ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರಜ್ಞೆ: ಬೇಕಾಗಿದೆ ಜನಾಂದೋಲನ

ಅಕ್ಷರ ಗಾತ್ರ

‘ಘಟ್ಟ ಉಳಿದರೆ ಘಟ ಉಳಿದೀತು!’ ಅಖಿಲೇಶ್ ಚಿಪ್ಪಳಿ ಅವರ ವಿಶ್ಲೇಷಣೆಯು (ಪ್ರ.ವಾ., ಮಾರ್ಚ್ 24) ಪರಿಸರದ ನೆಲೆಯಲ್ಲಿ ಎಲ್ಲರ ಕಣ್ಣು ತೆರೆಸುವಂತಿದೆ. ಅಭಿವೃದ್ಧಿಯ ಹೆಸರಿನಲ್ಲಿ ವಿನಾಶದತ್ತ ಸಾಗುತ್ತಿರುವ ಪರಿಸರ, ಜೀವವೈವಿಧ್ಯ, ಸಸ್ಯಸಂಕುಲದ ಕುರಿತು ಪ್ರಕಟಗೊಂಡ ಇಂತಹ ನೂರಾರು ಲೇಖನಗಳು, ವ್ಯಕ್ತವಾದ ಸಾವಿರಾರು ಅಭಿಪ್ರಾಯಗಳು ಆಡಳಿತಾರೂಢರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸದಿರುವುದು ಅಚ್ಚರಿಯನ್ನು ಉಂಟುಮಾಡುತ್ತದೆ. ಪರಿಸರ ಉಳಿಯಲಿ ಬಿಡಲಿ ಅವೈಜ್ಞಾನಿಕವಾದರೂ ಬೃಹತ್ ಯೋಜನೆಗಳನ್ನು ಹುಟ್ಟುಹಾಕುವಲ್ಲಿ ತಮಗೆ ದಕ್ಕಬಹುದಾದ ಲಾಭ, ಎಲ್ಲ ಮಾಫಿಯಾ ಬಳಗಕ್ಕೆ ಮಣೆಹಾಕಿ ಭರಪೂರ ಉಣಬಡಿಸುವ ಹುನ್ನಾರವೇ ಮುಖ್ಯವಾದಾಗ ಅಂತಹ ಮನಃಸ್ಥಿತಿಯನ್ನು ಬದಲಾಯಿಸುವುದೆಂತು?

ಪಶ್ಚಿಮಘಟ್ಟಗಳ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆಗೆ ಕೊನೆಯೆಂಬುದೇ ಇಲ್ಲವಾಗಿದೆ. ಪರಿಣಾಮ ಶೂನ್ಯವಾಗಿರುವ, ಸಾವಿರಾರು ಕೋಟಿ ಹಣವನ್ನು ಈಗಾಗಲೇ ನುಂಗಿ ನೀರು ಕುಡಿದಿರುವ ಎತ್ತಿನಹೊಳೆ ಯೋಜನೆ, ಕುಡಿಯುವ ನೀರಿನ ನೆಪದಲ್ಲಿ ಈ ಸಲ ಪ್ರಸ್ತಾವಿತವಾದ ಬೇಡ್ತಿ ವರದಾ ನದಿ ಜೋಡಣೆ, ಸರಕು ಸಾಗಣೆಗೆ ಘಟ್ಟವನ್ನು ಕೊರೆದು ನಿರ್ಮಿಸಲು ಯೋಜಿಸಿದ ಚತುಷ್ಪಥ ಮಾರ್ಗ, ರಸ್ತೆ ಅಗಲೀಕರಣ, ಭೂಹಂಚಿಕೆಯ ನೆಪವೊಡ್ಡಿ ಕಡಿತಲೆಗೆ ತಲೆಯೊಡ್ಡುವ ಲಕ್ಷಗಟ್ಟಲೆ ಹೆಕ್ಟೇರ್ ಅರಣ್ಯ... ಒಂದೆರಡಲ್ಲ. ಪಶ್ಚಿಮಘಟ್ಟವನ್ನು ಬಗೆದು ಹಸಿರು ಅಳಿಸಲು ಸಾಧ್ಯವಾಗುವಂತಹ ಎಲ್ಲ ಯೋಜನೆಗಳು ಆತುರದ ತುದಿಗಾಲಲ್ಲಿ ನಿಂತಿವೆ. ಪರಿಸರ ತಜ್ಞರ, ಪರಿಸರ ಪ್ರೇಮಿಗಳ, ಭೂವಿಜ್ಞಾನಿಗಳ, ಸ್ಥಳೀಯರ ಅನುಭವದ ವಿಚಾರಗಳಿಗೆ, ವರದಿಗಳಿಗೆ ಚಿಕ್ಕಾಸಿನ ಬೆಲೆಯೂ ಇಲ್ಲದಂತಾಗಿದೆ. ಯೋಜನೆಗಳು ವಿಫಲವಾದಾಗ ಉತ್ತರದಾಯಿತ್ವದ ಪ್ರಶ್ನೆಯೂ ಏಳುವುದಿಲ್ಲ. ಪರಿಸರದಿಂದಾಗಿ ನಾವು ಎನ್ನುವ ಪ್ರಜ್ಞೆ ಇಂತಹವರ ತಲೆಗೆ ಹೊಕ್ಕುವುದು ಯಾವಾಗ? ಇವೆಲ್ಲದರ ವಿರುದ್ಧ ದೊಡ್ಡಮಟ್ಟದ ಸಾರ್ವತ್ರಿಕ ಜನಾಂದೋಲನ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ.

– ಧರ್ಮಾನಂದ ಶಿರ್ವ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT