ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ– ಕಾಮಿನಿಯಲ್ಲಿ ನೀರು ಏರಿಕೆ

ಪಡುಹಿತ್ಲು ಭಾಗದ ಗದ್ದೆಗಳಲ್ಲಿ ತುಂಬಿದ ನೀರು: ಜನರ ಆತಂಕ
Last Updated 12 ಮೇ 2018, 6:37 IST
ಅಕ್ಷರ ಗಾತ್ರ

ಪಡುಬಿದ್ರಿ: ಪಡುಬಿದ್ರಿ-ಹೆಜಮಾಡಿ ಸಂಪರ್ಕ ಮಾಡುವ ರಸ್ತೆ ಸೇತುವೆ ನಿರ್ಮಾಣದಿಂದ ಕಳೆದ ವಾರದಿಂದ ರಾತ್ರಿ ಸುರಿದ ಮಳೆಗೆ ಹೆಜಮಾಡಿ ಮುಟ್ಟಳಿವೆಯಲ್ಲಿ ಪಡುಹಿತ್ಲು ಭಾಗದ ಗದ್ದೆಗಳಲ್ಲಿ ನೀರು ತುಂಬಿದೆ.

ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಈ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ನಬಾರ್ಡ್‌ ಮೂಲಕ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸೇತುವೆ ಹಾಗೂ ಅದಕ್ಕೆ ಸಂಪರ್ಕವಾಗಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದರೂ, ಅದಕ್ಕೆ ಮುಂದಾಗಿ ಇರುವ ಗಾಳಿ ಮರದ ನೆಡುತೋಪು ತೆರವು ಮಾಡಲು ಸಿಆಆರ್‌ಜೆಡ್‌ ವ್ಯಾಪ್ತಿಯ ಕಾನೂನು ತೊಡಕಾಗಿದೆ ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಸೇತುವೆ ನಿರ್ಮಾಣವೇ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ದೂರಿದ್ದರು. ಆದರೂ, ಇಲಾಖೆ ಎಂಜಿನಿಯರ್ ನಾಗರಾಜ್, ನಾನು ಅದೆಷ್ಟೋ ಸೇತುವೆ ನಿರ್ಮಾಣ ಮಾಡಿರುವೆ. ಕಾಮಿನಿ ನದಿಯ ನೀರು ಸೇತುವೆ ಅಡಿಯಲ್ಲಿಯೇ ಹರಿದು ಸಮುದ್ರ ಸೇರಲಿದೆ. ಸೇತುವೆ, ರಸ್ತೆಗೆ ಹಾನಿಯಾಗುವುದಿಲ್ಲ. ಸೇತುವೆ 100 ವರ್ಷ ಬಾಳಿಕೆ ಬರುತ್ತದೆ. ಜನರಿಗೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದರು.

ಕಳೆದ  ಒಂದು ವಾರದಿಂದ ಸುರಿಯುತ್ತಿರುವ ಗಾಳಿ ಮಳೆಗೆ ಕಾಮಿನಿ ನದಿಯಲ್ಲಿ ನೀರು ಏರುತ್ತಿದೆ. ಈ ಭಾಗದಲ್ಲಿ ನೆರೆ ಭೀತಿ ಉಂಟಾಗಿದೆ. ಸಮುದ್ರ ಹಾಗೂ ಕಾಮಿನಿ ನದಿಯ ಮಧ್ಯೆ ನಿರ್ಮಾಣವಾದ ಸೇತುವೆ ಹಾಗೂ ರಸ್ತೆಯಿಂದಾಗಿ ನೀರು ಸಮುದ್ರ ಸೇರುತ್ತಿಲ್ಲ. ನೀರು ಹರಿಯಲು ಸೇತುವೆ ಎದುರು ತಾತ್ಕಾಲಿಕವಾಗಿ ತೋಡು ನಿರ್ಮಿಸಲಾಗಿದೆ.

ಸಮುದ್ರ ಉಬ್ಬರದ ವೇಳೆ ನೀರು ಕಾಮಿನಿ ನದಿಯೊಳಗೆ ಹೆಚ್ಚು  ಹರಿದು ಬರುತ್ತಿದೆ. ಇದರಿಂದ ನದಿಯಲ್ಲಿ ನೀರು ಹೆಚ್ಚಳವಾಗಿ ಸುತ್ತಮುತ್ತಲಿನ ಕೃಷಿ ಗದ್ದೆಗಳಲ್ಲಿ ತುಂಬುತ್ತಿರುವ ಕಾರಣ ಈ ಭಾಗದಲ್ಲಿ ನೆರೆ ಭೀತಿಯುಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೀನಗಾರರ ಮುಖಂಡ ಗಂಗಾಧರ ಕರ್ಕೇರ ಮಾತನಾಡಿ, ಸೇತುವೆ ಎತ್ತರವಾಗಿದ್ದು, ನದಿಮುಖ ತಗ್ಗಿನಲ್ಲಿರುವುದರಿಂದ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ತೂಬುಗಳನ್ನು ಅಳವಡಿಸಿರುವುದರಿಂದ ದೋಣಿಗಳನ್ನು ನದಿಪಾತ್ರಕ್ಕೆ ತರಲು ಸಾಧ್ಯವಿಲ್ಲ. ಮೀನುಗಾರಿಕೆಗೂ ತೊಂದರೆಯಾಗಲಿದೆ ಎಂದರು.

ನೇಮೋತ್ಸವಕ್ಕೆ ಅಡಚಣೆ
ಗದ್ದೆಯಲ್ಲಿ ನೀರು ನಿಂತಿರುವ ಪರಿಣಾಮ ಶನಿವಾರ ನಡೆಯಬೇಕಿದ್ದ ಗಡುವಾಡು ನೇಮೋತ್ಸವಕ್ಕೆ ಅಡಚಣೆಯಾಗಿದೆ. ಸಮಸ್ಯೆ ಶೀಘ್ರವೇ ಪರಿಹರಿಸದಿದ್ದಲ್ಲಿ, ಈ ಭಾಗದಲ್ಲಿರುವ ಸಾವಿರಾರು ಮತದಾರರು ಮತದಾನ ಬಹಿಷ್ಕಾರ ಅಥವಾ ಚುನಾವಣೆಯಲ್ಲಿ ನೋಟಾ ಚಲಾಯಿಸುವುದಾಗಿ ಎಚ್ಚರಿಸಿದ್ದಾರೆ.

**
ಜನರ ಸಮಸ್ಯೆಗೆ ಶೀಘ್ರವೇ ಸ್ಪಂದನೆ ಮಾಡಬೇಕು. ಮಳೆ ಬಂದಾಗ ಇಂತಹ ಸಮಸ್ಯೆ ಎದುರಿಸುವುದು ಕಷ್ಟ
– ಗಂಗಾಧರ ಕರ್ಕೇರ, ಮೀನಗಾರರ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT