ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಗ’ದ ಮಲ್ಲಿಗೆ ಕಂಪಿಗೆ ಕಾದಿದೆ ತಿಗಳರಪೇಟೆ

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಭರದ ಸಿದ್ಧತೆ
Last Updated 29 ಮಾರ್ಚ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ಚೈತ್ರಮಾಸದ ಹುಣ್ಣಿಮೆ ಚಂದಿರನ ಬೆಳದಿಂಗಳಲ್ಲಿ ಮಲ್ಲಿಗೆ ಘಮಲು ಸೂಸುತ್ತಾ ಸಾಗುವ ಕರಗ ಉತ್ಸವಕ್ಕೆ ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಭರದ ಸಿದ್ಧತೆಗಳು ಸಾಗಿವೆ.

‘ಬೆಂಗಳೂರು ಕರಗ’ ಎಂದೇ ಜಗದ್ವಿಖ್ಯಾತಿಯಾಗಿರುವ ಧರ್ಮ­ರಾಯ ಸ್ವಾಮಿ ಕರಗ ಉತ್ಸವ ಇದೇ 23ರಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿದೆ. ಮೊದಲ ದಿನ – ಖಡ್ಗ, ವೀರ ಚಾವಟಿ ಪೂಜಾಪರಿಕರಗಳ ಮೆರವಣಿಗೆ ನಡೆದಿದೆ. ಆಯುಧಗಳನ್ನು ಶುಚಿಗೊಳಿ
ಸಲಾಗಿದೆ. ದೇವಸ್ಥಾನದ ಆವರಣವನ್ನು ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಲಾಗುತ್ತಿದೆ.

ಶಕ್ತಿ ಸ್ವರೂಪಿಯಾದ ದ್ರೌಪದಿಯ ಆರಾಧನೆಯ ಪ್ರತೀಕವಾಗಿರುವ ಈ ಉತ್ಸವದಲ್ಲಿ ಒಂಬತ್ತನೇ ದಿನ(ಇದೇ 31) ನಡೆಸುವ ಹೂವಿನ ಕರಗ ವಿಶೇಷವಾದದ್ದು. ಅಂದು ಮಧ್ಯರಾತ್ರಿ ಸುಮಾರು 1.30ಕ್ಕೆ ಕರಗ ಉತ್ಸವ ಪ್ರಾರಂಭವಾಗುತ್ತದೆ. ಈ ಸಡಗರಕ್ಕೆ ಸ್ಥಳೀಯ, ರಾಜ್ಯ ಹಾಗೂ ಹೊರ ರಾಜ್ಯಗಳ ಲಕ್ಷಕ್ಕೂ ಅಧಿಕ ಜನ ಸಾಕ್ಷಿಯಾಗುತ್ತಾರೆ. ‌

ಇದೇ ವೇಳೆ ಧರ್ಮರಾಯ ಸ್ವಾಮಿಯ ರಥೋತ್ಸವ ನಡೆಯಲಿದ್ದು, ರಥವನ್ನು ಸಜ್ಜುಗೊಳಿಸುವ ಕೆಲಸವೂ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕರಗ ಸಾಗುವ ಮಾರ್ಗದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲವು ವಿಧಿವಿಧಾನಗಳನ್ನು ಹೊರತುಪಡಿಸಿದರೆ ಕರಗ ಕಾರ್ಯಕ್ರಮಗಳು ನಡೆಯುವುದೆಲ್ಲ ಸೂರ್ಯ ಮುಳುಗಿದ ಮೇಲೆ ಚಂದಿರನ ಬೆಳಕಿನಲ್ಲಿ ಹೂವಿನ ಕರಗವನ್ನು ತಲೆ ಮೇಲೆ ಹೊತ್ತ ಪೂಜಾರಿ ಗುಡಿ ಒಳಗಿನಿಂದ ಬರುವುದು ಭಕ್ತರ ಪಾಲಿಗೆ ಕಾತರದ ಕ್ಷಣ. ಮಲ್ಲಿಗೆ ದಂಡೆ, ಕನಕಾಂಬರದ ಅಲಂಕಾರಿಕ ಎಸಳುಗಳು, ಚುನ್ನೆರಿಯ ನಕ್ಷತ್ರಗಳು, ಪುಟ್ಟ ಬಣ್ಣದ ಪತಾಕೆಗಳು ಜನರನ್ನು ಭಕ್ತಿ ಲೋಕಕ್ಕೆ ಕರೆದೊಯ್ಯುತ್ತವೆ.

‘ಅರ್ಚಕ ಎನ್‌.ಮನು ಮೊದಲ ಬಾರಿ ಕರಗವನ್ನು ಹೊರಲಿದ್ದಾರೆ. ಒಂಬತ್ತು ವರ್ಷ ಕರಗ ಹೊತ್ತಿದ್ದ ಅಭಿಮನ್ಯು ಅವರ ಬಳಿ ಇದಕ್ಕಾಗಿ ವಿಶೇಷ ತರಬೇತಿ ಪಡೆದಿದ್ದಾರೆ’ ಎಂದು ಗಣಾಚಾರಿ ಗೋಪಾಲಕೃಷ್ಣ ತಿಳಿಸಿದರು.

‘ಈ ಭಾವೈಕ್ಯದ ಹಬ್ಬಕ್ಕೆ ಮೈಸೂರಿನ ಯದುವಂಶದ ಅರಸರು ಪ್ರೋತ್ಸಾಹ ಕೊಟ್ಟರು. ಧರ್ಮರಾಯ ಸ್ವಾಮಿ ಗುಡಿ ಕಟ್ಟಲು, ಕರಗ ಹಬ್ಬಕ್ಕೂ ನೆರವು ನೀಡಿದ್ದು ಕೂಡಾ ಅವರೇ. ಬಹಳಷ್ಟು ಊರುಗಳಲ್ಲಿ ಕರಗಕ್ಕೆ ಆಹ್ವಾನ ಪತ್ರಿಕೆ ಅಚ್ಚಾಗುವುದು ಮೈಸೂರು ಅರಸರ ಹೆಸರಿನಲ್ಲಿ. ಈಗಲೂ ಇದು ಮುಂದುವರಿದಿದೆ. ಚಿಕ್ಕಪೇಟೆ ಚೌಕದಲ್ಲಿ ಕುಳಿತು ಮಹಾರಾಜರು ಕರಗವನ್ನು ವೀಕ್ಷಿಸುತ್ತಿದ್ದರು ಎಂದು ಅಜ್ಜ ಹೇಳುತ್ತಿದ್ದರು’ ಎಂದು ‌ಹಿರಿಯರಾದ ಎಸ್‌. ದೇವೇಂದ್ರ ನೆನಪಿಸಿಕೊಂಡರು.

ಕರಗ ಸಾಗುವ ದಾರಿ
ಕರಗ ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಟು ಹಲಸೂರುಪೇಟೆ ಅಂಜನೇಯಸ್ವಾಮಿ, ಶ್ರೀರಾಮ ದೇವಸ್ಥಾನ, ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಲಿದೆ.

ನಂತರ ನಗರ್ತಪೇಟೆಯ ವೇಣು ಗೋಪಾಲಸ್ವಾಮಿ ದೇವಸ್ಥಾನ, ಸಿದ್ದಣ್ಣ ಗಲ್ಲಿಯ ಭೈರದೇವರ ದೇವಸ್ಥಾನದ ಮಾರ್ಗವಾಗಿ ಕಬ್ಬನ್‌ಪೇಟೆಯ ಶ್ರೀರಾಮ ಸೇವಾಮಂದಿರ, ಆಂಜನೇಯಸ್ವಾಮಿ ದೇವಸ್ಥಾನ, ಮಕ್ಕಳ ಬಸವಣ್ಣಗುಡಿ, ಗಾಣಿಗರ ಪೇಟೆ ಚನ್ನರಾಯ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನದಿಂದ ಅವೆನ್ಯೂ ರಸ್ತೆಯ ಈಶ್ವರ ದೇವಸ್ಥಾನಕ್ಕೆ ಹೋಗುತ್ತದೆ.

ದೊಡ್ಡಪೇಟೆ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ, ಕೆ.ಆರ್‌.ಮಾರುಕಟ್ಟೆ ಸಮೀಪದ ಉದ್ಭವ ಗಣಪತಿ ದೇವಸ್ಥಾನಕ್ಕೆ ತೆರಳುವ ಕರಗದ ಮೆರವಣಿಗೆ ಬಳಿಕ ಪೊಲೀಸ್‌ ರಸ್ತೆ ಮೂಲಕ ಮುರಹರಿ ಸ್ವಾಮಿ ಮಠ, ಬೀರೇದೇವರ ಗುಡಿ, ಅರಳೇಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಮಸ್ತಾನ್‌ ಸಾಹೇಬರ ದರ್ಗಾಕ್ಕೆ ತಲುಪುತ್ತದೆ. ನಂತರ ಬಳೆಪೇಟೆ, ಬಳೆಗರಡಿ, ಅಣ್ಣಮ್ಮ ದೇವಾಲಯಗಳ ಭೇಟಿ ನೀಡುತ್ತದೆ. ಕಿಲಾರಿ ರಸ್ತೆ, ಅವೆನ್ಯೂ ರಸ್ತೆ ಮೂಲಕ ಸಾಗಿ ಕುಂಬಾರಪೇಟೆ ಮುಖ್ಯ ರಸ್ತೆಯನ್ನು ಪ್ರವೇಶಿಸಿ ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿ ಮೆರವಣಿಗೆ ಕೊನೆಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT