ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಜಾರಿಗೆ ತಾರತಮ್ಯವೇಕೆ?

Last Updated 25 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಸಮಾಜಮುಖಿ ನಿಯಮಗಳನ್ನು ಪೊಲೀಸರು ಯಥಾವತ್ ಜಾರಿಗೊಳಿಸಿದರೆ ಸಾರ್ವಜನಿಕರು ನಿಜಕ್ಕೂ ಸಂತಸಪಡುತ್ತಾರೆ. ಆದರೆ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಜಾರಿಗೊಳಿಸಬಯಸುವುದು ಎಲ್ಲೆಡೆ ಕಂಡುಬರುತ್ತದೆ.

ದ್ವಿಚಕ್ರ ವಾಹನ ಚಾಲಕ ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿರುವುದು ಸಮಂಜಸ. ಆದರೆ ಈ ವಿಚಾರದಲ್ಲಿ ತೋರುವ ಉತ್ಸಾಹವನ್ನು ಇದೇ ಪೊಲೀಸರು, ದಟ್ಟ ಹೊಗೆ ಸೂಸುವ ವಾಹನ ಸವಾರರನ್ನು ದಂಡಿಸಿ ಜನರ ಆರೋಗ್ಯ ರಕ್ಷಿಸುವಲ್ಲಿ ತೋರುವುದಿಲ್ಲ.

ಪರಸ್ಥಳದ ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಚಾಲಕರ ಬಳಿ ಲಭ್ಯವಿದ್ದರೂ ಕೊನೆಗೆ ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಕ್ಕೆ ಗಂಟು ಬಿದ್ದು ದಂಡ ವಿಧಿಸುತ್ತಾರೆ. ಅಚ್ಚರಿಯೆಂದರೆ, ಸ್ಥಳೀಯ ವಾಹನಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲೂ ಆಟೊರಿಕ್ಷಾಗಳ ವಾಯುಮಾಲಿನ್ಯದ ಪ್ರಮಾಣವನ್ನು ಅಳೆಯುವ ಗೋಜಿಗೇ ಹೋಗುವುದಿಲ್ಲ.

ವಾಹನಗಳ ಕಿಟಕಿಗಳನ್ನು ಪಾರದರ್ಶಕವಾಗಿ ಇಟ್ಟುಕೊಳ್ಳಬೇಕೆಂಬ ನಿಯಮವನ್ನು ಮತ್ತದೇ ಪರಸ್ಥಳಗಳ ವಾಹನಗಳಿಗೆ ಮಾತ್ರ ಅನ್ವಯಿಸುತ್ತಾರೆ. ಸ್ಥಳೀಯ ವಾಹನಗಳಿಗೆ ದಂಡ ವಿಧಿಸುವುದು ಅತಿ ವಿರಳ. ಎಷ್ಟೋ ವಾಹನಗಳಿಗೆ ಪ್ರಖರ ಬೆಳಕಿನ ದೀಪವನ್ನು ಅಳವಡಿಸಲಾಗಿರುತ್ತದೆ, ಕೆಲವು ವಾಹನಗಳಲ್ಲಿ ಕಿವಿಗಡಚಿಕ್ಕುವಂಥ ಹಾರ್ನ್‌ಗಳಿರುತ್ತವೆ, ಬಹಳಷ್ಟು ವಾಹನಗಳಿಗೆ ಹಿಂದೆ ಮುಂದೆ ಪ್ರತಿಫಲಕಗಳೇ ಇರುವುದಿಲ್ಲ. ಇವೆಲ್ಲ ಭೀಕರ ಅಪಘಾತಗಳಿಗೆ ಕಾರಣವಾಗಿರುವ ವಿಪುಲ ಉದಾಹರಣೆಗಳಿವೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಸರಿಯಾಗಿ ಪತ್ತೆಹಚ್ಚಲು ನಮ್ಮ ಪೊಲೀಸರಿಗೆ ಮಾನವ ಸಂಪನ್ಮೂಲದ ಕೊರತೆ. ಹೆಲ್ಮೆಟ್‌ ಧರಿಸದವರಿ ಗಿಂತ ಮದ್ಯವ್ಯಸನಿ ವಾಹನ ಸವಾರರು ಸಮಾಜಕ್ಕೆ ಹೆಚ್ಚು ಕಂಟಕ. ಹಲವು ವಾಹನಗಳಿಗೆ ಸರಿಯಾದ ಸಂಖ್ಯಾಫಲಕಗಳನ್ನು ಅಳವಡಿಸಿರುವುದಿಲ್ಲ.

ಸಂಖ್ಯಾಫಲಕ ಸ್ಪಷ್ಟವಾಗಿ ಕಾಣದಂತೆ ಅದರ ಮೇಲೆ ಕುಟುಂಬದ ಸದಸ್ಯರ, ಮನೆದೇವರ ಹೆಸರುಗಳನ್ನು ವಿವಿಧ ಶೈಲಿಯಲ್ಲಿ ಬರೆಸಿರುತ್ತಾರೆ. ಸಂಖ್ಯಾಫಲಕಗಳು ನಿಯಮಾನುಸಾರವಾಗಿ ಇಲ್ಲದೇ ಹೋದಲ್ಲಿ ‘ಹಿಟ್ ಆ್ಯಂಡ್ ರನ್’ ಪ್ರಕರಣಗಳನ್ನು ಭೇದಿಸುವುದು ದುಸ್ತರವಾಗುತ್ತದೆ. ಜನಹಿತಕ್ಕಾಗಿ ಮುಂದಿನ ದಿನಗಳಲ್ಲಾದರೂ ಪೊಲೀಸರು ಇಂತಹ ಅಪಾಯಕಾರಿ ಸಂಗತಿಗಳತ್ತ ಗಮನಹರಿಸಲಿ.
-ಡಾ. ಚೆನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT