರುವುದು ದೊಡ್ಡ ಸಾಹಸವೇ ಸರಿ. ಇದಕ್ಕೆ, ಅರವಿಂದ ಕೇಜ್ರಿವಾಲ್ ಅವರ ವರ್ಚಸ್ಸು ಮತ್ತು ದೆಹಲಿಯ ಸರ್ಕಾರವನ್ನು ನಡೆಸುವುದರಲ್ಲಿ ಅವರ ಕಾರ್ಯಕ್ಷಮತೆ ಕಾರಣ ಇದ್ದಿರಬಹುದು. ಜನರು ತಮ್ಮ ಅಪೇಕ್ಷೆಗೆ ಸ್ಪಂದಿಸಿದ ಆಡಳಿತವನ್ನು ಮೆಚ್ಚಿರುವುದರಿಂದಲೇ ಮಹಾನಗರಪಾಲಿಕೆ ಚುನಾವಣೆಯಲ್ಲೂ ಬೆಂಬಲ ಸೂಚಿಸಿದ್ದಾರೆ. ಇದು ಉಳಿದ ಪಕ್ಷಗಳ ಕಣ್ಣು ತೆರೆಸಿದರೆ ಅದು ದೊಡ್ಡ ಸಾಧನೆ.

ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ತಮ್ಮ ವಿರೋಧಿಗಳ ಬಗೆಗಿನ ವೈಯಕ್ತಿಕ ಟೀಕೆಗಳಿಗೇ ಸೀಮಿತವಾಗಿರುವುದರಿಂದ ಜನ ರೋಸಿಹೋಗಿದ್ದಾರೆ. ಇದನ್ನು ಈ ಪಕ್ಷಗಳು ಅರಿತರೆ ಉತ್ತಮ. ಜನರಿಗೆ ಬೇಕಿರುವುದು ಒಳ್ಳೆಯ ಆಡಳಿತ ಕೊಡುವ ಪಕ್ಷವೇ ವಿನಾ ಜನನಾಯಕರ ನಾಲಿಗೆಯ ಚಟದ ವಾಗ್ಝರಿಯಲ್ಲ ಎಂಬುದು ಈ ಚುನಾವಣಾ ಫಲಿತಾಂಶದಿಂದ ರುಜುವಾತಾಗಿದೆ.

ಕೆ.ಎನ್.ಭಗವಾನ್, ಬೆಂಗಳೂರು

ಪ್ರಜಾಪ್ರಭುತ್ವದ ಗೆಲುವು, ಎಚ್ಚರಿಕೆಯ ಸಂದೇಶ

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ದೆಹಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಎಎಪಿಯನ್ನು ಮತದಾರರು ಗೆಲ್ಲಿಸಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ಗೆದ್ದಿದೆ. ಜೊತೆಗೆ ಈ ಫಲಿತಾಂಶವು ಒಂದಲ್ಲ ಒಂದು ರೀತಿಯಲ್ಲಿ ಎಲ್ಲ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶ ನೀಡುವಂತಿದೆ.

ಡಾ. ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ಸೇಬು ಹಾರವಾಗದಿರಲಿ, ಆಹಾರವಾಗಲಿ

ಬರುವ ವಿಧಾನಸಭಾ ಚುನಾವಣೆ ಕಾರಣದಿಂದ ಯಾತ್ರೆ, ಸಮಾವೇಶದಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ರಾಜಕೀಯ ನಾಯಕರಿಗೆ ಬೆಂಬಲಿಗರು ಬೃಹತ್ ಸೇಬಿನ ಹಾರಗಳನ್ನು ಹಾಕಿ ಸ್ವಾಗತಿಸಿರುವುದು
ವರದಿಯಾಗಿದೆ. ವಾಸ್ತವವಾಗಿ ಸೇಬುಹಣ್ಣು ತುಂಬಾ ಸೂಕ್ಷ್ಮ, ಮೃದುವಾಗಿದ್ದು, ಅದಕ್ಕೆ ಸೂಜಿ, ದಬ್ಬಣ ಹಾಕಿ ದಾರದಲ್ಲಿ ಪೋಣಿಸಿದರೆ ಕೆಲವೇ ಸಮಯದಲ್ಲಿ ಅದು ಕೆಡುತ್ತದೆ. ಇದರಿಂದ ಬಳಕೆಗೂ ಯೋಗ್ಯವಲ್ಲ, ಬೆಲೆಯೂ ಕೆ.ಜಿ.ಗೆ ಶತಕ ದಾಟಿಯೇ ಇರುತ್ತದೆ! ಎಷ್ಟೋ ಬಡವರು ಕೊಳ್ಳಲಾಗದೆ, ನೋಡಿಯೇ ಆಸೆಪಟ್ಟು ಸುಮ್ಮನಿರುತ್ತಾರೆ.
ಇಂತಹ ಆಹಾರ ಪದಾರ್ಥವನ್ನು ವೃಥಾ ಪೋಲು ಮಾಡುವುದರ ಬದಲಾಗಿ, ಸಮಾವೇಶಕ್ಕೆ ತಾವೇ ಕರೆತರುವ ಬಡವರಿಗೆ ಹಂಚಿದರೆ ಖಂಡಿತ ಉಪಯೋಗವಾಗುತ್ತದೆ. ಒಂದು ಪಕ್ಷದವರು ತಮ್ಮ ನಾಯಕನ ಕೊರಳಿಗೆ ಹತ್ತು ಕೆ.ಜಿ. ತೂಕದ ಸೇಬಿನ ಹಾರ ಹಾಕಿದರೆಂದು ಮತ್ತೊಂದು ಪಕ್ಷದವರು ತಮ್ಮ ನಾಯಕನಿಗೆ ಅದಕ್ಕೂ ಮಿಗಿಲಾಗಿ ಸೇಬಿನ ಹಾರ ಹಾಕುತ್ತಾರೆ! ಸೇಬು ಪೋಲು ತಡೆಯುವ ಬಗ್ಗೆ ಎಲ್ಲ ಪಕ್ಷದವರು ಗಮನಹರಿಸುವುದು ಅಗತ್ಯ.

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಬೇಕು ಹೃದಯ ಬೆಸೆಯುವ ಸೇತುವೆ

ಹುಣಸೂರಿನ ಹನುಮಂತ ಉತ್ಸವದಲ್ಲಿ ಹನುಮಭಕ್ತರಿಗೆ ಮುಸ್ಲಿಂ ಯುವಕರು ಗುಲಾಬಿ ಹೂ, ಹಣ್ಣು ಮತ್ತು ಮಜ್ಜಿಗೆಯನ್ನು ನೀಡಿ ಶುಭ ಹಾರೈಸುವ ಮೂಲಕ ಕೋಮು ಸಾಮರಸ್ಯ ಮೆರೆದಿರುವುದು ಇತ್ತೀಚಿನ ದಿನಗಳಲ್ಲಿ ಕೇಳಿಬಂದ ಸಮಾಧಾನಕರ ವರದಿ. ದೇಶದಲ್ಲಿ ಸಂಘರ್ಷಮಯ ವಾತಾವರಣದ ಸುದ್ದಿಗಳೇ ಕೇಳಿಬರುತ್ತಿರುವ ಇಂದಿನ ಸಂಕಟಮಯ ಸನ್ನಿವೇಶದಲ್ಲಿ ಕೋಮುಸೌಹಾರ್ದದ ತಂಗಾಳಿ ಬೀಸುತ್ತಿರುವುದು ಶ್ಲಾಘನೀಯ. ಉಭಯ ಕೋಮುಗಳಲ್ಲಿನ ಪ್ರಜ್ಞಾವಂತ ಯುವಕರು ಕೂಡಲೇ ಮಾಡಲೇಬೇಕಾದಂತಹ ಕೆಲಸವಿದು.

ಮನಸ್ಸುಗಳನ್ನು ಬೆಸೆಯುವ ಕೆಲಸ ಈಗ ತುರ್ತಾಗಿ ಆಗಬೇಕಾಗಿದೆ. ಧಾರ್ಮಿಕ ಮುಖಂಡರು ಉದಾತ್ತ ಚಿಂತನೆಗಳನ್ನು ಜನರ ಎದೆಗಳಲ್ಲಿ ಬಿತ್ತಿ, ನಾಳಿನ ಭಾರತವನ್ನು ನಿಜವಾದ ಅರ್ಥದಲ್ಲಿ ಧರ್ಮನಿರಪೇಕ್ಷವಾಗಿಸ
ಬೇಕಾಗಿದೆ. ಭವಿಷ್ಯದ ಬದುಕನ್ನು ಭಯಮುಕ್ತವಾಗಿಸಬೇಕಾಗಿದೆ.

ಮೋದೂರು ಮಹೇಶಾರಾಧ್ಯ, ಹುಣಸೂರು

ಭಾಷಾ ಸಂಘದೊಂದಿಗೆ ನಂಟು: ನಿಷೇಧ ಸಲ್ಲ

‘ಧರ್ಮ, ಜನಾಂಗ, ಪ್ರದೇಶ, ಭಾಷೆ, ಕೋಮುವಾದ ಕೆರಳಿಸುವ ಸಂಸ್ಥೆ ಮತ್ತು ಸಂಘಟನೆಗಳ ಜೊತೆಗೆ ಸರ್ಕಾರಿ ನೌಕರರು ಕೈಜೋಡಿಸುವುದಕ್ಕೆ ನಿಷೇಧ ಹೇರಲು ಸರ್ಕಾರ ಮುಂದಾಗಿದೆ’ ಎಂದು ವರದಿಯಾಗಿದೆ (ಪ್ರ.ವಾ., ಡಿ. 8). ಭಾಷೆಯೊಂದನ್ನು ಬಿಟ್ಟು ಬೇರೆಲ್ಲದರ ನಿಷೇಧ ಒಪ್ಪತಕ್ಕದ್ದೇ. ಆದರೆ, ಭಾಷೆಯ ವಿಚಾರದಲ್ಲಿ ರಾಜ್ಯದ ಅಧಿಕೃತವಾದ ಮತ್ತು ಆಡಳಿತ ಭಾಷೆಯಾದ ಕನ್ನಡದ ಸಂಘ ಸಂಸ್ಥೆ ಅಥವಾ ಕೆಲಸಗಳಲ್ಲಿ ಕೈಜೋಡಿಸಿದರೆ ತಪ್ಪೇನೂ ಆಗದು. ನಮ್ಮ ಭಾಷೆಯ ವಿಚಾರ ಕುರಿತಂತೆ ನಿರ್ಬಂಧ ಹೇರುವುದು ಸರಿಯಲ್ಲ. ಹಾಗೆ ಮಾಡಿದರೆ ಕನ್ನಡಪರ ಹೋರಾಟವೇ ನಿಂತುಹೋಗುತ್ತದೆ ಹಾಗೂ ಪರಭಾಷಾ ದಾಳಿ ಮತ್ತಷ್ಟು ಹೆಚ್ಚಾಗುವ ಸಂಭವ ಇದೆ.

ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕು ಮತ್ತು ಕಡತಗಳು ಸಹ ಕನ್ನಡದಲ್ಲೇ ಇರಬೇಕು ಎಂಬ ಆದೇಶವೇ ಇದ್ದರೂ ಅದರ ಅನುಷ್ಠಾನ ಪರಿಪೂರ್ಣವಾಗಿಲ್ಲ. ಸರ್ಕಾರದ ಅನೇಕ ಕಡೆ ಕನ್ನಡದ ವಾತಾವರಣ ಇದೆ ಎಂದರೆ ಅದಕ್ಕೆ ಕನ್ನಡ ಸಂಘಟನೆಗಳೇ ಕಾರಣ ಎಂಬುದು ಗಮನಾರ್ಹ. ಇದನ್ನು ಗಮನಿಸಿ, ಭಾಷಾ ಸಂಘಟನೆಗಳ ಜೊತೆ ನಂಟು ಹೊಂದುವುದಕ್ಕೆ ನಿರ್ಬಂಧ ಹೇರುವ ಪ್ರಸ್ತಾವವನ್ನು ಕೈಬಿಡಬೇಕು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT