ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಘಟ್ಟ: ಬೆಂಕಿ ಅವಘಡ ತಪ್ಪಿಸಲು ರಮೇಶ್‌ ತಂತ್ರ!

Last Updated 7 ಫೆಬ್ರುವರಿ 2018, 6:54 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಬೇಸಿಗೆ ಬಂದರೆ ಕರಿಘಟ್ಟದ ಕಾಡಿಗೆ ಬೆಂಕಿ ಗ್ಯಾರಂಟಿ’ ಎನ್ನುವುದು ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಚಲಿತದಲ್ಲಿರುವ ಮಾತು. ಪ್ರತಿ ವರ್ಷ ಬೇಸಿಗೆಯಲ್ಲಿ ಅದು ನಿಜವೂ ಆಗುತ್ತಿದೆ. ಬೆಂಕಿ ಬೀಳುವು ದರಿಂದ ಸಸ್ಯ, ಪ್ರಾಣಿ , ಪಕ್ಷಿ ಸಂಕುಲಕ್ಕೆ ಗಂಡಾಂತರ ಬಂದೊದಗುತ್ತಿದೆ.

ಅದನ್ನು ತಪ್ಪಿಸಲು ಪರಿಸರ ಪ್ರೇಮಿಯೊಬ್ಬರು ಕರಿಘಟ್ಟ ಅರಣ್ಯದಲ್ಲಿ ಬೆಂಕಿ ಹರಡಲು ಕಾರಣವಾಗುವ ಒಣ ಹುಲ್ಲನ್ನು ಕತ್ತರಿಸಿ ಬೆಂಕಿ ಹರಡುವುದನ್ನು ತಡೆಯುವ ವಿಶಿಷ್ಟ ಕಾಯಕಕ್ಕೆ ಮುಂದಾಗಿದ್ದಾರೆ.

ತಾಲ್ಲೂಕಿನ ಚಂದಗಾಲು ಗ್ರಾಮದ ವೈ. ರಮೇಶ್‌ ಎಂಬವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಕರಿಘಟ್ಟದಲ್ಲಿ ಬಗೆ ಬಗೆಯ ಸಸಿಗಳನ್ನು ನೆಡುವ, ಬೇಸಿಗೆಯಲ್ಲಿ ಅವುಗಳಿಗೆ ನೀರುಣಿಸಿ ರಕ್ಷಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಹೀಗೆ ಬೆಳೆಸಿದ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗುವುದನ್ನು ಕಂಡು ನಿರಾಸೆಗೊಂಡಿದ್ದ ಅವರು ಇದೀಗ ಹೊಸ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಬೆಂಕಿ ಶರವೇಗದಲ್ಲಿ ಹರಡಲು ಕಾರಣವಾದ ಲಾಲೆ ಹುಲ್ಲನ್ನು (ರೊಪ್ಪದ ಹುಲ್ಲು) ಕತ್ತರಿಸಿ ತೆಗೆಯುವ ಕಾರ್ಯಕ್ಕೆ ಇಳಿದ್ದಾರೆ. ಒಂದು ವಾರದಿಂದ ಈ ಕೆಲಸ ಆರಂಭಿಸಿರುವ ರಮೇಶ್‌ ಇದುವರೆಗೆ 5ಎಕರೆಗೂ ಹೆಚ್ಚು ಪ್ರದೇಶದಲ್ಲಿ ಒಣ ಹುಲ್ಲು ಕತ್ತರಿಸಿ ತೆಗೆದಿದ್ದಾರೆ. ಒಂದೆರಡು ವರ್ಷದ ಗಿಡಗಳು ಇರುವ ಸ್ಥಳದ ಸುತ್ತಲೂ ಯಂತ್ರದ ಸಹಾಯದಿಂದ ಹುಲ್ಲು ಕತ್ತರಿಸುತ್ತಿದ್ದಾರೆ.

ಯಂತ್ರ ಖರೀದಿ: ಕುಡುಗೋಲು ಹಿಡಿದು ಕೈಯಿಂದ ಹುಲ್ಲು ಕತ್ತರಿಸುವುದು ಕಷ್ಟಸಾಧ್ಯ ಎಂದರಿತ ರಮೇಶ್‌ ₹ 12 ಸಾವಿರ ಹಣ ಕೊಟ್ಟು ಹುಲ್ಲು ಕತ್ತರಿಸುವ ಯಂತ್ರವನ್ನು ಖರೀದಿಸಿದ್ದಾರೆ. ಪೆಟ್ರೋಲ್‌ ಬಳಸಿ ಓಡಿಸಬಹುದಾದ ಈ ಯಂತ್ರದಿಂದ ದಿನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಹುಲ್ಲು ತೆಗೆಯುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಕರಿಘಟ್ಟಕ್ಕೆ ತೆರಳಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹುಲ್ಲು ಕತ್ತರಿಸಿ ಬೆಂಕಿ ಹರಡುವುದನ್ನು ತಪ್ಪಿಸಲು ಹರಸಾಹಸ ಮಾಡುತ್ತಿದ್ದಾರೆ.

ರಮೇಶ್‌ ಕಳೆದ ಮೂರ್ನಾಲ್ಕು ವರ್ಷಗಳಿಂದ ಕರಿಘಟ್ಟ ಅರಣ್ಯದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ನೇರಳೆ, ಹುಣಸೆ, ಪನ್ನೇರಳೆ, ಬೇವು, ಮಾವು ಸೇರಿ 300ಕ್ಕೂ ಹೆಚ್ಚು ಗಿಡಗಳನ್ನು ಅವರು ನೆಟ್ಟು ಬೆಳೆಸುತ್ತಿದ್ದಾರೆ.

ಆದರೆ ಪ್ರತಿ ವರ್ಷ ಬೇಸಿಗೆಯಲ್ಲಿ ಕರಿಘಟ್ಟ ಮೀಸಲು ಅರಣ್ಯಕ್ಕೆ ಬೀಳುವ ಬೆಂಕಿಯಿಂದ ಸಾಕಷ್ಟು ಗಿಡಗಳು ನಾಶವಾಗುತ್ತಿವೆ. ಅದನ್ನು ತಡೆಯಲು ವಿನೂತನ ಉಪಾಯ ಕಂಡುಕೊಂಡಿರುವ ರಮೇಶ್‌ ಸ್ವಂತ ಹಣದಿಂದ ಕಳೆ ತೆಗೆಯುವ ಯಂತ್ರ (ಬುಷ್‌ ಕಟ್ಟರ್‌) ಖರೀದಿಸಿ ಅರಣ್ಯ ಸಂಪತ್ತಿನ ನಾಶ ತಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.‌

‘ಪ್ರತಿ ವರ್ಷ ಕರಿಘಟ್ಟ ಅರಣ್ಯಕ್ಕೆ ಬೆಂಕಿ ಬೀಳುತ್ತಿದ್ದು ಅಮೂಲ್ಯ ವನ್ಯ ಸಂಪತ್ತು ನಾಶವಾಗುತ್ತಿದೆ. ಮರಗಳ ಜತೆಗೆ ಪ್ರಾಣಿ. ಪಕ್ಷಿಗಳಿಗೂ ಆಪತ್ತು ಎದುರಾಗುತ್ತಿದೆ. ಅದನ್ನು ತಡೆಯಲು ಅರಣ್ಯ ಇಲಾಖೆ ಫೈರ್‌ಲೈನ್‌ನಂತಹ ಕ್ರಮಗಳನ್ನು ಕೈಗೊಂಡಿದೆ.

ಆದರೂ ಬೆಂಕಿ ಬೀಳುವುದು ತಪ್ಪಿಲ್ಲ. ಡಿಎಫ್‌ಒ ಶಿವರಾಜು ಮತ್ತು ಆರ್‌ಎಫ್‌ಒ ಅನಿತಾ ಅವರ ಮಾರ್ಗದರ್ಶನ ಪಡೆದು ಯಂತ್ರದಿಂದ ಅನಗತ್ಯ ಹುಲ್ಲು ಕತ್ತರಿಸಿ ತೆಗೆಯುವ ಕೆಲಸ ಶುರು ಮಾಡಿದ್ದೇನೆ.

ವಾರಕ್ಕೊಮ್ಮೆ ಎನ್‌ಎಸ್‌ಎಸ್‌, ಎನ್‌ಸಿಸಿ ತಂಡಗಳನ್ನು ಕರಿಘಟ್ಟಕ್ಕೆ ಕರೆತಂದು ಕಳೆ ತೆಗೆಸುವ ಕೆಲಸ ಮಾಡುತ್ತೇನೆ. ಕತ್ತರಿಸಿದ ಹುಲ್ಲನ್ನು ಟ್ರೆಂಚ್‌ಗೆ ತುಂಬಿಸಿ ಅದನ್ನು ಸಾವಯವ ಗೊಬ್ಬರವಾಗಿ ಪರಿವರ್ತನೆ ಮಾಡುವ ಯೋಚನೆ ಕೂಡ ಇದೆ’ ಎಂದು ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT