ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕಿಡಿಗೇಡಿಗಳು ವಾಸ್ತವ ಅರಿಯಲಿ

Last Updated 7 ಡಿಸೆಂಬರ್ 2022, 19:18 IST
ಅಕ್ಷರ ಗಾತ್ರ

ಕಿಡಿಗೇಡಿಗಳು ವಾಸ್ತವ ಅರಿಯಲಿ

ಮಹಾರಾಷ್ಟ್ರದ ಕೆಲವು ಪುಂಡರು ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡುತ್ತಿರುವುದಕ್ಕೆ ಕಾರಣೀಭೂತರು ಮಹಾರಾಷ್ಟ್ರದ ರಾಜಕಾರಣಿಗಳು. ಚುನಾವಣೆ ಹತ್ತಿರ ಬಂದಾಗ ಗಡಿತಂಟೆ ಕುರಿತು ಕೆದಕುವುದು ಅವರಿಗೆ ಚಾಳಿ ಆಗಿದೆ. ಗಡಿ ವಿವಾದ ಬಗೆಹರಿಸಲು ಆಯೋಗವನ್ನು ರಚಿಸುವಂತೆ ಆಗ್ರಹಿಸಿದವರು ಮಹಾರಾಷ್ಟ್ರದವರೇ. ಆದರೆ ಮಹಾಜನ್ ಆಯೋಗದ ವರದಿ ತಮ್ಮ ಪರವಾಗಿ ಇಲ್ಲ ಎಂಬ ಕಾರಣಕ್ಕೆ ವಿರೋಧ ಮಾಡುತ್ತಿರುವವರೂ ಅವರೇ. ಪ್ರಸ್ತುತ ಗಡಿ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈ ವಿವಾದದ ಬಗ್ಗೆ ಮಾತನಾಡಬಾರದು ಎಂಬ ಕನಿಷ್ಠ ಜ್ಞಾನವೂ ಮಹಾರಾಷ್ಟ್ರದ ರಾಜಕಾರಣಿಗಳಿಗೆ ಇಲ್ಲದಿರುವುದು ಶೋಚನೀಯ.

ಮರಾಠಿ ಭಾಷಿಕರು ಹಾಗೂ ಕನ್ನಡಿಗರು ಗಡಿಭಾಗಗಳಲ್ಲಿ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ. ಆದರೆ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕರ್ನಾಟಕದ ಬಸ್‌ಗಳಿಗೆ ಕಲ್ಲು ತೂರಾಟ ಮಾಡುವುದು, ಅಲ್ಲಿನ ಕನ್ನಡಿಗರಿಗೆ ತೊಂದರೆ ಕೊಡುವಂತಹ ಕಿಡಿಗೇಡಿತನವನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ. ಅದು ಎಂದೆಂದೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ. ಈ ಸರಳ ಸತ್ಯವನ್ನು ಅವರು ಅರಿಯಬೇಕು.

ಮಧು ಕೆ. ಕೊಟ್ಟೂರು, ವಿಜಯನಗರ

‘ನಮ್ಮ ಕ್ಲಿನಿಕ್’: ಆಯುರ್ವೇದ ವೈದ್ಯರಿರಲಿ

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಾರ್ಯಾರಂಭ ಮಾಡಲಿರುವ ‘ನಮ್ಮ
ಕ್ಲಿನಿಕ್’ಗಳಿಗೆ ಅಲೋಪಥಿ ವೈದ್ಯರ ಜೊತೆಗೆ ಆಯುರ್ವೇದ ವೈದ್ಯರನ್ನೂ ನೇಮಕ ಮಾಡಿಕೊಳ್ಳಬೇಕು. ಜನರಲ್ಲಿ ಆಹಾರ ಅಭ್ಯಾಸದ ಬಗ್ಗೆ, ಸಿರಿಧಾನ್ಯಗಳ ಉಪಯೋಗದ ಬಗ್ಗೆ, ಔಷಧೀಯ ಸಸ್ಯಗಳ ಬಗ್ಗೆ, ‘ಆಹಾರವೇ ಔಷಧ, ಅಡುಗೆ ಮನೆಯೇ ಕ್ಲಿನಿಕ್’ ಎನ್ನುವ ಭಾರತೀಯ ಆಹಾರಶಾಸ್ತ್ರದ ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಈ ದಿಸೆಯಲ್ಲಿ ತಜ್ಞರ ಸಲಹೆ ಪಡೆದು ಬಿಎಎಂಎಸ್ ಮತ್ತು ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ
ಪಡೆದ ವೈದ್ಯರನ್ನು ನೇಮಕ ಮಾಡಿಕೊಳ್ಳಲಿ. ಈ ಮೂಲಕ, ಆಯುರ್ವೇದ ಕಲಿತ ವೈದ್ಯರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳೋಣ.

ತಾ.ಸಿ.ತಿಮ್ಮಯ್ಯ, ಬೆಂಗಳೂರು

ಏಕತೆಯ ಪ್ರಯತ್ನ ಸ್ವಾಗತಾರ್ಹ

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣದ ದಿನವೇ ಸಮಾನಮನಸ್ಕ ದಲಿತ ಸಂಘಟನೆಗಳು ಒಗ್ಗಟ್ಟು ಪ್ರದರ್ಶನ ಮಾಡಿರುವುದರಿಂದ ಅಂಬೇಡ್ಕರ್ ಅವರ ಆಲೋಚನೆ, ಚಿಂತನೆಗೆ ಮರುಹುಟ್ಟು ನೀಡಿದಂತೆ ಆಗಿದೆ ಮತ್ತು ಸಂಘಟನೆಗೆ ಆನೆಬಲ ಬಂದಂತೆ ಆಗಿದೆ. ಅಷ್ಟಲ್ಲದೆ ಈ ಸಮಿತಿಯು ಕೋಮುವಾದಿ ಶಕ್ತಿಗಳು ಹಾಗೂ ರಾಜಕೀಯ ಪಕ್ಷಗಳ ಜೊತೆ ನಂಟು ಹೊಂದಿರುವವರನ್ನು ಹೊರಗಿಟ್ಟಿರುವ ವಿಚಾರ ಅಭಿನಂದನೆಯ ಜೊತೆಗೆ ಸ್ವಾಗತಾರ್ಹ ಸಹ.

ದೇಶವನ್ನು ಆಳುವ ಸರ್ಕಾರಗಳು ಸಂವಿಧಾನವನ್ನೇ ದುರ್ಬಲಗೊಳಿಸುತ್ತಿರುವ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹೊಸ ಚೈತನ್ಯ ಪಡೆಯುತ್ತಿರುವುದು ಹಾಗೂ ಎರಡೂವರೆ ದಶಕಗಳಿಂದಲೂ ಚದುರಿಹೋಗಿದ್ದ ದಲಿತ ಸಂಘಟನೆಗಳು ಒಂದುಗೂಡುತ್ತಿರುವುದು ಖುಷಿಪಡುವ ಸಂಗತಿಯಾಗಿದೆ. ಇಂತಹ ಪ್ರಯತ್ನ ಫಲಿಸಿದರೆ ಸಂವಿಧಾನದ ಆಶಯಗಳನ್ನು ಈಡೇರಿಸಲು ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಪಸರಿಸಲು ಬಹುದೊಡ್ಡ ಶಕ್ತಿ ದೊರೆತಂತಾಗುತ್ತದೆ. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತು ಇಲ್ಲಿ ನೆನಪಾಗುತ್ತದೆ.

ಭೀಮಾಶಂಕರ ದಾದೆಲಿ ಹಳಿಸಗರ, ಶಹಾಪುರ

ಪೋಷಕರ ನಡವಳಿಕೆಯೇ ಮೊದಲ ಪಾಠ

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ ಹೆಚ್ಚು ಎಂದು ಹೇಳಿರುವ ಸದಾಶಿವ್ ಸೊರಟೂರು ಅವರ ಲೇಖನ (ಸಂಗತ, ಡಿ. 6) ಇಂದಿನ ಸ್ಥಿತಿಗೆ ಕನ್ನಡಿ ಹಿಡಿದಂತೆ ಇದೆ. ಮಕ್ಕಳ ಮೇಲಿನ ಕುರುಡು ಪ್ರೀತಿ ಒಂದು ಕಡೆಯಾದರೆ, ಪೋಷಕರು ಮಕ್ಕಳೆದುರು ಮಾದರಿ ಎಂಬಂತೆ ಬದುಕಬೇಕು ಎಂಬ ನೈತಿಕ ಪ್ರಜ್ಞೆ ನಾಪತ್ತೆ
ಯಾಗಿರುವುದು ಮತ್ತೊಂದು ದುರಂತ. ಬಹುತೇಕ ಮಕ್ಕಳಿಗೆ ಅಪ್ಪನೇ ಬಹು ದೊಡ್ಡ ಹೀರೊ. ಅಪ್ಪ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರೆ ಮಕ್ಕಳೂ ವೀಕ್ಷಿಸುತ್ತಾರೆ. ಅಪ್ಪ ಬೇಜವಾಬ್ದಾರಿಯಿಂದ ವರ್ತಿಸಿದರೆ ಮಕ್ಕಳೂ ಅದನ್ನೇ ಮೈಗೂಡಿಸಿಕೊಳ್ಳುತ್ತಾರೆ. ಅಪ್ಪ ಸುಳ್ಳು ಸರ್ಟಿಫಿಕೇಟುಗಳನ್ನು ನೀಡಿ ಮೋಸಗಾರನಂತೆ ವರ್ತಿಸಿದರೆ ಮಕ್ಕಳೂ ಅದೇ ಸರಿ ಎಂದು ಭಾವಿಸುತ್ತಾರೆ. ಅಪ್ಪ ತನಗೆ ಗೊತ್ತಿರುವ ಅರೆಬರೆ ಜ್ಞಾನವೇ ವಿಶ್ವರೂಪವೆಂದು ಅಹಂಕಾರದಿಂದ ವರ್ತಿಸಿದರೆ ಮಕ್ಕಳೂ ಅದನ್ನೇ ಅನುಸರಿಸಿ, ಆಳವಾಗಿ ಅಧ್ಯಯನ ಮಾಡುವುದನ್ನೇ ಬಿಡುತ್ತಾರೆ.

ಪೋಷಕರು ತಮ್ಮ ನಡವಳಿಕೆಯಲ್ಲಿ ಪ್ರಾಮಾಣಿಕತೆಯನ್ನು ಹೊಂದಿದ್ದರೆ ಮಕ್ಕಳಿಗೆ ಅದೇ ಮೊದಲ ಪಾಠ. ತಮ್ಮ ಬದುಕಿನಲ್ಲೂ ಶಿಸ್ತು ಅಳವಡಿಸಿಕೊಳ್ಳದೆ ಶಾಲೆಯಲ್ಲಿ ಶಿಕ್ಷಕರು ತಿದ್ದಿದಾಗಲೂ ಕೊಂಕು ತೆಗೆಯುವವರು ತಮ್ಮ ಮಕ್ಕಳ ಭವಿಷ್ಯಕ್ಕೇ ಮಾರಕವಾಗಿ ಇರುತ್ತಾರೆ. ಅದರ ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ.

ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ನಿರಂಕುಶ ಆಳ್ವಿಕೆಗೆ ಕೊನೆಯೆಂದು?

ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಸಿನಿಮಾಗಳನ್ನು ವೀಕ್ಷಿಸಿದ್ದಕ್ಕಾಗಿ ಉತ್ತರ ಕೊರಿಯಾ
ಸರ್ಕಾರವು ಪ್ರೌಢಶಾಲೆಯ ಇಬ್ಬರು ಬಾಲಕರನ್ನು ಗಲ್ಲಿಗೇರಿಸಿದ ಸುದ್ದಿ ತಿಳಿದು ವಿಷಾದವಾಯಿತು. ಉತ್ತರ ಕೊರಿಯಾದಲ್ಲಿ ಈಗ ಎಂಥ ದುಃಸ್ಥಿತಿ ಇದೆ ಎಂಬುದನ್ನು ಇದು ತಿಳಿಸುತ್ತದೆ ಮತ್ತು ಅಲ್ಲಿನ ಅಮಾನವೀಯ ಆಡಳಿತಕ್ಕೆ ಸಾಕ್ಷಿಯಾಗಿದೆ.

ಈ ಪ್ರಕರಣವು ಉತ್ತರ ಕೊರಿಯಾದ ಸರ್ವಾಧಿಕಾರಿ ಆಡಳಿತಕ್ಕೆ ಕೊನೆಯೆಂದು ಎಂದು ವಿಶ್ವ ಸಮುದಾಯವು ಯೋಚಿಸುವಂತೆ ಮಾಡಿದೆ.

ಎಚ್.ಆರ್.ವಸ್ತ್ರದ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT