ಮಂಗಳವಾರ, ನವೆಂಬರ್ 12, 2019
28 °C

ರಾಜಕಾರಣಿಗಳಿಗೆ ವಿಭಜನೆಯ ಚಿಂತೆ ಏಕೆ?

Published:
Updated:

ನಮ್ಮ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ಜಿಲ್ಲೆಗಳ ವಿಭಜನೆಯ ಜಪ ಮಾಡುತ್ತಿರುವುದು ವಿಚಿತ್ರವಾಗಿದೆ. ಮೊನ್ನೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಕಿತ್ತೂರು ಕರ್ನಾಟಕದ ಜಪ ಮಾಡಿದರೆ, ಈಗ ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರನ್ನು ಕೇಂದ್ರ ಮಾಡಿ, ದೇವರಾಜ ಅರಸು ಹೆಸರಿನಲ್ಲಿ ಪ್ರತ್ಯೇಕ ಜಿಲ್ಲೆ ರಚಿಸುವ ಬೇಡಿಕೆಯನ್ನು ಮುಖ್ಯಮಂತ್ರಿ ಬಳಿ ಸಲ್ಲಿಸಿದ್ದಾರೆ (ಪ್ರ.ವಾ., ಅ. 15).

ರಾಜ್ಯವು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ, ನೆರೆ ಸಂತ್ರಸ್ತರಿಗೆ ನೆರವು ನೀಡಲು ಸರ್ಕಾರ ಪರದಾಡುತ್ತಿದೆ. ಅವರಿಗೆ ನೆಲೆ ಕಲ್ಪಿಸುವ ಕಾರ್ಯ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಹೊಟ್ಟೆಗೆ
ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆಯಂತೆ ರಾಜಕಾರಣಿಗಳಿಗೆ ಜಿಲ್ಲೆ ವಿಭಜನೆಯ ಚಿಂತೆ ಏಕೆ?

ಒಂದು ಜಿಲ್ಲೆ ಮಾಡಬೇಕಾದರೆ ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಹಲವಾರು ಕಚೇರಿಗಳು, ಜಿಲ್ಲಾಧಿಕಾರಿ ಸೇರಿದಂತೆ ಹೆಚ್ಚಿನ ಸಿಬ್ಬಂದಿ, ಅವರ ಸಂಬಳ ವಗೈರೆ ಇತ್ಯಾದಿಗೆ ಕೋಟಿ, ಕೋಟಿ ರೂಪಾಯಿಯ ಹೊರೆ ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ. ಒಟ್ಟಾರೆ, ಎಲ್ಲ ಶಾಸಕರೂ ಮಂತ್ರಿಯಾಗಬೇಕೆಂಬ ಹೆಬ್ಬಯಕೆ ಮುಂದಿಡುವಂತೆ, ಎಲ್ಲ ತಾಲ್ಲೂಕುಗಳನ್ನೂ ಜಿಲ್ಲೆಗಳನ್ನಾಗಿ ಮಾಡಿ ಎಂಬ ಬೇಡಿಕೆ ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಂದ ಬಂದರೂ ಆಶ್ಚರ್ಯವಿಲ್ಲ.

ಸಿ.ಸಿದ್ಧರಾಜು ಆಲಕೆರೆ, ಮಂಡ್ಯ

ಪ್ರತಿಕ್ರಿಯಿಸಿ (+)