ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ಅಮೃತ ಮಹೋತ್ಸವಕ್ಕೆ ಅಭಿನಂದನಾ ಸಂದೇಶಗಳು

Last Updated 18 ಅಕ್ಟೋಬರ್ 2022, 4:31 IST
ಅಕ್ಷರ ಗಾತ್ರ

ಅಮೃತೋತ್ಸವದ ಸಡಗರದಲ್ಲಿರುವ ಪ್ರಜಾವಾಣಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.

ಮರೆಯಲಾಗದ ಸಂಭ್ರಮದ ನೆನಪು

‘ಪ್ರಜಾವಾಣಿ’ ದಿನಪತ್ರಿಕೆಯ ಅಮೃತ ಮಹೋತ್ಸವದ ಸಂಭ್ರಮಕ್ಕೆ ಹಾರ್ದಿಕ ಶುಭಾಶಯಗಳು. ಪ್ರಜಾವಾಣಿ ದಿನಪತ್ರಿಕೆಯ ಮೊದಲ ಸಂಚಿಕೆಯಿಂದ ಹಿಡಿದು ಇಂದಿನವರೆಗೂ ನಿರಂತರವಾಗಿ 75 ವರ್ಷಗಳು ಪತ್ರಿಕೆಯನ್ನು ಓದಿದ ಮಿಗಿಲಾದ ಸಂತೋಷ ನನ್ನದಾಗಿದೆ. ನನಗೀಗ 88 ವರ್ಷಗಳು. 12 ವರ್ಷದ ಒಳಗಿದ್ದಾಗ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ಮನೆಗೆ ‘ತಾಯಿ ನಾಡು’ ದಿನಪತ್ರಿಕೆ ಬರುತ್ತಿತ್ತು, ನಾನು ಅದನ್ನ ಓದುತ್ತಿದ್ದೆ. ನನ್ನ ತಂದೆ ವಿದ್ಯಾವಂತರು. ನನ್ನ ತಾಯಿ ತಕ್ಕಮಟ್ಟಿಗೆ ವಿದ್ಯಾವಂತೆ. ಮಕ್ಕಳಿಗೆ ವಿದ್ಯಾಭ್ಯಾಸ ಪ್ರಾರಂಭಿಸುತ್ತಿದ್ದಂತೆ, ಬರುತ್ತಿದ್ದ ದಿನಪತ್ರಿಕೆಯ ಶೀರ್ಷಿಕೆಗಳನ್ನು ಓದಿಸಿ, ಅನಂತರ ಪತ್ರಿಕೆಯನ್ನು ಓದಿ ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಲು ಹೇಳಿಕೊಡುತ್ತಿದ್ದರು.

ನಾನು ರಿಪ್ಪನ್ ಪೇಟೆಯಲ್ಲಿದ್ದಾಗ ಪ್ರಜಾವಾಣಿಯ 15.10.1948ರಂದು ಮೊದಲ ಸಂಚಿಕೆ ಸಂಜೆ ಐದು ಗಂಟೆಗೆ ನಮ್ಮ ಮನೆ ತಲುಪಿತು. ಆ ಮನೆ ನನ್ನ ಅಕ್ಕ ಭಾವನ ಮನೆಯಾಗಿತ್ತು. ಆ ವೇಳೆಗೆ ತಂದೆಯನ್ನು ಕಳೆದುಕೊಂಡಿದ್ದ ನಾನು, ಅಕ್ಕನ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆ. ನನ್ನ ಭಾವ ಡಾ.ಪಿ ಪಾಂಡುರಂಗ ನಾಯಕರು ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅಂದು ನಮ್ಮ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಒಂದು ಮಗು ಜನನವಾದರೆ ಎಂಥ ಸಡಗರ ಇರುವುದೋ ಅಂತ ಸಡಗರ ನಮ್ಮಲ್ಲಿ ಉಂಟಾಗಿತ್ತು. ನನ್ನ ಅಕ್ಕ ಸುಮಂಗಲಾದೇವಿ, ಮೈಸೂರುಪಾಕು ಪುಳಿಯೋಗರೆ ಹಾಗೂ ಆಂಬೊಡೆಯನ್ನು ಮಾಡಿಕೊಂಡು ಪ್ರಜಾವಾಣಿ ಪತ್ರಿಕೆಯು ಬಂದ ಒಡನೆ ಎಲ್ಲರಿಗೂ ಹಂಚಲು ಕಾಯುತ್ತಿದ್ದರು.

ಆ ಪತ್ರಿಕೆ ಶಿವಮೊಗ್ಗ ತಲುಪಿ, ಅಲ್ಲಿಂದ ರಿಪ್ಪನ್ ಪೇಟೆಗೆ ಬರಬೇಕಿತ್ತು. ಹಾಗಾಗಿ ಪತ್ರಿಕೆ ಸಂಜೆ 5:00ಗೆ ಮನೆ ತಲುಪಿದಾಗ ಎಲ್ಲರಿಗೂ ಸಂಭ್ರಮವೋ ಸಂಭ್ರಮ.15 ರಿಂದ 20 ಜನರಿದ್ದ ಗುಂಪಿಗೆ ನನ್ನ ಭಾವ ಪತ್ರಿಕೆಯನ್ನು ತೋರಿಸಿ ಮುಖ್ಯ ವಿಷಯಗಳನ್ನು ಜೋರಾಗಿ ಓದಿ ಹೇಳಿದರು. ಎಲ್ಲರೂ ಸಡಗರಿಸಿ ಪ್ರಜಾವಾಣಿಯ ಸುದ್ದಿಯನ್ನ ಕೇಳಿದರು. ತಿಂಡಿ ಕಾಫಿಯ ನಂತರ ಗುಂಪು ಚದುರಿತು. ಒಂದು ದಿನಪತ್ರಿಕೆಯ ಮೊದಲ ಸಂಚಿಕೆಗೆ ಈ ರೀತಿಯ ಹಬ್ಬದ ಆಚರಣೆ ಎಂತ ಸುಸಂಸ್ಕೃತ ವಾತಾವರಣ ಸಮಾಜದಲ್ಲಿ ಇತ್ತು ಎಂಬುದನ್ನು ಹೇಳುತ್ತದೆ. ಮನೆಯಲ್ಲಿ ಪ್ರಜಾವಾಣಿ ಪತ್ರಿಕೆಯ ಆನಂದ ಉಳಿದಿದ್ದ ಆ ದಿನವನ್ನು ನಾನೆಂದೂ ಮರೆಯಲಾರೆ.

ಪ್ರಜಾವಾಣಿ ಪತ್ರಿಕೆಯ ಮೂಲಕ ವಸ್ತುನಿಷ್ಠ ಮಾಹಿತಿಯ ಪ್ರಕಟಣೆಗಾಗಿ ನಿರಂತರ ದುಡಿಯುತ್ತಿರುವ ಸಂಪಾದಕರಿಗೂ ಪತ್ರಿಕಾ ಬಳಗಕ್ಕೂ ನನ್ನ ಹಾರ್ದಿಕ ಅಭಿನಂದನೆಗಳು. 75 ವರ್ಷಗಳ ಸುಧೀರ್ಘ ಸಮರ್ಥ ಬದುಕಿನ ಪತ್ರಿಕೆ ಇನ್ನೂ ನೂರಾರು ವರ್ಷ ಮುನ್ನಡೆಯಲಿ ಎಂದು ಹಾರೈಸುವೆ.

-ಡಾ. ಕಮಲಾ ಹಂಪನಾ

*****

ಇದನ್ನೂ ಓದಿ:

ಪ್ರಜಾವಾಣಿ ನಿಜ ಮನುಜನ ಧ್ವನಿ

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಪ್ರಜಾವಾಣಿಗೆ ಶುಭಾಶಯಗಳು. ಕಳೆದ ಇಪ್ಪತ್ತು ವರ್ಷಗಳಿಂದ ಪ್ರಜಾವಾಣಿಯನ್ನು ಓದುತ್ತಿದ್ದೇನೆ. ನಿಖರ ಹಾಗೂ ಅನಗತ್ಯ ವೈಭವಿಕರಣವಿಲ್ಲದ ಸುದ್ದಿಗಳು, ಯುಗಾದಿ-ಪ್ರಜಾವಾಣಿ ವಿಶೇಷ ಸಂಚಿಕೆಗಳು, ಮಹಿಳೆ, ಮಕ್ಕಳು, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ-ಸಂಸ್ಕೃತಿಗೆ ಸಂಬಂಧಿಸಿದ ಹಾಗೂ ಜೀವಪರ ನಿಲುವಿನ ಗುಣಮಟ್ಟದ ಲೇಖನಗಳು ಒಂದೆಡೆಯಾದರೆ, ವಿಶಿಷ್ಟ ಲೇಖನ, ಕಥೆ-ಕವನಗಳು ಗಟ್ಟಿ ಬರಹಗಾರರನ್ನು ನಾಡಿಗೆ ಪರಿಚಯಿಸುತ್ತಿವೆ. ಪತ್ರಿಕೆಯ ತತ್ವ ಸಿದ್ಧಾಂತಗಳು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದು, ಯಾವುದೇ ಜಾತಿ, ಧರ್ಮ, ರಾಜಕೀಯದ ಕ್ಷುಲ್ಲಕಕ್ಕೊಳಗಾಗದೆ ನಿಷ್ಠೆ, ನಿರ್ಭಿಡೆಯ ನಡೆಯಾಗಿದೆ.

ಇಲ್ಲಿ ಪ್ರಕಟವಾಗುವ ಸುದ್ದಿ, ವಸ್ತುನಿಷ್ಠ ವರದಿ, ಪ್ರಚಲಿತ ವಿದ್ಯಮಾನಗಳ ಮಾಹಿತಿಯನ್ನು ನೋಟ್ಸ್ ಮಾಡಿಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾದವರು ಬಹಳ. ಇಲ್ಲಿನ ಸಂಪಾದಕೀಯ ಪುಟದ ಲೇಖನಗಳು ಓದುಗರ ವೈಚಾರಿಕತೆ ವೃದ್ಧಿಗೆ ಸಹಕಾರಿಯಾಗಿವೆ.ಇನ್ನು ಪ್ರತೇಕವಾಗಿ ಪ್ರಕಟಗೊಳ್ಳುತ್ತಿದ್ದ ನಾಲ್ಕು ಪುಟಗಳ ಪುರವಣಿಗಳು ಇತ್ತೀಚೆಗೆ ಪತ್ರಿಕೆಯ ಪುಟಗಳೇ ಆಗಿದ್ದು, ವಿಶೇಷವಾಗಿ ಹೊಸ ಮಕ್ಕಳ ಕಥೆ-ಕವಿತೆಗಳು ನಾಡಿನ ಚಿಣ್ಣರಿಗೆ ದಕ್ಕದಾಗಿವೆ ಎಂಬುದನ್ನು ಬಿಟ್ಟರೆ ಪ್ರಜಾವಾಣಿ ನಿಜ ಮನುಜನ ಧ್ವನಿಯಾಗಿದೆ. ಗುಣಮಟ್ಟದಲ್ಲಿ ರಾಜಿಯಾಗದೆ ಪತ್ರಿಕೋದ್ಯಮದಲ್ಲಿ 75ನೇ ವರ್ಷದ ಮಹತ್ವದ ಮೈಲುಗಲ್ಲು ಮುಟ್ಟುತ್ತಿರುವ ಪ್ರಜಾವಾಣಿ ತನ್ನ ಬದ್ಧತೆಯೊಂದಿಗೆ ಇನ್ನು ನೂರಾರು ಹೆಜ್ಜೆಗಳನ್ನಿಟ್ಟು ಮುಂದೆ ಸಾಗಲಿ ಎಂದು ಆಶಿಸುತ್ತೇನೆ.

-ಅಶೋಕ ವಿ ಬಳ್ಳಾ, ಸೂಳೇಬಾವಿ.

****

ಪ್ರಜಾವಾಣಿ ಪತ್ರಿಕೆಯೆಂದರೆವಿಶೇಷ ಪ್ರೀತಿ

ನಮಸ್ತೆ,
ಮೊದಲಿಗೆ, ಎಪ್ಪತ್ತೈದಕ್ಕೆ ಕಾಲಿಡುತ್ತಿರುವ ಪ್ರಜಾವಾಣಿ ಪತ್ರಿಕೆಗೆ ಅಭಿನಂದನೆಗಳು. ಅದರೊಂದಿಗೇ ನಾನೂ ಬೆಳೆದಿರುವೆ...ಬೆಳೆಯುತ್ತಿರುವೆ. ದಶಕಗಳಿಂದ ನಮ್ಮ ಜೊತೆಯಿರುವ, ಈ ಪತ್ರಿಕೆಯೆಂದರೆ ವಿಶೇಷ ಪ್ರೀತಿಯೂ ಹೌದು. ಬೆಳಿಗ್ಗೆ, ನಿಜವಾದ ಅರ್ಥದಲ್ಲಿ ಶುರುವಾಗುವುದೇ ಕಾಫೀ ವಿತ್ ಪ್ರಜಾವಾಣಿ ಯಿಂದ! ನಾಲ್ಕು ತಲೆಮಾರುಗಳ ಮನಗೆದ್ದಿರುವ ಪ್ರಜಾವಾಣಿ ನಮ್ಮ ಮಟ್ಟಿಗೆ friend,philosopher and guide.ನಮ್ಮ ಮನೆಯ ಸದಸ್ಯರ ಪಟ್ಟಿಯಲ್ಲಿ ಪ್ರಜಾವಾಣಿ ಹೆಸರಿದೆ ಎಂಬ ಹೆಮ್ಮೆ ಇದೆ. ಪ್ರಜಾವಾಣಿ ನೂರರ ಮೈಲಿಗಲ್ಲನ್ನೂ ಅನಾಯಾಸವಾಗಿ ಮುಟ್ಟಲಿ ಎಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ.

- ಕೆ.ವಿ.ರಾಜಲಕ್ಷ್ಮಿ, ಬೆಂಗಳೂರು

****

ಓದುಗರ ಪ್ರಜ್ಞೆಗೆ ಸಾಣೆ

ಅಮೃತಮಹೋತ್ಸವದ ಸಂಭ್ರಮದಲ್ಲಿರುವ ಪ್ರಜಾವಾಣಿ ಪತ್ರಿಕೆಗೆ ನನ್ನ ಶುಭ ಕಾಮನೆಗಳು.ಸುಮಾರು ವರ್ಷಗಳಿಂದ ಪತ್ರಿಕೆಯನ್ನು ಓದುತ್ತಿದ್ದು,ಪ್ರಜಾವಾಣಿ ಪತ್ರಿಕೆಯು ಸತ್ಯವನ್ನು ನುಡಿಯುವ ನ್ಯಾಯವನ್ನು ಎತ್ತಿಹಿಡಿದು ಅನ್ಯಾಯವನ್ನು ಖಂಡಿಸುವ, ಓದುಗರ ಪ್ರಜ್ಞೆಗೆ ಸಾಣೆ ಹಿಡಿಯವ, ಸತ್ಯದ ಪರ ಜನಾಭಿಪ್ರಾಯ ರೂಪಿಸುವ ಅಭೂತಪೂರ್ವ ಕಾರ್ಯವನ್ನು ಮಾಡುತ್ತಿದೆ.ಅದರಲ್ಲೂ ಅಭಿಮತ ಪುಟದ ಪ್ರತಿಯೊಂದು ವಿಭಾಗದ ಕಾರ್ಯವು ಓದುಗರಿಗೆ ಪ್ರಚಲಿತ ಘಟನೆಗಳ ಕುರಿತು ಚರ್ಚೆಗೆ ಪೂರಕವಾದ,ಸ್ಪಷ್ಟವಾದ ಪರ್ಯಾಯ ದೃಷ್ಟಿಕೋನವನ್ನು ಒದಗಿಸುತ್ತಿದೆ.ಯಾವುದೇ ವಿಷಯದ ಕುರಿತು ವಿಮರ್ಶಿಸುವ ಬದ್ಧತೆ, ಶಿಸ್ತು, ಸಂಯಮ,ಜವಾಬ್ದಾರಿಯನ್ನು ಪ್ರಜಾವಾಣಿ ಪತ್ರಿಕೆ ಹೊಂದಿದೆ.ಈ ರೀತಿಯಾಗಿ ಸ್ವಾಸ್ಥ್ಯ ಸಮಾಜ ಕಟ್ಟುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ.

-ಬಾಬು ಶಿರಮೋಜಿ, ಬೆಳಗಾವಿ

****

ಇದನ್ನೂ ಓದಿ:

ಕಟ್ಟಕಡೆಯ ವ್ಯಕ್ತಿಯ ಧ್ವನಿ

ಕಳೆದ ಏಳು ದಶಕಗಳಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ಕಾರ್ಯನಿರ್ವಹಿಸಿದೆ. ಅದು ಹೀಗೆ ಮುಂದುವರೆಯಲಿದೆ.ನಿಷ್ಪಕ್ಷಪಾತ ಪಾರದರ್ಶಕತೆ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿದೆಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಆಶಾಕಿರಣವಾಗಿದೆ ಬದಲಾಗುತ್ತಿರುವ ತಂತ್ರಜ್ಞಾನ ವಿದ್ಯಮಾನಗಳಿಗೆ ಹೊಂದಿಕೊಂಡು ತನ್ನದೇ ಆದ ಆದ ಛಾಪು ಮೂಡಿಸಿದೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ

-ಸಿದ್ದಣ್ಣ ಪೂಜಾರಿ ಶಹಾಪುರ, ಜಿಲ್ಲಾ ಯಾದಗಿರಿ

****

ಪ್ರಜಾವಾಣಿ.... ದೈನಂದಿನ ಒಡನಾಡಿ

70 ರ ದಶಕದ ಪ್ರಾಥಮಿಕ ಶಾಲಾ ದಿನಗಳಿಂದ"ಪ್ರಜಾವಾಣಿ" ಯ ಗೀಳು ಹತ್ತಿದ ನನಗೆ ಇಂದಿಗೂ ಸಾಗಿದೆ! ದೈನಂದಿನ ಒಡನಾಡಿ ಯಾಗಿದೆ! ಅವಿಭಾಜ್ಯ ಅಂಗವಾಗಿದೆ.ನಮ್ಮೂರಿಗೆ ಬರುತ್ತಿದ್ದದ್ದು ಆಗ "ಪ್ರಜಾವಾಣಿ "ಮಾತ್ರ! ಶಾಲೆಯಲ್ಲಿ ದಿನವೂ ಬೆಳಿಗ್ಗೆ ಪ್ರಾರ್ಥನೆ ಮುಗಿದೊಡನೆ ಪತ್ರಿಕೆಯ ಪ್ರಮುಖ ಸುದ್ದಿ,ಬರಹ ದಿನವೂ ಒಬ್ಬಬ್ಬರು ವಿದ್ಯಾರ್ಥಿ ಓದ ಬೇಕಿತ್ತು ಎಲ್ಲರೆದುರು!.

ಮನೆಯಲ್ಲಿ ದೊಡ್ಡವರು ಪತ್ರಿಕೆ ಓದುವಾಗ ನಾವು ಕ್ರಿಕೆಟ್,ಸಿನೆಮಾ ಪುಟ ನೋಡಲು, ಓದಲು ಅವರ ಹಿಂದೆ ನಿಂತು ಇಣುಕುತ್ತಿದ್ದೆವು!,ಅವರಿಗೆ ಅದು ಕಿರಿ ಕಿರಿಯಾಗಿ ಬೈಸಿ ಕೊಳ್ಳುತ್ತಿದ್ದೆವು!.ಆದರೆ ಪತ್ರಿಕೆ ಬಸ್ ನಲ್ಲಿ ಊರಿಗೆ ಬಂದೊಡನೆ ದಿನವೂ ಏಜೆಂಟರ ಬಳಿ ಸೈಕಲ್ ನಲ್ಲಿ ಹೋಗಿ ನಾವೇ ತರಬೇಕಿತ್ತು ದೊಡ್ಡವರ ಆಣತಿಯಂತೆ!. ಏಜೆಂಟರು ಮನೆ ಮನೆಗೆ ವಿತರಿಸಿ ನಮ್ಮಲ್ಲಿ ಬರುವಾಗ ತಡವಾಗುತ್ತಿತ್ತು ಎನ್ನುವ ಕಾರಣಕ್ಕೆ!.ಪತ್ರಿಕೆಯ ಬಂಡಲ್ ಗಳು ಖಾಕಿ ಬಣ್ಣದ ದಪ್ಪ ಹಾಳೆಯಲ್ಲಿ ಪ್ಯಾಕ್ ಆಗಿ ಬರುತ್ತಿದ್ದು;ಹಿರಿಯ ಏಜೆಂಟ್ ಗುಂಡೂರಾಯರಿಂದ ಪಡೆದು ಆ ಖಾಕಿ ಹಾಳೆಗಳನ್ನು ಶಾಲಾ ಪುಸ್ತಕಗಳಿಗೆ ಬೈಂಡ್ ಹಾಕುತ್ತಿದ್ದೆವು!.
ನಾನು ಪ್ರೌಢಾವಸ್ಥೆಗೆ ಬಂದಂತೆ ಪ್ರತಿ ಪುಟವೂ ಕುತೂಹಲದಿಂದ ಓದುವ ಹವ್ಯಾಸವಾಯಿತು.ದಿನವೂ "ಪದಬಂಧ" ಬಿಡಿಸಿ ಜ್ಞಾನಾರ್ಜನೆಗೆ ಸಹಕಾರಿ ಆಯಿತು.ವಾಚಕರ ವಾಣಿಗೆ ಪತ್ರ ಬರೆದಿದ್ದು ಹಲವು ಪ್ರಕಟವಾಗಿದ್ದು; ಹಲವು ಉತ್ತಮ ಪತ್ರವೂ ಆಗಿವೆ!.ಲೇಖನ ಗಳೂ ಪ್ರಕಟವಾಗಿವೆ.

ಬರವಣಿಗೆಗೆ ಸ್ಪೂರ್ತಿ ತಂದದ್ದು ಪ್ರಜಾವಾಣಿಯೇ!.ಕಾಲ ಕಾಲಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದೂ ಇದೆ. 75 ರ ಅಮ್ರತೋತ್ಸವ ದತ್ತ ಸಾಗಿರುವ "ಪ್ರಜಾವಾಣಿ" ಇಂದಿಗೂ ತನ್ನತನ,ತಾಜಾತನ,ನಿಖರ, ವಸ್ತುನಿಷ್ಠತೆ ಗಳಿಂದ ಕಾಲ ಕಾಲಕ್ಕೆ ತಂತ್ರಜ್ಞಾನದ ಬದಲಾವಣೆ ಅಳವಡಿಸಿಕೊಂಡು ಸಾಗಿದ್ದು ಓದುಗರ ಪ್ರೀತಿಗೆ ಸಾಕ್ಷಿ.

ಒಮ್ಮೆ ನೌಕರರ ಮುಷ್ಕರದಿಂದ ಬೀಗ ಮುದ್ರೆ ಬಿದ್ದು ಹಲದಿನ ಪತ್ರಿಕೆ ಹೊರಬಂದಿಲ್ಲ.ಆಗ ಪತ್ರಿಕೆ ಇಲ್ಲದೆ ಚಡಪಡಿಕೆ ಇಂದಿಗೂ ನೆನಪಿದೆ!
ಬಾನುಲಿಯ ಪ್ರದೇಶ ಸಮಾಚಾರದಲ್ಲಿ "ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ನೌಕರರ ಮುಷ್ಕರ ಅಂತ್ಯ" ಎನ್ನುವ ಸುದ್ದಿ ಬಿತ್ತರ ವಾದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ!.

ವ್ಯವಸ್ಥೆಯ ತಪ್ಪುಗಳ ವಿರುದ್ಧ ಇಂದಿಗೂ ನಿರ್ದಾಕ್ಷಿಣ್ಯವಿಲ್ಲದೆ ಜನರಿಗೆ ನಿಖರ ಮಾಹಿತಿ ಕೊಡುತ್ತಿದೆ ಪತ್ರಿಕೆ.ಅದರ ಫಲವೇ 75ರತ್ತ ದಾಪುಗಾಲು! ಹಲ ದಶಕಗಳ ಓದುಗನಾಗಿ ನೂರುಕಾಲ ಬಾಳಲಿ ಎನ್ನುವ ಹಾರೈಕೆ,ಸದಾಶಯ ಸದಾ.

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ, ಶಿವಮೊಗ್ಗ ಜಿಲ್ಲೆ

****

ಜಾತ್ಯತೀತ ನಿಲುವಿನ ಸಮದರ್ಶಿ ಪತ್ರಿಕೆ
ನನ್ನ ವಿದ್ಯಾರ್ಥಿ ದಿನಗಳಿಂದ ನನ್ನ ಅರಿವನ್ನು ವಿಸ್ತರಿಸಿದ್ದು ’ಪ್ರಜಾವಾಣಿ‘. ಪ್ರಜಾಪ್ರಭುತ್ವದ ಜಾತ್ಯತೀತ ನಿಲುವಿನ ಸಮದರ್ಶಿ ಪತ್ರಿಕೆ. ನಾಡಿಗೊಂದು ಹೆಮ್ಮೆ. ಇದರ ಅಮೃತಮಹೋತ್ಸವ ಸಡಗರ ನನಗೆ, ನಾಡಿಗೆ ಒಂದು ಹಬ್ಬ,

-ಡಾ.ಜಿ.ಕೃಷ್ಣಪ್ಪ, ಮತ್ತಿಕೆರೆ, ಬೆಂಗಳೂರು.

****

ಓದುಗರ ಕಣ್ಮಣಿ....!

ಅಗಣಿತ ಗುಣಗಳ ಗಣಿ
ಲಕ್ಷಾಂತರ ಓದುಗರ ಮುಖವಾಣಿ
ಅಚ್ಚು ಮೆಚ್ಚಿನ ಪ್ರಜಾವಾಣಿ
ನೋಡ ನೋಡುತ್ತಲೇ
ನಿನಗೀಗ 75 ರ ಹರೆಯ!
ನಿನ್ನಣ್ಣ ಡಿ.ಎಚ್ ಗೆ
ಒಂದು ವರ್ಷ ಕಿರಿಯ ನೀ..ದೈನಿಕ,‌
ಅವಳು...ಸುಧಾ ಸಾಪ್ತಾಹಿಕ,
ಮಾಸಿಕ ಮಯೂರ...
ನಿಮ್ಮದೆಂಥಾ ಸುಂದರ ಸಂಸಾರ!

ದೇಶ-ವಿದೇಶಗಳಲ್ಲೂ
ಬಾರಿಸುತ್ತಿಹೆ ಕನ್ನಡ ಡಿಂಡಿಮವ
ನಾನೇನು ಮಾಡುತ್ತಿಲ್ಲಪ್ಪಾ ನಿನ್ನ ಮುಖ ಸ್ತುತಿ..
ಮುದ್ದು ಮುದ್ದಾಗಿ ಮುದ್ರಣವಾಗುತ್ತಿ
ಬರೋಬರಿ 32 ಆವೃತ್ತಿ !
ಅಂದ,ಚಂದಕೊಂದು ಪುರವಣಿ
ನೀ ನಡೆವ ಹಾದಿಯಲ್ಲಿ
ಎಷ್ಟೊಂದು ಮೈಲಿಗಲ್ಲುಗಳು!

ಆಗಾಗ ಹದವಾದ ಸಂವಾದ..
ಒಂದೇ ಎರಡೇ ನಿನ್ನ ಹಸಾದ
ಬರ,ಬವರ,ನೆರೆ,ಭೂಕಂಪ,
ಕೋವಿಡ್ ಗಳಿಂದ ಜನ ಸಂಕಷ್ಟಕ್ಕೆ ತುತ್ತಾದಾಗ...
ನೀ ಮಿಡಿದ ಪರಿ ಅನನ್ಯ!
ಬದ್ಧತೆ, ವಾಸ್ತವತೆ, ವಿಶ್ವಾಸಾರ್ಹತೆ
ಅಚಲ ನಿನ್ನ ತತ್ವ ಸಿದ್ಧಾಂತ
ಎಡ-ಬಲಗಳ ಗೊಡವೆ ನಿನಗಿಲ್ಲ
ಅದಕೆ ಮೆಚ್ಚಿಕೊಂಡಿಹರು ‌
ನಾಡಿನ ಜನರೆಲ್ಲ!

–ಮ. ಗು ಬಸವಣ್ಣ,ಜೆಎಸ್ಎಸ್ ಸಂಸ್ಥೆ, ಸುತ್ತೂರು, ಮೈಸೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT