ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟರಕ್ಷಣಾ ಪಡೆಗೆ ಮತ್ತೊಂದು ನೌಕೆ ಹಸ್ತಾಂತರ

ಸಮುದ್ರ ಗಸ್ತಿಗೆ ಬಳಕೆಯಾಗಲಿರುವ ವೆಸ್ಸೆಲ್‌ ವಿ– 410
Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಭಾರತಿ ಡಿಫೆನ್ಸ್‌ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿಡಿಐಎಲ್‌) ನಿರ್ಮಿಸಿರುವ ಅತ್ಯಾಧುನಿಕ  ವಿ– 410 ಗಸ್ತು ನೌಕೆಯನ್ನು ಬುಧವಾರ ಸಂಜೆ ಭಾರತೀಯ ತಟರಕ್ಷಣಾ ಪಡೆಗೆ (ಇಂಡಿಯನ್‌ ಕೋಸ್ಟ್‌ ಗಾರ್ಡ್) ನಿಯುಕ್ತಿಗೊಳಿಸಲಾಯಿತು. ಇದು ಬಿಡಿಐಎಲ್‌ ಪೂರೈಸಿರುವ ಆರನೇ ಗಸ್ತು ನೌಕೆ.

ಕೋಸ್ಟ್‌ ಗಾರ್ಡ್‌ನ ಮಂಗಳೂರು ಘಟಕದ ಕಮಾಂಡಿಂಗ್‌ ಅಧಿಕಾರಿ ಪವನ್‌ ಕೋಯರ್‌ ಅವರ ಪತ್ನಿ ಶಿಲ್ಪಾ ಕೋಯರ್‌ ನೌಕೆಗೆ ತೆಂಗಿನಕಾಯಿ ಒಡೆಯುವ ಮೂಲಕ ಅದರ ಮೊದಲ ಕಾರ್ಯಾಚರಣೆಗೆ ಚಾಲನೆ ನೀಡಿದರು. ಕೋಸ್ಟ್‌ ಗಾರ್ಡ್‌ ಕರ್ನಾಟಕ ವಲಯದ ಡಿಐಜಿ ಎಸ್‌.ಎಸ್‌.ದಸೀಲಾ ಮತ್ತು ಗೋವಾ ವಲಯದ ಡಿಐಜಿ ಅತುಲ್‌ ಪರ್ಲಿಕರ್‌ ನೌಕೆಯನ್ನು ಸ್ವೀಕರಿಸಿದರು.

ಆರ್ಥಿಕ ಸಂಕಷ್ಟದಿಂದ ಬಿಡಿಐಎಲ್‌ 2014ರಿಂದ 2017ರ ಜೂನ್‌ವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ವಾಣಿಜ್ಯ ಬಳಕೆಯ ನೌಕೆಗಳ ನಿರ್ಮಾಣದಲ್ಲಿ ಕಂಪನಿ ಭಾರಿ ನಷ್ಟ ಅನುಭವಿಸಿತ್ತು. ಆದರೆ, 2009ರಲ್ಲೇ ಕೋಸ್ಟ್‌ ಗಾರ್ಡ್‌ ಗಸ್ತು ನೌಕೆಗಳ ನಿರ್ಮಾಣಕ್ಕೆ ಇದೇ ಕಂಪನಿಗೆ ಗುತ್ತಿಗೆ ನೀಡಿತ್ತು. 2017ರ ಜೂನ್‌ನಲ್ಲಿ ಹೊಸ ಆಡಳಿತದೊಂದಿಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ ಬಿಡಿಐಎಲ್‌, ಮಂಗಳೂರು ಘಟಕದಿಂದ ಈಗ ಎರಡು ನೌಕೆಗಳು ಹಸ್ತಾಂತರಗೊಂಡಿವೆ.

ಗೋವಾ ಘಟಕದಿಂದ ನಾಲ್ಕು ನೌಕೆಗಳ ಹಸ್ತಾಂತರ ಮಾಡಲಾಗಿದೆ. ವೆಸ್ಸೆಲ್‌ ವಿ– 410 ಆರನೇ ನೌಕೆ. ಎಂಜಿನ್‌ಗೆ ಸಂಬಂಧಿಸಿದ ತಪಾಸಣೆಗಳನ್ನು ಪೂರ್ಣಗೊಳಿಸಿ, ಫೆಬ್ರುವರಿ 20ರ ಬಳಿಕ ಈ ನೌಕೆಯನ್ನು ಕಾರ್ಯಾಚರಣೆಗೆ ಬಳಸಲಾಗುತ್ತದೆ.

ಡಿಐಜಿ ದಸೀಲಾ ಮಾತನಾಡಿ, ‘ಈ ನೌಕೆಯ ಸೇರ್ಪಡೆಯಿಂದ ಕೋಸ್ಟ್‌ ಗಾರ್ಡ್‌ನ ಶಕ್ತಿ ವೃದ್ಧಿಸಿದೆ. ಇಂತಹ ನೌಕೆಗಳು ನಮ್ಮ ದೇಶದೊಳಕ್ಕೆ ನಿರ್ಮಾಣವಾಗಿ, ಸೇನಾಪಡೆಗಳ ಬಳಕೆಗೆ ಲಭ್ಯವಾಗುತ್ತಿರುವುದು ಸಂತಸದ ಸಂಗತಿ. ದೇಶದ ಭದ್ರತೆಯ ದೃಷ್ಟಿಯಿಂದ ಈ ನೌಕೆಗಳ ಪಾತ್ರ ದೊಡ್ಡದು. ಇಂತಹ ಯಶಸ್ವಿ ಕಾರ್ಯಾಚರಣೆಯ ಹಿಂದೆ ದೊಡ್ಡ ಶ್ರಮವಿದೆ. ನೌಕೆ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

***

11 ಮಂದಿ ಸಿಬ್ಬಂದಿಗೆ ಅವಕಾಶ

ಅಲ್ಯೂಮಿನಿಯಂ ಲೋಹ ಬಳಸಿ ತಯಾರಿಸಿರುವ ನೌಕೆಯಲ್ಲಿ 11 ಮಂದಿ ಸಿಬ್ಬಂದಿ ಇರಲು ಅವಕಾಶವಿದೆ. ಎರಡು ಎಂಜಿನ್‌ ಹೊಂದಿರುವ ಇದು, ಪ್ರತಿ ಗಂಟೆಗೆ 35 ನಾಟಿಕಲ್‌ ಮೈಲು ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಸಮುದ್ರದಲ್ಲಿ ಕಳ್ಳ ಸಾಗಣೆ ಪತ್ತೆ ಮತ್ತು ತಡೆಯುವುದು, ಕಡಲ್ಗಳ್ಳತನ ಹಾಗೂ ಹಡಗುಗಳ ಅಪಹರಣ ತಡೆಗೆ ಈ ನೌಕೆಗಳನ್ನು ಕೋಸ್ಟ್‌ ಗಾರ್ಡ್‌ ಬಳಸಲಿದೆ. ಮೀನುಗಾರರ ರಕ್ಷಣೆ ಹಾಗೂ ವಿದೇಶಿ ಮೀನುಗಾರರು ಭಾರತೀಯ ಸಮುದ್ರ ತೀರವನ್ನು ಪ್ರವೇಶಿಸದಂತೆ ತಡೆಯುವುದಕ್ಕೂ ಇದನ್ನು ಬಳಸಲಾಗುತ್ತದೆ.

***

500 ಕೋಟಿ ಮೊತ್ತದ ಒಪ್ಪಂದ

‘250 ನೌಕೆಗಳನ್ನು ನಿರ್ಮಿಸಿ, ಮಾರಾಟ ಮಾಡಿದ್ದ ಕಂಪನಿ ಜತೆ ₹ 500 ಕೋಟಿ ಮೊತ್ತದ ನೌಕೆಗಳ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನೌಕಾಪಡೆ ಬಳಕೆಗಾಗಿ ಐದು ಅತಿವೇಗದ ನೌಕೆಗಳನ್ನು ನಿರ್ಮಿಸಲಾಗುತ್ತಿದೆ. 150 ಸಿಬ್ಬಂದಿ ಮಂಗಳೂರು ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಡಿಐಎಲ್‌ ಮುಖ್ಯ ಕಾರ್ಯಾಚರಣೆ ಅಧಿಕಾರಿ ನರೇಂದ್ರಕುಮಾರ್ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT