ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಸೋಮವಾರ, 20 ಮಾರ್ಚ್‌ 2023

ಅಕ್ಷರ ಗಾತ್ರ

ಕನ್ನಡ: ಮೂಲ ಪದ ಅಪ್ರಸ್ತುತಗೊಳ್ಳದಿರಲಿ

ಬೆಳೆಯುವ ಕನ್ನಡ ಭಾಷೆಗೆ ಮಡಿ ಮೈಲಿಗೆಯ ಹಂಗಿಲ್ಲ. ಆದರೆ, ಬೇರೆ ಭಾಷೆಗಳಿಂದ ಪಡೆಯುವ ಎರವಲು ಪದಗಳು ಕನ್ನಡ ಪದಗಳ ಅಸ್ತಿತ್ವಕ್ಕೇ ಕುತ್ತು ತರುವಂತೆ ಇರಬಾರದು. ಸೊಗಸಾದ ಕನ್ನಡ ಪದಗಳಿದ್ದಾಗ್ಯೂ ಅವುಗಳನ್ನು ಮೂಲೆಗೆ ತಳ್ಳಿ, ಇಂಗ್ಲಿಷ್ ಪದಗಳನ್ನು ಬಳಸುವ ಪ್ರವೃತ್ತಿ ಮುದ್ರಣ, ಟಿ.ವಿ. ಮಾಧ್ಯಮಗಳಲ್ಲಿ ಹಾಗೂ ದಿನನಿತ್ಯ ಜನರಾಡುವ ಮಾತಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಭಾಷೆಯು ಬಳಕೆಯಿಂದ ಮಾತ್ರ ಬದುಕುತ್ತದೆ. ಬೇರೆ ಬೇರೆ ಭಾಷೆಯ ಪದಗಳು ಕನ್ನಡದ ಮೂಲ ಪದಗಳನ್ನು ಅಪ್ರಸ್ತುತಗೊಳಿಸಬಾರದು. ಹಾಗೆ ಮಾಡಿದರೆ ಭಾಷೆ ಬಡವಾಗುತ್ತದೆ. ಈ ಎಚ್ಚರವನ್ನು ಹೀಗೆ ಬಳಸುವವರು, ಅದರಲ್ಲೂ ಹೆಚ್ಚು ಜನರನ್ನು ತಲುಪುವ ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕು.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

***

ಯುವ ರಾಜಕಾರಣಿಗಳಿಗೆ ಸಿಗಲಿ ಪ್ರಾತಿನಿಧ್ಯ

ವಿಧಾನಸಭೆ ಚುನಾವಣೆಗಾಗಿ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಇನ್ನೇನು ಕೆಲವೇ ದಿನಗಳಲ್ಲಿ ಅಧಿಕೃತ ಹುರಿಯಾಳುಗಳನ್ನು ಘೋಷಿಸಲಿವೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ, ಸಂಬಂಧಪಟ್ಟ ಸಮಿತಿಗಳಿಂದ ಶಿಫಾರಸು ಮತ್ತು ಆನಂತರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಬಾರಿಯೂ ಯುವಜನರಿಗೆ, ಹೊಸಬರಿಗೆ ಅವಕಾಶ ಸಿಗುವ ಸಾಧ್ಯತೆ ಬಹಳ ಕಡಿಮೆ ಎಂದು ಅನ್ನಿಸುತ್ತದೆ.

ನಮ್ಮಲ್ಲಿ ಯುವಪೀಳಿಗೆಯ ಪ್ರಮಾಣ ದೊಡ್ಡಮಟ್ಟದಲ್ಲಿ ಇದೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಅವರ ಪಾಲುಗಾರಿಕೆ ಬಹಳ ಕಡಿಮೆ ಇದೆ. ಯುವಕರು ಪಕ್ಷದ ಸದಸ್ಯತ್ವ ಪಡೆದಿದ್ದರೂ ಅವರಿಗೆ ಬೇರೆ ಬೇರೆ ಹಂತಗಳಲ್ಲಿ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಚುನಾವಣೆಗೆ ಸ್ಪರ್ಧಿಸುವ ಅವಕಾಶವಂತೂ ಬಹಳ ಕಡಿಮೆ. ಇದರಿಂದಾಗಿ ಯುವಜನರಲ್ಲಿ ರಾಜಕೀಯ ಹುರುಪು ಕುಂಠಿತಗೊಳ್ಳುತ್ತಿದೆ. ಕೆಲವರು ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್‍ಗಾಗಿ ನಿರಂತರ ಪ್ರಯತ್ನ ನಡೆಸುತ್ತಾರೆ. ಆದರೆ ಪಕ್ಷಗಳು ಪರಿಗಣಿಸುವ ಹಿರಿತನ, ಹಣಬಲದ ಮುಂದೆ ಯುವಜನರ ಶ್ರಮ ವಿಫಲವಾಗುತ್ತಿದೆ. ಪೋಸ್ಟರ್ ಅಂಟಿಸಲು, ಪ್ರಚಾರ ಮಾಡಲು ಯುವಕರನ್ನು ಬಳಸಿಕೊಳ್ಳುತ್ತಿರುವ ಹಿರಿಯ ರಾಜಕಾರಣಿಗಳು, ಯುವಕರಿಗೂ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಬಯಸದೇ ಇರುವುದು ದುರಂತ. ಯುವಜನರಿಗೆ ವಿವಿಧ ಹಂತಗಳಲ್ಲಿ ಸೂಕ್ತ ಪ್ರಾತಿನಿಧ್ಯ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವುದು ಪಕ್ಷಗಳು ಮತ್ತು ಅವುಗಳ ಯುವ ಘಟಕಗಳ ಹೊಣೆಗಾರಿಕೆಯಾಗಿದೆ.

ಬೇ.ನ.ಶ್ರೀನಿವಾಸಮೂರ್ತಿ, ತುಮಕೂರು

***

ರೋಡ್ ಷೋ ಆಯೋಜನೆ ತಂದ ಬೇನೆ

ಕೆಂಗೇರಿಯಲ್ಲಿ ಇತ್ತೀಚೆಗೆ ರಾಜಕಾರಣಿಗಳಿಂದ ರೋಡ್ ಷೋ ಆಯೋಜಿಸಲಾಗಿತ್ತು. ಅದರ ಹಿಂದಿನ ದಿನ ರಾತ್ರಿ ಕೆಂಗೇರಿ ಬಸ್ ನಿಲ್ದಾಣದಲ್ಲಿ ವಯಸ್ಸಾದವರು, ಹೆಂಗಸರು, ಮಕ್ಕಳು ಸೇರಿದಂತೆ ಸುಮಾರು 2,000 ಜನ ಸಂಚಾರಕ್ಕೆ ಬಸ್‌ಗಳಿಲ್ಲದೆ ಹಿಡಿಶಾಪ ಹಾಕುತ್ತಿದ್ದರು. ನಮ್ಮ ಕಣ್ಣ ಮುಂದೆಯೇ ‘ಒಪ್ಪಂದದ ಮೇರೆಗೆ’ ಎಂಬ ಫಲಕವನ್ನು ಹೊತ್ತಿದ್ದ ನೂರಾರು ಖಾಲಿ ಬಸ್ಸುಗಳು ರೋಡ್ ಷೋಗಾಗಿ ಹೋಗುತ್ತಿದ್ದವು.

ಪ್ರಯಾಣಿಕರು ವಿಚಾರಿಸಲು ಮುಂದಾದಾಗ ನಿಲ್ದಾಣದ ಅಧಿಕಾರಿಗಳು ಬಸ್ ಇಲ್ಲ ಎಂದು ಕೈ ಚೆಲ್ಲುತ್ತಿದ್ದರು. ರೋಡ್ ಷೋದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೆ ₹ 1,000ದ ಜೊತೆಗೆ ಒಂದು ಚೀಲದಲ್ಲಿ 10 ಕೆ.ಜಿ. ಅಕ್ಕಿ, 1 ಕೆ.ಜಿ ಬೇಳೆ, ಸಕ್ಕರೆ, ಉಪ್ಪು, ಎಣ್ಣೆ ನೀಡಿ, ಬಾಡೂಟವನ್ನು ನೀಡುವ ಆಶ್ವಾಸನೆ ನೀಡಲಾಗಿತ್ತೆಂಬುದು ತಿಳಿಯಿತು. ಇವೆಲ್ಲ ಲಂಚ ರಾಕ್ಷಸರಿರುವ ಪ್ರಜಾಪ್ರಭುತ್ವದ ಅಟ್ಟಹಾಸ. ಜನರ ಕಷ್ಟಗಳಿಗೆ ಕೊನೆ ಇಲ್ಲವೇ?

ಡಾ. ಎಚ್.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

***

ಇತಿಹಾಸ ತಿರುಚುವ ಕೆಲಸ ಸಲ್ಲ

ಟಿಪ್ಪು ಸುಲ್ತಾನನನ್ನು ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳು ಕೊಂದರು ಎಂದು ಹುಯಿಲೆಬ್ಬಿಸುತ್ತಿರುವ ಕೆಲವು ವೈಯಕ್ತಿಕ ಹಿತಾಸಕ್ತಿಗಳು, ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ. ಟಿಪ್ಪು ಸುಲ್ತಾನ್ ನಾಲ್ಕನೆಯಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಕೊಲೆಗೀಡಾದ ಎಂಬುದು ಐತಿಹಾಸಿಕವಾಗಿ ದಾಖಲಾಗಿದೆ. ಆದರೆ ಈಗ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಹೆಸರುಗಳನ್ನು ತೇಲಿಬಿಡುವ ಮೂಲಕ ರಾಜಕೀಯ ಲಾಭ ಪಡೆಯಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ.

ಅಷ್ಟೇ ಅಲ್ಲದೆ ಒಂದು‌ ನಿರ್ದಿಷ್ಟ ಕೋಮಿನ ವಿರುದ್ಧ ಗೂಬೆ‌ ಕೂರಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಉರಿಗೌಡ ಮತ್ತು ನಂಜೇಗೌಡರು ಕಾಲ್ಪನಿಕ ವ್ಯಕ್ತಿಗಳು ಹಾಗೂ ಅವರ ಬಗ್ಗೆ ಇತಿಹಾಸದಲ್ಲಿ ಯವುದೇ ದಾಖಲೆ ಇಲ್ಲ ಎಂದು ಅನೇಕ ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಗೂಬೆ ಕೂರಿಸುವ ಕೆಲಸ ಇನ್ನಾದರೂ ನಿಲ್ಲಲಿ.

ಕೆ.ವಿ.ವಾಸು, ಮೈಸೂರು

***

ಸಮುದಾಯ ಅಡುಗೆಮನೆ: ಬೇಕು ಪ್ರಾಶಸ್ತ್ಯ

ಎಲ್ಲೆಡೆ ಸಮುದಾಯ ಅಡುಗೆಮನೆಗಳನ್ನು ನಿರ್ಮಾಣ ಮಾಡಬೇಕು ಎಂಬ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸಲಹೆ (ಪ್ರ.ವಾ., ಮಾರ್ಚ್ 19) ಸಮಯೋಚಿತವಾಗಿದೆ. ವಿದ್ಯೆ ಮತ್ತು ಕೌಶಲ ಹೊಂದಿದ ಬೇಕಾದಷ್ಟು ಹೆಣ್ಣುಮಕ್ಕಳು ಅಡುಗೆ ಮನೆಯ ಜವಾಬ್ದಾರಿಗಳಿಂದ ತಮ್ಮ ಉದ್ಯೋಗ ಮಾಡುವ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಏಕ ವ್ಯಕ್ತಿಯ ದುಡಿಮೆಯಿಂದ ಸಂಸಾರ ನಿಭಾಯಿಸುವುದು ಕಷ್ಟಕರ. ಹೀಗಾಗಿ ಗಂಡಸರೂ ಆತಂಕ ಮತ್ತು ದುಗುಡ ಎದುರಿಸುತ್ತಿದ್ದಾರೆ.

ಸಮುದಾಯ ಆಡುಗೆಮನೆಗಳನ್ನು ಅಪಾರ್ಟ್‌ಮೆಂಟ್, ಏರಿಯಾ ಮಟ್ಟಗಳಲ್ಲಿ ಸ್ಥಾಪಿಸಿದರೆ, ಸ್ತ್ರೀಯರಿಗೆ ಅಡುಗೆಮನೆ ಕಾರ್ಯದಿಂದ ಸ್ವಲ್ಪವಾದರೂ ಮುಕ್ತಿ ಸಿಗಬಹುದು. ಸರ್ಕಾರ, ಸಂಘ ಸಂಸ್ಥೆಗಳು ಈ ಕುರಿತು ಯೋಚಿಸಿ ಕಾರ್ಯಪ್ರವೃತ್ತವಾಗಬೇಕಿದೆ.

- ವೀಣಾ ದೇವಿ ಆರ್.ಎಸ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT